ರಾಮಾಯಣದಲ್ಲಿ ಲಂಕಾಧಿಪತಿ ರಾವಣ ಪುಷ್ಪಕ ವಿಮಾನದಲ್ಲಿ ಬಂದು ಸೀತೆಯನ್ನು ಅಪಹರಿಸುವ ಕತೆಯಿದೆ. ಹೀಗಾಗಿ ಜಗತ್ತಿನಲ್ಲಿ ಮೊಟ್ಟ ಮೊದಲು ವಿಮಾನ ಹಾರಿಸಿದವನು ರಾವಣ ಎಂದು ಶ್ರೀಲಂಕಾ ನಂಬುತ್ತದೆ ಅಷ್ಟೇ ಅಲ್ಲ, ಇದೀಗ ಈ ಕುರಿತು ವೈಜ್ಞಾನಿಕ ಅಧ್ಯಯನ ನಡೆಸಲು ನಿರ್ಧರಿಸಿದೆ. ಆತ ಐದು ಸಾವಿರ ವರ್ಷಗಳ ಹಿಂದೆ ವಿಮಾನ ಹಾರಿಸಿದ್ದಾರೆ ಎಂಬ ಕಲ್ಪನೆಯೊಂದಿಗೆ ಹೊಸ ಸಂಶೋಧನೆ ಈಗಾಗಲೇ ಪ್ರಾರಂಭವಾಗಿದೆ. ಲಂಕಾಕ್ಕೆ ರಾವಣ ರಾಜನಾಗಿದ್ದ ಸಮಯದಲ್ಲಿ ದೇಶದಲ್ಲಿ ವಿಮಾನ ನಿಲ್ದಾಣ ಹಾಗೂ ವಿಮಾನ ಇದ್ದವು ಎಂದು ಲಂಕನ್ನರು ನಂಬುತ್ತಾರೆ. ಇದು ಕೇವಲ ಪುರಾಣದ ಕತೆಯಲ್ಲ, ವೈಜ್ಞಾನಿಕ ಆಧಾರಗಳಿರಬಹುದು ಎಂಬುದನ್ನು ಕಂಡುಹಿಡಿಯಲು ಹಾಗೂ ಇನ್ನೂ ಅನೇಕ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕಲು ಶ್ರೀಲಂಕಾ ಸರ್ಕಾರವು ಬಯಸಿದೆ. ಆ ಸ್ಥಳಗಳ ಹುಡುಕಾಟ ನಡೆದಿದೆ.
ಶ್ರೀಲಂಕಾ ತನ್ನ ವೈಮಾನಿಕ ಗತಕಾಲದ ಬಗ್ಗೆ ವಿವರವಾದ ವೈಜ್ಞಾನಿಕ ಸಂಶೋಧನೆಯನ್ನು ನಡೆಸುವ ಮೂಲಕ ತನ್ನ ಪ್ರಾಚೀನ ವೈಭವವನ್ನು ಮರಳಿ ಪಡೆಯುವ ಉದ್ದೇಶ ಹೊಂದಿದೆ. ಶ್ರೀಲಂಕಾದ ಅನೇಕರು ರಾವಣ ವಿಶ್ವದ ಮೊದಲ ಅನುಭವಿ ಪೈಲಟ್ ಮತ್ತು ಅವನ ದಿನಗಳಲ್ಲಿ, ದ್ವೀಪವು ವಿಮಾನಗಳು ಮತ್ತು ವಿಮಾನ ನಿಲ್ದಾಣಗಳನ್ನು ಹೊಂದಿತ್ತು ಎಂದು ನಂಬುತ್ತಾರೆ. ಇವು ಯಾವುದೇ ವೈಜ್ಞಾನಿಕ ಬೆಂಬಲವಿಲ್ಲದ ಪೌರಾಣಿಕ ನಂಬಿಕೆಗಳು ಎಂಬ ವಾದವನ್ನು ತಳ್ಳಿಹಾಕಿ, ಕೆಲವು ಉತ್ಸಾಹಿಗಳು ಈ ಬಗ್ಗೆ ಸಂಶೋಧನೆಗೆ ಮುಂದಾಗಿದ್ದಾರೆ.
ಎರಡು ವರ್ಷಗಳ ಹಿಂದೆ, ನಾಗರಿಕ ವಿಮಾನಯಾನ ತಜ್ಞರು, ಇತಿಹಾಸಕಾರರು, ಪುರಾತತ್ವ ಶಾಸ್ತ್ರಜ್ಞರು, ವಿಜ್ಞಾನಿಗಳು ಮತ್ತು ಭೂವಿಜ್ಞಾನಿಗಳ ಸಮ್ಮೇಳನವನ್ನು ಕೊಲಂಬೊದಲ್ಲಿ ಈ ಕಲ್ಪನೆಗೆ ಇಂಬು ನೀಡಲು ನಡೆಸಲಾಯಿತು. ರಾವಣನು ತನ್ನ ವಿಮಾನವನ್ನು ಮೊದಲು ಶ್ರೀಲಂಕಾದಿಂದ ಭಾರತಕ್ಕೆ ಮತ್ತು ಅಲ್ಲಿಂದ ಶ್ರೀಲಂಕಾಕ್ಕೆ ಹಾರಿಸಿದನೆಂದು ಸಮ್ಮೇಳನವು ತೀರ್ಮಾನಿಸಿತ್ತು.
ಸಮ್ಮೇಳನದ ನಂತರ, ಅಂದಿನ ಶ್ರೀಲಂಕಾ ಸರ್ಕಾರವು ಸಂಶೋಧನೆಯನ್ನು ಪ್ರಾರಂಭಿಸಲು 50 ಲಕ್ಷ ಶ್ರೀಲಂಕಾ ರೂಪಾಯಿಗಳ (SLR) ಆರಂಭಿಕ ಅನುದಾನವನ್ನು ಮಂಜೂರು ಮಾಡಿತು. “ಕೋವಿಡ್-19 ಲಾಕ್‌ಡೌನ್‌ಗಳಿಂದಾಗಿ ಸಂಶೋಧನೆಯನ್ನು ನಿಲ್ಲಿಸಲಾಗಿತ್ತು.
ರಾಜಪಕ್ಸೆಗಳ ಈಗಿನ ಸರಕಾರವೂ ಅದರಲ್ಲಿ ಆಸಕ್ತಿ ಹೊಂದಿದೆ. ರಾಷ್ಟ್ರೀಯ ಪ್ರಾಮುಖ್ಯತೆಯ ಉಪಕ್ರಮವಾಗಿ ಯೋಜನೆಯನ್ನು ಮುಂದುವರಿಸಲು ಅವರು ಒಪ್ಪಿಕೊಂಡಿದ್ದಾರೆ. ಮುಂದಿನ ವರ್ಷದ ಆರಂಭದಲ್ಲಿ ಸಂಶೋಧಕರು ಕೆಲಸವನ್ನು ಪುನರಾರಂಭಿಸುತ್ತಾರೆ ಎಂದು ನಾನು ನಿರೀಕ್ಷಿಸುತ್ತೇನೆ, ”ಎಂದು ಶ್ರೀಲಂಕಾದ ನಾಗರಿಕ ವಿಮಾನಯಾನ ಪ್ರಾಧಿಕಾರದ ಮಾಜಿ ಉಪಾಧ್ಯಕ್ಷ ಶಶಿ ದಾನತುಂಗೆ ಹೇಳಿದ್ದಾರೆ.
ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಮಾಜಿ ಸಿಇಒ ಆಗಿರುವ ಶಶಿ, ದೇಶದ ನಾಗರಿಕ ವಿಮಾನಯಾನ ಗತಕಾಲದ ಕುರುಹುಗಳು ಮತ್ತು ಪುರಾವೆಗಳನ್ನು ಹುಡುಕುತ್ತಾ ದ್ವೀಪದಾದ್ಯಂತ ಪ್ರಯಾಣಿಸಿದ್ದಾರೆ.
“ರಾವಣನು ಪೌರಾಣಿಕ ವ್ಯಕ್ತಿಯಲ್ಲ ಎಂದು ನನಗೆ ಮನವರಿಕೆಯಾಗಿದೆ. ಆತ ನಿಜವಾದ ರಾಜನಾಗಿದ್ದ ಮತ್ತು ನಿಜವಾಗಿಯೂ ವಿಮಾನ ಮತ್ತು ವಿಮಾನ ನಿಲ್ದಾಣಗಳನ್ನು ಹೊಂದಿದ್ದ . ಅವು ಇಂದಿನ ವಿಮಾನ ಮತ್ತು ವಿಮಾನ ನಿಲ್ದಾಣಗಳಲ್ಲದಿರಬಹುದು. ನಿಸ್ಸಂಶಯವಾಗಿ, ಪ್ರಾಚೀನ ಶ್ರೀಲಂಕಾದವರು ಮತ್ತು ಭಾರತೀಯರು ಉನ್ನತ ತಂತ್ರಜ್ಞಾನಗಳ ಬಗ್ಗೆ ಜ್ಞಾನ ಹೊಂದಿದ್ದರು. ನಾವು ಅದರ ಬಗ್ಗೆ ವಸ್ತುನಿಷ್ಠ ಸಂಶೋಧನೆ ನಡೆಸಬೇಕಾಗಿದೆ” ಎಂದು ದಾನತುಂಗೆ ಹೇಳಿದ್ದಾರೆ.
ಶ್ರೀಲಂಕಾ ಮತ್ತು ಭಾರತ ಎರಡೂ ದೇಶಗಳು ತಮ್ಮ ಪ್ರಾಚೀನ ಸಾಧನೆಗಳನ್ನು ಪ್ರತಿಪಾದಿಸಲು ಇದು ಒಂದು ಪ್ರಮುಖ ಸಂಶೋಧನೆ ಎಂದು ನಂಬಿರುವ ಅವರು ಈ ಯೋಜನೆಗೆ ಸೇರಲು ಭಾರತ ಸರ್ಕಾರವನ್ನು ವಿನಂತಿಸಿದ್ದಾರೆ.
ಈ ಕುರಿತು ಸಂಶೋಧನೆಗಾಗಿ ಶಶಿ ಅವರು ಮಾತ್ರ ಪ್ರತಿಪಾದಿಸುತ್ತಿಲ್ಲ. ಶ್ರೀಲಂಕಾದ ಪ್ರಮುಖ ಪರಿಸರ ವಾಸ್ತುಶಿಲ್ಪಿ ಸುನೆಲಾ ಜಯವರ್ಧನೆ ಅವರು ತಮ್ಮ ಪುಸ್ತಕ ದಿ ಲೈನ್ ಆಫ್ ಲಂಕಾ – ಮಿಥ್ಸ್ & ಮೆಮೊರೀಸ್ ಆಫ್ ಆನ್ ಐಲ್ಯಾಂಡ್‌ನಲ್ಲಿ ರಾವಣನ ವಾಯುಯಾನದ ಬಗ್ಗೆ ಬರೆದಿದ್ದಾರೆ.
ಅವರ ಚಿಕ್ಕಪ್ಪ, ಶ್ರೀಲಂಕಾದ ಪ್ರವರ್ತಕ ಆಧುನಿಕ ಪೈಲಟ್ ದಿವಂಗತ ರೇ ವಿಜಯವರ್ಧನೆ ಕೂಡ ಈ ಸಿದ್ಧಾಂತವನ್ನು ಬೆಂಬಲಿಸಿದ್ದಾರೆ ಎಂದು ಅವರು ಹೇಳುತ್ತಾರೆ.
ಸುನೆಲಾ ಪ್ರಕಾರ, ಶ್ರೀಲಂಕಾದಲ್ಲಿ ತೋಟುಪೋಲಕಂಧ ಮತ್ತು ಉಸ್ಸಂಗೋಡ, ವೆಹೆರಂಗಂತೋಟಾ, ರುಮಸ್ಸಲಾ ಮತ್ತು ಲಕೇಗಲಾ ಮುಂತಾದ ವಿಮಾನ ಇಳಿಯುವಿಕೆಗೆ ಸಂಬಂಧಿಸಿದ ಸ್ಥಳಗಳಾಗಿವೆ.
ರಾವಣ ಮತ್ತು ಆತನ ಸಾಮ್ರಾಜ್ಯದ ಬಗ್ಗೆ ತಿಳಿದುಕೊಳ್ಳಲು ಶ್ರೀಲಂಕಾದಲ್ಲಿ ಹೊಸ ಆಸಕ್ತಿ ಇದೆ. ರಾವಣನನ್ನು ಗೌರವಿಸಲು ದ್ವೀಪ ರಾಷ್ಟ್ರವು ರಾವಣ ಎಂಬ ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಕಳುಹಿಸಿದೆ.
ನಿಮ್ಮ ಕಾಮೆಂಟ್ ಬರೆಯಿರಿ