ಅಹಿಂಸೆಯಿಂದ ಮಾತ್ರ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದೆ ಎಂಬುದು ಸರಿಯಲ್ಲ, ಸಿಕ್ಕಿಲ್ಲ ಎಂಬುದೂ ಸರಿಯಲ್ಲ: ನೇತಾಜಿ ಪುತ್ರಿ ಅನಿತಾ ಬೋಸ್‌

ನವದೆಹಲಿ: ಅಹಿಂಸೆಯಿಂದ ಮಾತ್ರ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದೆ ಎಂದು ಹೇಳುವುದು ಸರಿಯಲ್ಲ, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ನೇತೃತ್ವದ ಭಾರತೀಯ ರಾಷ್ಟ್ರೀಯ ಸೇನೆಯ ಪಾತ್ರವೂ ಸಾಕಷ್ಟಿದೆ, ಹಾಗೆಯೇ ಮಹಾತ್ಮಾ ಗಾಂಧಿ ಅವರ ಪಾತ್ರರವೂ ಸಾಕಷ್ಟಿದೆ ಎಂದು ನೇತಾಜಿ ಅವರ ಪುತ್ರಿ ಅನಿತಾ ಬೋಸ್ ಹೇಳಿದ್ದಾರೆ.
ನೇತಾಜಿ ಸುಭಾಷ್ ಚಂದ್ರ ಬೋಸ್ ಅವರನ್ನು ನಿಯಂತ್ರಿಸುವುದು ಕಷ್ಟ ಎಂದು ಮಹಾತ್ಮಗಾಂಧಿಜಿ ಭಾವಿಸಿದ್ದರು. ನಮ್ಮ ತಂದೆಯೊಂದಿಗೆ ಅವರ ಸಂಬಂಧ ಅಷ್ಟೊಂದು ಮಧುರವಾಗಿರಲಿಲ್ಲ, ಅದೇ ಸಮಯದಲ್ಲಿ ತಮ್ಮ ತಂದೆ ಗಾಂಧಿಜಿ ಅವರ ದೊಡ್ಡ ಅಭಿಮಾನಿಯಾಗಿದ್ದರು ನೇತಾಜಿಯವರು ಗಾಂಧೀಜಿಯಿಂದ ಹಲವಾರು ವಿಷಯಗಳಲ್ಲಿ ಪ್ರೇರಿತರಾಗಿದ್ದರು ಎಂದು ಅನಿತಾ ಹೇಳಿದ್ದಾರೆ.
ಮಹಾತ್ಮಗಾಂಧಿ ಮತ್ತು ಜವಹಾರ್ ಲಾಲ್ ನೆಹರು ಅವರು ನೇತಾಜಿ ಅವರನ್ನು ಬ್ರಿಟಿಷರಿಗೆ ಹಸ್ತಾಂತರಿಸಲು ಸಿದ್ಧರಿದ್ದರು ಎಂದು ಬಾಲಿವುಡ್ ನಟಿ ಕಂಗಣಾ ರಾಣಾವತ್ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ನೀಡಿದ ಹೇಳಿಕೆ ಹಿನ್ನೆಲೆಯಲ್ಲಿ ಇಂಡಿಯಾ ಟುಡೆ ಜೊತೆ ಮಾತನಾಡುವಾಗ ಅವರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಗಾಂಧಿಜಿ ಹಾಗೂ ನೇತಾಜಿ ಇಬ್ಬರು ಮುಂಚೂಣಿಯಲ್ಲಿದ್ದರು. ಆದರೆ ಭಾರತಕ್ಕೆ ಕೇವಲ ಅಹಿಂಸೆಯಿಂದ ಮಾತ್ರ ಸ್ವಾತಂತ್ರ್ಯ ಸಿಕ್ಕಿದೆ ಎಂದು ಹೇಳುವುದು ಸೂಕ್ತವಾಗದು. ಯಾಕೆಂದರೆ ಸುಭಾಸ್‌ಚಂದ್ರ ಬೋಸ್‌ ಅವರ ಇಂಡಿಯನ್‌ ನ್ಯಾಶನಲ್‌ ಆರ್ಮಿ ಸಹ ಸ್ವಾತಂತ್ರ್ಯ ಹೋರಾಟದಲ್ಲಿ ಸಾಕಷ್ಟು ಕೊಡುಗೆ ನೀಡಿದೆ. ಆದರೆ ಅಹಿಂಸಾ ಮಾರ್ಗದಿಂದ ಸ್ವಾತಂತ್ರ್ಯ ಸಿಕ್ಕಿಲ್ಲ ಎಂದು ಹೇಳುವುದೂ ಸರಿಯಾಗುವುದಿಲ್ಲ, ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹಾತ್ಮಾ ಗಾಂಧೀಜಿ ಕೊಡುಗೆಯೂ ದೊಡ್ಡದೇ. ಆದರೆ ಕೇವಲ ಅಹಿಂಸಾ ನೀತಿಯಿಂದಲೇ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದೆ ಎಂದು ಕಾಂಗ್ರೆಸ್ಸಿಗರು ಮೊದಲಿನಿಂದಲೂ ಹೇಳಿಕೊಂಡು ಬರುತ್ತಿರುವುದು ಪೂರ್ಣ ಸರಿಯಲ್ಲ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾರತೀಯ ರಾಷ್ಟ್ರೀಯ ಸೇನೆ (ಐಎನ್‌ಎ) ಮತ್ತು ನೇತಾಜಿ ಅವರ ಪಾತ್ರವಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಹಾಗೆಂದು ನೇತಾಜಿಯಿಂದಲೇ ಸ್ವಾತಂತ್ರ್ಯ ಸಿಕ್ಕಿದೆ ಎಂದು ಭಾವಿಸುವುದು ಅಪ್ರಭುದ್ಧತೆಯೇ. ಇದು ಸಂಯೋಜಿತ ಹೋರಾಟವಾಗಿತ್ತು ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಲಕ್ಷಾಂತರ ಜನರ ಪಾಲಿದೆ ಎಂದು ಅನಿತಾ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಒಂದೇ ಕಡೆ ಒಟ್ಟುಗೂಡಿದ 150 ಜೋಡಿ ಅವಳಿ-ತ್ರಿವಳಿಗಳು...!

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement