ಪಾಕ್ ಜೈಲಿನಲ್ಲಿರುವ ಭಾರತೀಯ ನೌಕಾಪಡೆ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವಗೆ ಮೇಲ್ಮನವಿ ಸಲ್ಲಿಸಲು ಪಾಕಿಸ್ತಾನ ಸಂಸತ್ತು ಅನುಮತಿ

ಇಸ್ಲಾಮಾಬಾದ್: ಗೂಢಚರ್ಯೆ ಆರೋಪದ ಮೇಲೆ ಪಾಕಿಸ್ತಾನದ ಸೇನಾ ಕೋರ್ಟ್​ನಿಂದ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನೌಕಾಪಡೆಯ ನಿವೃತ್ತ ಕಮಾಂಡರ್ ಕುಲಭೂಷಣ್ ಜಾಧವ್ ಅವರಿಗೆ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡುವ ಮಸೂದೆಯನ್ನು ಪಾಕಿಸ್ತಾನದ ಸಂಸತ್ತು ಅಂಗೀಕರಿಸಿದೆ.
ಅಂತಾರಾಷ್ಟ್ರೀಯ ನ್ಯಾಯಮಂಡಳಿ ತೀರ್ಪು ಜಾರಿಗೆ ತರುವ ಉದ್ದೇಶದಿಂದ ಪಾಕಿಸ್ತಾನದ ಸಂಸತ್ತು ಈ ನಿರ್ಧಾರ ತೆಗೆದುಕೊಂಡಿದೆ. ಪಾಕಿಸ್ತಾನದ ಕಾನೂನು ಸಚಿವ ಫರೋಘ್ ನಸೀಮ್ ‘ಅಂತಾರಾಷ್ಟ್ರೀಯ ನ್ಯಾಯಮಂಡಳಿ (ಮರುಪರಿಶೀಲನೆ) ಮಸೂದೆ’ಯನ್ನು ಪಾಕ್ ಸಂಸತ್ತಿನ ಜಂಟಿ ಅಧಿವೇಶನದಲ್ಲಿ ಮಂಡಿಸಿದರು ಎಂದು ಪಾಕಿಸ್ತಾನದ ದೈನಿಕ ಡಾನ್ ವರದಿ ಮಾಡಿದೆ.

ಇರಾನ್‌ನಲ್ಲಿ ವ್ಯಾಪಾರ ವಹಿವಾಟುಗಳಲ್ಲಿ ತೊಡಗಿಸಿಕೊಂಡಿದ್ದ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಅವರನ್ನು ಮಾರ್ಚ್ 2016 ರಲ್ಲಿ ಪಾಕಿಸ್ತಾನ ಸೇನೆ ಅಪಹರಿಸಿತ್ತು. ಪಾಕಿಸ್ತಾನ ಸೇನೆಯು ಕ್ಯಾಮರಾದಲ್ಲಿ ಬಲವಂತದ ತಪ್ಪೊಪ್ಪಿಗೆಯನ್ನು ನೀಡುತ್ತಿರುವ ವೀಡಿಯೊವನ್ನು ಬಿಡುಗಡೆ ಮಾಡಿದ ನಂತರ ಅವರ ಪ್ರಕರಣವು ಬೆಳಕಿಗೆ ಬಂದಿದೆ. 2017 ರಲ್ಲಿ ಬೇಹುಗಾರಿಕೆ ಮತ್ತು ಭಯೋತ್ಪಾದನೆಯ ಆರೋಪದ ಮೇಲೆ ಮಿಲಿಟರಿ ನ್ಯಾಯಾಲಯವು ಅವರಿಗೆ ಮರಣದಂಡನೆ ವಿಧಿಸಿದ ನಂತರ, ಭಾರತವು ಅಂತಾರಾಷ್ಟ್ರೀಯ ನ್ಯಾಯಮಂಡಳಿಗೆ ಮನವಿ ಸಲ್ಲಿಸಿತು. ಹಿರಿಯ ವಕೀಲ ಹರೀಶ್ ಸಾಳ್ವೆ ಅವರು ಹೇಗ್‌ನಲ್ಲಿ ದೇಶವನ್ನು ಪ್ರತಿನಿಧಿಸಿದರು.
ಭಾರತೀಯ ಪ್ರಜೆ ಕುಲಭೂಷಣ್ ಯಾದವ್ ಬಂಧನ ವಿಯೆನ್ನಾ ಒಪ್ಪಂದದ ಉಲ್ಲಂಘನೆ ಎಂದು ವಾದಿಸಿತ್ತು. ಏಪ್ರಿಲ್ 2017ರಲ್ಲಿ ಪಾಕಿಸ್ತಾನದ ಸೇನಾ ನ್ಯಾಯಾಲಯವು ಕುಲಭೂಷಣ್ ಜಾಧವ್ ಅವರಿಗೆ ಮರಣದಂಡನೆ ವಿಧಿಸಿತ್ತು. ಭಾರತದ ಮನವಿಯ ಮೇಲೆ ಪ್ರಕರಣದ ವಿಚಾರಣೆ ನಡೆಸಿದ್ದ ಅಂತಾರಾಷ್ಟ್ರೀಯ ನ್ಯಾಯಮಂಡಳಿ ಜುಲೈ 17, 2019ರಲ್ಲಿ ತೀರ್ಪು ನೀಡಿ, ಜಾಧವ್ ಅವರಿಗೆ ಮೇಲ್ಮನವಿಗೆ ಅವಕಾಶ ಕಲ್ಪಿಸಬೇಕು ಎಂದು ಪಾಕಿಸ್ತಾನಕ್ಕೆ ಸೂಚಿಸಿತ್ತು. ಅಲ್ಲದೆ ಜಾಧವ್ ಅವರನ್ನು ಭೇಟಿಯಾಗಲು ಭಾರತದ ರಾಜತಾಂತ್ರಿಕರಿಗೆ ಅವಕಾಶ ಕಲ್ಪಿಸಬೇಕು ಎಂದು ಸಹ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಜಾಧವ್ ಅವರಿಗೆ ಮರುಪರಿಶೀಲನೆ ಅರ್ಜಿ ಸಲ್ಲಿಸಲು ಅವಕಾಶ ನೀಡುವ ಮಸೂದೆಯನ್ನು ಪಾಕಿಸ್ತಾನದ ಸಂಸತ್ತು ಅಂಗೀಕರಿಸಿದೆ.
2020ರಲ್ಲಿ ಜಾಧವ್​ಗೆ ಮೇಲ್ಮನವಿ ಸಲ್ಲಿಕೆಗೆ ಅವಕಾಶ ಕೋರಿ ಪಾಕಿಸ್ತಾನ ಸರ್ಕಾರವು ಸುಗ್ರೀವಾಜ್ಞೆ ಹೊರಡಿಸಿತ್ತು. ಆದರೆ ಜಾಧವ್ ಮೇಲ್ಮನವಿ ಸಲ್ಲಿಸಲು ಒಪ್ಪಲಿಲ್ಲ. ರಕ್ಷಣಾ ಕಾರ್ಯದರ್ಶಿ ಇಸ್ಲಾಮಾಬಾದ್ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿ, ಜಾಧವ್ ಪರ ವಕೀಲರನ್ನು ನೇಮಿಸಲು ಕೋರಿತ್ತು. ಮೂವರು ನ್ಯಾಯಮೂರ್ತಿಗಳ ನ್ಯಾಯಪೀಠ ರಚಿಸಿದ್ದ ಇಸ್ಲಾಮಾಬಾದ್ ಹೈಕೋರ್ಟ್​ ವಕೀಲರನ್ನು ನೇಮಿಸುವಂತೆ ಭಾರತ ಸರ್ಕಾರಕ್ಕೆ ಸೂಚಿಸಿತ್ತು. ಪಾಕಿಸ್ತಾನದ ವಕೀಲರನ್ನು ನೇಮಿಸಲು ನಿರಾಕರಿಸಿದ್ದ ಭಾರತ ಸರ್ಕಾರವು, ಭಾರತೀಯ ವಕೀಲರನ್ನೇ ನೇಮಿಸಲು ಅವಕಾಶ ನೀಡಬೇಕು ಎಂದು ಕೋರಿತ್ತು.
ಜಾಧವ್ ಪ್ರಕರಣದ ವಿಚಾರಣೆಯು ಕಳೆದ ಅಕ್ಟೋಬರ್ 5ರಂದು ನಡೆದಿತ್ತು. ಭಾರತ ಸರ್ಕಾರಕ್ಕೆ ವಕೀಲರನ್ನು ನೇಮಿಸುವಂತೆ ಸೂಚಿಸಬೇಕೆಂದು ಪಾಕ್ ಕೋರ್ಟ್​ ಅಂದು ಸಹ ಪಾಕಿಸ್ತಾನ ಸರ್ಕಾರಕ್ಕೆ ಸೂಚಿಸಿತ್ತು. ಜಾಧವ್ ಪ್ರಕರಣದ ವಿಚಾರಣೆಯನ್ನು ಪ್ರಸ್ತುತ ಡಿಸೆಂಬರ್ 9ಕ್ಕೆ ಮುಂದೂಡಲಾಗಿದೆ.

ಪ್ರಮುಖ ಸುದ್ದಿ :-   ವೀಡಿಯೊ...| ಶಾಲೆಯಲ್ಲೇ ಹೊಡೆದಾಡಿಕೊಂಡ ಪ್ರಾಂಶುಪಾಲೆ-ಶಿಕ್ಷಕಿ

 

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement