ತಿರುಪತಿಯಲ್ಲಿ ಅಭೂತಪೂರ್ವ ಮಳೆ-ಪ್ರವಾಹ: ಭಕ್ತರ ದರ್ಶನಕ್ಕೆ ವೆಂಕಟೇಶ್ವರ ದೇವಸ್ಥಾನ ಬಂದ್‌ ಮಾಡಿದ ಟಿಟಿಡಿ

ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ತಿರುಪತಿಯ ತಿರುಮಲದ ಮೇಲಿರುವ ಶ್ರೀ ವೆಂಕಟೇಶ್ವರ ದೇವಸ್ಥಾನವನ್ನು ನವೆಂಬರ್ 19 ಶುಕ್ರವಾರದಂದು ಭಕ್ತರಿಗೆ ಮುಚ್ಚಲಾಗಿದೆ. ದೇವಾಲಯವು ಏಳು ಬೆಟ್ಟಗಳಿಂದ ಆವೃತವಾದ ತಿರುಪತಿ ಪಟ್ಟಣದಲ್ಲಿ ಅಭೂತಪೂರ್ವ ಭಾರೀ ಮಳೆಯ ನಂತರ ತಿರುಪತಿ ತುರುಮಲಾ ಟ್ರಸ್ಟ್‌ (ಟಿಟಿಡಿ) ಈ ನಿರ್ಧಾರ ಕೈಗೊಂಡಿದೆ.
ವೆಂಕಟಾದ್ರಿಯ ಏಳನೇ ಬೆಟ್ಟದ ಶಿಖರದಲ್ಲಿ ದೇವಾಲಯವಿದ್ದು, ಭಾರೀ ಮಳೆಯಿಂದಾಗಿ ಮಳೆ ನೀರು ನೇರವಾಗಿ ದೇಗುಲಕ್ಕೆ ಹರಿದು ಬರುತ್ತಿದೆ. ದೇವಸ್ಥಾನದ ಆವರಣಕ್ಕೆ ಮಳೆ ನೀರು ನುಗ್ಗಿದ್ದು, ಅಧಿಕಾರಿಗಳು ನೀರನ್ನು ಹೊರ ಹಾಕುತ್ತಿದ್ದಾರೆ.

“ನಿನ್ನೆ ರಾತ್ರಿ ದೇವಸ್ಥಾನದ ಒಳಗೆ ಸಾಕಷ್ಟು ನೀರು ಇತ್ತು, ಆದರೆ ನಾವು ಅದನ್ನು ಪಂಪ್ ಮಾಡಿದ್ದೇವೆ. ಸದ್ಯ ಸ್ಥಿತಿ ಸುಧಾರಿಸಿದೆ. ಸದ್ಯದ ಪರಿಸ್ಥಿತಿಯಲ್ಲಿ ದೇವಸ್ಥಾನವನ್ನು ಮುಚ್ಚಲಾಗುವುದು ಎಂದು ನಾವು ಭಕ್ತರಿಗೆ ತಿಳಿಸಿದ್ದೇವೆ ಎಂದು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಅಧ್ಯಕ್ಷ ವೈವಿ ಸುಬ್ಬಾ ರೆಡ್ಡಿ ಅವರನ್ನು ಉಲ್ಲೇಖಿಸಿ ದಿ ನ್ಯೂಸ್‌ ಮಿನಿಟ್‌ ವರದಿ ಮಾಡಿದೆ.
“ಇದಲ್ಲದೆ, ರಸ್ತೆಗಳ ಮೇಲೆ ಬಂಡೆಗಳು ಬೀಳುತ್ತಿರುವುದರಿಂದ ಎಲ್ಲಾ ಘಾಟ್ ರಸ್ತೆಗಳನ್ನು ಮುಚ್ಚಲಾಗಿದೆ” ಎಂದು ಅವರು ಹೇಳಿದ್ದಾರೆ. ಭಾರೀ ಮಳೆಯಿಂದಾಗಿ ಪ್ರವಾಹ ಉಂಟಾಗಿದ್ದು, ಘಾಟ್ ರಸ್ತೆಗಳಲ್ಲಿ ಕೆಲವೆಡೆ ಭೂಕುಸಿತ ಉಂಟಾಗಿದ್ದು, ಸಂಚಾರ ಸ್ಥಗಿತಗೊಂಡಿದೆ. ಎರಡು ದಿನಗಳ ಕಾಲ ಘಾಟ್ ರಸ್ತೆಗಳನ್ನು ಮುಚ್ಚುವುದಾಗಿ ಟಿಟಿಡಿ ಈಗಾಗಲೇ ಪ್ರಕಟಿಸಿತ್ತು.
ಮಳೆಯಿಂದಾಗಿ ತಿರುಪತಿಯಲ್ಲಿ ತೀವ್ರ ಹಾನಿಯಾಗಿದೆ. ಗುರುವಾರ ಮಧ್ಯಾಹ್ನ 3 ಗಂಟೆಯಿಂದ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಹಲವಾರು ರಸ್ತೆಗಳು ಮಳೆ ನೀರಿನಿಂದ ಜಲಾವೃತಗೊಂಡಿದ್ದು ಹರಿಯುವ ನದಿಯಂತೆ ಕಾಣುತ್ತಿವೆ. ವಾಹನಗಳು ನೀರಿನಲ್ಲಿ ಮುಳುಗಿ ಕೊಚ್ಚಿ ಹೋಗುತ್ತಿವೆ. ಪ್ರವಾಹದಿಂದಾಗಿ ತಿರುಪತಿ-ಕಡಪ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಯೂ ಸಂಪರ್ಕ ಕಡಿತಗೊಂಡಿದೆ.

ಪ್ರಮುಖ ಸುದ್ದಿ :-   ಉತ್ತಮ ಪ್ರತಿಕ್ರಿಯೆ, ಜನರು ದಾಖಲೆ ಸಂಖ್ಯೆಯಲ್ಲಿ ಎನ್‌ಡಿಎಗೆ ಮತ ಹಾಕಿದ್ದಾರೆ : ಲೋಕಸಭೆ ಚುನಾವಣೆ 1ನೇ ಹಂತದ ಮತದಾನದ ಬಗ್ಗೆ ಪ್ರಧಾನಿ ಮೋದಿ

ಗುರುವಾರದಂದು ಅಲಿಪಿರಿ ತಿರುಮಲ ದೇಗುಲದ ಪಾದಚಾರಿ ಮಾರ್ಗವು ಬೆಟ್ಟಗಳಿಂದ ರಭಸವಾಗಿ ಹರಿಯುವ ನೀರಿನಿಂದ ತುಂಬಿ ಹೋಗಿತ್ತು. ತಿರುಮಲದಲ್ಲಿರುವ ವೈಕುಂಟಂ ಕ್ಯೂ ಕಾಂಪ್ಲೆಕ್ಸ್‌ ನೆಲಮಾಳಿಗೆಗೆ ನೀರು ಪ್ರವೇಶಿಸಿದೆ. ಟಿಟಿಡಿ ಹೆಚ್ಚುವರಿ ಕಾರ್ಯನಿರ್ವಹಣಾಧಿಕಾರಿ ಧರ್ಮಾ ರೆಡ್ಡಿ ಅವರ ಮನೆಗೂ ನೀರು ನುಗ್ಗಿದೆ.
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿ ಭಾರೀ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯಿದ್ದು, ಭಾರೀ ಮಳೆಯ ಎಚ್ಚರಿಕೆಯ ಹಿನ್ನೆಲೆಯಲ್ಲಿ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಎರಡು ದಿನಗಳ ಕಾಲ (ನವೆಂಬರ್ 17 ಮತ್ತು 18) ತಿರುಮಲದ ವೆಂಕಟೇಶ್ವರ ದೇವಸ್ಥಾನಕ್ಕೆ ಎರಡು ಪಾದಚಾರಿ ಮಾರ್ಗಗಳನ್ನು ಮುಚ್ಚಲಾಗಿತ್ತು.

ನಿಮ್ಮ ಕಾಮೆಂಟ್ ಬರೆಯಿರಿ

advertisement