ಮಹತ್ವದ ಘೋಷಣೆ.. ಕೊನೆಗೂ ಮಣಿದ ಸರ್ಕಾರ: ಮೂರು ನೂತನ ಕೃಷಿ ತಿದ್ದುಪಡಿ ಕಾಯ್ದೆಗಳು ರದ್ದು-ಪ್ರಧಾನಿ ಮೋದಿ ಘೋಷಣೆ

ನವದೆಹಲಿ: ಕೃಷಿ ಕಾನೂನುಗಳ ಕುರಿತು ಒಂದು ವರ್ಷದ ಆಂದೋಲನದ ನಂತರ, ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಸಂಸತ್ತಿನಲ್ಲಿ ಅಂಗೀಕರಿಸಲಾದ ಮೂರು ವಿವಾದಾತ್ಮಕ ಕಾನೂನುಗಳನ್ನು ಕೇಂದ್ರವು ರದ್ದುಗೊಳಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಘೋಷಿಸಿದರು.
ಪ್ರಧಾನಿ ಮೋದಿ ಕೃಷಿ ಕಾನೂನುಗಳ ಬಗ್ಗೆ “ರೈತರ ಒಂದು ವರ್ಗವನ್ನು ಮನವರಿಕೆ ಮಾಡಲು ಸರ್ಕಾರ ವಿಫಲವಾಗಿದೆ” ಎಂದು ಹೇಳಿದರು. ಈ ತಿಂಗಳ ಸಂಸತ್ ಅಧಿವೇಶನದಲ್ಲಿ ಮೂರು ವಿವಾದಾತ್ಮಕ ಕಾನೂನುಗಳನ್ನು ರದ್ದುಗೊಳಿಸಲಾಗುವುದು ಎಂದು ಭರವಸೆ ನೀಡಿದರು.
“ನಾನು ಭಾರತದ ಕ್ಷಮೆಯಾಚಿಸುತ್ತೇನೆ ರೈತರಿಗೆ [ಕೃಷಿ ಕಾನೂನುಗಳ ಮೇಲೆ] ಮನವರಿಕೆ ಮಾಡಲು ನಮಗೆ ಸಾಧ್ಯವಾಗಲಿಲ್ಲ. ನಾವು ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಲು ನಿರ್ಧರಿಸಿದ್ದೇವೆ ಎಂದು ಘೋಷಿಸುತ್ತಿದ್ದೇನೆ… ಈ ತಿಂಗಳು ಪ್ರಾರಂಭವಾಗುವ ಸಂಸತ್ತಿನ ಅಧಿವೇಶನದಲ್ಲಿ ನಾವು ಎಲ್ಲಾ ಔಪಚಾರಿಕತೆಗಳನ್ನು ಪೂರ್ಣಗೊಳಿಸುತ್ತೇವೆ, ”ಎಂದು ಪ್ರಧಾನಿ ಮೋದಿ ಶುಕ್ರವಾರ ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಹೇಳಿದರು.
3 ಕೃಷಿ ತಿದ್ದುಪಡಿ ಕಾಯ್ದೆಯನ್ನು ಮರಳಿ ಪಡೆದ ನಂತರ ಪ್ರಧಾನಿ, ಮತ್ತಷ್ಟು ಹೆಚ್ಚಿನ ಶ್ರಮ ವಹಿಸಿ ದುಡಿಯುವುದಾಗಿ ಭರವಸೆ ನೀಡಿದ್ದಾರೆ.‘ರೈತರ ಆರ್ಥಿಕ, ಸಾಮಾಜಿಕ ಸ್ಥಿತಿ ಸುಧಾರಿಸಲು ಪ್ರಯತ್ನ ಮಾಡಲಾಗುತ್ತಿದ್ದು, ಮೂರು ಕಾಯ್ದೆ ಜಾರಿಗೆ ತಂದಿದ್ದೆವು. ಸಣ್ಣ ರೈತರ ಒಳಿತಿಗಾಗಿಯೇ ಕೃಷಿ ಕಾಯ್ದೆ ಜಾರಿಗೆ ತಂದಿದ್ದೆವು. ಈ ಮೂರು ಕಾನೂನುಗಳು ಸಂಪೂರ್ಣವಾಗಿ ರೈತರ ಪರವಾಗಿದ್ದವು. ರೈತರ ಹಿತ ದೃಷ್ಟಿಯಲ್ಲಿಟ್ಟುಕೊಂಡೇ ಕಾಯ್ದೆ ಜಾರಿ ಮಾಡಲಾಗಿತ್ತು. ಯೋಜನೆ ಬಗ್ಗೆ ರೈತರಿಗೆ ತಿಳಿಸುವಲ್ಲಿ ಸಾಕಷ್ಟು ಯತ್ನಿಸಿದ್ದೇವೆ. ಆದರೆ ಕೆಲವು ರೈತರು ಕಾಯ್ದೆಯನ್ನು ಅವರ ಸಲಹೆ ಒಪ್ಪಿಕೊಂಡಿದ್ದರೂ ವಿರೋಧಿಸುತ್ತಿದ್ದಾರೆ. ರೈತರ ನಿರಂತರ ಹೋರಾಟದ ಹಿನ್ನೆಲೆಯಲ್ಲಿ ಇದೀಗ ಸರ್ಕಾರ ಮೂರು ಕೃಷಿ ಕಾಯ್ದೆ ವಾಪಸ್ ಪಡೆಯಲು ನಿರ್ಧರಿಸಿದೆ ಎಂದು ಪ್ರಧಾನಿ ಘೋಷಿಸಿದ್ದಾರೆ. ಹೋರಾಟ ಮಾಡುತ್ತಿರುವ ರೈತರು ಮನೆಗೆ ತೆರಳಲು ಪ್ರಧಾನಿ ಮನವಿ ಮಾಡಿದ್ದಾರೆ.
ನಾನೇನು ಮಾಡಿದ್ದೇನೋ, ಅದೆಲ್ಲವೂ ರೈತರಿಗಾಗಿ. ನಾನು ಮಾಡುತ್ತಿರುವ ಕೆಲಸಗಳು ದೇಶಕ್ಕಾಗಿ. ಇಂದು ದೇಶಕ್ಕಾಗಿ ಮತ್ತಷ್ಟು ಹೆಚ್ಚು ಶ್ರಮವಹಿಸಿ ದುಡಿಯುತ್ತೇನೆ ಎಂದು ಭರವಸೆ ನೀಡುತ್ತೇನೆ ಎಂದು ಹೇಳಿದ್ದಾರೆ.
ಭಾಷಣದಲ್ಲಿ ಮೊದಲು ರೈತರ ಸಮಸ್ಯೆಯ ಕುರಿತು ಮಾತನಾಡಿದ ಪ್ರಧಾನಿ, ರೈತರ ಸಮಸ್ಯೆ ಬಗೆಹರಿಸುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ದೇಶದಲ್ಲಿ 100ರಲ್ಲಿ 80 ಪ್ರತಿಶತ ರೈತರು ಸಣ್ಣ ಹಿಡುವಳಿ ರೈತರಾಗಿದ್ದು, 10 ಕೋಟಿಗಿಂತ ಹೆಚ್ಚು ಸಣ್ಣ ರೈತರಿದ್ದಾರೆ. ಅವರ ಸಮಸ್ಯೆಗಳನ್ನು ನಾನು ಅರಿತಿದ್ದೇನೆ. ಅದನ್ನು ಬಗೆಹರಿಸಲು ಪ್ರಯತ್ನ ಮಾಡಲಾಗುತ್ತಿದ್ದು, ಬೀಜ, ವಿಮೆ, ಮಾರುಕಟ್ಟೆ, ಉಳಿತಾಯಕ್ಕೆ ಯೋಜನೆಗಳಿಗಾಗಿ ರೈತರಿಗೆ ಫಸಲ್ ಬಿಮಾ, ಪೆನ್ಷನ್‌ ಯೋಜನೆ ಜಾರಿಗೆ ತಂದಿದ್ದೇವೆ. ಕೃಷಿ ಮಾರುಕಟ್ಟೆ ಆಧುನೀಕರಣಕ್ಕೆ ಕೋಟ್ಯಂತರ ರೂ. ಖರ್ಚು ಮಾಡಲಾಗುತ್ತಿದೆ. ರೈತರು ಈಗ ಎಲ್ಲಿ ಬೇಕಾದರೂ ತಮ್ಮ ಬೆಳೆ ಮಾರಬಹುದು. ಕೃಷಿ ಬಜೆಟ್‌ ಮೊದಲಿಗಿಂತ 5 ಪಟ್ಟು ಹೆಚ್ಚಿಸಿದ್ದೇವೆ. ರೈತರಿಗೆ 22 ಕೋಟಿ ಮಣ್ಣಿನ ಹೆಲ್ತ್ ಕಾರ್ಡ್‌ ನೀಡಿದ್ದೇವೆ ಎಂದು ಪ್ರಧಾನಿ ಹೇಳಿದ್ದಾರೆ.
ಭಾಷಣದಲ್ಲಿ ಪ್ರಧಾನಿ ಸೇವಾ ಮನೋಭಾ, ರೈತರ ಸಮಸ್ಯೆಗಳು ಮೊದಲಾದವುಗಳ ಕುರಿತು ಮಾತನಾಡಿದ್ದಾರೆ. ಗುರು ನಾನಕ್ ಜಯಂತಿಯ ಶುಭಾಶಯಗಳನ್ನು ತಿಳಿಸುತ್ತಾ ಭಾಷಣವನ್ನು ಆರಂಭಿಸಿದ ಪ್ರಧಾನಿ, ಸೇವಾ ಮಾರ್ಗ ಅನುಸರಿಸುವುದರಿಂದ ಜೀವನ ಸಾರ್ಥವಾಗಲಿದೆ ಎಂದಿದ್ದಾರೆ.
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಸಂಸತ್ತು ಮೂರು ಕೃಷಿ ಕಾನೂನುಗಳನ್ನು ಅಂಗೀಕರಿಸಿತು. ಸಂಸತ್ತಿನ ಮಾನ್ಸೂನ್ ಅಧಿವೇಶನದಲ್ಲಿ ಧ್ವನಿ ಮತದ ಮೂಲಕ ಅಂಗೀಕರಿಸುವ ಮೊದಲು ಮೂರು ಸುಗ್ರೀವಾಜ್ಞೆಗಳು ಜೂನ್ ತಿಂಗಳಲ್ಲಿ ಬಂದಿದ್ದವು. ಹಾಗೂ ಅದನ್ನು ವಿರೋಧಿಸಿ ರೈತರು ಒಂದು ವರ್ಷದಿಂದ ಹೋರಾಟ ನಡೆಸುತ್ತಿದ್ದು, ಈ ನವೆಂಬರ್‌ 26ರಂದು ಹೋರಾಟಕ್ಕೆ ಒಂದು ವರ್ಷವಾಗುತ್ತಿದೆ.

ಪ್ರಮುಖ ಸುದ್ದಿ :-   ಇವಿಎಂ ಮತಗಳ ಜೊತೆ ವಿವಿಪ್ಯಾಟ್ ಮತಗಳ ಸಂಪೂರ್ಣ ಎಣಿಕೆ : ಎಲ್ಲ ಅರ್ಜಿಗಳನ್ನು ವಜಾ ಮಾಡಿದ ಸುಪ್ರೀಂ ಕೋರ್ಟ್

 

 

 

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement