ಎಂಎಸ್‌ಪಿ, ಎಫ್‌ಐಆರ್‌ಗಳ ಹಿಂಪಡೆಯುವಿಕೆ, ಸಚಿವ ಅಜಯ್ ಮಿಶ್ರಾ ವಜಾ: ಬೇಡಿಕೆಗಳ ಪಟ್ಟಿ ಮುಂದಿಟ್ಟ ಎಸ್‌ಕೆಎಂ, ಹೋರಾಟ ಮುಂದುವರಿಕೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದ ನಂತರ, 40ಕ್ಕೂ ಹೆಚ್ಚು ರೈತ ಸಂಘಟನೆಗಳ ಒಕ್ಕೂಟ ಸಂಯುಕ್ತ ಕಿಸಾನ್‌ ಮೋರ್ಚಾ ಭಾನುವಾರ (ನವೆಂಬರ್ 21 ) ದೆಹಲಿ-ಹರಿಯಾಣ ಗಡಿಯ ಸಮೀಪವಿರುವ ಸಿಂಘು ಪ್ರತಿಭಟನಾ ಸ್ಥಳದಲ್ಲಿ ಮುಂದಿನ ಮಾರ್ಗೋಪಾಯಗಳ ಕುರಿತು ಚರ್ಚಿಸಲು ಸಭೆ ನಡೆಸಿತು.
ನವೆಂಬರ್ 22 ರಂದು ಲಕ್ನೋದಲ್ಲಿ ಕಿಸಾನ್ ಪಂಚಾಯತ್, ನವೆಂಬರ್ 26 ರಂದು ಎಲ್ಲಾ ಗಡಿಗಳಲ್ಲಿ ಸಭೆಗಳು ಮತ್ತು ನವೆಂಬರ್ 29 ರಂದು ಸಂಸತ್ತಿಗೆ ಮೆರವಣಿಗೆ ಸೇರಿದಂತೆ SKM ನ ಪೂರ್ವ ನಿರ್ಧಾರಿತ ಕಾರ್ಯಕ್ರಮಗಳು ಮುಂದುವರೆಯುತ್ತವೆ” ಎಂದು ಸಭೆಯ ನಂತರ ರೈತ ನಾಯಕ ಬಲ್ಬೀರ್ ಸಿಂಗ್ ರಾಜೇವಾಲ್ ಮಾಹಿತಿ ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೃಷಿ ಕಾನೂನು ಹಿಂಪಡೆದಿದ್ದು ಉತ್ತಮ ಹೆಜ್ಜೆ, ನಾವು ಅದನ್ನು ಸ್ವಾಗತಿಸುತ್ತೇವೆ. ಆದರೆ ಬಹಳಷ್ಟು ವಿಷಯಗಳು ಇನ್ನೂ ಉಳಿದಿವೆ. ನಾವು ಪ್ರಧಾನಿ ಮೋದಿಗೆ ಬಹಿರಂಗ ಪತ್ರ ಬರೆಯುತ್ತೇವೆ. ಬಾಕಿ ಇರುವ ಬೇಡಿಕೆಗಳನ್ನು ಅದರಲ್ಲಿ ಉಲ್ಲೇಖಿಸಲಾಗುವುದು -ಕನಿಷ್ಠ ಬೆಂಬಲ ಬೆಲೆಗೆ ಸಮಿತಿ , ಅದರ ಹಕ್ಕುಗಳು, ಅದರ ಸಮಯ ಚೌಕಟ್ಟು, ಅದರ ಕರ್ತವ್ಯಗಳು; ವಿದ್ಯುತ್ ಬಿಲ್ 2020, ಪ್ರಕರಣಗಳ ಹಿಂಪಡೆಯುವಿಕೆ. ಲಖ್ಮಿಪುರ್ ಖೇರಿಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಸಚಿವ ಅಜಯ್ ಮಿಶ್ರಾ ಥೇನಿ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸುವಂತೆಯೂ ನಾವು ಒತ್ತಾಯಿಸುತ್ತೇವೆ ಎಂದು ಹೇಳಿದರು.
ಮುಂದಿನ ಬೆಳವಣಿಗೆಗಳ ಕುರಿತು ನಿರ್ಧಾರಕ್ಕಾಗಿ, ನವೆಂಬರ್ 27 ರಂದು ಸಂಯುಕ್ತ ಕಿಸಾನ್‌ ಮೋರ್ಚಾದ ಮತ್ತೊಂದು ಸಭೆ ನಡೆಯಲಿದೆ. ಅಲ್ಲಿಯವರೆಗೆ ಪರಿಸ್ಥಿತಿಯ ಆಧಾರದ ಮೇಲೆ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಸಂಯುಕ್ತ ಕಿಸಾನ್ ಮೋರ್ಚಾದ ಪೂರ್ವನಿರ್ಧರಿತ ಕಾರ್ಯಕ್ರಮಗಳು ವೇಳಾಪಟ್ಟಿಯಂತೆಯೇ ನಡೆಯಲಿದೆ. ಕೃಷಿ ತಿದ್ದುಪಡಿ ಕಾಯ್ದೆ ಹಿಂಪಡೆದರೂ, ಹೋರಾಟ ಮುಂದುವರೆಯಲಿದೆ, ನವೆಂಬರ್ 22 ರಂದು ಲಕ್ನೋದಲ್ಲಿ ಕಿಸಾನ್ ಪಂಚಾಯತ್, ನವೆಂಬರ್ 26 ರಂದು ಎಲ್ಲಾ ಗಡಿಗಳಲ್ಲಿ ಸಭೆಗಳು ಮತ್ತು ನವೆಂಬರ್ 29 ರಂದು ಸಂಸತ್ತಿಗೆ ಮೆರವಣಿಗೆ ನಡೆಯಲಿದೆ” ಎಂದು ಅವರು ಮಾಹಿತಿ ನೀಡಿದ್ದಾರೆ.
ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಮೋದಿ ಸರ್ಕಾರದ ನಿರ್ಧಾರದ ಬಗ್ಗೆ ಕೇಳಿದಾಗ, ಇದು ಉತ್ತಮ ಹೆಜ್ಜೆ ಮತ್ತು ರೈತರು ಇದನ್ನು ಸ್ವಾಗತಿಸುತ್ತಾರೆ. ಆದರೆ ಬಹಳಷ್ಟು ವಿಷಯಗಳು ಬಗೆಹರಿಯಬೇಕಿದೆ ಎಂದು ಅವರು ಉತ್ತರಿಸಿದರು.
ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ವಿವಿಧ ರೈತ ಸಂಘಟನೆಗಳು ಒಂದು ವರ್ಷದಿಂದ ರಾಷ್ಟ್ರ ರಾಜಧಾನಿಯ ವಿವಿಧ ಪ್ರವೇಶ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸುತ್ತಿವೆ. ಉತ್ತರ ದೆಹಲಿಯ ಸಿಂಘು ಗಡಿಯಲ್ಲಿರುವ ಕ್ಯಾಂಪ್‌ಸೈಟ್ ಎಸ್‌ಕೆಎಂನ ಪ್ರಧಾನ ಕಚೇರಿಯಾಗಿದ್ದರೆ, ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ನಾಯಕ ರಾಕೇಶ್ ಟಿಕಾಯತ್ ದೆಹಲಿಯ ಉತ್ತರ ಪ್ರದೇಶದ ಗಡಿ ಗಾಜಿಪುರ ಗಡಿಯಲ್ಲಿ ಮೊಕ್ಕಾಂ ಹೂಡಿದ್ದಾರೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ : 1ನೇ ಹಂತದಲ್ಲಿ 62.37%ರಷ್ಟು ಮತದಾನ ; 2019ರ ಮತದಾನದ ಪ್ರಮಾಣಕ್ಕಿಂತ ಕಡಿಮೆ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement