ವಿರೋಧದ ನಂತರ ರಾಮಾಯಣ ವಿಶೇಷ ಎಕ್ಸ್‌ಪ್ರೆಸ್‌ ರೈಲಿನ ಸಿಬ್ಬಂದಿ ಕೇಸರಿ ಉಡುಪು ಹಿಂತೆಗೆದುಕೊಂಡ ಭಾರತೀಯ ರೈಲ್ವೆ

ನವದೆಹಲಿ: ರಾಮಾಯಣ ಎಕ್ಸ್‌ಪ್ರೆಸ್ ರೈಲಿನ ವೇಟರ್‌ಗಳ ಕೇಸರಿ ಉಡುಗೆಯನ್ನು ಹಿಂದೂ ಸಂತರು ವಿರೋಧಿಸಿದ ನಂತರ, ಐಆರ್‌ಸಿಟಿಸಿ (IRCTC) ಸೇವಾ ಸಿಬ್ಬಂದಿಯ ಉಡುಪನ್ನು ವೃತ್ತಿಪರ ಉಡುಗೆಗೆ ಬದಲಾಯಿಸಿದೆ ಮತ್ತು ಉಂಟಾದ ಅನಾನುಕೂಲತೆಗೆ ವಿಷಾದಿಸಿದೆ.
ಇದಕ್ಕೂ ಮೊದಲು, ಅಡುಗೆ ಬಡಿಸುವ ಮಾಣಿಗಳು ‘ಸಾಧು’ಗಳನ್ನು ಹೋಲುವ ರೀತಿ ಕೇಸರಿ ಸಮವಸ್ತ್ರ ಧರಿಸಿದ್ದರು, ಇದಕ್ಕೆ ಹಿಂದೂ ಸಂತ ಸಮುದಾಯದಿಂದ ವಿರೋಧವನ್ನು ಎದುರಿಸಬೇಕಾಯಿತು. ಉಜ್ಜಯಿನಿಯ ಸಂತರು ಮಾಣಿಗಳ ಕೇಸರಿ ಉಡುಪಿಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ರೈಲಿನ ವೇಟರ್‌ಗಳು ಕೇಸರಿ ಬಟ್ಟೆ, ಧೋತಿ, ಪೇಟ ಮತ್ತು ರುದ್ರಾಕ್ಷಿ ಮಾಲೆ ಧರಿಸಿರುವುದನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋ ತೋರಿಸಿದೆ. ಮಾಣಿಗಳು ಸಂತರಂತೆ ವೇಷಧರಿಸಿ ಜನರಿಗೆ ಊಟ ಬಡಿಸುವುದನ್ನು ಮತ್ತು ಜನರ ಉಳಿದ ಪಾತ್ರೆಗಳನ್ನು ಎತ್ತಿಕೊಂಡು ಹೋಗುವುದನ್ನು ಸಹ ವಿಡಿಯೊ ತೋರಿಸಿದೆ.
ಭಾರತೀಯ ರೈಲ್ವೆ ತನ್ನ ರಾಮಾಯಣ ಎಕ್ಸ್‌ಪ್ರೆಸ್ ರೈಲಿನಲ್ಲಿ ಹೊಸ ಪ್ರಯೋಗ ಮಾಡಲು ಮುಂದಾಗಿತ್ತು. ಇದರ ಅನುಸಾರವಾಗಿ ಇಲ್ಲಿ ಅಡುಗೆ ಬಡಿಸುವ ಮಾಣಿಗಳು ನಮ್ಮ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ಹೇಳಲಾಗಿತ್ತು. ಈಗ ಅದನ್ನು ಹಿಂಪಡೆಯಲಾಗಿದೆ ಎಂದು ತಿಳಿಸಲಾಗಿದೆ.
ಸ್ವಾಮೀಜಿಗಳ ಒತ್ತಡಕ್ಕೆ ಮಣಿದು ಭಾರತೀಯ ರೈಲ್ವೆಯು ತನ್ನ ಸಿಬ್ಬಂದಿಯ ಸಮವಸ್ತ್ರವನ್ನು ಸಾಮಾನ್ಯ ಶರ್ಟ್ ಮತ್ತು ಪ್ಯಾಂಟ್ ಹಾಗೂ ಸಾಂಪ್ರದಾಯಿಕ ಶಿರಸ್ತ್ರಾಣಕ್ಕೆ ಬದಲಾಯಿಸಿದೆ. ಆದರೂ, ಮಾಣಿಗಳು ಕೇಸರಿ ಮಾಸ್ಕ್ ಮತ್ತು ಗ್ಲೌಸ್‌ಗಳನ್ನು ಧರಿಸಲಿದ್ದಾರೆ ಎಂದು ಭಾರತೀಯ ರೈಲ್ವೆ ಮೂಲಗಳು ತಿಳಿಸಿವೆ.
ಮಾಣಿಗಳ ಕೇಸರಿ ಉಡುಗೆ ಡ್ರೆಸ್ ಕೋಡ್ ಹಿಂಪಡೆಯದಿದ್ದರೆ ಡಿಸೆಂಬರ್ 12ರಂದು ರೈಲು ನಿಲ್ಲಿಸುವುದಾಗಿ ಕೆಲವು ಸ್ವಾಮೀಜಿಗಳು ಎಚ್ಚರಿಕೆ ನೀಡಿದ್ದರು. ಪರಿಣಾಮವಾಗಿ, ರೈಲ್ವೆಯು ಸಮವಸ್ತ್ರವನ್ನು ಸಾಮಾನ್ಯ ಶರ್ಟ್ (Shirt) ಮತ್ತು ಪ್ಯಾಂಟ್ ಹಾಗೂ ಸಾಂಪ್ರದಾಯಿಕ ಶಿರಸ್ತ್ರಾಣಕ್ಕೆ ಬದಲಾಯಿಸಿತು.
ಸೇವಾ ಸಿಬ್ಬಂದಿಯ ವೃತ್ತಿಪರ ಉಡುಪಿನ ಲುಕ್ ಬದಲಾಯಿಸಲಾಗಿದೆ. ಉಡುಗೆಯನ್ನು ಸಂಪೂರ್ಣವಾಗಿ ಬದಲಾಯಿಸಲಾಗಿದೆ, ಈ ಬಗ್ಗೆ ಉಂಟಾದ ಅನಾನುಕೂಲತೆಗಾಗಿ ವಿಷಾದಿಸುತ್ತೇವೆ” ಎಂದು ಭಾರತೀಯ ರೈಲ್ವೆ ಹೇಳಿಕೆಯಲ್ಲಿ ತಿಳಿಸಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ