ಮಂಗಳೂರು: 8 ವರ್ಷದ ಬಾಲಕಿ ಮೇಲೆ ಸಾಮೂಹಿಕ‌ ಅತ್ಯಾಚಾರ, ಕೊಲೆ ಪ್ರಕರಣ; ನಾಲ್ವರು ಆರೋಪಿಗಳ ಬಂಧನ

posted in: ರಾಜ್ಯ | 0

ಮಂಗಳೂರು: ನಗರ ಹೊರವಲಯದ ಉಳಾಯಿಬೆಟ್ಟು ಟೈಲ್ಸ್ ಫ್ಯಾಕ್ಟರಿಯಲ್ಲಿ ಕೆಲಸಕ್ಕಿದ್ದ ಜಾರ್ಖಂಡನ ಕುಟುಂಬದ ಎಂಟು ವರ್ಷದ ಬಾಲಕಿ ಮಗುವಿನ ಅತ್ಯಾಚಾರ ಮಾಡಿ ಕೊಲೆ‌ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳು ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ನಂತರ ಕೊಲೆಗೈದಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಇಂದು ತಿಳಿಸಿದ್ದಾರೆ.
ಪರಾರಿಯಾಗಿದ್ದ ಟೈಲ್ಸ್ ಫ್ಯಾಕ್ಟರಿಯ ಕೂಲಿ ಕಾರ್ಮಿಕರಾಗಿದ್ದ ಜಯ್ ಸಿಂಗ್ (21), ಮುಕೇಶ್ ಸಿಂಗ್ (20), ಮನೀಶ್ ತಿರ್ಕಿ(33) ಹಾಗೂ ಪುತ್ತೂರಿನಲ್ಲಿ ಕೂಲಿ ಕಾರ್ಮಿಕನಾಗಿ ದುಡಿಯುತ್ತಿದ್ದ ಮುನೀಮ್ ಸಿಂಗ್ (20) ಬಂಧಿತ ಆರೋಪಿಗಳಾಗಿದ್ದಾರೆ.
ಈ ಪೈಕಿ ಮೂವರು ಮಧ್ಯಪ್ರದೇಶ ರಾಜ್ಯದ ಪನ್ನಾ ಜಿಲ್ಲೆಯ ನಿವಾಸಿಗಳಾದರೆ, ಓರ್ವ ಜಾರ್ಖಂಡ್ ರಾಜ್ಯದ ರಾಂಚಿ ನಿವಾಸಿ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಬಡ ಕುಟುಂಬದ ಬಾಲಕಿಯ ಮೇಲೆ ಕಣ್ಣಿಟ್ಟಿದ್ದ ಆರೋಪಿಗಳು ಭಾನುವಾರ ನ.21ರಂದು ಮಧ್ಯಾಹ್ನ ಪರಾರಿಯ ಟೈಲ್ಸ್ ಫ್ಯಾಕ್ಟರಿಯ ಕಂಪೌಂಡ್ ಹೊರಗೆ ಆಟವಾಡುತ್ತಿದ್ದ ಬಾಲಕಿಯನ್ನು ಬಲವಂತದಿಂದ ರೂಮಿಗೆ ಎತ್ತಿಕೊಂಡು ಹೋಗಿ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಬಾಲಕಿ‌ ಕಿರಚಾಡಲು ಆರಂಭಿಸಿದ್ದು, ಒಬ್ಬ ಆರೋಪಿ ಬಾಲಕಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಕೃತ್ಯದ ಬಳಿಕ ಸಾಕ್ಷ್ಯ ನಾಶ ಮಾಡುವ ಉದ್ದೇಶದಿಂದ ನೀರು ಹರಿಯುವ ಚರಂಡಿಗೆ ಬಾಲಕಿಯ ಶವವನ್ನು ಎಸೆದಿದ್ದಾರೆ. ಸೂಕ್ತ‌ ಸಾಕ್ಷಿಗಳನ್ನು ಸಂಗ್ರಹಿಸಿ ಇದೀಗ‌ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು‌ ಶಶಿಕುಮಾರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಡಿಸಿಪಿಗಳಾದ ಹರಿರಾಂ ಶಂಕರ್, ದಿನೇಶ್ ಕುಮಾರ್, ಎಸಿಪಿ ರಂಜಿತ್ ಭಂಡಾರು ಮತ್ತು ರವೀಶ್ ನಾಯಕ್ ಉಪಸ್ಥಿತರಿದ್ದರು.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ