ಏಷ್ಯಾದ ಅತಿದೊಡ್ಡ ವಿಮಾನ ನಿಲ್ದಾಣಕ್ಕೆ ಮೋದಿ ಶಂಕು ಸ್ಥಾಪನೆ.. ಇದಕ್ಕಿದೆ ಹಲವು ವಿಶೇಷತೆ

ಲಕ್ನೋ: ಉತ್ತರ ಪ್ರದೇಶದ ಗೌತಮ್ ಬುದ್ಧ ನಗರದ ಜೇವರ್‌ನಲ್ಲಿ ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಎನ್‌ಐಎ) ಪ್ರಧಾನಿ ನರೇಂದ್ರ ಮೋದಿ ಗುರುವಾರ ಶಂಕುಸ್ಥಾಪನೆ ನೆರವೇರಿಸಿದರು. 5,730 ಕೋಟಿ ರೂ. ವೆಚ್ಚದ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಏಷ್ಯಾದಲ್ಲಿಯೇ ಅತಿ ದೊಡ್ಡ ಮತ್ತು ಭಾರತದ ಮೊದಲ ನಿವ್ವಳ ಶೂನ್ಯ ಹೊರಸೂಸುವಿಕೆ ವಿಮಾನ ನಿಲ್ದಾಣವಾಗಿದೆ.
ಶಂಕು ಸ್ಥಾಪನೆ ಬಳಿಕ ಮಾತನಾಡಿದ ಮೋದಿ ಹಿಂದಿನ ಸರ್ಕಾರಗಳನ್ನು ತರಾಟೆಗೆ ತೆಗೆದುಕೊಂಡರು. ‘ಉತ್ತರ ಪ್ರದೇಶವನ್ನು ಮೊದಲು ಕತ್ತಲೆಯಲ್ಲಿ ಇರಿಸಲಾಗಿತ್ತು. ಆದರೆ ಈಗ ಅದು ಅರ್ಹವಾದದ್ದನ್ನು ಪಡೆದಿದೆ. “ಡಬಲ್ ಇಂಜಿನ್” ಬಿಜೆಪಿ ಆಡಳಿತದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಛಾಪು ಮೂಡಿಸುತ್ತಿದೆ ಎಂದು ಹೇಳಿದರು. 20 ವರ್ಷಗಳ ಹಿಂದೆ ಬಿಜೆಪಿ ಸರ್ಕಾರ ಇಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣದ ಕನಸು ಕಂಡಿತ್ತು. ಆದಾಗ್ಯೂ, ಲಕ್ನೋ ಮತ್ತು ದೆಹಲಿಯಲ್ಲಿ ಕುಳಿತಿರುವ ಹಿಂದಿನ ಸರ್ಕಾರಗಳ ಜಗಳದಿಂದಾಗಿ ಅದು ಕಾರ್ಯರೂಪಕ್ಕೆ ಬರಲಿಲ್ಲ. ಹಿಂದಿನ ರಾಜ್ಯ ಸರ್ಕಾರ ಯೋಜನೆ ನಿಲ್ಲಿಸುವಂತೆ ಪತ್ರ ಬರೆದಿತ್ತು. ಆದರೆ ಈಗ ನಾವು ಅದರ ಭೂಮಿಪೂಜೆ ನೋಡುತ್ತಿದ್ದೇವೆ’ ಎಂದು ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ಮಾಡಿದರು.

ಮಾಹಿಗಳ ಪ್ರಕಾರ, ವರ್ಷಕ್ಕೆ 7 ಕೋಟಿ ಪ್ರಯಾಣಿಕರ ಸಾಮರ್ಥ್ಯ ಈ ಬೃಹತ್ ವಿಮಾನ ನಿಲ್ದಾಣ ಹೊಂದಿರಲಿದ್ದು, ಏಕಕಾಲದಲ್ಲಿ 186 ವಿಮಾನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗುತ್ತದೆ. ಅಲ್ಲದೇ 10 ಲಕ್ಷ ಟನ್ ಕಾರ್ಗೋ ಟರ್ಮಿನಲ್‌ಗೆ ವ್ಯವಸ್ಥೆ ಮಾಡಲಾಗಿದ್ದು,  ದೆಹಲಿಯಿಂದ ನಿಲ್ದಾಣಕ್ಕೆ ಮೆಟ್ರೋ ಸಂಪರ್ಕ, ವಾರಣಾಸಿಯಿಂದ ಹೈಸ್ಪೀಡ್ ರೈಲಿನ ವ್ಯವಸ್ಥೆ ಕಲ್ಪಿಸಲಾಗುತ್ತದೆ.  ಇದು 30,000 ಕೋಟಿ ರೂ. ವೆಚ್ಚದ ಕಾಮಗಾರಿಯಾಗಿದ್ದು 2024 ರ ವೇಳೆಗೆ ಮೊದಲ ಹಂತದಲ್ಲಿ ಜನರ ಬಳಕೆಗೆ ಮುಕ್ತಾಯಗೊಳಿಸಲು ಯೋಜನೆ ರೂಪಿಸಲಾಗಿದೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ

ಸದ್ಯ ದೆಹಲಿಯಲ್ಲಿರು ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 72 ಕಿ.ಮೀ. ದೂರದಲ್ಲಿ ನೊಯ್ಡಾ ವಿಮಾನ ನಿಲ್ದಾಣವಿದ್ದು, ನೋಯ್ಡಾ, ಫರಿದಾಬಾದ್ ಮತ್ತು ಗಾಜಿಯಾಬಾದ್‌ನಿಂದ 40 ಕಿ.ಮೀ. ದೂರದಲ್ಲಿದೆ.
ನಾಲ್ಕು ಹಂತಗಳಲ್ಲಿ ಈ ಯೋಜನೆ ಪೂರ್ಣವಾಗಲಿದ್ದು 2024 ರ ವೇಳೆಗೆ ಮೊದಲ ಹಂತ ಪೂರ್ಣಗೊಳಿಸಲು ಪ್ಲ್ಯಾನ್ ಮಾಡಲಾಗಿದೆ. ಈ ವಿಮಾನ ನಿಲ್ದಾಣದಿಂದ ಒಂದು ಲಕ್ಷಕ್ಕೂ ಅಧಿಕ ಮಂದಿಗೆ ಉದ್ಯೋಗ ಸಿಗುವ ನಿರೀಕ್ಷೆ ಹೊಂದಲಾಗಿದೆ.
ವಿಮಾನ ನಿಲ್ದಾಣದಲ್ಲಿ ಹೈಟೆಕ್ ಹೊಟೇಲ್, ವಿವಿಐಪಿ ಟರ್ಮಿನಲ್, ಇಂಧನ ಫಾರ್ಮ್, ವಿಮಾನ ನಿಲ್ದಾಣದ ಅಗ್ನಿಶಾಮಕ ಕಟ್ಟಡ, ದೊಡ್ಡ ಮಳೆ ಕೊಯ್ಲು ಕೊಳವನ್ನು ಸಹ ನಿರ್ಮಿಸಲು ಯೋಜಿಸಲಾಗಿದೆ. ನಿಲ್ದಾಣದ ಸಂಕೀರ್ಣದಲ್ಲಿ 167 ಎಕರೆ ಪ್ರದೇಶವನ್ನು ರಿಯಲ್ ಎಸ್ಟೇಟ್ ಅಭಿವೃದ್ಧಿಗೆ ಮೀಸಲಿಡಲಾಗಿದೆ.
3,500 ಎಕರೆ ವಿಸ್ತೀರ್ಣದಲ್ಲಿ ಕಾಮಗಾರಿ ನಡೆಯುತ್ತಿದ್ದು, ಇದರಲ್ಲಿ ವಿಮಾನ ನಿಲ್ದಾಣಕ್ಕೆ ಮುಖ್ಯ ಪ್ರವೇಶದ ಉದ್ದಕ್ಕೂ ರಿಯಲ್ ಎಸ್ಟೇಟ್ ಅಭಿವೃದ್ಧಿಗಾಗಿ 167 ಎಕರೆ ಭೂಮಿಯನ್ನು ಮೀಸಲಿಡಲಾಗಿದೆ.
ಈ ನಿಲ್ದಾಣದಿಂದಾಗಿ ಉತ್ತರಪ್ರದೇಶವು ಐದು ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಹೊಂದಿರುವ ಭಾರತದ ಏಕೈಕ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಈ ವಿಮಾನ ನಿಲ್ದಾಣ ದೆಹಲಿ ಎನ್‍ಸಿಆರ್‌ ವ್ಯಾಪ್ತಿಯಲ್ಲಿ ಬರುವ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ. ಇದು ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ದಟ್ಟಣೆ ಕಡಿಮೆ ಮಾಡಲಿದೆ
ಎಂದು ನಿರೀಕ್ಷಿಸಲಾಗಿದೆ.
ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಯಮುನಾ ಇಂಟರ್‌ನ್ಯಾಷನಲ್ ಏರ್ಪೋರ್ಟ್ ಪ್ರೈವೇಟ್ ಲಿಮಿಟೆಡ್ (YIAPL) ಅಭಿವೃದ್ಧಿಪಡಿಸುತ್ತಿದೆ. ಇದು ಜ್ಯೂರಿಚ್ ಏರ್ಪೋರ್ಟ್ ಇಂಟರ್‌ನ್ಯಾಷನಲ್‌ನ ಅಂಗಸಂಸ್ಥೆಯಾಗಿದೆ.

ನಿಮ್ಮ ಕಾಮೆಂಟ್ ಬರೆಯಿರಿ

advertisement