ಭಯೋತ್ಪಾದನಾ ಚಟುವಟಿಕೆಗಳಿಗೆ ಹಣ: ಮಂಗಳೂರು ದಂಪತಿಗೆ 10 ವರ್ಷ ಕಠಿಣ ಶಿಕ್ಷೆ

ರಾಯಪುರ: ಛತ್ತೀಸ್‌ಗಢದ ರಾಯ್‌ಪುರದ ನ್ಯಾಯಾಲಯವು ಬುಧವಾರ ನಿಷೇಧಿತ ಗುಂಪುಗಳಾದ ಸಿಮಿ ಮತ್ತು ಇಂಡಿಯನ್ ಮುಜಾಹಿದ್ದೀನ್‌ಗೆ ಸಂಬಂಧಿಸಿದ ಪ್ರಕರಣದಲ್ಲಿ ಕರ್ನಾಟಕ ಮೂಲದ ದಂಪತಿ ಸೇರಿದಂತೆ ನಾಲ್ವರಿಗೆ ಭಯೋತ್ಪಾದಕ ಚಟುವಟಿಕೆಗಳಿಗೆ ಹಣ ವಿನಿಯೋಗಿಸಿ, ಅವರ ಉದ್ದೇಶಿತ ಕೃತ್ಯಕ್ಕೆ ಸಹಾಯ ಮಾಡಿದ್ದಕ್ಕಾಗಿ 10 ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು (ಆರ್‌ಐ) ವಿಧಿಸಿದೆ.
ಭಯೋತ್ಪಾದಕ ಚಟುವಟಿಕೆಗಳಿಗೆ ಹಣ ವರ್ಗಾವಣೆ ಮಾಡಿದ ಆರೋಪದಡಿ ಬಂಧಿತರಾಗಿದ್ದ ಕರ್ನಾಟಕದ ಮಂಗಳೂರಿನ ದಂಪತಿಯಾದ ಮಂಗಳೂರಿನ ಜುಬೇರ್‌ ಹುಸೇನ್‌ (42), ಆತನ ಪತ್ನಿ ಆಯೇಷಾ ಬಾನೋ (39) ಹಾಗೂ ಧೀರಜ್‌ ಸಾವೋ (21), ಪಪ್ಪು ಮಂಡಲ್‌ ಶಿಕ್ಷೆಗೊಳಗಾದವರು. ಉಗ್ರ ನಿಗ್ರಹ ಕಾಯ್ದೆಯಾಗಿರುವ ಅಕ್ರಮ ಚಟುವಟಿಕೆ (ತಡೆ) ಕಾಯ್ದೆಯ ವಿವಿಧ ಸೆಕ್ಷನ್‌ಗಳಡಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಅಜಯ್‌ ಸಿಂಗ್‌ ರಜಪೂತ್‌ ಶಿಕ್ಷೆ ಪ್ರಕಟಿಸಿದ್ದಾರೆ.
ಪ್ರಕರಣದಲ್ಲಿ ಪಶ್ಚಿಮ ಬಂಗಾಳ ಮೂಲದ ಮತ್ತೊಬ್ಬ ಆರೋಪಿ ಸುಖೇನ್ ಹಲ್ದರ್ (28) ಅವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ ಮತ್ತು ಇತರ ಪ್ರಕರಣಗಳಲ್ಲಿ ಅಗತ್ಯವಿಲ್ಲದಿದ್ದರೆ ಅವರನ್ನು ಬಿಡುಗಡೆ ಮಾಡಲು ಆದೇಶಿಸಿದೆ.
ಭಯೋತ್ಪಾದಕ ಸಂಘಟನೆಗಳ ಜೊತೆ ನಂಟು ಹೊಂದಿದ ಆರೋಪದಡಿ 2013ರ ಡಿಸೆಂಬರ್‌ನಲ್ಲಿ ರಾಯಪುರದಲ್ಲಿ ರಸ್ತೆ ಬದಿ ಹೋಟೆಲ್‌ ನಡೆಸುತ್ತಿದ್ದ ಧೀರಜ್‌ ಸಾವೋ ಬಂಧನವಾಗಿತ್ತು. ಈತ ಪಾಕಿಸ್ತಾನದ ಖಾಲಿದ್‌ ಎಂಬಾತನಿಂದ ಈತ ಹಣ ಪಡೆದು ಅದನ್ನು ಇಂಡಿಯನ್‌ ಮುಜಾಹಿದೀನ್‌ ಹಾಗೂ ಸಿಮಿ ಸಂಘಟನೆಗಳ ಜೊತೆ ನಂಟು ಹೊಂದಿರುವ ವ್ಯಕ್ತಿಗಳ ಖಾತೆಗೆ ರವಾನಿಸುತ್ತಿದ್ದ. ಸಾವೋ ತಮ್ಮ ಸ್ವಂತ ಖಾತೆಯ ಮೂಲಕ ಕರ್ನಾಟಕದ ಮಂಗಳೂರಿನಲ್ಲಿರುವ ಸಿಮಿ ಮತ್ತು ಐಎಂ ಕಾರ್ಯಕರ್ತರಾದ ಜುಬೈರ್ ಹುಸೇನ್ ಮತ್ತು ಆಯೇಶಾ ಬಾನೋ ಅವರ ಬ್ಯಾಂಕ್ ಖಾತೆಗಳಿಗೆ ಹಣವನ್ನು ಜಮಾ ಮಾಡಿದ್ದ. ಬಳಿಕ ಬಿಹಾರದಲ್ಲಿ ದಾಖಲಾದ ಇಂಥದ್ದೇ ಒಂದು ಪ್ರಕರಣ ಸಂಬಂಧ ಜುಬೇರ್‌- ಆಯೇಷಾ ದಂಪತಿಯನ್ನು ಬಿಹಾರ ಪೊಲೀಸರು ಮಂಗಳೂರಿನಲ್ಲಿ ಬಂಧಿಸಿ ಕರೆದೊಯ್ದಿದ್ದರು.
ನಿಷೇಧಿತ ಸಿಮಿ ಹಾಗೂ ಇಂಡಿಯನ್‌ ಮುಜಾಹಿದೀನ್‌ ಉಗ್ರ ಸಂಘಟನೆಗಳ ಜತೆ ನಂಟು ಹೊಂದಿದ್ದ ಆಯೇಷಾ ಬಿಹಾರದ 50 ಬ್ಯಾಂಕ್‌ ಖಾತೆಗಳನ್ನು ನೆಟ್‌ ಬ್ಯಾಂಕಿಂಗ್‌ ಮೂಲಕ ನಿರ್ವಹಿಸುತ್ತಿದ್ದಳು. 2013ರಲ್ಲಿ ಸಂಭವಿಸಿದ್ದ ಪಟ್ನಾ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಇಂಡಿಯನ್‌ ಮುಜಾಹಿದೀನ್‌ ಸಂಘಟನೆಯ ತೆಹಸೀನ್‌ ಅಖ್ತರ್‌ಗೆ ಹಣ ಪೂರೈಕೆ ಮಾಡುತ್ತಿದ್ದದ್ದು ಈಕೆಯೇ. ಆಯೇಷಾಗೆ ಪಾಕಿಸ್ತಾನದ ವ್ಯಕ್ತಿಯೊಬ್ಬನಿಂದ ಸೂಚನೆ ಬರುತ್ತಿತ್ತು. ವಿದೇಶಗಳಿಂದ ಅಮಾಯಕ ಜನರ ಖಾತೆಗೆ ಹಣ ವರ್ಗಾಯಿಸಿ ಅದನ್ನು ಆಯೇಷಾ ನಿರ್ವಹಿಸುತ್ತಿದ್ದಳು. ಆದಾಯ ತೆರಿಗೆ ಇಲಾಖೆ ಕಣ್ತಪ್ಪಿಸಲು 49 ಸಾವಿರ ಅಥವಾ ಅದಕ್ಕಿಂತಲೂ ಕಡಿಮೆ ಮೊತ್ತದಲ್ಲಿ ಒಂದು ಬಾರಿಗೆ ಹಣ ಕಳುಹಿಸುತ್ತಿದ್ದಳು. ಭಯೋತ್ಪಾದನೆ ಪ್ರಕರಣದಲ್ಲಿ ನಾಲ್ವರು ಬಿಹಾರದಲ್ಲಿ ಬಂಧನವಾದ ನಂತರ ಆಯೇಷಾ ವಿಷಯ ಬಯಲಾಗಿತ್ತು. 2013ರಲ್ಲಿ ಈಕೆಯನ್ನು ಬಿಹಾರ ಪೊಲೀಸರು ಮಂಗಳೂರಿಗೇ ಬಂದು ಬಂಧಿಸಿದ್ದರು.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ : 1ನೇ ಹಂತದಲ್ಲಿ 62.37%ರಷ್ಟು ಮತದಾನ ; 2019ರ ಮತದಾನದ ಪ್ರಮಾಣಕ್ಕಿಂತ ಕಡಿಮೆ

 

 

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement