ಸಮೀರ್ ವಾಂಖೆಡೆ ಕುಟುಂಬದ ವಿರುದ್ಧ ಟ್ವೀಟ್, ಸಾರ್ವಜನಿಕ ಹೇಳಿಕೆ ನೀಡುವುದಿಲ್ಲ: ಬಾಂಬೆ ಹೈಕೋರ್ಟಿಗೆ ತಿಳಿಸಿದ ನವಾಬ್ ಮಲಿಕ್

ಮುಂಬೈ: ಮುಂದಿನ ಡಿಸೆಂಬರ್ 9ರ ವಿಚಾರಣೆ ವರೆಗೆ ಎನ್‌ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಅವರ ವಿರುದ್ಧ ಮತ್ತು ಅವರ ಕುಟುಂಬದ ಸದಸ್ಯರ ವಿರುದ್ಧ ಯಾವುದೇ ಟ್ವೀಟ್‌ಗಳನ್ನು ಪೋಸ್ಟ್ ಮಾಡುವುದಿಲ್ಲ ಹಾಗೂ ಯಾವುದೇ ಸಾರ್ವಜನಿಕ ಹೇಳಿಕೆಗಳನ್ನು ನೀಡುವುದಿಲ್ಲ ಎಂದು ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಗುರುವಾರ ಬಾಂಬೆ ಹೈಕೋರ್ಟ್‌ಗೆ ತಿಳಿಸಿದ್ದಾರೆ.
ಮಲಿಕ್ ಅವರು ವಾಂಖೆಡೆ ವಿರುದ್ಧ ಹೇಳಿಕೆ ನೀಡುವುದನ್ನು ನಿಲ್ಲಿಸುವುದಾಗಿ ನ್ಯಾಯಾಲಯಕ್ಕೆ ಭರವಸೆ ನೀಡಬೇಕು ಅಥವಾ ನ್ಯಾಯಾಲಯವು ಆ ನಿಟ್ಟಿನಲ್ಲಿ ಆದೇಶ ಹೊಡಿಸಬೇಕಾಗುತ್ತದೆ ಎಂದು ನ್ಯಾಯಮೂರ್ತಿಗಳಾದ ಎಸ್‌ಜೆ ಕಥವಲ್ಲಾ ಮತ್ತು ಮಾಧವ್ ಜಾಮ್‌ದಾರ್ ಅವರ ವಿಭಾಗೀಯ ಪೀಠ ಹೇಳಿದ ನಂತರ ಅವರು ಹೇಳಿಕೆ ನೀಡುವುದಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ವಾಂಖೆಡೆ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆಯಲ್ಲಿ ಮಲಿಕ್ ವಿರುದ್ಧ ಮಧ್ಯಂತರ ತಡೆಯಾಜ್ಞೆ ನೀಡಲು ನಿರಾಕರಿಸಿದ್ದ ಏಕಸದಸ್ಯ ನ್ಯಾಯಮೂರ್ತಿ ಮಾಧವ್ ಜಾಮದಾರ ಅವರ ಆದೇಶದ ಪ್ರಶ್ನಿಸಿ ವಾಂಖೆಡೆ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ಸಮಯದಲ್ಲಿ ಮಲಿಕ್ ಹೇಳಿಕೆ ಹೊರಬಿದ್ದಿದೆ.
ವಾಂಖೆಡೆ ಪರ ವಾದ ಮಂಡಿಸಿದ ಹಿರಿಯ ವಕೀಲ ಬೀರೇಂದ್ರ ಸರಾಫ್ ಅವರು, ಏಕಸದಸ್ಯ ನ್ಯಾಯಾಧೀಶರು ಮಧ್ಯಂತರ ಪರಿಹಾರವನ್ನು ನಿರಾಕರಿಸಿದ್ದರೂ, ವಾಂಖೆಡೆ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಮಲಿಕ್ ಮಾಡಿರುವ ಟ್ವೀಟ್ ದುರುದ್ದೇಶದಿಂದ ಮಾಡಲಾಗಿದೆ ಎಂದು ತಮ್ಮ ಆದೇಶದಲ್ಲಿ ಗಮನಿಸಿದ್ದಾರೆ ಎಂದು ವಾದಿಸಿದರು.
ಸಮೀರ್ ವಾಂಖೆಡೆ ಹೊರತುಪಡಿಸಿ, ಕುಟುಂಬದ ಇತರ ಸದಸ್ಯರಲ್ಲಿ ಯಾರೂ ಸಾರ್ವಜನಿಕ ಅಧಿಕಾರಿಗಳಲ್ಲ, ಆದ್ದರಿಂದ ಪರಿಹಾರವನ್ನು ನಿರಾಕರಿಸಲಾಗುವುದಿಲ್ಲ ಎಂದು ಅವರು ಸೂಚಿಸಿದರು.
ನವಾಬ್‌ ಮಲಿಕ್ ಸತ್ಯವನ್ನು ಸಮಂಜಸವಾಗಿ ಪರಿಶೀಲಿಸಿಲ್ಲ ಎಂಬ ತೀರ್ಮಾನಕ್ಕೆ ಏಕ-ನ್ಯಾಯಾಧೀಶರು ಬಂದಿದ್ದಾರೆ ಮತ್ತು ಈ ಕಾರಣಕ್ಕಾಗಿ ಏಕ-ನ್ಯಾಯಾಧೀಶರು ಮಲಿಕ್ ಅವರ ಟ್ವೀಟ್‌ಗಳನ್ನು ಮುಂದುವರಿಸಲು ಬಿಡಲು ಸಾಧ್ಯವಿಲ್ಲ ಎಂದು ಸರಾಫ್ ಹೇಳಿದ್ದಾರೆ.
ಮಧ್ಯಂತರ ಪರಿಹಾರದ ಪರವಾಗಿ ಪ್ರಬಲವಾದ ಪ್ರಾಥಮಿಕ ಪ್ರಕರಣವಿದೆ ಎಂದು ಆದೇಶ ಗಮನಿಸುವುದು ಸಂಪೂರ್ಣವಾಗಿ ತೋರಿಸುತ್ತದೆ ಎಂದು ಸರಾಫ್ ವಾದಿಸಿದರು.
ನವಾಬ್ ಮಲಿಕ್ ವಾಂಖೆಡೆ ಮತ್ತು ಅವರ ಕುಟುಂಬಕ್ಕೆ ಸಂಬಂಧಿಸಿದ ದಾಖಲೆಗಳನ್ನು ಏಕೆ ಟ್ವೀಟ್ ಮಾಡುತ್ತಿದ್ದಾರೆ ಎಂದು ವಿಭಾಗೀಯ ಪೀಠವು ಪ್ರಶ್ನಿಸಿತು.
ಸಮೀರ್ ವಾಂಖೆಡೆ ಜಾತಿ ಪ್ರಮಾಣೀಕರಣದ ವಿರುದ್ಧದ ಆರೋಪಗಳ ಬಗ್ಗೆ ಜಾತಿ ಪರಿಶೀಲನಾ ಸಮಿತಿಗೆ ದೂರು ನೀಡಿದ್ದೀರಾ ಎಂದು ಮಹಾರಾಷ್ಟ್ರ ಸಚಿವರನ್ನು ಪ್ರಶ್ಮಿಸಿದ ಹೈಕೋರ್ಟ್, ನೀವು ದೂರು ನೀಡಿಲ್ಲವಾದರೆ “ಮಾಧ್ಯಮ ಪ್ರಚಾರ”ದ ಹಿಂದಿನ ನಿಮ್ಮ ಉದ್ದೇಶವೇನು? ಇದು ಸಚಿವರಾದವರಿಗೆ ಯೋಗ್ಯವಲ್ಲ ಎಂದು ಹೋಕೋರ್ಟ್‌ ಹೇಳಿದೆ.
ಒಂದು ಪುಟದಲ್ಲಿ ಹೇಳಿಕೆ ನೀಡುತ್ತಿದ್ದಾರೆ, ಮುಂದಿನ ಪುಟದಲ್ಲಿ ಪುರಾವೆ ನೀಡುತ್ತಿದ್ದಾರೆ. ಸಚಿವರೊಬ್ಬರು ಯಾಕೆ ಈ ರೀತಿ ವರ್ತಿಸುತ್ತಿದ್ದಾರೆ? ಜಾತಿ ಪ್ರಮಾಣ ಪತ್ರದ ಮಾನ್ಯತೆಗೆ ವೇದಿಕೆ ಇದೆ, ಯಾರು ಬೇಕಾದರೂ ಅಲ್ಲಿಗೆ ಹೋಗಬಹುದು. ಟ್ವೀಟ್‌ಗಳ ಪ್ರಯೋಜನವೇನು? ಇದು ಮಾಧ್ಯಮ ಪ್ರಚಾರಕ್ಕಾಗಿ ಮತ್ತು ಅದು ನಿಮ್ಮ ಅಳಿಯನನ್ನು ಬಂಧಿಸಿದ ನಂತರ ಎಂದು ಪೀಠ ಹೇಳಿದೆ.
ಒಂದೋ ಅವರು ಹೇಳಿಕೆ ನಿಲ್ಲಿಸಬೇಕು ಅಥವಾ ನಾವು ಅವರನ್ನು ತಡೆಯುತ್ತೇವೆ ಎಂದು ಮಲಿಕ್ ಪರ ವಾದ ಮಂಡಿಸಿದ ವಕೀಲ ಕಾರ್ಲ್ ತಾಂಬೋಲಿ ಅವರಿಗೆ ಪೀಠ ಹೇಳಿತು.
ಮುಂದಿನ ವಿಚಾರಣೆಯವರೆಗೆ ವಾಂಖೆಡೆ ವಿರುದ್ಧ ಸಾರ್ವಜನಿಕವಾಗಿ ಹೇಳಿಕೆಗಳನ್ನು ನೀಡದಂತೆ ಸಚಿವರನ್ನು ನಿರ್ಬಂಧಿಸುವ ಆದೇಶ ಹೊರಡಿಸುವ ಬಗ್ಗೆ ಹೈಕೋರ್ಟ್ ಒಲವು ತೋರಿದ ನಂತರ ಮಲಿಕ್ ಅವರ ಪರವಾಗಿ ಅವರ ವಕೀಲ ಕಾರ್ಲ್ ತಾಂಬೋಲಿ ವಾಂಖೆಡೆ ಅವರ ವಿರುದ್ಧ ಮತ್ತು ಅವರ ಕುಟುಂಬದ ಸದಸ್ಯರ ವಿರುದ್ಧ ಯಾವುದೇ ಟ್ವೀಟ್‌ಗಳನ್ನು ಪೋಸ್ಟ್ ಮಾಡುವುದಿಲ್ಲ ಹಾಗೂ ಯಾವುದೇ ಸಾರ್ವಜನಿಕ ಹೇಳಿಕೆಗಳನ್ನು ನೀಡುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಎಸ್ ಜೆ ಕಥವಲ್ಲಾ ಮತ್ತು ಮಿಲಿಂದ್ ಜಾಧವ್ ಅವರ ಪೀಠಕ್ಕೆ ತಿಳಿಸಿದರು.
ನವಾಬ್ ಮಲಿಕ್ ಅವರ ಟ್ವೀಟ್‌ಗಳು ದುರುದ್ದೇಶದಿಂದ ಕೂಡಿವೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಪೀಠ ಹೇಳಿದೆ.
ಸಚಿವರು ಯಾಕೆ ಈ ರೀತಿ ವರ್ತಿಸುತ್ತಿದ್ದಾರೆ ಎಂದು ತಿಳಿದುಕೊಳ್ಳಲು ಬಯಸುತ್ತೇವೆ? ಇದು ದುರುದ್ದೇಶವಲ್ಲದೆ ಬೇರೇನೂ ಅಲ್ಲ. ದಯವಿಟ್ಟು ದುರುದ್ದೇಶದ ನಿಘಂಟು ಅರ್ಥವನ್ನು ಓದಿ” ಎಂದು ಹೈಕೋರ್ಟ್ ಸಚಿವರಿಗೆ ಹೇಳಿದೆ.

ಪ್ರಮುಖ ಸುದ್ದಿ :-   ಭಾರತೀಯ ನೌಕಾಪಡೆಯ ಮುಖ್ಯಸ್ಥರಾಗಿ ವೈಸ್ ಅಡ್ಮಿರಲ್ ದಿನೇಶ ತ್ರಿಪಾಠಿ ನೇಮಕ

 

 

 

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement