ಧಾರವಾಡ: ಎಸ್‌ ಡಿಎಂ ಮೆಡಿಕಲ್ ಕಾಲೇಜ್‌: ಮತ್ತೆ 116 ಜನರಲ್ಲಿ ಕೋವಿಡ್ ಸೋಂಕು ದೃಢ..!

posted in: ರಾಜ್ಯ | 0

ಧಾರವಾಡ: ಸತ್ತೂರಿನ ಎಸ್ ಡಿ ಎಂ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳಲ್ಲಿ ಕಾಣಿಸಿಕೊಂಡಿರುವ ಕೋವಿಡ್ ಸೋಂಕು ಹೆಚ್ಚಳವಾಗಿದ್ದು, ನಿನ್ನೆ (ನ.25) ಮಧ್ಯರಾತ್ರಿ ಮತ್ತೆ 116 ಜನರಲ್ಲಿ ದೃಢಪಟ್ಟಿದೆ.
ಮೊದಲಿನ 66 ಸೇರಿ ಒಟ್ಟು 182 ಜನರಲ್ಲಿ ಈವರೆಗೆ ಸೋಂಕು ಕಾಣಿಸಿಕೊಂಡಿದೆ. ನವೆಂಬರ್‌ 17 ರಂದು ಕಾಲೇಜಿನ ಡಿ.ವಿರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಲವು ಪಾಲಕರು ಕೂಡ ಭಾಗಿಯಾಗಿದ್ದರು ಎಂದು ತಿಳಿದು ಬಂದಿದೆ. ಅಂತಹ ವ್ಯಕ್ತಿಗಳು ಕೂಡ ಕೋವಿಡ್ ಪರೀಕ್ಷೆಗೆ ಒಳಪಡಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಚಿಸಿದ್ದಾರೆ.
ನಿನ್ನೆ (ನವೆಂಬರ್‌ 25) ಸಂಜೆಯವರೆಗೆ ಮತ್ತೆ ಎಸ್ ಡಿ ಎಂ ಆವರಣದ 690 ಜನರನ್ನು ಆರ್ ಟಿ ಪಿ ಸಿ ಆರ್ ಹಾಗೂ ಆರ್ ಎ ಟಿ ತಪಾಸಣೆಗೆ ಒಳಪಡಿಸಲಾಗಿದೆ. ಕಿಮ್ಸ್, ಡಿಮ್ಹಾನ್ಸ್ ಹಾಗೂ ಎಸ್ ಡಿ ಎಂ ನ ಕೋವಿಡ್ ಪ್ರಯೋಗಾಲಯಗಳಲ್ಲಿ ಈ ಮಾದರಿಗಳನ್ನು ಪರೀಕ್ಷಿಸಲಾಗಿದೆ. ಇವರಲ್ಲಿ 116 ಜನರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಮಧ್ಯರಾತ್ರಿಯ ನಂತರ ಈ ವರದಿಗಳು ಲಭ್ಯವಾಗಿವೆ. ಎಲ್ಲರೂ ಕೋವಿಡ್ ನಿರೋಧಕ ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದಿರುವುದರಿಂದ ಯಾರಲ್ಲಿಯೂ ರೋಗದ ಗಂಭೀರ ಸ್ವರೂಪದ ಲಕ್ಷಣಗಳಿಲ್ಲ ಎಂದು ಅವರು ತಿಳಿಸಿದ್ದಾರೆ.

ಪಾಲಕರ ತಪಾಸಣೆಗೂ ಸೂಚನೆ
ನವೆಂಬರ್‌ 17 ರಂದು ಎಸ್ ಡಿ ಎಂ ಆಸ್ಪತ್ರೆ ಬಳಿಯ ಕಲಾಕ್ಷೇತ್ರದಲ್ಲಿ ನಡೆದ ವಿದ್ಯಾರ್ಥಿಗಳ ಕಾರ್ಯಕ್ರಮದಲ್ಲಿ ಕೆಲವು ಪಾಲಕರೂ ಕೂಡ ಭಾಗವಹಿಸಿದ್ದರೆಂದು ತಿಳಿದು ಬಂದಿದೆ. ಅಂತಹ ವ್ಯಕ್ತಿಗಳೂ ಕೂಡ ಕೋವಿಡ್ ತಪಾಸಣೆ ಮಾಡಿಸಿಕೊಳ್ಳಬೇಕು. ಇದುವರೆಗೆ ಎಸ್ ಡಿ ಎಂ ಆವರಣದಿಂದ ಹೊರಗೆ ಎಲ್ಲಿಯೂ ಪ್ರಕರಣಗಳೂ ವರದಿಯಾಗಿಲ್ಲ , ಹುಬ್ಬಳ್ಳಿ ಧಾರವಾಡ ಅವಳಿನಗರ ಹಾಗೂ ಜಿಲ್ಲೆಯ ಸಾರ್ವಜನಿಕರಲ್ಲಿ ರೋಗದ ಲಕ್ಷಣಗಳು ಕಂಡು ಬಂದರೆ ಕೂಡಲೇ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ ಸ್ವ್ಯಾಬ್ ನೀಡಿ, ಕೋವಿಡ್ ತಪಾಸಣೆ ಮಾಡಿಸಿಕೊಳ್ಳಬೇಕು.ಕೋವಿಡ್ ನಿಯಂತ್ರಣಕ್ಕೆ ಈ ಮುನ್ನೆಚ್ಚರಿಕೆಯನ್ನು ಪ್ರತಿಯೊಬ್ಬರೂ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.

ಸತ್ತೂರ ಎಸ್‌ಡಿಎಂ ಸುತ್ತಲಿನ 500 ಮೀ ವ್ಯಾಪ್ತಿಯೊಳಗಿನ ಶಾಲೆ ಕಾಲೇಜುಗಳಿಗೆ ಇಂದು (ಶುಕ್ರವಾರ) ರಜೆ ಘೋಷಿಸಲಾಗಿದೆ. ಎಸ್ ಡಿ ಎಂ ಆಸ್ಪತ್ರೆಗೆ ಅನಗತ್ಯ ಭೇಟಿ, ರೋಗಿಗಳ ಅಟೆಂಡರುಗಳಿಗೆ ಪ್ರವೇಶ ನಿರ್ಬಂಧ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಕೆ ಪಾಟೀಲ ತಿಳಿಸಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ