ಬೆಳೆಗೆ ಕನಿಷ್ಠ ಬೆಂಬಲ ಬೆಲೆ ಪರಿಶೀಲನೆಗೆ ತಜ್ಞರ ಸಮಿತಿ ರಚನೆಗೆ ನಿರ್ಧಾರ, ಹೊಲಗದ್ದೆ ಸುಡುವುದನ್ನು ಅಪರಾಧ ಮುಕ್ತಗೊಳಿಸುವ ರೈತರ ಬೇಡಿಕೆಗೆ ಒಪ್ಪಿಗೆ: ತೋಮರ್

ನವದೆಹಲಿ: ಮೂರು ಕೃಷಿ ಕಾಯಿದೆಗಳನ್ನು ರದ್ದುಪಡಿಸಿದ ಬಳಿಕ ರೈತರ ಪ್ರಮುಖ ಬೇಡಿಕೆಯಾದ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಬಿಕ್ಕಟ್ಟಿನ ಕುರಿತು ಪರಿಶೀಲಿಸಲು ತಜ್ಞರ ಸಮಿತಿ ರಚಿಸುವುದಾಗಿ ಕೇಂದ್ರ ಸರಕಾರ ಪ್ರಕಟಿಸಿದೆ.
ಕೃಷಿ ಕಾಯ್ದೆಗಳ ರದ್ದತಿ ಬಳಿಕವೂ ಕೃಷಿ ಸುಧಾರಣೆಯ ಅಭಿಯಾನ ಮುಂದುವರಿಯುತ್ತದೆ. ವಿಶೇಷವಾಗಿ ವೈವಿಧ್ಯ ಬೆಳೆ ಪದ್ಧತಿ, ಶೂನ್ಯ ಬಂಡವಾಳ ಕೃಷಿ ಮತ್ತು ಎಂಎಸ್‌ಪಿ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರುವ ಕುರಿತು ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗುವುದು. ಇವುಗಳ ಸಾಧ್ಯಾಸಾಧ್ಯತೆ ಪರಿಶೀಲನೆಗಾಗಿ ತಜ್ಞರ ಸಮಿತಿ ರಚಿಸಲಾಗುವುದು ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ಶನಿವಾರ ತಿಳಿಸಿದ್ದಾರೆ.
ಕೃಷಿ ಕಾಯಿದೆಗಳ ರದ್ದು ಘೋಷಣೆ ಮಾಡಿದ ಬೆನ್ನ ಹಿಂದೆಯೇ ಬೆಂಬಲ ಬೆಲೆಗೆ ಕಾನೂನುಬದ್ಧ ಖಾತರಿ ನೀಡುವಂತೆ ರೈತ ಮುಖಂಡರು ಬೇಡಿಕೆ ಮುಂದಿಟ್ಟಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಪ್ರಧಾನಿ ನರೇಂದ್ರ ಮೋದಿ, ”ರೈತರ ಒಳಿತಿನ ಸರ್ವ ಕ್ರಮಗಳನ್ನು ಕೈಗೊಳ್ಳಲಾಗುವುದು. ಎಂಎಸ್‌ಪಿ ಪರಿಶೀಲನೆಗೆ ಸಮಿತಿ ರಚಿಸಲಾಗುವುದು ಎಂದು ಭರವಸೆ ನೀಡಿದಿದ್ದರು. ಇದರ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದ್ದು, ಕೇಂದ್ರ ಕೃಷಿ ಸಚಿವ ತೋಮರ್‌ ರೈತರ ಹಿತಕ್ಕೆ ಕಿಂಚಿತ್ತು ಧಕ್ಕೆ ಆಗಲು ಸರ್ಕಾರ ಬಿಡುವುದಿಲ್ಲ. ರೈತರ ಹಿತರಕ್ಷಣೆಯೇ ಸರ್ಕಾರದ ಪ್ರಧಾನ ಆಶಯ. ಕಾಯಿದೆ ರದ್ದತಿ ಬಳಿಕದ ಎಂಎಸ್‌ಪಿ ಕುರಿತು ಪರಿಶೀಲಿಸಲು ರಚನೆಯಾಗುವ ತಜ್ಞರ ಸಮಿತಿಯಲ್ಲಿ ರೈತ ಪ್ರತಿನಿಧಿಗಳಿಗೂ ಅವಕಾಶ ನೀಡಲಾಗುವುದು ಎಂದು ತಿಳಿಸಿದರು.
ಉದ್ದೇಶಿತ ಸಮಿತಿಯು ರೈತರ ಅರ್ಹ ಬೇಡಿಕೆಗಳನ್ನು ಈಡೇರಿಸುತ್ತದೆ. ಜಮೀನಿನಲ್ಲಿ ಕೂಳೆ ಸುಡುವುದನ್ನು ಅಪರಾಧ ಮುಕ್ತಗೊಳಿಸುವಂತೆ ರೈತ ಸಂಘಟನೆಗಳು ಒತ್ತಾಯಿಸಿವೆ. ಈ ಬೇಡಿಕೆಗೂ ಸರ್ಕಾರ ಸಮ್ಮತಿ ಸೂಚಿಸಿದೆ. ಆದ್ದರಿಂದ ಪ್ರತಿಭಟನೆ ಮುಂದುವರಿಸುವುದರಲ್ಲಿ ಅರ್ಥವಿಲ್ಲ. ರೈತರು ಪ್ರತಿಭಟನೆ ಕೊನೆಗೊಳಿಸಿ ಮನೆಗೆ ತೆರಳಬೇಕು ಎಂದು ತೋಮರ್‌ ಮನವಿ ಮಾಡಿದ್ದಾರೆ.
ಆಂದೋಲನದ ಸಂದರ್ಭದಲ್ಲಿ ರೈತರ ಮೇಲಿನ ಪ್ರಕರಣಗಳನ್ನು ಹಿಂಪಡೆಯುವ ಬಗ್ಗೆ ತೋಮರ್, ಇದು ರಾಜ್ಯ ಸರ್ಕಾರಗಳ ಡೊಮೇನ್‌ನಲ್ಲಿದೆ ಎಂದು ಹೇಳಿದರು. ಪ್ರಕರಣಗಳ ತೀವ್ರತೆಯನ್ನು ನೋಡಿ ರಾಜ್ಯ ಸರ್ಕಾರಗಳು ಇದನ್ನು ಮಾಡಬೇಕಾಗಿದೆ ಮತ್ತು ಪರಿಹಾರದ ವಿಷಯವನ್ನು ಸಹ ಅವರು ನಿರ್ಧರಿಸಬೇಕು” ಎಂದು ಅವರು ಹೇಳಿದರು.
ಕೃಷಿ ಕಾಯಿದೆ ವಿರೋಧಿಸಿ ಕಳೆದ ವರ್ಷ ನವೆಂಬರ್‌ 26ರಿಂದ ಇದುವರೆಗೆ ರೈತರು ದಿಲ್ಲಿ ಗಡಿಯಲ್ಲಿ ನಿರಂತರ ಪ್ರತಿಭಟನೆ ನಡೆಸುತ್ತ ಬಂದಿದ್ದಾರೆ. ಕಾಯ್ದೆಗಳ ರದ್ದತಿಗೆ ಸಂಸತ್‌ ಅನುಮೋದನೆ ನೀಡಿದ ಬಳಿಕವೇ ಪ್ರತಿಭಟನೆ ಸ್ಥಗಿತಗೊಳಿಸುವುದಾಗಿ ರೈತ ಸಂಘಟನೆಗಳು ಸ್ಪಷ್ಟಪಡಿಸಿವೆ.

ಪ್ರಮುಖ ಸುದ್ದಿ :-   ವಿಶ್ವದಾದ್ಯಂತ ಕೋವಿಡ್ ಲಸಿಕೆ ಹಿಂತೆಗೆದುಕೊಂಡ ಆಸ್ಟ್ರಾಜೆನೆಕಾ : ವರದಿ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement