ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಯೋಜನೆ ಸಾಧಕ -ಬಾಧಕಗಳ ಮೌಲ್ಯಮಾಪನಕ್ಕೆ ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ ಹೈಕೋರ್ಟ್ ನಿರ್ದೇಶನ

ಬೆಂಗಳೂರು:  ಹುಬ್ಬಳ್ಳಿ-ಅಂಕೋಲಾ ರೈಲು ಯೋಜನೆಗೆ ಸಂಬಂಧಿಸಿದಂತೆ ಯೋಜನೆಯ ಸಾಧಕ ಬಾಧಕದ ಬಗ್ಗೆ ಅಧ್ಯಯನ ನಡೆಸಲು ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ ರಾಜ್ಯ ಹೈಕೋರ್ಟ್ ನಿರ್ದೇಶನ ನೀಡಿದೆ.
ಬುಧವಾರ ಮುಖ್ಯನ್ಯಾಯಮೂರ್ತಿ ರಿತುರಾಜ ಅವಸ್ಥಿ ಮತ್ತು ನ್ಯಾಯಮೂರ್ತಿ ಸಚಿನ ಮಗ್ದುಂ ಅವರಿದ್ದ ವಿಭಾಗೀಯ ಪೀಠ ಈ ಯೋಜನೆ ಹಿನ್ನೆಲೆಯಲ್ಲಿ ದಾಖಲಾದ ಅರ್ಜಿಗಳ ವಿಚಾರಣೆ ನಡೆಸಿ ಈ ಮಹತ್ವದ ಆದೇಶ ನೀಡಿದೆ.
ರಾಷ್ಟ್ರೀಯ ವನ್ಯಜೀವಿ ಮಂಡಳಿಯು ಯೋಜನಾ ವ್ಯಾಪ್ತಿಯ ಸಮಸ್ಯೆಗೆ ಒಳಗಾದ ಪ್ರದೇಶದಲ್ಲಿ ರೈಲ್ವೇ ಹಳಿ ಅಳವಡಿಕೆಯಿಂದ ವನ್ಯ ಜೀವಿಗಳ ಮೇಲೆ ಆಗಬಹುದಾದ ಪರಿಣಾಮದ ಕುರಿತು ಸ್ವತಂತ್ರ ಸರ್ವೆ ನಡೆಸಬೇಕು. ಈ ಹಿನ್ನೆಲೆಯಲ್ಲಿ ಇದುವರೆಗೂ ಬಂದಿರುವ ವರದಿಗಳು, ಸರ್ವೆಗಳಿಂದ ಮಾಹಿತಿ ಪಡೆಯಬಹುದು. ಮಂಡಳಿ ಇಚ್ಛಿಸಿದಲ್ಲಿ ಸರ್ವೆ ಕಾರ್ಯದಲ್ಲಿ ಪರಿಣಿತರನ್ನು ಬಳಸಿಕೊಳ್ಳಬಹುದು. ಆದರೆ ಸರ್ವೆ ಮಾತ್ರ ಸ್ವತಂತ್ರವಾಗಿರಲಿ ಎಂದು ನಿರ್ದೇಶನ ನೀಡಿದೆ.
ಅಭಿವೃದ್ದಿ ಆಗಬೇಕಾದುದು ಅಗತ್ಯ. ಆದರೆ ಇದರಿಂದ ವನ್ಯಜೀವಿಗಳ ಮೇಲೆ ಆಗಬಹುದಾದ ಪರಿಣಾಮವನ್ನೂ ಗಮನಿಸಬೇಕು ಎಂದು ಆದೇಶದಲ್ಲಿ ಹೇಳಿದೆ.
ಕೆಲ ಪರಿಸರ ಸಂರಕ್ಷಣಾ ಸಂಘಗಳು ಪಿಐಎಲ್ ಸಲ್ಲಿಸಿದ್ದವು. ಹೈಕೋರ್ಟ್ ರಾಜ್ಯ ವನ್ಯಜೀವಿ ಮಂಡಳಿ ಆದೇಶಕ್ಕೆ ತಡೆ ನೀಡಿತ್ತು. ಇದೀಗ ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ ಹೈಕೋರ್ಟ್ ನಿರ್ದೇಶನ ನೀಡಿದ್ದು ರೈಲು ಮಾರ್ಗದ ಮೌಲ್ಯಮಾಪನ ನಡೆಸಿ ವರದಿಗೆ ಸೂಚಿಸಿದೆ.ಅಭಿವೃದ್ಧಿ ಕೆಲಸಗಳು ನಡೆಯಬೇಕು ಎಂಬುದು ನಮಗೂ ಅರ್ಥವಾಗುತ್ತದೆ. ಅದಾಗ್ಯೂ, ಈ ಅಭಿವೃದ್ಧಿ ಯೋಜನೆಯಿಂದ ವನ್ಯಜೀವಿಗಳು ಹಾಗೂ ಪರಿಸರದ ಮೇಲೆ ಉಂಟಾಗಬಹುದಾದ ಪರಿಣಾಮವನ್ನು ಪರಿಶೀಲಿಸಬೇಕಿದೆ. ನಮ್ಮೆಲ್ಲಾ ಪ್ರಯತ್ನಗಳು ವನ್ಯಜೀವಿಗಳನ್ನು ರಕ್ಷಿಸುವ ನಿಟ್ಟಿನಲ್ಲಿರಬೇಕು” ಎಂದು ನ್ಯಾಯಾಲಯ ಹೇಳಿದೆ.

ಪ್ರಮುಖ ಸುದ್ದಿ :-   ನೇಹಾ ಹಿರೇಮಠ ಕೊಲೆ ಪ್ರಕರಣ: ಆರೋಪಿ ಫಯಾಜ್‌ ಆರು ದಿನ ಸಿಐಡಿ ಕಸ್ಟಡಿಗೆ

ಉತ್ತರ ಕರ್ನಾಟಕ ಹಾಗೂ ಕರಾವಳಿಗೆ ಸಂಪರ್ಕ ಕಲ್ಪಿಸುವ ಮಹತ್ವದ ಯೋಜನೆಯಾಗಿರುವ ಈ ರೈಲು ಮಾರ್ಗ ಪ್ರಸ್ತಾವನೆಯನ್ನು 1998ರಲ್ಲೇ ಸಲ್ಲಿಸಲಾಗಿತ್ತು.
ರೈಲು ಮಾರ್ಗ ಹಾದು ಹೋಗುವ ಕಾಡಿನ ಪ್ರದೇಶ ಪರಿಸರದ ಸೂಕ್ಷ್ಮ ಪ್ರದೇಶವಾದ ಪಶ್ಚಿಮ ಘಟ್ಟದಲ್ಲಿದೆ. ಒಂದು ವೇಳೆ ಯೋಜನೆಗೆ ಅನುಮೋದನೆ ದೊರೆತರೆ ಅಳಿವಿನಂಚಿನಲ್ಲಿರುವ ಅಪರೂಪದ ಸಸ್ಯ ಮತ್ತು ಪ್ರಾಣಿ ಸಂಕುಲಕ್ಕೆ ಸಂಚಕಾರ ಬರಲಿದೆ. ಅಲ್ಲದೇ ಕಾಳಿ ಕಣಿವೆಯಲ್ಲಿರುವ ನದಿಗಳ ಸಹಜ ಹರಿವಿನ ಮೇಲೂ ಪರಿಣಾಮ ಬೀರಲಿದೆ. ಇದು ಸ್ವಾಭಾವಿಕ ಪರಿಸರ ವ್ಯವಸ್ಥೆಗೆ ಧಕ್ಕೆಯಾಗಲಿದ್ದು, ಹವಾಮಾನ ಬದಲಾವಣೆಗೂ ಕಾರಣವಾಗಲಿದೆ ಎಂಬುದು ಪರಿಸರವಾದಿಗಳು ಮತ್ತು ವನ್ಯಜೀವಿ ಪ್ರಿಯರ ವಾದವಾಗಿದೆ. ಈಗ ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ ಹೈಕೋರ್ಟ್ ನಿರ್ದೇಶನ ನೀಡಿದ್ದು ರೈಲು ಮಾರ್ಗದ ಮೌಲ್ಯಮಾಪನ ನಡೆಸಿ ವರದಿಗೆ ಸೂಚಿಸಿದೆ.

ಹೈಕೋರ್ಟ್ ತೀರ್ಪಿಗೆ ಹೋರಾಟ ಸಮಿತಿ ಸ್ವಾಗತ
ಅಂಕೋಲಾ : ಹುಬ್ಬಳ್ಳಿ-ಅಂಕೋಲಾ ರೈಲು ಯೋಜನೆ ಜಾರಿ ಹಿನ್ನೆಲೆಯಲ್ಲಿ ವನ್ಯಜೀವಿಗಳ ಮೇಲೆ ಆಗಬಹುದಾದ ಸಾಧಕ ಬಾಧಕಗಳನ್ನು ಅಧ್ಯಯನ ನಡೆಸಲು ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ ಹೈಕೋರ್ಟ್ ನಿರ್ದೇಶನ ನೀಡಿರುವುದನ್ನು ಹುಬ್ಬಳ್ಳಿ ಅಂಕೋಲಾ ರೈಲ್ವೇ ಹೋರಾಟ ಕ್ರಿಯಾ ಸಮಿತಿ ಸ್ವಾಗತಿಸಿದೆ.
ರಾಜ್ಯ ವನ್ಯಜೀವಿ ಮಂಡಳಿ ಹಸಿರು ನಿಶಾನೆ ನೀಡಿದ್ದರೂ ವಿನಾಕಾರಣ ವನ್ಯಜೀವಿ ಮಂಡಳಿಯ ನಿರ್ಧಾರದ ವಿರುದ್ಧ ಕೆಲವರು ಕೋರ್ಟ್ ಮೆಟ್ಟಿಲು ಏರಿದ್ದರು. ಈಗ ಹೈಕೋರ್ಟ್ ನೀಡಿರುವ ಆದೇಶ ಯೋಜನೆಯನ್ನು ಜಾರಿಗೊಳಿಸುವ ವಿಷಯದಲ್ಲಿ ನಮ್ಮ ಸಮಿತಿ ನಡೆಸಿದ್ದ ಸುದೀರ್ಘ ಹೋರಾಟಕ್ಕೆ ಇನ್ನಷ್ಟು ಶಕ್ತಿ ತುಂಬಿದೆ. ಈ ವಿಷಯದಲ್ಲಿ ಚರ್ಚಿಸಲು ಮುಖ್ಯಮಂತ್ರಿಯವರ ಸಮಯ ಕೇಳಿದ್ದು ಅವರನ್ನು ಭೇಟಿಯಾಗಿ ಸರ್ಕಾರದ ವತಿಯಿಂದ ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ ಯೋಜನೆಗೆ ಪೂರಕವಾಗಿ ಇರುವ ವಿವಿಧ ಅಧ್ಯಯನದ ಮಾಹಿತಿಯನ್ನು ಒದಗಿಸುವ ಮೂಲಕ ಯೋಜನಾ ಪರ ನಿರ್ಣಯ ಬರುವಂತೆ ಕ್ರಮ ತೆಗೆದುಕೊಳ್ಳಲು ವಿನಂತಿ ಮಾಡಲಿದ್ದೇವೆ. ವಿವಿಧ ಪಕ್ಷದ ಸಂಸದರು, ಶಾಸಕರು ಮತ್ತು ಪ್ರಮುಖರನ್ನು ಭೇಟಿಯಾಗಿ ಯೋಜನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಬೆಂಬಲ ಪಡೆಯಲಿದ್ದೇವೆ ಎಂದು ಹುಬ್ಬಳ್ಳಿ ಅಂಕೋಲಾ ರೈಲ್ವೇ ಹೋರಾಟ ಕ್ರಿಯಾ ಸಮಿತಿ ಅಧ್ಯಕ್ಷ ರಮಾನಂದ ಬಿ. ನಾಯಕ, ಕಾರ್ಯದರ್ಶಿ ವಿಠ್ಠಲದಾಸ ಕಾಮತ್, ಸಂಚಾಲಕ ಉಮೇಶ ನಾಯ್ಕ ಮತ್ತು ಸಮಿತಿಯ ಎಲ್ಲ ಪದಾಧಿಕಾರಿಗಳು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಸುಳ್ಳು ಚುನಾವಣಾ ಅಫಿಡವಿಟ್‌ ಪ್ರಕರಣ : ಬಿಜೆಪಿ ಶಾಸಕ ಗರುಡಾಚಾರಗೆ ವಿಧಿಸಿದ್ದ ಜೈಲು ಶಿಕ್ಷೆ ರದ್ದುಮಾಡಿದ ಹೈಕೋರ್ಟ್

ಸಚಿವ ಹೆಬ್ಬಾರ್ ಸ್ವಾಗತ
ಹುಬ್ಬಳ್ಳಿ-ಅಂಕೋಲಾ ರೈಲು ಯೋಜನೆ ಜಾರಿ ಹಿನ್ನೆಲೆಯಲ್ಲಿ ಹೈಕೋರ್ಟ್ ನೀಡಿರುವ ತೀರ್ಪನ್ನು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಸ್ವಾಗತಿಸಿದ್ದಾರೆ.
ವನ್ಯಜೀವಿಗಳ ಮೇಲೆ ಆಗಬಹುದಾದ ಸಾಧಕ ಬಾಧಕಗಳನ್ನು ಅಧ್ಯಯನ ನಡೆಸಲು ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ ಹೈಕೋರ್ಟ್ ನಿರ್ದೇಶನ ನೀಡಿರುವುದು ನಮಗೆ ಸಿಕ್ಕ ಮಹತ್ವದ ಗೆಲುವು. ರಾಜ್ಯ ಸರ್ಕಾರವೂ ಸಹ ತಡೆಯಾಜ್ಞೆ ತೆರವಿಗಾಗಿ ವಿಶೇಷ ನ್ಯಾಯವಾದಿಯನ್ನು ನೇಮಕ ಮಾಡಿತ್ತು. ಈಗ ರಾಷ್ಟ್ರೀಯ ವನ್ಯಜೀವಿ ಮಂಡಳಿಗೂ ಯೋಜನೆಯಿಂದ ಆಗುವ ಲಾಭದ ಬಗ್ಗೆ ಮತ್ತು ಯೋಜನೆ ಹೇಗೆ ಪರಿಸರಕ್ಕೆ ಪೂರಕ ಎನ್ನುವುದನ್ನು ಮನವರಿಕೆ ಮಾಡಿಕೊಡಲಾಗುವುದು ಎಂದು ಹೇಳಿದ್ದಾರೆ.

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement