ಐಎಂಎಫ್​ನ ಉನ್ನತ ಹುದ್ದೆಗೆ ಏರಿದ ಮೈಸೂರು ಮೂಲದ ಗೀತಾ ಗೋಪಿನಾಥ್

ನವದೆಹಲಿ: ಅಂತಾರಾಷ್ಟ್ರೀಯ ಹಣಕಾಸು ನಿಧಿ((IMF))ಯ ಮುಖ್ಯ ಆರ್ಥಿಕ ತಜ್ಞೆ ಗೀತಾ ಗೋಪಿನಾಥ್ ಅವರ ಬಗ್ಗೆ ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ.
ಗೀತಾ ಗೋಪಿನಾಥ್ ಅವರಿಗೆ ಬಡ್ತಿ ನೀಡುವುದರ ಜತೆಗೆ ಮಹತ್ವದ ಹುದ್ದೆಯ ಜವಾಬ್ದಾರಿಯನ್ನು ವಹಿಸಲಾಗಿದೆ. ಇದಾದ ನಂತರ ಈಗ ಗೀತಾ ಈ ಸಂಸ್ಥೆಯಲ್ಲಿ ವಿಶೇಷ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಕರ್ನಾಟಕದ ಮೈಸೂರು ಮೂಲದ ಗೀತಾ ಗೋಪಿನಾಥ್ ಅವರು ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಮೊದಲ ಉಪ ವ್ಯವಸ್ಥಾಪಕ ನಿರ್ದೇಶಕಿಯಾಗಿದ್ದಾರೆ. ಗೀತಾ ಈಗ ಐಎಂಎಫ್‌ನಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಇದು ಭಾರತದ ದೊಡ್ಡ ಸಾಧನೆಯೂ ಹೌದು.
. ಮೈಸೂರು ಮೂಲದವರಾದ ಗೀತಾ ಗೋಪಿನಾಥ್ ಅಂತಾರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ಮುಖ್ಯ ಅರ್ಥಶಾಸ್ತ್ರಜ್ಞೆಯಾಗಿದ್ದು, ಅವರಿಗೆ ಐಎಂಎಫ್‌ನ ಪ್ರಥಮ ಉಪ ವ್ಯವಸ್ಥಾಪಕ ನಿರ್ದೇಶಕರಾಗಿ ಬಡ್ತಿ ನೀಡಲಾಗಿದೆ ಎಂದು ಐಎಂಎಫ್ ಘೋಷಿಸಿದೆ. ಈ ಮೂಲಕ ಭಾರತ ಮೂಲದ ಗೀತಾ ಗೋಪಿನಾಥ್ ಐಎಫ್​ಎಫ್​ನ ಮತ್ತೊಂದು ಪ್ರಮುಖ ಹುದ್ದೆಗೆ ಏರಿದ್ದಾರೆ.
ಈ ಹಿಂದೆ ಗೀತಾ ಗೋಪಿನಾಥ್ ಅವರು ಐಎಂಎಫ್ ತೊರೆಯುವ ಮನಸ್ಸು ಮಾಡಿದ್ದರು ಎಂದು ಹೇಳಲಾಗುತ್ತಿದೆ. ಮುಂದಿನ ವರ್ಷದಿಂದ ಮತ್ತೆ ಹಾರ್ವರ್ಡ್ ವಿಶ್ವವಿದ್ಯಾನಿಲಯಕ್ಕೆ ತನ್ನ ಶೈಕ್ಷಣಿಕ ಕೆಲಸವನ್ನು ಮುಂದುವರಿಸುವ ಬಗ್ಗೆ ಅವರು ಯೋಚಿಸುತ್ತಿದ್ದರು. ಆದರೆ, ಈ ನಡುವೆ ಐಎಂಎಫ್ ಮಹತ್ವದ ಜವಾಬ್ದಾರಿಯನ್ನು ಗೀತಾ ಗೋಪಿನಾಥ್ ಅವರಿಗೆ ವಹಿಸಿದೆ. ಈಗ ಗೀತಾ ಈ ಸಂಸ್ಥೆಯಲ್ಲಿ ತಮ್ಮ ಸೇವೆ ಮುಂದುವರಿಸಲಿದ್ದಾರೆ.
ಗೀತಾ ಗೋಪಿನಾಥ್ ಅವರು ಜನವರಿ 21, 2022 ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಇದಕ್ಕೂ ಮೊದಲು ಜೆಫ್ರಿ ಒಕಾಮೊಟೊ ಅವರು ಐಎಂಎಫ್‌(IMF)ನ ಉಪ ವ್ಯವಸ್ಥಾಪಕ ನಿರ್ದೇಶಕ ಹುದ್ದೆ ಹೊಂದಿದ್ದರು. ಒಕಾಮೊಟೊ ಜನವರಿ 2022 ರಲ್ಲಿ ಕೆಳಗಿಳಿಯಲಿದ್ದಾರೆ. ಇದರ ನಂತರ ಗೀತಾ ಈ ಉನ್ನತ ಸ್ಥಾನಕ್ಕೆ ಏರಲಿದ್ದಾರೆ.
ಗೀತಾ ಗೋಪಿನಾಥ್ ಅವರು ಕಳೆದ ಮೂರು ವರ್ಷಗಳಿಂದ ಅಂತಾರಾಷ್ಟ್ರೀಯ ಹಣಕಾಸು ನಿಧಿಯೊಂದಿಗೆ ಸಂಬಂಧ ಹೊಂದಿದ್ದಾರೆ. ಅವರು ಇಲ್ಲಿ ಮುಖ್ಯ ಅರ್ಥಶಾಸ್ತ್ರಜ್ಞರಾಗಿ ಕೆಲಸ ಮಾಡುತ್ತಿದ್ದಾರೆ. ಸಂಸ್ಥೆಯ ಪ್ರಕಾರ, ಗೀತಾ ಅವರ ಈವರೆಗಿನ ಅವಧಿ ತುಂಬಾ ಚೆನ್ನಾಗಿದೆ. ಅವರ ಕೆಲಸ ಮತ್ತು ಸಾಮರ್ಥ್ಯವನ್ನು ಪರಿಗಣಿಸಿ ಅವರಿಗೆ ಉಪ ವ್ಯವಸ್ಥಾಪಕ ನಿರ್ದೇಶಕ ಹುದೆಗೆ ಬಡ್ತಿ ನೀಡಲಾಗಿದೆ.

ಪ್ರಮುಖ ಸುದ್ದಿ :-   ಅಕ್ಟೋಬರ್‌ 3ರಿಂದ ಕೇಂದ್ರ ತಂಡದಿಂದ ಕರ್ನಾಟಕದ ಬರಪೀಡಿತ ಪ್ರದೇಶಗಳ ಪರಿಶೀಲನೆ : ಕುಮಾರಸ್ವಾಮಿ

ಈ ಸಾಧನೆಯ ಬಗ್ಗೆ ಗೀತಾ ಹೇಳಿದ್ದೇನು?
ಐಎಂಎಫ್‌ನಲ್ಲಿನ ಈ ಸಾಧನೆಗೆ ಸಂಬಂಧಿಸಿದಂತೆ ಗೀತಾ ಗೋಪಿನಾಥ್ ಅವರು ಮುಂದಿನ ಎಫ್‌ಡಿಎಂಡಿ (ಮೊದಲ ಉಪ ವ್ಯವಸ್ಥಾಪಕ ನಿರ್ದೇಶಕ) ಆಗಲು ತುಂಬಾ ಸಂತೋಷವಾಗಿದೆ ಎಂದು ಹೇಳಿದ್ದಾರೆ. ಕಳೆದ 3 ವರ್ಷಗಳಲ್ಲಿ, ನಾನು ಐಎಂಎಫ್‌ನ ಕೆಲಸವನ್ನು ಸೂಕ್ಷ್ಮವಾಗಿ ಗಮನಿಸಿ ಅನುಭವವನ್ನು ಪಡೆದುಕೊಂಡಿದ್ದೇನೆ ಎಂದು ಗೀತಾ ಗೋಪಿನಾಥ ಹೇಳಿದ್ದಾರೆ.
ಗೀತಾ ಗೋಪಿನಾಥ್ ಅವರು ಭಾರತದೊಂದಿಗೆ ವಿಶೇಷ ಸಂಬಂಧವನ್ನು ಹೊಂದಿದ್ದಾರೆ. ಏಕೆಂದರೆ ಗೀತಾ ಜನಿಸಿದ್ದು ಕರ್ನಾಟಕದ ಮೈಸೂರು ನಗರದಲ್ಲಿ. ಗೀತಾ ಅವರ ತಂದೆ ಟಿ.ವಿ.ಗೋಪಿನಾಥ್ ಅವರು ಕೇರಳದ ಕಣ್ಣೂರು ಜಿಲ್ಲೆಯ ರೈತ ಮತ್ತು ಉದ್ಯಮಿ. ಉನ್ನತ ಶಿಕ್ಷಣಕ್ಕಾಗಿ ಗೀತಾ ರಾಜಧಾನಿ ದೆಹಲಿಗೆ ತೆರಳಿದರು. ಗೀತಾ 1992 ರಲ್ಲಿ ಇಲ್ಲಿನ ಶ್ರೀ ರಾಮ್ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಪದವಿಯನ್ನು ಪೂರ್ಣಗೊಳಿಸಿದರು.
ಇದಾದ ನಂತರ ಗೀತಾ ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್‌ನಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಇದನ್ನು ಮುಗಿಸಿದ ಗೀತಾ ಅಮೆರಿಕದತ್ತ ಮುಖ ಮಾಡಿದರು. ಪ್ರಿನ್ಸ್‌ಟನ್ ವಿಶ್ವವಿದ್ಯಾಲಯದಲ್ಲಿ ತಮ್ಮ ಪಿಎಚ್‌ಡಿ ಮಾಡಿದರು. ಸದ್ಯ ಗೀತಾ ಗೋಪಿನಾಥ್ ಅಮೆರಿಕ ನಿವಾಸಿ.
ಈ ಕುರಿತು ಅಂತಾರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲಿನಾ ಜಾರ್ಜಿವಾ ಪ್ರತಿಕ್ರಿಯೆ ನೀಡಿದ್ದು, ಜೆಫ್ರಿ ಮತ್ತು ಗೀತಾ ಇಬ್ಬರೂ ನನಗೆ ಒಳ್ಳೆಯ ಸಹೋದ್ಯೋಗಿಗಳು. ಜೆಫ್ರಿ ಹುದ್ದೆ ತೊರೆಯುತ್ತಿರುವುದಕ್ಕೆ ಬೇಸರವಾಗುತ್ತಿದೆ. ಆದರೆ, ಗೀತಾ ಗೋಪಿನಾಥ್ ಆ ಹೊಸ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ ಎಂದು ತಿಳಿದು ನನಗೆ ಖುಷಿಯಾಗಿದೆ ಎಂದಿದ್ದಾರೆ.
ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಇತಿಹಾಸದಲ್ಲಿ ಮೊದಲ ಮಹಿಳಾ ಮುಖ್ಯ ಅರ್ಥಶಾಸ್ತ್ರಜ್ಞರಾಗಿದ್ದ ಗೀತಾ ಗೋಪಿನಾಥ್ ಐಎಂಎಫ್​ನ ಸದಸ್ಯ ರಾಷ್ಟ್ರಗಳಿಂದ ಮೆಚ್ಚುಗೆಯನ್ನು ಗಳಿಸಿದ್ದಾರೆ ಮತ್ತು ಕಠಿಣವಾದ ಕೆಲಸವನ್ನು ಮುನ್ನಡೆಸಿ, ಯಶಸ್ವಿಗೊಳಿಸುವ ಸಾಮರ್ಥ್ಯ ಅವರಲ್ಲಿದೆ ಎಂದು ಕ್ರಿಸ್ಟಲಿನಾ ಜಾರ್ಜಿವಾ ಹೇಳಿದ್ದಾರೆ.
ಗೀತಾ ತಂದೆ ಗೋಪಿನಾಥ್ , ಮೈಸೂರು ಹೊರ ವಲಯದಲ್ಲಿ ತಮ್ಮದೇ ಆದ ಫಾರ್ಮ್ ಹೌಸ್ ಹೊಂದಿದ್ದಾರೆ. ಕೊರೊನಾದ ಸಾಂಕ್ರಮಿಕದ ಸಂದರ್ಭದಲ್ಲಿ ತಮ್ಮ ಫಾರ್ಮ್ ಹೌಸ್ ನಲ್ಲಿ ಇದ್ದ ಹಸುಗಳನ್ನು ಬಡವರಿಗೆ ದಾನವಾಗಿ ನೀಡಿದ್ದರು.

ಪ್ರಮುಖ ಸುದ್ದಿ :-   ಮೊಬೈಲ್‌, ಚಿನ್ನದ ಸರ ಖರೀದಿಸಲು 1 ತಿಂಗಳ ಮಗುವನ್ನೇ ಮಾರಿದ ದಂಪತಿ; ಪೊಲೀಸರು ಪತ್ತೆ ಮಾಡುವ ಮೊದಲು ನಾಲ್ವರಿಗೆ ಮಾರಾಟ !

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement