ಜಿಂಬಾಬ್ವೆಯಿಂದ ಬಂದ ಗುಜರಾತ್ ವ್ಯಕ್ತಿಯಲ್ಲಿ ಓಮಿಕ್ರಾನ್ ಪತ್ತೆ: ಭಾರತದ 3ನೇ ಪ್ರಕರಣ ದೃಢ

ಜಾಮ್​ನಗರ: ಜಿಂಬಾಬ್ವೆಯಿಂದ ಹಿಂದಿರುಗಿದ್ದ ಗುಜರಾತ್‌ ವ್ಯಕ್ತಿಯೊಬ್ಬರಲ್ಲಿ ಕೊರೊನಾ ವೈರಸ್​ನ ಓಮಿಕ್ರಾನ್ ರೂಪಾಂತರದ ಸೋಂಕು ಶನಿವಾರ ಪತ್ತೆಯಾಗಿದೆ.
ಇದರೊಂದಿಗೆ ಭಾರತದಲ್ಲಿ ಮೂರು ಪ್ರಕರಣ ಪತ್ತೆಯಾದಂತಾಗಿದೆ.
ಜಾಮ್​ನಗರದ 72 ವರ್ಷಗಳ ವೃದ್ಧರು ಇತ್ತೀಚೆಗಷ್ಟೇ ಝಿಂಬಾಬ್ವೆಯಿಂದ ಹಿಂದಿರುಗಿದ್ದರು. ಅವರಲ್ಲಿ ನಿನ್ನೆಯಷ್ಟೇ ಕೊವಿಡ್ ದೃಢಪಟ್ಟಿತ್ತು. ನಂತರ ಗುರುವಾರ ಗಂಟಲು ದ್ರವವನ್ನು ಜಿನೋಮ್ ಸೀಕ್ವೆನ್ಸಿಂಗ್ ಗೆ ಕಳುಹಿಸಲಾಗಿತ್ತು. ಈಗ ಅವರಿಗೆ ಓಮಿಕ್ರಾನ್‌ ಸೋಂಕು ದೃಢಪಟ್ಟಿದೆ. ಪ್ರಸ್ತುತ ಅವರಿಗೆ ಸರ್ಕಾರಿ ಸ್ವಾಮ್ಯದ ಜಿಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಜಿಂಬಾಬ್ವೆಯಿಂದ ಜಾಮ್​ ನಗರಕ್ಕೆ ಕಳೆದ ವಾರ ಭಾರತೀಯ ಮೂಲದ ಮೂವರು ಹಿಂದುರುಗಿದ್ದರು. ಒಬ್ಬರ ಪರೀಕ್ಷಾ ವರದಿ ಮಾತ್ರ ಬಂದಿದೆ. ಉಳಿದಿಬ್ಬರ ವರದಿಗಳು ಇನ್ನೂ ಬರಬೇಕಿದೆ. ಜಿನೋಮ್ ಸೀಕ್ವೆನ್ಸ್​ಗೆ ಮಾದರಿಗಳನ್ನು ಕಳುಹಿಸಲಾಗಿದ್ದು, ರೂಪಾಂತರವನ್ನು ನಿರ್ದಿಷ್ಟವಾಗಿ ಪತ್ತೆಹಚ್ಚಲು ಯತ್ನಿಸಲಾಗುತ್ತಿದೆ ಎಂದು ಜಾಮ್​ನಗರ ನಗರಸಭೆ ಆಯುಕ್ತ ವಿಜಯ್ ಖಾರಡಿ ಮಾಹಿತಿ ನೀಡಿದ್ದಾರೆ.
ಈಗಾಗಲೇ ಕರ್ನಾಟಕದ ಬೆಂಗಳೂರಿನ ವೈದ್ಯರು ಹಾಗೂ ದಕ್ಷಿಣ ಆಫ್ರಿಕಾದಿಂದ ಆಗಮಿಸಿದ್ದ 66 ವರ್ಷದ ವ್ಯಕ್ತಿಯೊಬ್ಬರಲ್ಲಿ ಓಮಿಕ್ರಾನ್ ಪತ್ತೆಯಾಗಿತ್ತು.

ನಿಮ್ಮ ಕಾಮೆಂಟ್ ಬರೆಯಿರಿ

advertisement