ಇಂಡೋನೇಷ್ಯಾದಲ್ಲಿ ಅಗ್ನಿಪರ್ವತ ಸ್ಫೋಟ: 12 ಕಿಮೀ ಎತ್ತರಕ್ಕೆ ಚಿಮ್ಮಿದ ಬೂದಿ, ಕನಿಷ್ಠ 13 ಸಾವು, 98 ಮಂದಿಗೆ ಗಾಯ

ಲುಮಾಜಾಂಗ್: ಇಂಡೋನೇಷ್ಯಾದ ಜಾವಾ ದ್ವೀಪದ ಅತ್ಯಂತ ಎತ್ತರದ ಪರ್ವತವಾದ ಸೆಮೆರುದಲ್ಲಿ ಜ್ವಾಲಾಮುಖಿ ಸ್ಫೋಟಗೊಂಡ ಪರಿಣಾಮ ಹತ್ತಾರು ಕಿಮೀ ಎತ್ತರದವರೆಗೆ ದಟ್ಟವಾದ ಬೂದಿ ಚಿಮ್ಮಿದೆ. ಕನಿಷ್ಠ 13 ಮಂದಿ ಸಾವಿಗೀಡಾದ್ದಾರೆ. ಅಲ್ಲದೆ, ನೂರಾರು ಜನರು ಗಾಯಗೊಂಡಿದ್ದಾರೆ. ಜ್ವಾಲಾಮುಖಿಯ ನಡುವೆ ಸಿಲುಕಿದ್ದ ಹತ್ತು ಮಂದಿಯನ್ನು ರಕ್ಷಿಸಿ ಬೇರೆಡೆಗೆ ಸ್ಥಳಾಂತರ ಮಾಡಲಾಗಿದೆ ಎಂದು ದೇಶದ ವಿಪತ್ತು ನಿರ್ವಹಣಾ ಸಂಸ್ಥೆ (ಬಿಎನ್‌ಪಿಬಿ) ತಿಳಿಸಿದೆ.
ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ. ಜಾವಾ ದ್ವೀಪದ ಅತ್ಯಂತ ಎತ್ತರದ ಪರ್ವತವಾದ ಸೆಮೆರು ಶನಿವಾರ ಮುಗಿಲೆತ್ತರಕ್ಕೆ ದಟ್ಟವಾದ ಬೂದಿ ಹೊರ ಹಾಕಿದೆ. ಪೂರ್ವ ಸಮೀಪದಲ್ಲಿರುವ ಗ್ರಾಮಗಳ ಮೇಲೆ ಬಿಸಿ ಮೋಡ ಆವರಿಸಿ ಜನರು ದಿಕ್ಕಾಪಾಲಾಗಿ ಓಡಿದ್ದಾರೆ.
ಸಮೀಪದ ಲುಮಾಜಂಗ್ ಜಿಲ್ಲೆಯ ಮಲಾಂಗ್ ನಗರದೊಂದಿಗೆ ಎರಡು ಪ್ರದೇಶಗಳನ್ನು ಸಂಪರ್ಕಿಸುವ ಮುಖ್ಯ ಸೇತುವೆಗೆ ಹಾಗೂ ಅನೇಕ ಕಟ್ಟಡಗಳಿಗೆ ಅಗ್ನಿಪರ್ವತ ಸ್ಫೋಟದಿಂದ ಭಾರಿ ಹಾನಿಯಾಗಿದೆ.
ಇದುವರೆಗೂ 13 ಮಂದಿ ಮೃತಪಟ್ಟಿದ್ದಾರೆ. ಅವರಲ್ಲಿ ಇಬ್ಬರನ್ನು ಗುರುತಿಸಲಾಗಿದೆ. ಅಲ್ಲದೆ, ಇಬ್ಬರು ಗರ್ಭಿಣಿಯರು ಸೇರಿ 98 ಮಂದಿ ಗಾಯಗೊಂಡಿದ್ದಾರೆ. 902 ಜನರನ್ನು ಸ್ಥಳಾಂತರ ಮಾಡಲಾಗಿದೆ ಎಂದು ಬಿಎನ್‌ಪಿಬಿ ಅಧಿಕಾರಿ ತಿಳಿಸಿದ್ದಾರೆ.
ಮರಳು ಗಣಿ ಕಾರ್ಮಿಕರು ಹಲವು ಕಡೆ ಗಣಿಗಳಲ್ಲಿ ಸಿಲುಕಿಕೊಂಡಿದ್ದರು ಎಂದು ಲುಮಾಜಂಗ್ ಅಧಿಕಾರಿ ತೊರಿಖುಲ್ ಹಕ್ ತಿಳಿಸಿದ್ದಾರೆ. ಕನಿಷ್ಠ 35 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಬಿಎನ್‌ಪಿಬಿ ತಿಳಿಸಿದೆ. ಏಳು ಮಂದಿ ನಿವಾಸಿಗಳು ಹಾಗೂ ಕೆಲವು ಮರಳು ಗಣಿ ಕೆಲಸಗಾರರು ನಾಪತ್ತೆಯಾಗಿದ್ದಾರೆ.
ಸೆಮೆರು 3,600 ಮೀಟರ್‌ಗೂ (12,000 ಅಡಿ) ಅಧಿಕ ಎತ್ತರದ ಪರವತವಾಗಿದ್ದು, ಇದು ಇಂಡೋನೇಷ್ಯಾದ ಸಕ್ರಿಯ 130 ಅಗ್ನಿಪರ್ವತಗಳಲ್ಲಿ ಒಂದು. ಶನಿವಾರ ಈ ಅಗ್ನಿಪರ್ವತ 12 ಕಿಮಿಗೂ (7.5 ಮೈಲು) ಎತ್ತರಕ್ಕೆ ಬೂದಿಯನ್ನು ನಿರಂತರವಾಗಿ ಹೊರಹಾಕಿದೆ. ಜತೆಗೆ ಅನಿಲ ಹಾಗೂ ಲಾವಾರಸ ಹರಿದಿದೆ. ಅನೇಕ ಗ್ರಾಮಗಳು ಬೂದಿಯಿಂದ ಮುಚ್ಚಿಹೋಗಿವೆ.
ಆದರೆ ಉಸಿರುಗಟ್ಟಿಸುವ ಹೊಗೆ, ಮತ್ತು ಸ್ಫೋಟದ ಸಮಯದಲ್ಲಿ ಮಳೆಯಿಂದಾಗಿ ತೆರವು ಪ್ರಯತ್ನಗಳಿಗೆ ಅಡ್ಡಿಯಾಗಿದೆ ಮತ್ತು ಇದು ಭಾರೀ ಪ್ರಮಾಣದ ದೂಳನ್ನು ಕೆಸರಾಗಿ ಪರಿವರ್ತಿಸಿದೆ.

ಸ್ಥಳೀಯ ಅಧಿಕಾರಿ ಥೋರಿಕುಲ್ ಹಕ್ ಈ ಪ್ರದೇಶದಿಂದ ಹತ್ತಿರದ ನಗರವಾದ ಮಲಾಂಗ್‌ಗೆ ಹೋಗುವ ರಸ್ತೆ ಮತ್ತು ಸೇತುವೆ ಕೂಡ ಸ್ಫೋಟದ ಸಮಯದಲ್ಲಿ ತುಂಡಾಗಿದೆ ಎಂದು ರಾಯಿಟರ್ಸ್‌ಗೆ ಹೇಳಿದರು. ಏತನ್ಮಧ್ಯೆ, ಈ ಹಿಂದೆ ಕಟ್ಟಡಗಳಲ್ಲಿ ಸಿಲುಕಿಕೊಂಡಿದ್ದ 10 ಜನರನ್ನು ರಕ್ಷಿಸಲಾಗಿದೆ ಎಂದು ಬಿಎನ್‌ಪಿಬಿ ತಿಳಿಸಿದೆ.
ಬೂದಿ ಮೋಡವು 15 ಕಿಮೀ (50,000 ಅಡಿ) ವರೆಗೆ ಮೇಲಕ್ಕೆ ಹಾರುವುದರ ಬಗ್ಗೆ ವಿಮಾನಯಾನ ಸಂಸ್ಥೆಗಳಿಗೆ ಎಚ್ಚರಿಕೆ ನೀಡಲಾಗಿದೆ, ಇದು ಹೆಚ್ಚಿನ ವಿಮಾನಗಳಿಗೆ ಪ್ರಯಾಣಿಸುವ ಎತ್ತರಕ್ಕಿಂತ ಹೆಚ್ಚಾಗಿದೆ ಎಂದು VAAC ಯ ಹವಾಮಾನಶಾಸ್ತ್ರಜ್ಞ ಕ್ಯಾಂಪ್‌ಬೆಲ್ ಬಿಗ್ಸ್ ಬಿಬಿಸಿಗೆ ತಿಳಿಸಿದ್ದಾರೆ.
ಪ್ಲೇನ್ ಇಂಜಿನ್‌ಗಳ ತಂಪಾದ ಭಾಗಗಳಲ್ಲಿ ಘನೀಕರಿಸುವ ಬೂದಿ ಗಾಳಿಯ ಹರಿವನ್ನು ಅಡ್ಡಿಪಡಿಸಬಹುದು, ಇದು ಎಂಜಿನ್‌ಗಳು ಸ್ಥಗಿತಗೊಳ್ಳಲು ಅಥವಾ ಸಂಪೂರ್ಣವಾಗಿ ವಿಫಲಗೊಳ್ಳಲು ಕಾರಣವಾಗಬಹುದು. ಇದು ಪೈಲಟ್‌ಗಳಿಗೆ ಗೋಚರತೆ ಮೇಲೆ ಪರಿಣಾಮ ಬೀರುತ್ತದೆ ಮತ್ತು ಕ್ಯಾಬಿನ್‌ನಲ್ಲಿನ ಗಾಳಿಯ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿಸಲಾಗಿದೆ.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement