ಡೆಲ್ಟಾಕ್ಕೆ ಹೋಲಿಸಿದರೆ ಓಮಿಕ್ರಾನ್ ತೀವ್ರತೆ ಕಡಿಮೆಯಿದೆ: ಡಾ. ಕೆ.ಸುಧಾಕರ್

ಮಕ್ಕಳ ಮೇಲೆ ಯಾವುದೇ ರೀತಿಯ ಪರಿಣಾಮ ಬೀರಲ್ಲ
ಬೆಂಗಳೂರು: ರಾಜ್ಯದಲ್ಲಿ ಪತ್ತೆಯಾದ ಓಮಿಕ್ರಾನ್ ಸೋಂಕಿತರ ಸಂಪರ್ಕದಲ್ಲಿದ್ದವರಿಗೆ ಯಾವುದೇ ಆರೋಗ್ಯ ಸಮಸ್ಯೆ, ಅಥವಾ ರೋಗ ಲಕ್ಷಣ ಕಂಡುಬಂದಿಲ್ಲ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಎರಡು ಪ್ರಕರಣಗಳು ಮಾತ್ರ ಪತ್ತೆಯಾಗಿವೆ. ಸೋಂಕಿತರ ಸಂಪರ್ಕದಲ್ಲಿದ್ದವರ ಜಿನೊಮಿಕ್ಸ್ ಸೀಕ್ವೆನ್ಸ್ ವರದಿ ಇನ್ನೂ ಬಂದಿಲ್ಲ. ಬೇರೆ ರಾಜ್ಯಗಳಲ್ಲಿ ಹೊಸ ಸೋಂಕಿತರು ಪತ್ತೆಯಾಗಿದ್ದಾರೆ. ನಮ್ಮ ರಾಜ್ಯದಲ್ಲಿ ಇಲ್ಲಿ ತನಕ ಎರಡು ಕೇಸ್ ಮಾತ್ರ ಇದೆ. ಅವರ ಸಂಪರ್ಕಿತರಿಗೆ ಯಾವುದೇ ಸಮಸ್ಯೆಗಳು, ಲಕ್ಷಣಗಳು ಕಂಡುಬಂದಿಲ್ಲ. ಬೌರಿಂಗ್ ಆಸ್ಪತ್ರೆಯಲ್ಲಿ ಇವರಿಗೆ ಚಿಕಿತ್ಸೆ ನೀಡುತ್ತಿದ್ದು, ಆಸ್ಪತ್ರೆ ನಿರ್ದೇಶಕರ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ. ಓಮಿಕ್ರಾನ್ ಸೋಂಕಿತರ ಸಂಪರ್ಕ ಹೊಂದಿದ್ದವರು ಎರಡೂ ಡೋಸ್ ಲಸಿಕೆ ಪಡೆದಿದ್ದಾರೆ ಎಂದು ತಿಳಿಸಿದರು.
ಎರಡು ಡೋಸ್ ಲಸಿಕೆ ತೆಗೆದುಕೊಂಡವರಲ್ಲಿ ಓಮಿಕ್ರಾನ್ ಸೋಂಕು ತೀವ್ರತೆ ಇರುವುದಿಲ್ಲ. ಇದಕ್ಕೆ ಸೋಂಕಿತರ ಸಂಪರ್ಕದಲ್ಲಿರುವ ಲಕ್ಷಣಗಳೇ ಉದಾಹರಣೆಯಾಗಿದೆ. ಒಂದು ಡೋಸ್‌ನಿಂದ ಸಂಪೂರ್ಣ ರೋಗ ನಿರೋಧಕ ಶಕ್ತಿ ಬರುವುದಿಲ್ಲ. ಎರಡೂ ಡೋಸ್ ತೆಗೆದುಕೊಂಡಾಗ ಮಾತ್ರ ಸಂಪೂರ್ಣ ರೋಗ ನಿರೋಧಕ ಶಕ್ತಿ ಬರುತ್ತದೆ. ಹೀಗಾಗಿ ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಿ ಎಂದು ಮನವಿ ಮಾಡಿದರು.
ಓಮಿಕ್ರಾನ್ ವಿಚಾರದಲ್ಲಿ ದೊಡ್ಡ ವ್ಯಾಖ್ಯಾನ ಮತ್ತು ಆತಂಕ ಪಡುವಂತಹದ್ದು ಏನೂ ಇಲ್ಲ. ಇದಕ್ಕಿಂತ ಹೆಚ್ಚು ಆತಂಕಕಾರಿಯಾಗಿದ್ದ ಡೆಲ್ಟಾ ರೂಪಾಂತರಿಯನ್ನೇ ನಾವು ಎದುರಿಸಿದ್ದೇವೆ. ಡೆಲ್ಟಾಕ್ಕೆ ಹೋಲಿಸಿದರೆ, ಓಮಿಕ್ರಾನ್ ಹರಡುವಿಕೆ ವೇಗದಲ್ಲಿ ಮಾತ್ರ ಆತಂಕ ಸೃಷ್ಟಿಸಿದೆ. ಇದರ ತೀವ್ರತೆ ವಿಶ್ವದಲ್ಲಿ ಎಲ್ಲೂ ವರದಿಯಾಗಿಲ್ಲ. ಈ ವೈರಸ್ ಲಕ್ಷಣಗಳು ಮೃದುವಾಗಿವೆ ಎಂದು ಈವರೆಗೆ ಕಂಡುಬಂದಿದೆ. ಹೀಗಾಗಿ ಜಾಗರೂಕರಾಗಿರಬೇಕು, ಆದರೆ ಯಾರೂ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದರು.
ಮಕ್ಕಳ ಮೇಲೆ ಡೆಲ್ಟಾ ಪರಿಣಾಮ ಬೀರಿಲ್ಲ. ಡೆಲ್ಟಾಗೆ ಹೋಲಿಸಿದರೆ ಓಮಿಕ್ರಾನ್ ತೀವ್ರತೆ ಕಡಿಮೆ. ಇದು ಮಕ್ಕಳಿಗೆ ಬಂದರೂ ಕೂಡ ಯಾವುದೇ ಗಂಭೀರ ಪರಿಣಾಮ ಬೀರುವುದಿಲ್ಲ ಎಂದು ವಿಜ್ಞಾನಿಗಳು ಮತ್ತು ತಜ್ಞರು ಹೇಳಿದ್ದಾರೆ ಎಂದು ತಿಳಿಸಿದರು.
ಯಾವುದೇ ಸಾಂಕ್ರಾಮಿಕ ರೋಗದ ಇತಿಹಾಸ ನೋಡಿದಾಗ ೨ನೇ ಅಲೆಯೇ ದೊಡ್ಡ ಪ್ರಮಾಣದ್ದಾಗಿದೆ. ೩ನೇ ಅಲೆ ಕಡಿಮೆ ಪ್ರಭಾವ ಬೀರಿದೆ. ಇದಕ್ಕೆ ಐತಿಹಾಸಿಕ ಸಾಕ್ಷಿ ಕೂಡ ಇದೆ. ಹಿಂದೆ ಬಂದಿರುವ ಸಾಂಕ್ರಾಮಿಕ ರೋಗಗಳನ್ನು ನೋಡಿದಾಗ ಮೊದಲ ಅಲೆಗಿಂತ ಎರಡನೇ ಅಲೆ ತೀವ್ರವಾಗಿತ್ತು. ೩ ಮತ್ತು ೪ನೇ ಅಲೆ ಬಂದರೂ ಅದರ ತೀವ್ರತೆ ಕಡಿಮೆ ಇತ್ತು ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ನನ್ನ ಬ್ಲ್ಯಾಕ್‌ಮೇಲ್ ಮಾಡಲು ಯತ್ನ ; ಇಬ್ಬರ ಪಾತ್ರದ ಬಗ್ಗೆ ತನಿಖೆ : ಸ್ಟಿಂಗ್‌ ಬಗ್ಗೆ ಮೌನ ಮುರಿದ ಸಿದ್ದರಾಮಯ್ಯ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement