ನೆಲದಿಂದ ನಭಕ್ಕೆ ಚಿಮ್ಮುವ ಭಾರತದ ಹೊಸ ಕ್ಷಿಪಣಿ ಪರೀಕ್ಷೆ ಯಶಸ್ವಿ

ಬಾಲಸೋರ್: ಭಾರತವು ಮಂಗಳವಾರ ನಡೆಸಿದ ಸ್ವದೇಶದಲ್ಲಿ ನಿರ್ಮಿಸಿದ ನೆಲದಿಂದ ನಭಕ್ಕೆ ಚಿಮ್ಮುವ (VLSRSAM) ಕ್ಷಿಪಣಿಯ ಪರೀಕ್ಷೆ ಯಶಸ್ವಿಯಾಗಿದೆ.
ಬಾಲಸೋರ್​ನ ಸಮುದ್ರ ತೀರದಲ್ಲಿ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯು (DRDO) ಚಾಂದಿಪುರದಿಂದ ಮಧ್ಯಾಹ್ನ 3.08 ಗಂಟೆಗೆ ಆಗಸದಲ್ಲಿ ಹಾರಿಬಿಟ್ಟ ವಸ್ತುವೊಂದಕ್ಕೆ ಗುರಿಯಾಗಿಸಿ ಹಾರಿಸಲಾಯಿತು.
ಡಿಆರ್​ಡಿಒ ವಿಜ್ಞಾನಿಗಳ ಲೆಕ್ಕಾಚಾರದಂತೆಯೇ ಕ್ಷಿಪಣಿಯು ಉದ್ದೇಶಿತ ಮಾರ್ಗದಲ್ಲಿ ಕ್ರಮಿಸಿತು. ಹಲವು ಉಪಕರಣಗಳ ಮೂಲಕ ನೌಕಾಪಡೆಯ ಅಧಿಕಾರಿಗಳು ಸಹ ಕ್ಷಿಪಣಿಯ ಕಾರ್ಯಕ್ಷಮತೆಯನ್ನು ದಾಖಲಿಸಿದರು. ಈ ಕ್ಷಿಪಣಿಯು 50ರಿಂದ 60 ಕಿಮೀ ಕಾರ್ಯಾಚರಣೆ ವ್ಯಾಪ್ತಿಯನ್ನು ಹೊಂದಿದೆ. ಒಮ್ಮೆ ಕ್ಷಿಪಣಿಯನ್ನು ಹಾರಿಬಿಟ್ಟ ನಂತರ ಅದರ ಮಾರ್ಗ ಬದಲಿಸಲೂ ಅವಕಾಶವಿದೆ. ಭಾರತೀಯ ನೌಕಾಪಡೆಯ ಹಡಗುಗಳಲ್ಲಿ ಮುಂದಿನ ದಿನಗಳಲ್ಲಿ ಅಳವಡಿಸಲು ಈ ಕ್ಷಿಪಣಿ ಅಭಿವೃದ್ಧಿಪಡಿಸಲಾಗಿದೆ.
ಈ ಕ್ಷಿಪಣಿಯನ್ನು ಮೊದಲ ಬಾರಿಗೆ ಫೆಬ್ರುವರಿ 22, 2021ರಂದು ಪರೀಕ್ಷಾರ್ಥ ಉಡಾವಣೆ ಮಾಡಲಾಗಿತ್ತು. ಕ್ಷಿಪಣಿಯ ಕಾರ್ಯಕ್ಷಮತೆ ಸರಿಯಿದೆ ಎಂದು ದೃಢೀಕರಿಸುವ ಉದ್ದೇಶದಿಂದ ಮಂಗಳವಾರ (ಡಿ.7) ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಲಾಯಿತು ಎಂದು ಪ್ರಕಟಣೆ ತಿಳಿಸಿದೆ.
ಕ್ಷಿಪಣಿಯನ್ನು ಯುದ್ಧನೌಕೆಗಳಿಗೆ ಅಳವಡಿಸುವ ಮಹತ್ವದ ಘಟ್ಟವನ್ನು ಇಂದಿನ ಪರೀಕ್ಷಾರ್ಥ ಉಡಾವಣೆಯಿಂದ ತಲುಪಲಾಗಿದೆ ಎಂದು ಡಿಆರ್​ಡಿಒ ಅಧ್ಯಕ್ಷ ಜಿ.ಸತೀಶ್ ರೆಡ್ಡಿ ತಿಳಿಸಿದ್ದಾರೆ.
ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ನಿಗದಿಯಾಗಿದ್ದ ಹಿನ್ನೆಲೆಯಲ್ಲಿ ಬಾಲಸೋರ್ ಜಿಲ್ಲಾಡಳಿತವು ಮಂಗಳವಾರ 4500ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿತ್ತು. ಜನರನ್ನು ಸ್ಥಳಾಂತರಿಸಿದ ನಂತರವೇ ಡಮ್ಮಿ ಸ್ಫೋಟಕಗಳೊಂದಿಗೆ ಕ್ಷಿಪಣಿಯನ್ನು ಉಡಾವಣೆ ಮಾಡಲಾಯಿತು.

ಪ್ರಮುಖ ಸುದ್ದಿ :-   ಮೊಬೈಲ್‌, ಚಿನ್ನದ ಸರ ಖರೀದಿಸಲು 1 ತಿಂಗಳ ಮಗುವನ್ನೇ ಮಾರಿದ ದಂಪತಿ; ಪೊಲೀಸರು ಪತ್ತೆ ಮಾಡುವ ಮೊದಲು ನಾಲ್ವರಿಗೆ ಮಾರಾಟ !

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement