ಮಗು ಎತ್ತಿಕೊಂಡಿದ್ದ ವ್ಯಕ್ತಿಗೆ ನಿರ್ದಯವಾಗಿ ಹೊಡೆದ ಪೊಲೀಸರು..! ಆಕ್ರೋಶದ ನಂತರ ಪೊಲೀಸ್ ಅಮಾನತು: ದೃಶ್ಯ ವಿಡಿಯೊದಲ್ಲಿ ಸೆರೆ

ಲಕ್ನೋ: ಉತ್ತರ ಪ್ರದೇಶದ ಕಾನ್ಪುರದ ದೇಹತ್‌ನಲ್ಲಿ ಗುರುವಾರ ತನ್ನ ಮಗುವನ್ನು ತೋಳಲ್ಲಿ ಎತ್ತಿಕೊಂಡಿದ್ದ ವ್ಯಕ್ತಿಯೊಬ್ಬನಿಗೆ ಪೊಲೀಸರು ಲಾಠಿಗಳಿಂದ ನಿರ್ದಯವಾಗಿ ಹೊಡೆಯುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದ್ದು, ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಸಂವೇದನಾ ರಹಿತವಾಗಿ ವರ್ತಿಸಿದ ಪೋಲೀಸರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಲಾಠಿ ಬೀಸಿದ ಪೊಲೀಸರನ್ನು ಅಮಾನತುಗೊಳಿಸಲಾಗಿದೆ ಎಂದು ಉತ್ತರ ಪ್ರದೇಶ ಪೊಲೀಸ್ ಇಲಾಖೆ ಹೇಳಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಸುಮಾರು ಒಂದು ನಿಮಿಷದ ಅವಧಿಯ ವಿಡಿಯೊ ಕ್ಲಿಪ್‌ನಲ್ಲಿ ಸ್ಥಳೀಯ ಪೋಲೀಸ್ ಠಾಣೆ ಇನ್ಸ್‌ಪೆಕ್ಟರ್ ಮೊದಲು ಆ ವ್ಯಕ್ತಿಯನ್ನು ಲಾಠಿಯಿಂದ ಥಳಿಸುತ್ತಿರುವುದು ಕಾಣಿಸುತ್ತದೆ. ಕಾನ್ಪುರ ದೇಹತ್‌ನ ಅಕ್ಬರ್‌ಪುರ ಪಟ್ಟಣದ ಜಿಲ್ಲಾ ಆಸ್ಪತ್ರೆಯಲ್ಲಿ ಗುರುವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಈ ವಿಡಿಯೊದಲ್ಲಿ ಮಗುವನ್ನು ನೋಯಿಸಬೇಡಿ ಎಂದು ವ್ಯಕ್ತಿ ಪೊಲೀಸರಿಗೆ ಮನವಿ ಮಾಡುವುದನ್ನು ಕೇಳಬಹುದು. “ಬಚ್ಚೆ ಕೊ ಲಗ್ ಜಾಯೇಗಿ (ಮಗುವಿಗೆ ಗಾಯವಾಗುತ್ತದೆ) ಎಂದು ಆ ವ್ಯಕ್ತಿ ಪೊಲೀಸರಿಂದ ತಪ್ಪಿಸಿಕೊಂಡು ವ್ಯಕ್ತಿ ಓಡಿಹೋಗಲು ಪ್ರಯತ್ನಿಸುತ್ತಿರುವುದು ಕಾಣಿಸುತ್ತದೆ. ಪೊಲೀಸರು ಅವನನ್ನು ಬೆನ್ನಟ್ಟುತ್ತಾರೆ ಮತ್ತು ಅವರಲ್ಲಿ ಕೆಲವರು ಮಗುವನ್ನು ಬಲವಂತವಾಗಿ ಅವನಿಂದ ಎಳೆಯಲು ಪ್ರಯತ್ನಿಸುತ್ತಾರೆ. ಆ ವ್ಯಕ್ತಿ “ಇಸ್ಕಾ ಮಾ ಭೀ ನಹೀ ಹೈಂ (ಮಗುವಿಗೆ ತಾಯಿ ಇಲ್ಲ)” ಎಂದು ಹೇಳುತ್ತಿರುವುದು ವಿಡಿಯೊದಲ್ಲಿದೆ.

ಪೊಲೀಸರ ವರ್ತನೆಯನ್ನು ಸಮರ್ಥಿಸಿಕೊಂಡ ಕಾನ್ಪುರ ದೇಹತ್‌ನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ‘ಲೈಟ್ ಫೋರ್ಸ್’ ಅನ್ನು ಬಳಸಲಾಯಿತು. ಹಾಗೂ ಪೊಲೀಸರು ಮಗುವನ್ನು ರಕ್ಷಿಸಲು ಪ್ರಯತ್ನಿಸಿದರು ಎಂದು ಹೇಳಿದ್ದಾರೆ.
ಕೆಲವು ಜನರು ಈ ಪ್ರದೇಶದಲ್ಲಿ ಕಾನೂನುಬಾಹಿರ ಕಾರ್ಯವನ್ನು ಮಾಡುತ್ತಿದ್ದಾರೆ.ಆಸ್ಪತ್ರೆಯ ಹೊರ ರೋಗಿಗಳ ವಿಭಾಗವನ್ನು (ಒಪಿಡಿ) ಮುಚ್ಚಿ ರೋಗಿಗಳನ್ನು ಹೆದರಿಸುತ್ತಿದ್ದಾರೆ, ”ಎಂದು ಕಾನ್ಪುರ್ ದೇಹತ್‌ನ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಘನಶ್ಯಾಮ್ ಚೌರಾಸಿಯಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಆ ವ್ಯಕ್ತಿಯ ಸಹೋದರ, ಮುಖ್ಯ ಪ್ರಚೋದಕ, ಕಾನ್ಪುರ ದೇಹತ್‌ನ ಅಕ್ಬರ್‌ಪುರದ ಜಿಲ್ಲಾ ಆಸ್ಪತ್ರೆಯ ಉದ್ಯೋಗಿ. ಆತ ಪೊಲೀಸ್ ಇನ್‌ಸ್ಪೆಕ್ಟರ್‌ನ ಕೈಯನ್ನು ಕಚ್ಚಿದ್ದು ಉಪದ್ರವ ಮಾಡುತ್ತಿರುತ್ತಾರೆ. ಸಂತ್ರಸ್ತ ಕೂಡ ಜನರನು ಪ್ರಚೋದಿಸಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ ಎಂದು ಚೌರಾಸಿಯಾ ಹೇಳಿದ್ದಾರೆ.
ಆದಾಗ್ಯೂ, ಈ ಪ್ರದೇಶದ ಉಪ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕುಮಾರ್ ಸಿಂಗ್ ಅವರು ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಪೊಲೀಸರು ಅತಿಯಾಗಿ ಬಲಪ್ರಯೋಗ ಮಾಡಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ.

ಘಟನೆಯ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾದ ನಂತರ, ಕಾನ್ಪುರ ದೇಹತ್ ಪೊಲೀಸ್ ಟ್ವಿಟರ್ ಹ್ಯಾಂಡಲ್​​​ನಲ್ಲಿ ಘಟನೆ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಮತ್ತು ಸಂಬಂಧಪಟ್ಟ ಪೊಲೀಸ್ ಇನ್ಸ್‌ಪೆಕ್ಟರ್ ಅವರನ್ನು ಅವರ ಹುದ್ದೆಯಿಂದ ಅಮಾನತು ಮಾಡಲಾಗಿದೆ ಎಂದು ಟ್ವೀಟ್ ಮಾಡಲಾಗಿದೆ. ಇಂದು ಬೆಳಿಗ್ಗೆ, ಮತ್ತೊಂದು ಪೋಸ್ಟ್ ನಲ್ಲಿ ಕೆಲ ಪ್ರತಿಭಟನಾಕಾರರು ಜಿಲ್ಲಾ ಆಸ್ಪತ್ರೆಯ ಒಪಿಡಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು. ಮುಖ್ಯ ವೈದ್ಯಕೀಯ ಅಧೀಕ್ಷಕರ ಕೋರಿಕೆಯ ಮೇರೆಗೆ ಸುವ್ಯವಸ್ಥೆಯನ್ನು ಪುನಃಸ್ಥಾಪಿಸಲು ಹೋದಾಗ ಪೊಲೀಸರ ಮೇಲೆ ದಾಳಿ ನಡೆಸಲಾಯಿತು.ನಂತರ ಸೌಮ್ಯವಾದ ಬಲ ಪ್ರಯೋಗ ನಡೆಯಿತು. ಇದು ಪೊಲೀಸರ ಸಂವೇದನಾಶೀಲತೆಗೆ ಯಾವುದೇ ಸಮರ್ಥನೆಯಲ್ಲ ಎಂದು ಹೇಳಿಕೆಯಲ್ಲಿ ಪೊಲೀಸರು ತಿಳಿಸಿದ್ದಾರೆ.
ಪ್ರತಿಯೊಬ್ಬ ನಾಗರಿಕನ ಘನತೆಯನ್ನು ಗೌರವಿಸುವಂತೆ ಪುನರಾವರ್ತಿತ ಸೂಚನೆಗಳ ಹೊರತಾಗಿಯೂ ಪೊಲೀಸ್ ಸಿಬ್ಬಂದಿಯ ಇಂತಹ ನಡವಳಿಕೆಯು ಸ್ವೀಕಾರಾರ್ಹವಲ್ಲ” ಎಂದು ಉತ್ತರ ಪ್ರದೇಶ ಪೊಲೀಸ್‌ ಟ್ವೀಟ್ ಮಾಡಿದೆ.

ಪ್ರಮುಖ ಸುದ್ದಿ :-   ಉತ್ತಮ ಪ್ರತಿಕ್ರಿಯೆ, ಜನರು ದಾಖಲೆ ಸಂಖ್ಯೆಯಲ್ಲಿ ಎನ್‌ಡಿಎಗೆ ಮತ ಹಾಕಿದ್ದಾರೆ : ಲೋಕಸಭೆ ಚುನಾವಣೆ 1ನೇ ಹಂತದ ಮತದಾನದ ಬಗ್ಗೆ ಪ್ರಧಾನಿ ಮೋದಿ

 

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement