ತುಮಕೂರು: ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ರಾಜ್ಯ ಸರ್ಕಾರ ಸೋಮವಾರದಿಂದ ಬೆಳಗಾವಿಯಲ್ಲಿ ಆರಂಭವಾಗಲಿರುವ ಚಳಿಗಾಲದ ಅಧೀವೇಶನದಲ್ಲಿಯೇ ಮತಾಂತರ ನಿಷೇಧ ಕಾಯ್ದೆ ಮಂಡನೆ ಮಾಡಲು ಸಿದ್ಧತೆ ನಡೆಸಿದೆ.
ಈ ಮಧ್ಯೆ ತುಮುಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ರಾಜ್ಯ ಕಾನೂನು ಸಚಿವ ಜೆ.ಮಾಧುಸ್ವಾಮಿ
ವಿವಾಹ ನೋಂದಣಿ ಮಾಡುವಂತೆ ಮತಾಂತರವನ್ನು ಕೂಡ ನೋಂದಣಿ ಮಾಡುವಂತಹ ಪದ್ಧತಿಯನ್ನು ಮತಾಂತರ ನಿಷೇಧ ಕಾಯ್ದೆಯಲ್ಲಿ ತರುವ ಚಿಂತನೆ ನಡೆದಿದೆ ಎಂದು ಹೇಳಿದ್ದಾರೆ.
ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯ್ದೆಯನ್ನು ಮಂಡಿಸಲಾಗುವುದು. ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಲು ತೀರ್ಮಾನಿಸಲಾಗಿದೆ. ಆದರೆ ಯಾರಿಗೂ ನೋವಾಗದ, ಅಡಚಣೆಯಾಗದ ರೀತಿಯಲ್ಲಿ ಕಾಯ್ದೆ ಇರಬೇಕು ಎಂದು ಯೋಚಿಸಿದ್ದೇವೆ ಎಂದರು.
ಮತಾಂತರ ನಿಷೇಧ ಕಾಯ್ದೆ ಈಗಾಗಲೇ ಅಸ್ತಿತ್ವದಲ್ಲಿದ್ದು, ಈಗಿರುವ ಕಾನೂನಿನಲ್ಲಿ ಬಲವಂತದ ಮತಾಂತರ ಶಿಕ್ಷಾರ್ಹ ಅಪರಾಧ ಎಂಬ ಉಲ್ಲೇಖವಿದೆ. ಇದಕ್ಕೆ ಇನ್ನಷ್ಟು ಬಲ ತುಂಬುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಮದುವೆ ನೋಂದಣಿ ಪ್ರಕ್ರಿಯೆಯಲ್ಲಿ ಹೇಗೆ ನೋಟಿಸ್ ಬೋರ್ಡಿಗೆ ವಿವಾಹಿತರ ವಿವರ ಹಾಕುತ್ತೇವೆಯೋ ಅದೇರೀತಿ ಮತಾಂತರಗೊಂಡವರ ವಿವರವನ್ನೂ ನೋಟಿಸ್ ಬೋರ್ಡ್‍ಗೆ ಹಾಕಿ ಆಕ್ಷೇಪಣೆಗೆ ಸಮಯವಕಾಶ ಕೊಡಲಾಗುತ್ತದೆ. ಯಾವುದೇ ಆಕ್ಷೇಪಣೆ ಇಲ್ಲದಿದ್ದರೆ ಅಂಥವರ ಅರ್ಜಿಯನ್ನು ಪುರಸ್ಕರಿಸಲಾಗುತ್ತದೆ ಎಂದು ಹೇಳಿದರು.
ಬಲವಂತ ಹಾಗೂ ಆಮಿಷ ಒಡ್ಡಿ ಮತಾಂತರ ಮಾಡುವುದನ್ನು ನಿಷೇಧಿಸಲಾಗುತ್ತದೆ. ಸ್ವಯಂಪ್ರೇರಿತ ಮತಾಂತರದ ರೂಪುರೇಷೆ ಬಗ್ಗೆ ವಿವರಿಸಲು ಮತ್ತು ಮತಾಂತರ ಆಗುವವರು ಅರ್ಜಿ ಸಲ್ಲಿಸಲು ಅಗತ್ಯ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದು ಹೇಳಿದರು.
ಮತಾಂತರಕ್ಕೆ ಅರ್ಜಿ ಸಲ್ಲಿಸಿದವರು ತಾವು ಬಲವಂತದಿಂದ ಮತಾಂತರವಾಗುತ್ತಿಲ್ಲ ಎಂಬುದನ್ನು ಜಿಲ್ಲಾಧಿಕಾರಿಗಳ ಮುಂದೆ ನಿರೂಪಿಸಬೇಕಾಗುತ್ತದೆ. ಇದು ಮನವರಿಕೆಯಾದ ನಂತರ ಜಿಲ್ಲಾಧಿಕಾರಿಗಳು ಅರ್ಜಿಯನ್ನು ಪುರಸ್ಕರಿಸುವ ಅಥವಾ ತಿರಸ್ಕರಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ. ಮತಾಂತರಕ್ಕೆ ಒಪ್ಪಿರುವ ಜನರ ಪರವಾಗಿ ಸಂಘ-ಸಂಸ್ಥೆಗಳೂ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಅವರು ತಿಳಿಸಿದರು.
ಇಂಥ ಕೃತ್ಯಗಳಲ್ಲಿ ತೊಡಗುವವರಿಗೆ ಯಾವ ರೀತಿಯ ಶಿಕ್ಷೆ ಕೊಡಬೇಕು ಎಂಬ ಬಗ್ಗೆ ಚರ್ಚೆಗಳು ನಡೆಯಬೇಕಿದೆ ಎಂದು ಹೇಳಿದರು.
ಒಮ್ಮೆ ಮತಾಂತರಗೊಂಡ ವ್ಯಕ್ತಿಯು ತನ್ನ ಮೂಲ ಜಾತಿ ಮತ್ತು ಧರ್ಮವನ್ನು ಕಳೆದುಕೊಳ್ಳುತ್ತಾನೆ. ಮದುವೆ ನೋಂದಣಿ ಮಾಡುವ ರೀತಿಯಲ್ಲಿಯೇ ಮತಾಂತರವನ್ನೂ ನೋಂದಣಿ ಮಾಡಲಾಗುತ್ತದೆ. ಮತಾಂತರಗೊಂಡ ವ್ಯಕ್ತಿಯ ಹೆಸರನ್ನು ನೊಟೀಸ್ ಬೋರ್ಡ್ನಲ್ಲಿ ಪ್ರಕಟಿಸಲಾಗುತ್ತದೆ. ಯಾವುದೇ ದೂರು ಆಕ್ಷೇಪ ಇಲ್ಲದಿದ್ದರೆ ಮತಾಂತರದ ಅರ್ಜಿಯನ್ನು ಪುರಸ್ಕರಿಸಲಾಗುತ್ತದೆ. ಪರಿಶಿಷ್ಟ ಜಾತಿಯ ವ್ಯಕ್ತಿಯು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡರೆ ಕಾಯ್ದೆ ಪ್ರಕಾರ ಅಂಥವರನ್ನು ಅಲ್ಪಸಂಖ್ಯಾತ ಎಂದು ಗುರುತಿಸಲಾಗುತ್ತದೆ. ಅವರ ಮೂಲ ಜಾತಿ ಪ್ರಮಾಣಪತ್ರವೂ ಬದಲಾಗುತ್ತದೆ ಎಂದು ತಿಳಿಸಿದರು.
ನಿಮ್ಮ ಕಾಮೆಂಟ್ ಬರೆಯಿರಿ