ಭಾರತದಿಂದ ದೂರ ಹೋದವರಲ್ಲಿಯೂ ಭಾರತೀಯತೆ ಸದಾ ಜಾಗೃತ : ರಘುನಂದನಜಿ

ಬೆಳಗಾವಿ : ಭಾರತೀಯರು ಅನೇಕ ಕಾರಣಗಳಿಂದ ಜಗತ್ತಿನ ಇತರ ದೇಶಗಳಿಗೆ ವಲಸೆ ಹೋಗುತ್ತಾರೆ. ಅಲ್ಲೇ ಉದ್ಯೋಗದಲ್ಲಿ ನಿರತರಾಗಿ ಆ ದೇಶದ ಪೌರತ್ವವನ್ನು ಪಡೆದುಕೊಳ್ಳುತ್ತಾರೆ. ಆದರೆ, ಅವರಲ್ಲಿ ಸದಾ ಭಾರತೀಯತೆ ಜಾಗೃತವಾಗಿರುತ್ತದೆ ಎಂದು ಪ್ರಜ್ಞಾ ಪ್ರವಾಹ ವೈಚಾರಿಕೆ ವೇದಿಕೆ, ದಕ್ಷಿಣ ಮಧ್ಯ ಕ್ಷೇತ್ರದ ಸಂಯೋಜಕ ರಘುನಂದನಜಿ ಅಭಿಪ್ರಾಯಪಟ್ಟರು.
ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪಂಡಿತ ದೀನದಯಾಳ ಉಪಾಧ್ಯಾಯ ಅಧ್ಯಯನ ಪೀಠ ಮತ್ತು ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯ, ಬೆಳಗಾವಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ಆಯೋಜಿಸಿದ್ದ “ಸ್ವರಾಜ್ಯ-೭೫” ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ರಘುನಂದನಜಿ ಅವರು ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯೋತ್ತರ ಭಾರತದ ಚಾರಿತ್ರಿಕ ಹೆಜ್ಜೆಗಳ ಕುರಿತು ಮಾತನಾಡಿದರು.
ಸ್ವಾತಂತ್ರ್ಯ ಸಂಗ್ರಾಮ ಚಳವಳಿಯಲ್ಲಿ ಸಾಧು-ಸಂತರಾದಿಯಾಗಿ ಶ್ರೀಸಾಮಾನ್ಯರು ಸಕ್ರಿಯವಾಗಿ ಭಾಗವಹಿಸಿದ್ದರು. ಸ್ವಾಮಿ ವಿವೇಕಾನಂದರು ಭಾರತ ಸ್ವಾತಂತ್ರ್ಯ ಹೋರಾಟಕ್ಕೆ ಒಂದು ಭೂಮಿಕೆ ಒದಗಿಸಿಕೊಟ್ಟರು. ಅವರಿಂದ ಸ್ಫೂರ್ತಿಗೊಂಡ ತರುಣಾದಿಯಾದಿಯಾಗಿ ಎಲ್ಲರೂ ಸ್ವಾತಂತ್ರ್ಯ ಚಳುವಳಿಯಲ್ಲಿ ಧುಮುಕಿದರು. ಅಂದಿನ ಬ್ರಿಟಿಷರ ಭಾರತಕ್ಕಿಂತ ಇಂದಿನ ಭಾರತವು ವೈಜ್ಞಾನಿಕ, ಆರ್ಥಿಕ, ಶೈಕ್ಷಣಿಕ, ಔದ್ಯಮಿಕ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತ ಜಗತ್ತಿನೊಂದಿಗೆ ಸರಿಸಮಾನವಾಗಿ ಹೆಜ್ಜೆ ಹಾಕುತ್ತಿದೆ. ಭಾರತದ ಕಡೆಗೆ ಈಗ ವಿಶ್ವವು ತಿರುಗಿ ನೋಡುತ್ತಿದೆ ಎಂದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಂ.ರಾಮಚಂದ್ರ ಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾರತದ ಮೇಲೆ ೧೩೦೦ ವರ್ಷಗಳವರೆಗೆ ವಿದೇಶಿಗರು ದಾಳಿ ನಡೆಸಿದರು. ಆದರೆ, ಭಾರತಕ್ಕೆ ಏನೂ ಆಗಿಲ್ಲ. ಮುಂದೆಯೂ ಏನು ಆಗುವುದಿಲ್ಲ ಎಂದು ಭಾರತದ ಅಂತಸತ್ವದ ಕುರಿತು ಮಾತನಾಡಿದರು.
ಎಲ್ಲಿಯ ವರೆಗೆ ಜಗತ್ತು ಇರುತ್ತದೆಯೋ ಅಲ್ಲಿಯವರೆಗೆ ಭಾರತ ಇರುತ್ತದೆ. ಯಾರಿಂದಲೂ ಭಾರತವನ್ನು ನಾಶಗೊಳಿಸಲು ಸಾಧ್ಯವಿಲ್ಲ.
ಸ್ವಾತಂತ್ರ್ಯೋತ್ತರ ಭಾರತವು ಅನೇಕ ಬದಲಾವಣೆಗಳನ್ನು ಕಂಡಿದೆ. ಎಲ್ಲಾ ಕ್ಷೇತ್ರಗಳಲ್ಲಿ ಮುನ್ನುಗ್ಗುತ್ತಿರುವ ಭಾರತ ಮುಂಬರುವ ದಿನಗಳಲ್ಲಿ ಸೂಪರ್ ಪವರ್ ಆಗಲಿದೆ. ಪಂ. ದೀನದಯಾಳರಾದಿಯಾಗಿ ಅನೇಕ ಮಹಾಪುರುಷರು ಭಾರತವನ್ನು ಸ್ವಾತಂತ್ರ್ಯಗೊಳಿಸಿ, ಸಶಕ್ತಗೊಳಿಸಲು ಶ್ರಮಿಸಿದ್ದಾರೆ. ಡಾ. ಬಾಬಾ ಸಾಹೇಬ ಅಂಬೇಡ್ಕರ ಅವರು ಅತ್ಯುತ್ತಮವಾದ ಸಂವಿಧಾನವನ್ನು ಈ ದೇಶಕ್ಕೆ ನೀಡಿದ್ದಾರೆ. ಅವರೆಲ್ಲರ ತ್ಯಾಗದ ಫಲಶ್ರುತಿಯಾಗಿ ನಾವು ಇಂದು ಈ ಸುಂದರ ಭಾರತವನ್ನು ಕಾಣುತ್ತೇವೆ. ಇವರೆಲ್ಲರನ್ನು ನಾವು ಸದಾ ಸ್ಮರಿಸಿಕೊಳ್ಳಬೇಕು ಎಂದರು.
ಕುಲಸಚಿವ ಪ್ರೊ. ಬಸವರಾಜ ಪದ್ಮಶಾಲಿ ಮಾತನಾಡಿದರು. ಮೌಲ್ಯಮಾಪನ ಕುಲಸಚಿವ ಪ್ರೊ. ಎಸ್. ಎಂ. ಹುರಕಡ್ಲಿ ಉಪಸ್ಥಿತರಿದ್ದರು.
ದೀನದಯಾಳ ಉಪಾಧ್ಯಾಯ ಅಧ್ಯಯನ ಪೀಠದಿಂದ ಆಯೋಜಿಸಲಾಗುವ ಕಾರ್ಯಕ್ರಮದ ಕಾರ್ಯಸೂಚಿಗಳ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.
ಪಂಡಿತ ದೀನದಯಾಳ ಉಪಾಧ್ಯಾಯ ಅಧ್ಯಯನ ಪೀಠದ ಸಂಯೋಜಕ ಡಾ. ಪ್ರಕಾಶ ಕಟ್ಟಿಮನಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮಹಾವಿದ್ಯಾಲಯದ ಪ್ರಭಾರ ಪ್ರಾಚಾರ್ಯ ಆದಿನಾಥ ಉಪಾಧ್ಯೆ ಸ್ವಾಗತಿಸಿ ಪರಿಚಯಿಸಿದರು. ಕೃಷ್ಣ ಮುಳ್ಳೂರ ಹಾಗೂ ಸಂಗಡಿಗರು ದೇಶಭಕ್ತಿ ಗೀತೆ ಹಾಡಿದರು. ಸಂತೋಷ ಸೊಗಲದ “ವಂದೇ ಮಾತರಂ” ಹಾಡಿದರು. ಡಾ. ನಾರಾಯಣ ನಾಯ್ಕ ವಂದಿಸಿದರು. ಡಾ. ಹನಮಂತಪ್ಪ ಸಂಜೀವಣ್ಣನವರ್ ನಿರೂಪಿಸಿದರು. ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು, ಕಾರ್ಯಕ್ರಮದಲ್ಲಿದ್ದರು.

ಪ್ರಮುಖ ಸುದ್ದಿ :-   ಕರ್ನಾಟಕದಲ್ಲಿ ಪೂರ್ವ ಮುಂಗಾರು ಚುರುಕು; ಏಪ್ರಿಲ್‌ 19 ರಿಂದ ಮೂರು ದಿನ ಈ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement