ಶಿವಾಜಿ -ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪುತ್ಥಳಿಗಳಿಗೆ ಅಪಮಾನ ಖಂಡಿಸಿ ನಾಳೆ ಹಳಿಯಾಳ ಬಂದ್‌

ಹಳಿಯಾಳ : ಹಿಂದವಿ ಸ್ವರಾಜ್ಯ ಸಂಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜ ಹಾಗೂ ಕ್ರಾಂತಿ ವೀರ ಸಂಗೋಳ್ಳಿ ರಾಯಣ್ಣ ಪುತ್ಥಳಿಗಳಿಗೆ ಅಪಮಾನ ಮಾಡಿರುವುದನ್ನು ಹಾಗೂ ಮಹಾರಾಷ್ಟ್ರದಲ್ಲಿ ಕನ್ನಡ ಧ್ವಜವನ್ನು ಸುಟ್ಟಿರುವುದನ್ನು ಖಂಡಿಸಿ ಸೋಮವಾರ ಹಳಿಯಾಳ ಸ್ವಯಂಪ್ರೇರಿತ ಬಂದ್‌ಗೆ ಕರೆ ನೀಡಲಾಗಿದೆ.
ಪಟ್ಟಣದ ಮರಾಠಾ ಭವನದಲ್ಲಿ ಶನಿವಾರ ಮತ್ತು ಭಾನುವಾರ ಸಾಯಂಕಾಲ ಎರಡು ದಿನಗಳು ನಡೆದ ಸುದೀರ್ಘ ಚರ್ಚೆಯ ಬಳಿಕ ಸಾಯಂಕಾಲ ಈ ತೀರ್ಮಾನಕ್ಕೆ ಬರಲಾಗಿದೆ ಎಂದು ಕರ್ನಾಟಕ ಕ್ಷತ್ರೀಯ ಮರಾಠಾ ಪರಿಷತ್ ಜಿಲ್ಲಾಧ್ಯಕ್ಷ ಸಂದಿಪಕುಮಾರ ಬೋಬಾಟೆ, ಜೀಜಾಮಾತಾ ಕ್ಷತ್ರೀಯ ಮರಾಠಾ ಮಂಡಳದ ಅಧ್ಯಕ್ಷೆ ಮಂಗಲಾ ಕಶೀಲಕರ ತಿಳಿಸಿದ್ದಾರೆ.
ದೇಶಕ್ಕಾಗಿ ಹೋರಾಡಿದ ಮಹಾನ್ ಪುರುಷರಾದ ಶಿವಾಜಿ ಮಹಾರಾಜರು ಹಾಗೂ ಸಂಗೊಳ್ಳಿ ರಾಯಣ್ಣ ಪುತ್ಥಳಿಗಳಿಗೆ ಮಸಿ ಬಳಿದಿರುವ ಕೃತ್ಯ, ಎಂಇಎಸ್ ಪುಂಡಾಟಿಕೆ, ನಾಡ ಧ್ವಜ ಸುಟ್ಟಿರುವುದನ್ನು ಸಭೆಯಲ್ಲಿ ತೀವ್ರವಾಗಿ ಖಂಡಿಸಲಾಯಿತು.
ಸೋಮವಾರ ಅರ್ಧದಿನ ಸ್ವಯಂಪ್ರೇರಿತ ಬಂದ್ ಮಾಡಿ ಮಹಾಪುರುಷರ ಪುತ್ಥಳಿಗಳಿಗೆ ಮಾಡಲಾದ ಅಪಮಾನವನ್ನು ಖಂಡಿಸಬೇಕೆಂದು ಕರೆ ನೀಡಿರುವ ವಿವಿಧ ಸಂಘಟನೆಗಳು ಪ್ರತಿಭಟನೆಯಲ್ಲಿ ಶಿವಾಜಿ ಹಾಗೂ ಸಂಗೊಳ್ಳಿ ರಾಯಣ್ಣ ಮೂರ್ತಿಗೆ ಕ್ಷೀರಾಭಿಷೇಕ ಮಾಡುವ ಮೂಲಕ ವಿಶೇಷ ಪೂಜೆ ಸಲ್ಲಿಸುವುದು ಬಳಿಕ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸುವ ಕುರಿತು ತೀರ್ಮಾನ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್. ಎಲ್. ಘೋಟ್ನೇಕರ, ಕೆಕೆಎಂಪಿ ರಾಜ್ಯ ಉಪಾಧ್ಯಕ್ಷ ಎನ್. ಎಸ್. ಜಿವೋಜಿ, ಪ್ರಮುಖರಾದ ಅಪ್ಪಾರಾವ ಪೂಜಾರಿ, ಯಲ್ಲಪ್ಪ ಮಾಲವಣಕರ, ಗಣಪತಿ ಕರಂಜೆಕರ, ಚಂದ್ರಕಾಂತ ಕಮ್ಮಾರ, ಚೂಡಪ್ಪ ಬೊಬಾಟಿ ಮೊದಲಾದವರು ಇದ್ದರು.

ಪ್ರಮುಖ ಸುದ್ದಿ :-   ದೇಶದಲ್ಲಿ ಮೊದಲ ಬಾರಿಗೆ ಜಾತಿಗಣತಿ ಕೈಗೊಂಡಿದ್ದು ಕಾಂಗ್ರೆಸ್ ಸರ್ಕಾರ ; ಬಿಜೆಪಿ ವಿರುದ್ಧ ವಸಂತ ಲದವಾ ವಾಗ್ದಾಳಿ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement