
ಹುಬ್ಬಳ್ಳಿ : ಸ್ವಾತಂತ್ರ್ಯ ಬಂದ ನಂತರ ಮೊದಲ ಬಾರಿಗೆ ಜಾತಿಗಣತಿ ಕೈಗೊಂಡಿದ್ದು ಕಾಂಗ್ರೆಸ್ ಸರ್ಕಾರವೇ ಹೊರತು ಬಿಜೆಪಿ ಸರ್ಕಾರ ಅಲ್ಲ ಎಂದು ಕಾಂಗ್ರೆಸ್ ವಕ್ತಾರ ವಸಂತ ಲದವಾ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ೨೦೧೧ರಲ್ಲಿ ಭಾರತದ ಸಾಮಾಜಿಕ, ಆರ್ಥಿಕ ಜಾತಿ ಗಣತಿ ನಡೆಸಲಾಗಿದೆ. ೨೦೧೦ರಲ್ಲಿ ಸಂಸತ್ತಿನ ಉಭಯ ಸದನಗಳಲ್ಲಿ ಚರ್ಚೆಯ ನಂತರ ಕೈಗೊಳ್ಳಲು ಮನಮೋಹನ ಸಿಂಗ ನೇತೃತ್ವದ ಕಾಂಗ್ರೆಸ್ ಸರ್ಕಾರ ಅನುಮೋದಿಸಿತ್ತು ಎಂದು ಹೇಳಿದ್ದಾರೆ.
ದೇಶಾದ್ಯಂತ ಮನೆ ಮನೆಗೆ ತೆರಳಿ ಗಣತಿ ನಡೆಸಲಾಗಿದೆ, ತ್ರಿಪುರಾದ ಹಜೆಮೂರಾ ಬ್ಲಾಕ್‌ನ ಸಂಖೋಲಾ ಗ್ರಾಮದಿಂದ ಜೂನ್ ೨೯, ೨೦೧೧ರಂದು ಜಾತಿಗಣತಿ ಪ್ರಾರಂಭಿಸಿತ್ತು. ದೇಶದ ೬೪೦ ಜಿಲ್ಲೆಗಳಲ್ಲಿ ಎಲೆಕ್ಟ್ರಾನಿಕ್ ಸಾಧನಗಳನ್ನು ಬಳಸಿ ನಡೆಸಿದ ಭಾರತದ ಮೊದಲ ಕಾಗದ ರಹಿತ ಜಾತಿಗಣತಿ ಅದಾಗಿತ್ತು. ದತ್ತಾಂಶ ನೀತಿ ಆಯೋಗದ ಉಪಾಧ್ಯಕ್ಷ ಅರವಿಂದ ಪನಗರಿಯಾ ನೇತೃತ್ವದ ತಜ್ಞರ ಗುಂಪು ಕಾರ್ಯನಿರ್ವಹಿಸಿತ್ತು. ಭಾರತದಲ್ಲಿ ಸಾಮಾಜಿಕ, ಆರ್ಥಿಕ ಜಾತಿಗಣತಿ ಅಂಕಿ ಸಂಖ್ಯೆ ಮಾಹಿತಿ ಸಂಗ್ರಹಿಸಿದ ಪ್ರಥಮ ಸಮೀಕ್ಷೆ ಇದಾಗಿತ್ತು. ಇದು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆದಿತ್ತು. ಆದರೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಲ್ಲ ಎಂದು ಅವರು ಹೇಳಿದ್ದಾರೆ.

ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆ ಮತ್ತು ದೀನದಯಾಳ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆಗಳಿಗೆ ೨೦೧೧ರ ಗಣತಿ ದತ್ತಾಂಶ ಬಳಸಲಾಗಿತ್ತು. ದತ್ತಾಂಶವನ್ನು ೨೦೧೪ರಲ್ಲಿ ಎಲ್ಲ ರಾಜ್ಯಗಳಿಗೆ ಕಳುಹಿಸಲಾಗಿತ್ತೆಂದು ವರದಿ ಸಹ ಆಗಿದೆ. ಕಾಂಗ್ರೆಸ್ ಸರ್ಕಾರದ ಈ ಬೃಹತ್ ಸಾಧನೆ ಮರೆಮಾಚಲು ಇತಿಹಾಸದ ಪುಟಗಳನ್ನು ನೋಡದೇ ಬಿಜೆಪಿ ಸತ್ಯಕ್ಕೆ ದೂರವಾದ ಹೇಳಿಕೆ ಕೊಡುತ್ತಿದೆ ಎಂದು ವಸಂತ ಲದವಾ ತೀವ್ರ ವಾಗ್ದಾಳಿ ನಡಸಿದ್ದಾರೆ.
ದೇಶದ ಪ್ರಪ್ರಥಮ ಹಿಂದುಳಿದ ವರ್ಗಗಳ ಆಯೋಗ ಸ್ಥಾಪಿಸಿದ್ದು ಅಂದಿನ ಪ್ರಧಾನಮಂತ್ರಿ ಜವಾಹರಲಾಲ ನೆಹರು ಅವರು. ೧೯೫೩ರಲ್ಲಿ ಕಾಕಾಕಾಲೇಲ್ಕರ ನೇತೃತ್ವದಲ್ಲಿ ಸಂವಿಧಾನದ ವಿಧಿ ೩೪೦ರ ಅಡಿಯಲ್ಲಿ ಸ್ಥಾಪಿಸಿದ್ದು ಕಾಂಗ್ರೆಸ್ ಸರ್ಕಾರವೇ. ಈ ಆಯೋಗವು ತಮ್ಮ ವರದಿಯನ್ನು ಮಾರ್ಚ್ ೩೦, ೧೯೫೫ರಲ್ಲಿ ಕೇವಲ ೨ ವರ್ಷಗಳಲ್ಲಿ ಸರ್ಕಾರಕ್ಕೆ ತಮ್ಮ ವರದಿ ಸಲ್ಲಿಸಿತ್ತು. ಆಗಲೂ ಸಹ ಈ ವರದಿ ಇದೇ ಪಕ್ಷ ಅನುಷ್ಠಾನಕ್ಕೆ ವಿರೋಧ ವ್ಯಕ್ತಪಡಿಸಿತ್ತು ಎಂದು ಹೇಳಿದ್ದಾರೆ.
ನಂತರ ಬಿಜೆಪಿ ಬೆಂಬಲದೊಂದಿಗೆ ಅಧಿಕಾರಕ್ಕೆ ಬಂದ ವಿ.ಪಿ. ಸಿಂಗ್ ನೇತೃತ್ವದ ಸರ್ಕಾರ ಮಂಡಲ ಆಯೋಗ ನೇಮಿಸಿತ್ತು. ಅಂದೂ ಸಹ ಇದಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸಿ ಸರ್ಕಾರಕ್ಕೆ ನೀಡಿದ ಬೆಂಬಲ ಬಿಜೆಪಿ ಹಿಂಪಡೆದ ಕಾರಣ ಅಂದಿನ ವಿ. ಪಿ. ಸಿಂಗ್ ಸರ್ಕಾರ ಪತನಗೊಂಡಿತ್ತು. ಇದಕ್ಕೂ ವಿರೋಧ ವ್ಯಕ್ತಪಡಿಸಿದ್ದು ಬಿಜೆಪಿ ಎಂದು ವಸಂತ ಲದವಾ ಹೇಳಿದ್ದಾರೆ.
ಸಾಮಾಜಿಕ ನ್ಯಾಯ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳನ್ನು ಸುಧಾರಿಸಲು ಹಿಂದುಳಿದ ವರ್ಗಗಳಿಗೆ ಮೀಸಲಾತಿ ಇತರ ಸೌಲಭ್ಯಗಳನ್ನು ನಿಗದಿಪಡಿಸಲು,
ಅಸಮಾನತೆ ನಿವಾರಿಸಲು ಸಂವಿಧಾನದ ಮತ್ತು ಕಾನೂನುಗಳ ಮೂಲಕ ಕಾಂಗ್ರೆಸ್ ಧೃಢ ಸಂಕಲ್ಪದೊಂದಿಗೆ ನಿರಂತರವಾಗಿ ಶ್ರಮಿಸುತ್ತಿದೆ. ರಾಜ್ಯದಲ್ಲಿಯೂ ಆಯೋಗಗಳ ಸ್ಥಾಪನೆಯಲ್ಲಿ ಕಾಂಗ್ರೆಸ್ ಮುಂಚೂಣಿಯಲ್ಲಿದೆ ಎಂದು ವಸಂತ ಲದವಾ ತಿಳಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ