ಪಾಕಿಸ್ತಾನದಲ್ಲಿ ಮತ್ತೊಂದು ಹಿಂದು ದೇವಸ್ಥಾನ ಧ್ವಂಸ; ದೇವಿ ಮೂರ್ತಿಗೆ ಹಾನಿ ಮಾಡಿದ ದುಷ್ಕರ್ಮಿ

ಪಾಕಿಸ್ತಾನದ ಕರಾಚಿಯಲ್ಲಿ ಹಿಂದೂ ದೇವಾಲಯಕ್ಕೆ ನುಗ್ಗಿ ಧ್ವಂಸ ಮಾಡಿದ ವ್ಯಕ್ತಿಯನ್ನು ಸೋಮವಾರ ಬಂಧಿಸಲಾಗಿದೆ. ವ್ಯಕ್ತಿ ಸಂಜೆ ಕರಾಚಿಯ ರಾಂಚೋರ್ ಲೈನ್ ಪ್ರದೇಶದ ಹಿಂದೂ ದೇವಾಲಯಕ್ಕೆ ಪ್ರವೇಶಿಸಿ ಹಿಂದೂ ದೇವತೆ ಜೋಗ್ ಮಾಯಾ ಅವರ ಪ್ರತಿಮೆಯನ್ನು ಸುತ್ತಿಗೆಯನ್ನು ಬಳಸಿ ಹಾನಿಗೊಳಿಸಿದ್ದಾನೆ ಎಂದು ಪಾಕಿಸ್ತಾನಿ ಉರ್ದು ಭಾಷೆಯ ಸುದ್ದಿ ವಾಹಿನಿ ನೆಟ್‌ವರ್ಕ್ ಸಮಾ ಟಿವಿ ವರದಿ ಮಾಡಿದೆ.
ಆತನನ್ನು ಸ್ಥಳೀಯರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯ ಆರೋಪಿಯ ವಿರುದ್ಧ ಧರ್ಮ ನಿಂದನೆಗೆ ಸಂಬಂಧಪಟ್ಟ ವಿವಿಧ ಸೆಕ್ಷನ್​​ಗಳಡಿ ಪ್ರಕರಣ​ ದಾಖಲಾಗಿದೆ.
ಕರಾಚಿಯಲ್ಲಿ ಹಿಂದು ದೇಗುಲವನ್ನು ಧ್ವಂಸ ಮಾಡಿದ್ದನ್ನು ಬಿಜೆಪಿ ನಾಯಕ ಮಂಜಿಂದರ್ ಸಿಂಗ್​ ಸಿರ್ಸಾ ತೀವ್ರವಾಗಿ ಖಂಡಿಸಿದ್ದಾರೆ. ಇದು ಅಲ್ಲಿನ ಸರ್ಕಾರ ಬೆಂಬಲಿತ ಕೃತ್ಯ ಎಂದು ಆರೋಪಿಸಿದ್ದಾರೆ. ಪಾಕಿಸ್ತಾನದ ಕರಾಚಿಯಲ್ಲಿದ್ದ ಮತ್ತೊಂದು ಹಿಂದು ದೇವಸ್ಥಾನವನ್ನು ನಾಶಗೊಳಿಸಲಾಗಿದೆ. ಈ ದೇವಸ್ಥಾನವಿದ್ದ ಜಾಗ ಪೂಜಾ ಸ್ಥಳವಾಗಲು ಯೋಗ್ಯವಾದುದ್ದಲ್ಲ ಎಂದು ಅದನ್ನು ನಾಶ ಮಾಡಿದವರು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಇದು ಅಲ್ಪಸಂಖ್ಯಾತರ ವಿರುದ್ಧ ಪಾಕಿಸ್ತಾನ ಸರ್ಕಾರ ಬೆಂಬಲಿತ ಭಯೋತ್ಪಾದನೆ ಎಂದು ಸಿರ್ಸಾ ಟ್ವೀಟ್ ಮಾಡಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ...| ಇಂಟರ್ನೆಟ್ ನಲ್ಲಿ ಭಾರೀ ಗಮನ ಸೆಳೆದ ರೋಬೋಟ್ ನಾಯಿ ಡ್ಯಾನ್ಸ್‌ ಮಾಡುವ ವೀಡಿಯೊ

ಪಾಕಿಸ್ತಾನದಲ್ಲಿ ಪದೇಪದೆ ಹಿಂದುಗಳ ಮೇಲೆ ಆಕ್ರಮಣ ನಡೆಯುತ್ತಿದೆ. ದೇಗುಲಗಳನ್ನು ಧ್ವಂಸ ಮಾಡಲಾಗುತ್ತಿದೆ. ಈ ವಿಚಾರವನ್ನು ಜಾಗತಿಕ ವೇದಿಕೆಯಲ್ಲಿ ಪ್ರಸ್ತುತಪಡಿಸಬೇಕು ಎಂದು ಸಿರ್ಸಾ, ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್​.ಜೈಶಂಕರ್​ರನ್ನು ಒತ್ತಾಯಿಸಿದ್ದಾರೆ. ಬರೀ ಹಿಂದುಗಳ ಮೇಲಷ್ಟೇ ಅಲ್ಲ, ಅಲ್ಲಿನ ಸಿಖ್ಖರ ಮೇಲೆ ಕೂಡ ನಿರಂತರ ಆಕ್ರಮಣ, ದೌರ್ಜನ್ಯ ನಡೆಯುತ್ತಿದೆ ಎಂದೂ ಆರೋಪಿಸಿದ್ದಾರೆ. ಅಕ್ಟೋಬರ್​ನಲ್ಲಿ ಸಿಂಧ್​ ಪ್ರಾಂತ್ಯದಲ್ಲಿರುವ ಹನುಮಾನ್​ ದೇವಿ ಮಠ ಮಂದಿರವನ್ನು ಅಪರಿಚಿತ ದುಷ್ಕರ್ಮಿಗಳ ಗುಂಪೊಂದು ಅಪವಿತ್ರಗೊಳಿಸಿತ್ತು. ಆ ಮಂದಿರದ ಲಾಕ್​ನ್ನು ಮುರಿದು ನಗದು, ಆಭರಣಗಳನ್ನು ಕಳವು ಮಾಡಿದ್ದರು. ದೇವಿಯ ಕುತ್ತಿಗೆಯಲ್ಲಿದ್ದ ಬೆಳ್ಳಿ ನೆಕ್ಲೆಸ್​​ನ್ನು ಕೂಡ ಕಳವು ಮಾಡಿದ್ದರು. ಕಾಣಿಕೆ ಡಬ್ಬವನ್ನು ಹೊತ್ತೊಯ್ದಿದ್ದರು.

ಆಗಸ್ಟ್​ನಲ್ಲಿ ಪಾಕಿಸ್ತಾನದಲ್ಲಿ ಇಂಥದ್ದೇ ಘಟನೆ ನಡೆದಿತ್ತು. ರಹೀಮ್​ ಖಾನ್ ಯಾರ್​ ಖಾನ್​ ಜಿಲ್ಲೆಯಲ್ಲಿರುವ, ಭೋಂಗ್​ ನಗರದಲ್ಲಿದ್ದ ಈ ಸಿದ್ಧಿವಿನಾಯಕ ದೇವಸ್ಥಾನವನ್ನು ಧ್ವಂಸಗೊಳಿಸಲಾಗಿತ್ತು. ಮುಸ್ಲಿಮರ ಗುಂಪೊಂದು ದೇವರ ವಿಗ್ರಹವನ್ನು ಗರ್ಭಗುಡಿಯಿಂದ ತೆಗೆದು, ಅದನ್ನು ಬೆಂಕಿಯಿಂದ ಸುಟ್ಟಿದ ವಿಡಿಯೋಗಳು ಸಿಕ್ಕಾಪಟೆ ವೈರಲ್ ಆಗಿದ್ದವು. ಘಟನೆಗೆ ತೀವ್ರ ಖಂಡನೆ ವ್ಯಕ್ತವಾಗಿತ್ತು. ಘಟನೆಯಲ್ಲಿ ಭಾಗಿಯಾಗಿದ್ದ 20 ಜನರನ್ನು ಬಂಧಿಸಿ, 150 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದೇ ವಿಚಾರವಾಗಿ ಪಾಕ್​ ಸುಪ್ರೀಂಕೋರ್ಟ್​ ಕೂಡ ಪೊಲೀಸರಿಗೆ ಛೀಮಾರಿ ಹಾಕಿತ್ತು. ಇಷ್ಟೆಲ್ಲ ಆದರೂ ಪಾಕಿಸ್ತಾನದಲ್ಲಿ ಹಿಂದು ದೇಗುಲಗಳ ರಕ್ಷಣೆಗೆ ಯಾವುದೇ ಕ್ರಮಗಳನ್ನೂ ಕೈಗೊಳ್ಳುತ್ತಿಲ್ಲ ಎಂಬುದು ಪದೇಪದೆ ಸಾಬೀತಾಗುತ್ತಿದೆ.

ಪ್ರಮುಖ ಸುದ್ದಿ :-   ವೀಡಿಯೊ...| ಇಂಟರ್ನೆಟ್ ನಲ್ಲಿ ಭಾರೀ ಗಮನ ಸೆಳೆದ ರೋಬೋಟ್ ನಾಯಿ ಡ್ಯಾನ್ಸ್‌ ಮಾಡುವ ವೀಡಿಯೊ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement