ವ್ಯಕ್ತಿಯ ವಿಶಿಷ್ಟ ಹೋರಾಟ..ಅಪಘಾತದಲ್ಲಿ ನಾಯಿ ಸಾವು : ಸತತ 9 ವರ್ಷಗಳ ಕಾನೂನು ಹೋರಾಟದಲ್ಲಿ ಜಯ…3 ಲಕ್ಷ ರೂ. ಪರಿಹಾರ…!

ಮಹಾರಾಷ್ಟ್ರ: ತನ್ನ ಸಾಕು ನಾಯಿ ಅಪಘಾತದಲ್ಲಿ ಮೃತಪಟ್ಟ ಪ್ರಕರಣದಲ್ಲಿ ಮಹಾರಾಷ್ಟ್ರದ ಚಂದ್ರಾಪುರದ ವ್ಯಕ್ತಿಯೊಬ್ಬರು ಸತತ 9 ವರ್ಷದ ಕಾನೂನು ಹೋರಾಟದಲ್ಲಿ ಜಯಗಳಿಸಿದ್ದಾರೆ. ಅಲ್ಲದೆ, ಕೋರ್ಟ್‌ನಿಂದ 3 ಲಕ್ಷ ರೂ.ಗಳ ಪರಿಹಾರವನ್ನೂ ಪಡೆದಿದ್ದಾರೆ…!
ಉಮೇಶ್ ಭಟ್ಕರ್ ಎಂಬವರು ಜಾನ್ ಎಂಬ ಹೆಸರಿನ ನಾಯಿ ಸಾಕಿದ್ದರು. 2013ರ ಜನವರಿ 10 ರಂದು ತಮ್ಮ ನಾಯಿಯೊಂದಿಗೆ ವಾಕಿಂಗ್‌ ಹೋಗಿದ್ದಾಗ ರಹೀಮ್ ಟ್ರಾವೆಲ್ಸ್‌ಗೆ ಸೇರಿದ ಶಾಲಾ ವಾಹನ ಡಿಕ್ಕಿ ಹೊಡೆದ ಪರಿಣಾಮ, ನಾಯಿ ಸ್ಥಳದಲ್ಲೇ ಮೃತಪಟ್ಟಿತ್ತು. ಇದು ಅದನ್ನು ಪ್ರೀತಿಯಿಂದ ಸಾಕಿದ ಉಮೇಶ್ ಭಟ್ಕರ್ ಭಾರೀ ಆಘಾತ ಉಂಟುಮಾಡಿತ್ತು. ಅಲ್ಲದೆ, ಈ ನಾಯಿಯಿಂದಲೇ ಅವರ ಮನೆಯ ಎಲ್ಲರ ಜೀವನ ನಡೆಯುತ್ತಿತ್ತು. ಯಾಕೆಂದರೆ ಆರತಿ ಇನ್ಫ್ರಾ ಎಂಬ ಕಂಪನಿಯಲ್ಲಿ ಸೆಕ್ಯುರಿಟಿ ಗಾರ್ಡ್‌ ಆಗಿ ಈ ನಾಯಿಯನ್ನು ನೇಮಿಸಿಕೊಳ್ಳಲಾಗಿತ್ತು. ಇದರಿಂದ ಉಮೇಶ್ ಭಟ್ಕರ್ ತಿಂಗಳಿಗೆ ಗೌರವ ಧನವಾಗಿ 8 ಸಾವಿರ ರೂಪಾಯಿ ಪಡೆಯುತ್ತಿದ್ದರು. ಅಪಘಾತದಲ್ಲಿ ಜಾನ್‌ ಮೃತಪಟ್ಟ ಪರಿಣಾಮ ಇವರಿಗೆ ಆರ್ಥಿಕ ಮುಗ್ಗಟು ಎದುರಿಸುವಂತಾಯಿತು. ಶಾಲಾ ಬಸ್ ಮಾಲೀಕರು ಹಾಗೂ ವಿಮಾ ಕಂಪನಿ ಪರಿಹಾರ ನೀಡುವಂತೆ ಮನವಿ ಮಾಡಿದರೂ ಸ್ಪಂದಿಸಿರಲಿಲ್ಲ. ಹೀಗಾಗಿ ಭಟ್ಕರ್‌ ಪೊಲೀಸರಿಗೆ ದೂರು ನೀಡಿದರು. ನಾಯಿಯನ್ನು ಶವಪರೀಕ್ಷೆ ಮಾಡಲಾಯಿತು. ವರದಿಯಲ್ಲಿ ಜಾನ್‌ ಅಪಘಾತದಿಂದ ಮೃತಪಟ್ಟಿರುವುದು ಸ್ಪಷ್ಟವಾಯಿತು.
ನಂತರ ಭಟ್ಕರ್ ಚಂದ್ರಾಪುರದ ಮೋಟಾರು ಅಪಘಾತ ಕ್ಲೇಮ್ಸ್ ಟ್ರಿಬ್ಯೂನಲ್‌ನಲ್ಲಿ ಪ್ರಕರಣ ದಾಖಲಿಸಿದರು. ವಿಮಾ ಕಂಪನಿ ಬಜಾಜ್ ಅಲಯನ್ಸ್, ಟ್ರಾವೆಲ್ಸ್ ಮಾಲೀಕ ಹಾಗೂ ಚಾಲಕ ಸುಧಾಕರ್ ವಿರುದ್ಧ ಮೊಕದ್ದಮೆ ಹೂಡಿದ್ದರು. ನಾಯಿಯ ಸಾವಿನಿಂದ ಆರ್ಥಿಕ ನಷ್ಟ ಉಂಟಾಗಿದೆ. ತನಗೆ 5 ಲಕ್ಷ ರೂ.ಗಳ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದರು.
ಬರೋಬ್ಬರಿ 8 ವರ್ಷ 11 ತಿಂಗಳ ಕಾಲ ವಾದ-ಪ್ರತಿವಾದಗಳನ್ನು ಆಲಿಸಿದ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಎಸ್.ಜೆ.ಅನ್ಸಾರಿ ಡಿಸೆಂಬರ್‌ 9 ರಂದು ಅರ್ಜಿದಾರರ ಪರ ತೀರ್ಪು ನೀಡಿದ್ದಾರೆ. 1.62 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶ ಮಾಡಿದ್ದಾರೆ. ಜೊತೆಗೆ ಪರಿಹಾರದ ಹಣಕ್ಕೆ ವರ್ಷಕ್ಕೆ ಶೇ.8ರಷ್ಟು ಬಡ್ಡಿ ನೀಡುವಂತೆ ಹೇಳಿದ್ದಾರೆ. ಹೀಗಾಗಿ, ಸುಮಾರು 9 ವರ್ಷಕ್ಕೆ ಉಮೇಶ್‌ ಭಟ್ಕರ್‌ ಒಟ್ಟು 3 ಲಕ್ಷ ರೂ.ಗಳ ಪರಿಹಾರ ಪಡೆದಿದ್ದಾರೆ.

ಪ್ರಮುಖ ಸುದ್ದಿ :-   127 ವರ್ಷಗಳಷ್ಟು ಹಳೆಯ ಗೋದ್ರೇಜ್ ಗ್ರುಪ್‌ ಇಬ್ಭಾಗ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement