ಉಡುಪಿ ಶ್ರೀಕೃಷ್ಣ ಮಠದ ಸ್ವಾಧೀನಕ್ಕೆ ಹಿಂದಿನ ಕಾಂಗ್ರೆಸ್ ಸರ್ಕಾರ ಆಲೋಚಿಸಿತ್ತು: ಪ್ರಮೋದ್ ಮಧ್ವರಾಜ್

ಉಡುಪಿ: ಉಡುಪಿಯ ಶ್ರೀಕೃಷ್ಣ ಮಠವನ್ನು ಸರ್ಕಾರದ ಅಧೀನಕ್ಕೆ ತೆಗೆದುಕೊಳ್ಳಬೇಕೆಂದು ಕಾಂಗ್ರೆಸ್ ಆಲೋಚನೆ ಮಾಡಿತ್ತು. ಆದರೆ ಶ್ರೀ ಕೃಷ್ಣ ಮಠಕ್ಕೆ ತೊಂದರೆಯಾದರೆ ಮೊದಲು ನಾನೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದೆ ಎಂದು ಕಾಂಗ್ರೆಸ್ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಉಡುಪಿ ಕೃಷ್ಣಮಠದ ರಾಜಾಂಗಣದಲ್ಲಿ ಅದಮಾರು ಪರ್ಯಾಯ ಸಮಾಪನ ಪ್ರಯುಕ್ತ ನಡೆಯುತ್ತಿರುವ ವಿಶ್ವಾರ್ಪಣಂ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಧ್ವಾಚಾರ್ಯರು ಪ್ರತಿಷ್ಠಾಪಿಸಿದ ಮಠಕ್ಕೆ ಎಂಟುನೂರು ವರ್ಷಗಳ ಇತಿಹಾಸವಿದೆ. ದೇಶವಿದೇಶಗಳಲ್ಲಿ ಭಕ್ತರನ್ನು ಹೊಂದಿರುವ ಮಠ, ಉಡುಪಿ ಜನರಿಗೊಂದು ಭಾಗ್ಯ. ನಮ್ಮದೇ ಸರ್ಕಾರ ಇದನ್ನು ವಶಪಡಿಸಿಕೊಳ್ಳಲು ಚಿಂತನೆ ನಡೆಸಿತ್ತು. ಈ ವಿಷಯ ನನಗೆ ಗೊತ್ತಾದ ತಕ್ಷಣವೇ ಉಡುಪಿ ಶರೀಕೃಷ್ಣ ಮಠವನ್ನು ಮುಟ್ಟಿದರೆ ನಾನು ರಾಜೀನಾಮೆ ನೀಡುತ್ತೇನೆ ಎಂದು ಸಿದ್ದರಾಮಯ್ಯನವರಿಗೆ ಹೇಳಿ ಈ ವಿಚಾರಕ್ಕೆ ಫುಲ್ ಸ್ಟಾಪ್ ಹಾಕುವ ಮೂಲಕ ಶಾಸಕನಾಗಿ ಸಣ್ಣ ಸೇವೆ ಮಾಡಿದ್ದೇನೆ ಎಂಬ ತೃಪ್ತಿ ಇದೆ ಎಂದು ಹೇಳಿ ಅವರು ಈ ವಿಷಯವನ್ನು ನೆನಪಿಸಿಕೊಂಡಿದ್ದಾರೆ.
ಈವರೆಗೂ ಈ ವಿಷಯ ನನ್ನೊಳಗೇ ಇತ್ತು. ಇದನ್ನು ಹೇಳಬಾರದು ಎಂದುಕೊಂಡಿದ್ದೆ. ಆದರೆ ಇವತ್ತು ಹೇಳಲೇಬೇಕಾಯಿತು ಎಂದು ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಅವರ ಈ ಸ್ಫೋಟಕ ಹೇಳಿಕೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಮತ್ತು ನಾಯಕರಿಗೆ ಮತ್ತೊಮ್ಮೆ ಇರಿಸುಮುರಿಸು ಆಗಿದೆ. ಕಾಂಗ್ರೆಸ್ ಪಕ್ಷದ ಜೊತೆ ಅಂತರ ಕಾಯ್ದುಕೊಂಡಿರುವ ಪ್ರಮೋದ್ ಮಧ್ವರಾಜ್, ಪದ್ಮ ಪ್ರಶಸ್ತಿ ನೀಡುವ ಸಂದರ್ಭ ಪ್ರಧಾನಿ ಮೋದಿಯನ್ನು ಹಾಡಿ ಹೊಗಳಿದ್ದರು. ಆಗಲೂ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸ ಒದಗಿಸಿದ್ದರು. ಈಗ ಮತ್ತೆ ಶ್ರೀಕೃಷ್ಣ ಮಠದ ಸ್ವಾಧೀನದ ಬಗ್ಗೆ ಕಾಂಗ್ರೆಸ್‌ ಸರ್ಕಾರದ ಆಲೋಚನೆ ಬಗ್ಗೆ ಹೇಳಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.

ಪ್ರಮುಖ ಸುದ್ದಿ :-   ಸಿದ್ದರಾಮಯ್ಯ ವಿರುದ್ಧದ ನಕಲಿ ಸ್ಟಿಂಗ್‌ ಆಪರೇಷನ್‌ ಪ್ರಕರಣ: ದೆಹಲಿಯ ವ್ಯಕ್ತಿಯ ಬಂಧನ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement