ಕೂಜಳ್ಳಿಯಲ್ಲಿ ನಡೆದ ಪಂ.ಷಡಕ್ಷರಿ ಗವಾಯಿಗಳ ಪುಣ್ಯಸ್ಮರಣೆ ಕಾರ್ಯಕ್ರಮ

ಕುಮಟಾ: ಸಂಗೀತ ಕೇವಲ ಮನಸ್ಸಿಗೆ ನೆಮ್ಮದಿಯನ್ನಷ್ಟೇ ನೀಡುವುದಿಲ್ಲ, ಜೊತೆಗೆ ಮಹಾದಾನಂದವನ್ನೂ ನೀಡುತ್ತದೆ ಎಂದು ಎಂಟಿಎನ್ಎಲ್ ನಿವೃತ್ತ ಜಿಡಿಎಂ ರಮೇಶ ಎಸ್. ಹೆಗಡೆ ಹೇಳಿದರು.
ಪಂ.ಷಡಕ್ಷರಿ ಗವಾಯಿ ಅಕಾಡೆಮಿ ವತಿಯಿಂದ ಕುಮಟಾ ತಾಲೂಕಿನ ಕೂಜಳ್ಳಿ ಕುಳಿಹಕ್ಕಲ ಶ್ರೀ ಶಾಂತಿಕಾ ಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ನಡೆದ ಪಂ. ಷಡಕ್ಷರಿ ಗವಾಯಿಗಳ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಂಗೀತ ಆಸ್ವಾದನೆಯೂ ಒಂದು ಉಪಾಸನೆಯೇ. ಇದು ಮನಸ್ಸಿಗೆ ಕೇವಲ ಮುದ ನೀಡುವುದಷ್ಟೇ ಅಲ್ಲ, ನಮ್ಮನ್ನು ವಿಕಾರಗಳಿಂದಲೂ ಹೊರತರುವ ಶಕ್ತಿ ಅದಕ್ಕಿದೆ. ಅದು ಸಕಾರಾತ್ಮಕ ಚಿಂತನೆಯನ್ನು ಪ್ರೇರೇಪಿಸುತ್ತದೆ. ಕಲೆ ಮತ್ತು ಸಂಸ್ಕೃತಿ ಈ ಕಾರಣಕ್ಕಾಗಿ ನಮಗೆ ಮುಖ್ಯವಾಗುತ್ತದೆ ಎಂದು ಹೇಳಿದರು.
ಲೆಕ್ಕಪರಿಶೋಧಕ ವಿನಾಯಕ ಹೆಗಡೆ ಮಾತನಾಡಿ, ಸಂಗೀತದಿಂದ ಮಾನಸಿಕ ಒತ್ತಡವು ಕಡಿಮೆಯಾಗುತ್ತದೆ. ಸಂಗೀತ ಮಕ್ಕಳಲ್ಲಿ ಭಕ್ತಿ, ಶ್ರದ್ಧೆ ಮತ್ತು ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ನಮ್ಮ ಉದ್ವೇಗವನ್ನೂ ಕಡಿಮೆ ಮಾಡಿ ಸಮಾಧಾನವನ್ನು ಕೊಡುತ್ತದೆ ಎಂದರು. ಕೂಜಳ್ಳಿಸ್ವರ ಸಂಗಮ ಅಧ್ಯಕ್ಷ ಸುಬ್ರಾಯ ಭಟ್ ಮಾತನಾಡಿದರು.
ಗವಾಯಿ ಅಕಾಡೆಮಿ ಅಧ್ಯಕ್ಷರಾದ ವಸಂತರಾವ್ ಮಾತನಾಡಿ ಪಂ.ಷಡಕ್ಷರಿ ಗವಾಯಿ ಸಂಗೀತ ಅಕಾಡೆಮಿ ಕಾರ್ಯಯೋಜನೆಗಳ ಬಗ್ಗೆ ತಿಳಿಸಿದರು. ಶಿಕ್ಷಕ ತಿಮ್ಮಣ್ಣ ಎನ್. ಭಟ್ ಕಾರ್ಯಕ್ರಮ ನಿರೂಪಿಸಿದರು ಈಶ್ವರ ಶಾಸ್ತ್ರಿ ವಂದಿಸಿದರು.
ನಾದ ನಮನ ಕಾರ್ಯಕ್ರಮದಲ್ಲಿ ಶ್ರೀಪಾದ ಹೆಗಡೆ ಸೋಮನಮನೆ ಹಿಂದುಸ್ತಾನೀ ಗಾಯನ ಕಛೇರಿಯಲ್ಲಿ ರಾಗ ಗಾವತಿ ಹಾಗೂ ಛಾಯಾನಟ್ ಪ್ರಸ್ತುತ ಪಡಿಸಿದರು. ಇವರಿಗೆ ಮುಂಬೈನ ಶಂತನು ಶುಕ್ಲ ತಬಲಾದಲ್ಲಿ ಹಾಗೂ ಗೌರೀಶ ಯಾಜಿ ಹಾರ್ಮೋನಿಯಂನಲ್ಲಿ ಸಾಥ್‌-ಸಂಗತ್‌ ನೀಡಿದರು.

ಶ್ರೀಧರ ಹೆಗಡೆ ಕಲ್ಭಾಗ ತಮ್ಮ ಗಾಯನದಲ್ಲಿ ಶುದ್ಧ ಕಲ್ಯಾಣ ಹಾಗೂ ಕೇದಾರ ರಾಗಗಳನ್ನು ಪ್ರಸ್ತುತ ಪಡಿಸಿದರು. ಇವರಿಗೆ ತಬಲಾದಲ್ಲಿ ಅನಂತಮೂರ್ತಿ ಶಾಸ್ತ್ರೀ ಹಾಗೂ ಹಾರ್ಮೋನಿಯಂನಲ್ಲಿ ಗೌರೀಶ ಯಾಜಿ ಸಾಥ್‌ ಸಂಗತ ಮಾಡಿದರು.
ಕೊಳಲು ವಾದನದಲ್ಲಿ ಈಶ್ವರ ಶಾಸ್ತ್ರಿ ಬೋಳ್ತಟ್ಟೆ ರಾಗ ಭೀಂಪಲಾಸಿ ನುಡಿಸಿದರು. ತಬಲಾದಲ್ಲಿ ಅಕ್ಷಯ ಭಟ್ಟ ಹಂಸಳ್ಳಿ ತಬಲಾ ಸಾಥ್‌ ನೀಡಿದರು.ಗಾಯನದಲ್ಲಿ ಶ್ರೀಲತಾ ಗುರುರಾಜ ಆಡುಕಳ ಮುಲ್ತಾನಿ ಪ್ರಸ್ತುತಪಡಿಸಿದರು. ಅವರಿಗೆ ಗುರುರಾಜ ಆಡುಕಳ ತಬಲಾದಲ್ಲಿ ಹಾಗೂ ಹಾರ್ಮೋನಿಯಂನಲ್ಲಿ ಅಜಯ ಹೆಗಡೆ ಶಿರಸಿ ಸಾಥ್‌ ನೀಡಿದರು.

 

 

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

advertisement

ನಿಮ್ಮ ಕಾಮೆಂಟ್ ಬರೆಯಿರಿ