ಹಿಂದೂ ದೇಗುಲಗಳನ್ನು ಕಾನೂನಿನಿಂದ ಸ್ವತಂತ್ರ ಮಾಡುತ್ತೇವೆ: ಸಿಎಂ ಬೊಮ್ಮಾಯಿ

ಹುಬ್ಬಳ್ಳಿ: ಮತಾಂತರ ಕಾಯ್ದೆ ಜಾರಿಗೆ ವಿಶೇಷ ಕಾರ್ಯ ಪಡೆ ರಚನೆ ಮಾಡಲಾಗುತ್ತದೆ. ಬೇರೆ ಸಮುದಾಯದ ಪ್ರಾರ್ಥನಾ ಸ್ಥಳಕ್ಕೆ ಸ್ವತಂತ್ರವಿರುವ ರೀತಿಯಲ್ಲೇ ಹಿಂದೂ ದೇವಾಲಯಗಳನ್ನೂ ಸ್ವತಂತ್ರ ಮಾಡುತ್ತೇವೆ. ಹಿಂದೂ ದೇಗುಲಗಳನ್ನು ಕಾನೂನಿನಿಂದ ಮುಕ್ತ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಘೋಷಣೆ ಮಾಡಿದ್ದಾರೆ.
ಅಂಜನಾದ್ರಿ ಬೆಟ್ಟ ಅಭಿವೃದ್ಧಿಗೊಳಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆ ಮಾಡಿಸುತ್ತೇವೆ. ಸರ್ವ ಸ್ವತಂತ್ರವಾಗಿ ನಿರ್ವಹಣೆ ಮಾಡಲು ಅವಕಾಶ ಮಾಡಿಕೊಡಲಾಗುವುದು. ಇವುಗಳಿಗೆ ಸರ್ಕಾರದ ನಿಯಂತ್ರಣ ಬಿಟ್ಟರೆ ಏನೂ ಇರುವುದಿಲ್ಲ. ಬಜೆಟ್ ಅಧಿವೇಶನದೊಳಗೆ ಇದಕ್ಕೆ ಕಾನೂನು ಸ್ವರೂಪ ನೀಡಲಾಗುತ್ತದೆ ಎಂದು ಬಿಜೆಪಿ ಕಾರ್ಯಕಾರಿಣಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಘೋಷಣೆ ಮಾಡಿದ್ದಾರೆ ಎಂದು ಟಿವಿ9 ಕನ್ನಡ.ಕಾಮ್‌ ವರದಿ ಮಾಡಿದೆ.
ದೇಗುಲಗಳನ್ನು ಕಾನೂನಿನ ಕಟ್ಟುಪಾಡುಗಳಿಂದ ಮುಕ್ತಗೊಳಿಸಲಾಗುವುದು. ಮಂದಿರಗಳ ವಿಚಾರ ಬಂದಾಗ ಸರ್ಕಾರ ಒಂದು ಕಾನೂನು ತಂದಿದೆ. ಇದು ನಮ್ಮ ಬದ್ಧತೆ, ತಕ್ಷಣ ಸ್ಪಂದಿಸುವುದು ಸರ್ಕಾರದ ಬದ್ಧತೆ. ದೇವಸ್ಥಾನದ ಹಣ ದೇವಾಲಯಗಳ ಅಭಿವೃದ್ಧಿಗೆ ಮಾತ್ರ ಬಳಕೆ ಆಗಬೇಕು ಎಂಬ ನಮ್ಮ ಅಜೆಂಡಾ ಸ್ಪಷ್ಟವಾಗಿದೆ ಅದನ್ನು ಜಾರಿಗೆ ತರುತ್ತೇವೆ. ನಮ್ಮ ಸರ್ಕಾರ ಅಧಿಕಾರದಲ್ಲಿರುವಾಗಲೇ ಅದನ್ನು ಮಾಡುತ್ತೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ ಎಂದು ವರದಿ ತಿಳಿಸಿದೆ.
ಮುಂದಿನ ಏಪ್ರಿಲ್​ ತಿಂಗಳಲ್ಲಿ ನೂತನ ಶಿಕ್ಷಣ ನೀತಿ ಜಾರಿ ಮಾಡಲಾಗುತ್ತದೆ. ಮೋದಿಯವರು ನನಗೆ ಕೆಲ ಮಾರ್ಗದರ್ಶನ ಮಾಡಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಕೆಲ ಕಾರ್ಯಕ್ರಮ ಮಾಡಿದ್ದೇನೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ.
ಮೇಕೆದಾಟು ಯೋಜನೆ ಕುರಿತು ಕಾಂಗ್ರೆಸ್​ ಪಾದಯಾತ್ರೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಿಮ್ಮ ಸರ್ಕಾರದಲ್ಲಿ ಯಾಕೆ ಯೋಜನೆ ಜಾರಿ ಮಾಡಲಿಲ್ಲ? ಒಂದೂವರೆ ವರ್ಷ ಮೈತ್ರಿ ಸರ್ಕಾರದಲ್ಲಿ ಪಾಲುದಾರರಾಗಿದ್ದಾಗ ಯೋಜನೆ ಬಗ್ಗೆ ಅವರು ಯೋಚನೆ ಸಹಮಾಡಲಿಲ್ಲ. ಡಿಪಿಆರ್‌ ಮಾಡಲಿಕ್ಕೇ ಐದು ವರ್ಷ ತೆಗೆದುಕೊಂಡರು. ಇದು ರಾಜಕೀಯ ಪ್ರೇರಿತ ಪಾದಯಾತ್ರೆ ಎಂದು ಅವರು ಟೀಕಿಸಿದ್ದಾರೆ.

ಪ್ರಮುಖ ಸುದ್ದಿ :-   ಸಿಡಿಲು ಬಡಿದು ಒಂದೇ ಕುಟುಂಬದ ಇಬ್ಬರು ಸಾವು

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement