ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ: ಬೀಗಿದ ಕಾಂಗ್ರೆಸ್ , ಮಂಕಾದ ಬಿಜೆಪಿ, ಎರಡಂಕಿಗೆ ಕುಸಿದ ಜೆಡಿಎಸ್

ಪಟ್ಟಣ ಪಂಚಾಯತಿ: ಒಟ್ಟು ಸ್ಥಾನಗಳು- 577; ಬಿಜೆಪಿ 194, ಕಾಂಗ್ರೆಸ್ 236, ಜೆಡಿಎಸ್​ 12, ಸ್ವತಂತ್ರ 135.

ಪುರಸಭೆ: ಒಟ್ಟು ಸ್ಥಾನಗಳು- 441; ಬಿಜೆಪಿ 176, ಕಾಂಗ್ರೆಸ್​ 201, ಜೆಡಿಎಸ್​ 21, ಸ್ವತಂತ್ರ 43.

ನಗರಸಭೆ: ಒಟ್ಟು ಸ್ಥಾನಗಳು- 166: ಬಿಜೆಪಿ-67: ಕಾಂಗ್ರೆಸ್​-61; ಜೆಡಿಎಸ್​-12; ಸ್ವತಂತ್ರ-26

ಬೆಂಗಳೂರು: ರಾಜ್ಯದ 58 ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಕಾಂಗ್ರೆಸ್‌ ಫಲಿತಾಂಶದಿಂದ ಬೀಗಿದರೆ ಬಿಜೆಪಿ ಮಂಕಾಗಿದೆ ಹಾಗೂ ಜೆಡಿಎಸ್‌ ಪಾತಾಳಕ್ಕೆ ಕುಸಿದಿದೆ.
ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯತ್​ನ ಸಾವಿರಕ್ಕೂ ಹೆಚ್ಚು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ 500 ಆಸುಪಾಸು ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಬಿಜೆಪಿ 400ರ ಗಡಿ ದಾಟಿದೆ. ಅದೇ ರೀತಿ ಪಕ್ಷೇತರರು ಮೂರನೇ ಶಕ್ತಿಯಾಗಿ ಹೊರಹೊಮ್ಮಿದ್ದು, ಜಾತ್ಯಾತೀತ ಜನತಾದಳ ಎರಡಂಕಿ ದಾಟಲಾಗದೆ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಆಡಳಿತರೂಢ ಪಕ್ಷದ ನಾಯಕರ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮೇಲಗೈ ಸಾಧಿಸಿದೆ. ಸ್ವಕ್ಷೇತ್ರದಲ್ಲೇ ಸಿಎಂ ಬಸವರಾಜ ಬೊಮ್ಮಾಯಿ ಸಚಿವರಾದ ಶ್ರೀರಾಮುಲು, ಶಶಿಕಲಾ ಜೊಲ್ಲೆ ಅವರಿಗೆ ಮುಖಭಂಗವಾಗಿದೆ.
ರಾಜ್ಯದ ಐದು ನಗರಸಭೆ, 19 ಪುರಸಭೆ ಹಾಗೂ 34 ಪಟ್ಟಣ ಪಂಚಾಯತಗಳ ಒಟ್ಟು 1185 ವಾರ್ಡ್​ಗಳಲ್ಲಿ ಚುನಾವಣೆ ನಡೆದಿತ್ತು. ಈ ಒಟ್ಟು 4,961 ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದರು. ಐದು ನಗರಸಭೆಗಳಿಗೂ ನಡೆದಿದ್ದ ಚುನಾವಣೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸಿದೆ.
ಬೆಂಗಳೂರಿನ ಹೆಬ್ಬಗೋಡಿ, ಚಿಕ್ಕಮಗಳೂರು ಹಾಗೂ ಗದಗ – ಬೆಟಗೇರಿ ನಗರಸಭೆಗಳಲ್ಲಿ ಬಿಜೆಪಿ ಬಹುಮತ ಪಡೆದಿದೆ. 2 ಕಡೆಗಳಲ್ಲಿ ಹೊಸಪೇಟೆ ನಗರಸಭೆ, ಶಿರಾ ನಗರಸಭೆ ಫಲಿತಾಂಶ ಅತಂತ್ರವಾಗಿದೆ. 34 ಪಟ್ಟಣ ಪಂಚಾಯತಗಳ ಫಲಿತಾಂಶದಲ್ಲಿ ಕಾಂಗ್ರೆಸ್​ 16 ಕಡೆಗಳಲ್ಲಿ ಗೆಲುವಿನ ನಗೆ ಬೀರಿದೆ. ಆರು ಕಡೆಗಳಲ್ಲಿ ಕಮಲ ಅರಳಿದರೆ 14 ಕಡೆಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಮೇಲುಗೈ ಸಾಧಿಸಿದ್ದಾರೆ. ಒಂದೇ ಒಂದು ಪಟ್ಟಣ ಪಂಚಾಯತದಲ್ಲಿ ಬಹುಮತ ಪಡೆಯದ ಜೆಡಿಎಸ್​ ತೀವ್ರ ಹಿನ್ನಡೆ ಅನುಭವಿಸಿದೆ.
19 ಪುರಸಭೆ ಚುನಾವಣೆಯಲ್ಲಿಯೂ ಕಾಂಗ್ರೆಸ್​ ಮೇಲುಗೈ ಸಾಧಿಸಿದೆ. ಕಾಂಗ್ರೆಸ್​ 8 ಕಡೆಗಳಲ್ಲಿ ಬಹುಮತ ಪಡೆದರೆ ಬಿಜೆಪಿ ಆರು ಕಡೆ ಹಾಗೂ ಜೆಡಿಎಸ್​ 1 ಕಡೆ ಜಯಗಳಿಸಿದೆ. 4 ಕಡೆಗಳಲ್ಲಿ ಅತಂತ್ರ ಫಲಿತಾಂಶ ಬಂದಿದೆ.
ಹಾವೇರಿ ಜಿಲ್ಲೆಯ ಬಂಕಾಪುರ ಪುರಸಭೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದು, ಕಾಂಗ್ರೆಸ್ 14 ಬಿಜೆಪಿ 7 ಇತರೆ 2 ಕ್ಷೇತ್ರದಲ್ಲಿ ಗೆಲುವು ಸಾಧಿಸಿವೆ. ಇದೇ ಜಿಲ್ಲೆಯ ಗುತ್ತಲ ಪಟ್ಟಣ ಪಂಚಾಯತ 18 ವಾರ್ಡ್ ಗಳ ಪೈಕಿ ಕಾಂಗ್ರೆಸ್ 11 ಬಿಜೆಪಿ 6 ಇತರೇ 1ರಲ್ಲಿ ಗೆಲುವು ಸಾಧಿಸಿದೆ. ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ತವರು ಜಿಲ್ಲೆಯಲ್ಲಿಯೇ ಮುಖಭಂಗವಾಗಿದೆ
ಸಚಿವ ಬಿ.ಶ್ರೀರಾಮುಲು ಅವರ ಕ್ಷೇತ್ರದ ನಾಯಕನಹಟ್ಟಿ ಪಟ್ಟಣ ಪಂಚಾಯತದಲ್ಲಿ ಕಾಂಗ್ರೆಸ್ ಗೆದ್ದಿದೆ. ನಾಯಕನಹಟ್ಟಿ ಪಟ್ಟಣ ಪಂಚಾಯತದ 16 ವಾರ್ಡ್ ಗಳಲ್ಲಿ ಕಾಂಗ್ರೆಸ್ 9, ಪಕ್ಷೇತರ ಅಭ್ಯರ್ಥಿಗಳೂ 3 ವಾರ್ಡ್ ಗಳಲ್ಲಿ ಗೆಲುವು ಸಾಧಿಸಿದ್ದು, ಬಿಜೆಪಿ ಖಾತೆ ತೆರೆಯದೆ ಬಿ.ಶ್ರೀರಾಮುಲುಗೆ ತೀವ್ರ ಮುಖಭಂಗವಾಗಿದೆ. ಬೆಳಗಾವಿ ಜಿಲ್ಲೆ ಯಕ್ಸಂಬಾ ಪಟ್ಟಣ ಪಂಚಾಯತದಲ್ಲಿ 17ವಾರ್ಡ್ ಗಳ ಪೈಕಿ ಕಾಂಗ್ರೆಸ್ 10, ಬಿಜೆಪಿ 1ರಲ್ಲಿ ಗೆಲುವು ಸಾಧಿಸಿದ್ದು ಸಚಿವೆ ಶಶಿಕಲಾ ಜೊಲ್ಲೆ ಸ್ವಗ್ರಾಮದಲ್ಲೇ ಕಾಂಗ್ರೆಸ್‌ ಗೆಲುವಿನ ನಗೆ ಬೀರಿದೆ.
ಕೊಪ್ಪಳ ಜಿಲ್ಲೆಯ ಕುಕನೂರು ಪಟ್ಟಣ ಪಂಚಾಯತದಲ್ಲಿ ಸಚಿವ ಹಾಲಪ್ಪ ಆಚಾರ ಅವರಿಗೆ ಹಿನ್ನಡೆಯಾಗಿದೆ. ಕಾಂಗ್ರೆಸ್ 10, ಬಿಜೆಪಿ 9ರಲ್ಲಿ ಗೆಲುವು ಸಾಧಿಸಿದೆ. ಕೊಪ್ಪಳದ ಕಾರಟಗಿ ಪುರಸಭೆಯಲ್ಲಿ ಕಾಂಗ್ರೆಸ್ 12 ಬಿಜೆಪಿ 10 ಇತರೆ 1 ವಾರ್ಡ್ ಗಳಲ್ಲಿ ಜಯಸಾಧಿಸಿವೆ.
ಉಡುಪಿ ಜಿಲ್ಲೆಯ ಕಾಪು ಪುರಸಭೆ ಬಿಜೆಪಿ ಪಾಲಾಗಿದೆ. 23 ವಾರ್ಡ್ ಪೈಕಿ ಬಿಜೆಪಿ 12, ಕಾಂಗ್ರೆಸ್ 7, ಎಸ್‌ಡಿಪಿಐ 3, ಜೆಡಿಎಸ್ 1 ವಾರ್ಡಿನಲ್ಲಿ ಗೆಲುವು ಸಾಧಿಸಿದೆ.
ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಹಾರೂಗೇರಿ ಪುರಸಭೆ ಬಿಜೆಪಿ ಪಾಲಾಗಿದೆ. 23 ವಾರ್ಡ್‌ಗಳ ಪೈಕಿ 15ವಾರ್ಡ್‌ಗಳಲ್ಲಿ ಜಯ ಸಾಧಿಸಿ ಬಿಜೆಪಿಗೆ ಸ್ಪಷ್ಟ ಬಹುಮತ ಸಿಕ್ಕಿದೆ. ಕಾಂಗ್ರೆಸ್ 7, ಬಿಜೆಪಿ 15, ಪಕ್ಷೇತರ 1 ಸ್ಥಾನ ಪಡೆದಿದ್ದಾರೆ. ಯಾದಗಿರಿ ಕಕ್ಕೇರಾ ಪುರಸಭೆಯಲ್ಲಿ‌ ಬಿಜೆಪಿ ಅಧಿಕಾರ ಕಳೆದುಕೊಂಡಿದೆ. ಬಿಜೆಪಿ ಶಾಸಕ ರಾಜುಗೌಡಗೆ ಬಾರಿ ಮುಖಭಂಗವಾಗಿದೆ.
ಬಿಡದಿ ಪುರಸಭೆಯಲ್ಲಿ ಜೆಡಿಎಸ್ ಗೆಲುವು ಸಾಧಿಸಿದೆ. 23 ವಾರ್ಡ್ ಗಳ ಪೈಕಿ 14 ವಾರ್ಡ್‌ ಗಳಲ್ಲಿ ಜೆಡಿಎಸ್‌ ಗೆ ಗೆಲುವು ಸಿಕ್ಕಿದೆ. 9 ವಾರ್ಡ್‌ಗಳಲ್ಲಿ ಕಾಂಗ್ರೆಸ್ ಜಯಗಳಿಸಿದೆ.

ಪ್ರಮುಖ ಸುದ್ದಿ :-   ಪ್ರಜ್ವಲ್‌ ರೇವಣ್ಣ ಪ್ರಕರಣ : ದೇವೇಗೌಡ, ಎಚ್‌ಡಿಕೆಯನ್ನು ತಪ್ಪಾಗಿ ಬಿಂಬಿಸಿ ಸುದ್ದಿ ಪ್ರಸಾರ ಮಾಡದಂತೆ 89 ಮಾಧ್ಯಮಗಳ ವಿರುದ್ಧ ಪ್ರತಿಬಂಧಕಾದೇಶ

 

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement