
ಉಡುಪಿ: ಮೆಹಂದಿ ಕಾರ್ಯಕ್ರಮದಲ್ಲಿ ಲಾಟಿ ಚಾರ್ಜ್ ನಡೆಸಿ ಪೊಲೀಸರು ಅತಿರೇಕದಿಂದ ವರ್ತಿಸಿದ್ದಾರೆ ಈ ಪ್ರಕರಣದ ಸಮಗ್ರ ತನಿಖೆಯನ್ನು ಸಿಒಡಿಗೆ ವಹಿಸಲಾಗುವುದು ಎಂದು ರಾಜ್ಯ ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ.
ಇಂದು ,ಶನಿವಾರ ಕೋಟತಟ್ಟು ಗ್ರಾಮದ ಕೊರಗ ಕಾಲೋನಿಯಲ್ಲಿ ಮೆಹಂದಿ ಸಂದರ್ಭ ಪೊಲೀಸರಿಂದ ಹಲ್ಲೆ ನಡೆದ ರಾಜೇಶ್ ಅವರ ಮನೆಗೆ ಭೇಟಿ ನೀಡಿ, ಕುಟುಂಬಕ್ಕೆ ಧೈರ್ಯ ತುಂಬಿ ಮಾತನಾಡಿದರು. ಮೆಹಂದಿ ಸಂದರ್ಭ ಪೊಲೀಸ್ ಇಲಾಖೆ ನಡೆದುಕೊಂಡ ರೀತಿಗೆ ನೋವಾಗಿದೆ. ಈ ಪ್ರಕರಣವನ್ನು ಸಿಒಡಿ ತನಿಖೆಗೆ ವಹಿಸಲಾಗುತ್ತದೆ ಹಾಗೂ ಪೊಲೀಸರಿಂದ ಹಲ್ಲೆಗೊಳಗಾದವರಿಗೆ ಸರ್ಕಾರದ ವತಿಯಿಂದ ತಲಾ 2 ಲಕ್ಷ ರೂ. ನೀಡಲಾಗುವುದು ಎಂದು ಗೃಹ ಸಚಿವರು ತಿಳಿಸಿದರು.
ಪೊಲೀಸರು ಮನುಷ್ಯತ್ವ ಕಳೆದುಕೊಂಡು ಹಲ್ಲೆ ಮಾಡಿದ್ದಾರೆ. ರೌಡಿಗಳನ್ನು ನಿಯಂತ್ರಿಸಲು ಪೊಲೀಸರ ನೇಮಕ ಮಾಡ್ತೇವೆ. ಪೊಲೀಸರೇ ರೌಡಿ ಕೆಲಸ ಮಾಡಿದರೆ ತಡೆಯುವವರು ಯಾರು? ಎಸ್ಐ ಇಲಾಖೆಗೆ ಕೆಟ್ಟ ಹೆಸರು ತರುವ ಕೆಲಸ ಮಾಡಿದ್ದಾರೆ. ತಪ್ಪು ಮಾಡಿದವರಿಗೆ ಏನು ಶಿಕ್ಷೆ ಕೊಡಬೇಕು ಕೊಡುತ್ತೇವೆ. ಇಲಾಖೆಗೆ ಅವರು ಸಮರ್ಥರೋ ಅಸಮರ್ಥರೋ ಎಂದು ನಿರ್ಧರಿಸುತ್ತೇವೆ ಎಂದು ಹೇಳಿದ್ದಾರೆ.
ನಾನು ಕೂಡಾ ಕೊರಗ ಸಮುದಾಯದ ಜೊತೆ ಬೆಳೆದವ ಅಕ್ಕಿ ಗಿರಣಿಯಲ್ಲಿ ಕೊರಗ ಸಮುದಾಯದವರೊಂದಿಗೆ ಮೂಟೆ ಹೊರುತ್ತಿದ್ದೆ. ಅವರ ನೋವು ನಲಿವು ನನಗೆ ಗೊತ್ತಿದೆ. ತಳಸ್ತರದ ಮುಗ್ದ ಸಮುದಾಯ ಇಂತಹ ಕಾರ್ಯಕ್ರಮ ಮಾಡಿದ್ದೇ ಅಪರೂಪ. ಈ ಘಟನೆಯಿಂದ ಸಮುದಾಯಕ್ಕೆ ನೋವಾಗಿದೆ. ಕುಟುಂಬಕ್ಕೆ ಅಘಾತವಾಗಿದೆ. ಆ ದಿನ ಪೊಲೀಸರಿಂದ ಹಲ್ಲೆಗೊಳಗಾದವರಿಗೆ ಸರ್ಕಾರ ತಲಾ ಎರಡು ಲಕ್ಷ ನೀಡುತ್ತಿದ್ದು, ಇವತ್ತು 50ಸಾವಿರವನ್ನು ನೀಡಲಾಗುತ್ತದೆ ಎಂದರು.



ನಿಮ್ಮ ಕಾಮೆಂಟ್ ಬರೆಯಿರಿ