
ತುಮಕೂರು:ಕೆಲವು ತಿಂಗಳ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಬಗ್ಗೆ ಸುದ್ದಿಗೋಷ್ಠಿ ಕರೆದ ವೇದಿಕೆಯಲ್ಲಿ ಕಾಂಗ್ರೆಸ್ ನಾಯಕರಾದ ವಿ ಎಸ್ ಉಗ್ರಪ್ಪ ಮತ್ತು ಸಲೀಂ ಆಡಿದ್ದ ಪಿಸುಮಾತು ಭಾರೀ ಸುದ್ದಿಯಾಯಿತು.ಈಗ ಅಂಥದ್ದೇ ಮತ್ತೊಂದು ಘಟನೆ ತಮಕೂರಿನಲ್ಲಿ ನಡೆದಿದೆ. ಪಾತ್ರಧಾರಿಗಳು ಬೇರೆ.

ರಾಜ್ಯ ರಾಜಕಾರಣದಲ್ಲಿ ಈಗ ಆಡಳಿತಾರೂಡ ಪಕ್ಷವಾದ ಬಿಜೆಪಿಯಲ್ಲಿ ಗುಸುಗುಸು ಸ್ಫೋಟಗೊಂಡಿದ್ದು, ಪಕ್ಷದಲ್ಲಿ ಭಾರೀ ಸಂಚಲನ ಮೂಡಿಸಿದೆ.
ನಗರದಲ್ಲಿ ಸ್ಮಾರ್ಟ್ಸಿಟಿ, ಮಹಾನಗರ ಪಾಲಿಕೆ ಹಾಗೂ ನಗರಾಭಿವೃದ್ಧಿ ಇಲಾಖೆ ವತಿಯಿಂದ ಏರ್ಪಡಿಸಿದ್ದ ವಿವಿಧ ನೂತನ ಕಟ್ಟಡಗಳ ಲೋಕಾರ್ಪಣೆ ಸಮಾರಂಭಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಅಕ್ಕಪಕ್ಕ ಕುಳಿತಿದ್ದ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಹಾಗೂ ಸಂಸದ ಜಿ.ಎಸ್. ಬಸವರಾಜು ಗುಸುಗುಸು ಮಾತನಾಡಿಕೊಂಡಿರುವ ವಿಡಿಯೋ ವೈರಲ್ ಆಗಿದ್ದು, ಬಿಜೆಪಿಯಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದೆ.
ಈ ನನ್ ಮಗ ನಮ್ ಮಂತ್ರಿ ಹೇಂಗೆ ಗೊತ್ತಾ..? ದಕ್ಷಿಣಾ ಕೊರಿಯಾದ ಕಿಂಗ್ ಪಿನ್ ಇದಾನಲ್ಲ ಅವನಂತೆ ಕೆಟ್ಟ ನನ್ಮಗ. ಇವನಿಂದ ಜಿಲ್ಲೆಯಲ್ಲಿ ಒಂದು ಸೀಟೂ ಬರೋಲ್ಲ. ಹಾಳು ಮಾಡಿ ಬಿಟ್ಟಿದ್ದಾನೆ ನಮ್ಮ ಜಿಲ್ಲೆಯಲ್ಲ ಮಾತು ಎತ್ತಿದ್ರೆ ಹೊಡಿ, ಬಡಿ ಅಂತಾನೆ.. ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಅವರೊಂದಿಗೆ ಸಂಸದ ಜಿ.ಎಸ್. ಬಸವರಾಜು ಅವರ ಗುಸು ಗುಸು ಮಾತನಾಡಿರುವ ವಿಡಿಯೋ ವೈರಲ್ ಆಗಿದೆ,
ನಮ್ಮ ಮುಂದೆ ಮಾಧ್ಯದವರ ಮೈಕ್ ಇದೆ ಎಂದು ಸಚಿವ ಬೈರತಿ ಹೇಳುತ್ತಿದ್ದರೂ ಸಂಸದ ಬಸವರಾಜ ತಮ್ಮ ಮಾತು ಮುಂದುವರಿಸಿದ್ದು, ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ತಮ್ಮ ನಾಲಿಗೆ ಹರಿಬಿಟ್ಟಿದ್ದಾರೆ.
ಒಂದು ಹ್ಯಾಂಡ್ ಬಿಲ್ ಪ್ರಿಂಟ್ ಮಾಡಿಸಲ್ಲ. ಮೊನ್ನೆ ಸಾವಿರ ಕೋಟಿ ಅನುದಾನ ಮಂಜೂರು ಮಾಡಿಸಿಕೊಂಡು ಬಂದವ್ನೆ, ನಮಗೆ ಯಾರಿಗೂ ಇನ್ವಿಟೇಷನ್ ಇಲ್ಲ, ಕರೆಯೋದು ಇಲ್ಲ ಎಂದು ಸಚಿವ ಮಾಧುಸ್ವಾಮಿ ಅವರ ಹೆಸರೇಳದೆ ಸಂಸದರು ನಗರಾಭಿವೃದ್ಧಿ ಸಚಿವರ ಮುಂದೆ ತಮ್ಮ ಅಸಮಾಧಾನ ಹೇಳುತ್ತಿರುವ ವಿಡಿಯೋ ಇದೀಗ ದೃಶ್ಯ ಮಾಧ್ಯಮ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲೂ ಹರಿದಾಡುತ್ತಿದೆ. ಬಿಜೆಪಿಯಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಮಾಧುಸ್ವಾಮಿ ತಿರುಗೇಟು
ಸರಿ ನನ್ನಿಂದ ವೋಟ್ ಬರಲ್ಲ ಆಯ್ತು ನನ್ನನ್ನು ಪಕ್ಷದಿಂದ ತೆಗೆದು ಹಾಕಲಿ ಎಂದು ಸಚಿವ ಮಾಧುಸ್ವಾಮಿ ಸವಾಲು ಹಾಕಿದರು.
ಪಕ್ಷದಲ್ಲಿ ಸಂಸದ ಬಸವರಾಜು ಇದ್ದು ಬಿಜೆಪಿಯನ್ನು ಗೆಲ್ಲಿಸಲಿ ಎಂದು ಮಾಧುಸ್ವಾಮಿ ಆಕ್ರೋಶ ಹೊರ ಹಾಕಿದರು.


ನಿಮ್ಮ ಕಾಮೆಂಟ್ ಬರೆಯಿರಿ