ಪಂಜಾಬ್‌ನಲ್ಲಿ ಪ್ರಧಾನಿ ಮೋದಿಗೆ ಉಗ್ರ ಸಂಘಟನೆಗಳಿಂದ ಜೀವ ಬೆದರಿಕೆ ಸಾಧ್ಯತೆ ಬಗ್ಗೆ 3 ದಿನ ಮೊದಲು ವರದಿ ನೀಡಿದ್ದ ಗುಪ್ತಚರ ಇಲಾಖೆ..!

ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರ ಪಂಜಾಬ್ ರಾಜ್ಯ ಭೇಟಿ ವೇಳೆ ಜೀವ ಬೆದರಿಕೆ ಎದುರಾಗುವ ಸಾಧ್ಯತೆ ಇದೆ ಎಂದು ಪಂಜಾಬ್‌ ಗುಪ್ತಚರ ಇಲಾಖೆಯು ರಾಜ್ಯ ಸರಕಾರಕ್ಕೆ ವರದಿ ನೀಡಿದ್ದ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ.
ನರೇಂದ್ರ ಮೋದಿ ಅವರ ಪಂಜಾಬ್‌ ಭೇಟಿ ವೇಳೆ ಹಲವು ರೀತಿಯಲ್ಲಿ ಅವರನ್ನು ತಡೆಯುವ ಪ್ರಯತ್ನಗಳು ನಡೆಯಲಿವೆ. ರಸ್ತೆ ತಡೆ, ಪ್ರತಿಭಟನೆಗಳು, ದಾಳಿಗಳ ಸಾಧ್ಯತೆ ಇದೆ. ಉಗ್ರ ಸಂಘಟನೆಗಳಾದ ಲಷ್ಕರ್ ಎ ತೊಯ್ಬಾ, ಇಂಡಿಯನ್‌ ಮುಜಾಹಿದ್ದೀನ್‌, ಸಿಮಿ, ಹರ್ಕತ್‌ ಉಲ್‌ ಮುಜಾಹಿದ್ದೀನ್‌, ಪಾಕಿಸ್ತಾನ್‌ ತಾಲಿಬಾನ್‌, ಎಲ್‌ಟಿಟಿಎ ಸೇರಿದಂತೆ ಹಲವು ಉಗ್ರ ಸಂಘಟನೆಗಳು ಒಗ್ಗೂಡಿ ಪ್ರಧಾನಿ ಹತ್ಯೆಗೆ ಸಂಚು ರೂಪಿಸುವ ಸಾಧ್ಯತೆ ಇದೆ’ ಎಂದು ಪಂಜಾಬ್ ಗುಪ್ತಚರ ಇಲಾಖೆ ಅಧಿಕಾರಿಗಳು ಜನವರಿ 2ರಂದೇ ಪಂಜಾಬ್‌ನ ಪೊಲೀಸ್‌ ಮಹಾ ನಿರ್ದೇಶಕರಿಗೆ ಪತ್ರ ಬರೆದಿದ್ದರು ಎಂದು ಹೇಳಲಾಗಿದ್ದು, ಈ ಪತ್ರದ ಪ್ರತಿ ಶುಕ್ರವಾರ ಬಹಿರಂಗಗೊಂಡಿದೆ. ಈ ಕುರಿತು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ವರದಿ ಪ್ರಕಾರ, ಕೆಲವೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯುವುದರಿಂದ ಪಂಜಾಬ್‌ನಲ್ಲಿ ಹಿಂಸಾಚಾರ, ಅರಾಜಕತೆ ಸೃಷ್ಟಿಸುವುದು ಉಗ್ರರ ಉದ್ದೇಶವಾಗಿದ್ದು, ಪ್ರಧಾನಿ ಭೇಟಿ ಸಂದರ್ಭದಲ್ಲಿಯೇ ತಮ್ಮ ಯೋಜನೆಯನ್ನು ಕಾರ್ಯಗತಗೊಳಿಸುವುದು ಪಾಕ್‌ ಮೂಲದ ಉಗ್ರ ಸಂಘಟನೆಗಳ ಯೋಜನೆಯಾಗಿದೆ. ಆರ್‌ಡಿಎಕ್ಸ್‌ ಸೇರಿ ಹಲವು ಸ್ಫೋಟಕಗಳನ್ನೂ ಬಳಸುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಎಚ್ಚರಿಸಿತ್ತು ಎಂಬುದು ಗುಪ್ತಚರ ಇಲಾಖೆಯದ್ದು ಎಂದು ಹೇಳಲಾದ ಪತ್ರದಿಂದ ಬೆಳಕಿಗೆ ಬಂದಿದೆ.
ಪ್ರಧಾನಿಯವರು ಜನವರಿ 5 ರಂದು ಪಂಜಾಬ್‌ನ ಫಿರೋಜ್‌ಪುರದಲ್ಲಿ ಆಯೋಜಿಸಲಾಗಿದ್ದ ಸಮಾವೇಶದಲ್ಲಿ ಭಾಗವಹಿಸಲು ಭಟಿಂಡಾದಿಂದ ರಸ್ತೆ ಮೂಲಕ ತೆರಳುವಾಗ ಫ್ಲೈ ಓವರ್‌ ಮೇಲೆ ಪ್ರತಿಭಟನಾಕಾರರು ರಸ್ತೆ ತಡೆಸಿದ ಕಾರಣ ಅವರು ಸಮಾವೇಶ ರದ್ದುಗೊಳಿಸಿ ಹಿಂದಿರುಗಿದರು. ಅಲ್ಲದೆ, ಅವರು ಸಂಚರಿಸುವ ಮಾರ್ಗದ ಕುರಿತು ಮೊದಲೇ ಮಾಹಿತಿ ನೀಡಿದ್ದರೂ ಪಂಜಾಬ್‌ ಸರಕಾರ ಸೂಕ್ತ ಭದ್ರತೆ ಒದಗಿಸಿಲ್ಲ ಎಂಬ ಆರೋಪ ಕೇಳಿಬಂದಿದೆ.
ಅಲ್ಲದೆ, ಪಂಜಾಬ್‌ ಅನ್ನು ಖಲಿಸ್ತಾನವನ್ನಾಗಿ ಮಾಡಬೇಕು ಎಂದು ಸ್ಥಾಪಿಸಲಾಗಿರುವ ಸಿಖ್ಸ್ ಫಾರ್‌ ಜಸ್ಟಿಸ್‌ (ಎಸ್‌ಎಫ್‌ಐ) ಉಗ್ರ ಸಂಘಟನೆ ಕುರಿತು ಸಹ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿತ್ತು. ‘ಪ್ರಧಾನಿ ಮೋದಿ ಅವರು ಸಮಾವೇಶ ನಡೆಸುವ ಫಿರೋಜ್‌ಪುರವು ಪಾಕಿಸ್ತಾನ ಗಡಿ ಸಮೀಪದಲ್ಲೇ ಇದೆ. ಅಲ್ಲದೆ, ರೈತ ಸಂಘಟನೆಗಳು ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ವಿರುದ್ಧ ಹೊಂದಿರುವ ಅಸಮಾಧಾನವನ್ನು ಬಳಸಿಕೊಂಡು ಹಿಂಸೆಗೆ ಪ್ರಚೋದನೆ ನೀಡಲು ಸಿಖ್ಸ್ ಫಾರ್‌ ಜಸ್ಟಿಸ್‌ (ಎಸ್‌ಎಫ್‌ಐ) ಸಂಚು ರೂಪಿಸಿದೆ’ ಎಂಬುದಾಗಿ ಕಾರ್ಯಕ್ರಮ ನಡೆಯುವ ಮೂರು ದಿನ ಮೊದಲೇ ಪಂಜಾಬ್ ಗುಪ್ತಚರ ಇಲಾಖೆ ಅಲ್ಲಿನ ರಾಜ್ಯ ಸರ್ಕಾರಕ್ಕೆ ತಿಳಿಸಿತ್ತು ಎಂಬ ಮಾಹಿತಿ ಲಭ್ಯವಾಗಿದೆ.

ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಲಾಗಿದ್ದರೂ, ಎಂಎಸ್‌ಪಿ, 700+ ಮೃತ ರೈತರಿಗೆ ಪರಿಹಾರ ಈ ಕಾರಣಕ್ಕಾಗಿ ಜನವರಿ 5, 2022 ರಂದು ಫಿರೋಜ್‌ಪುರಕ್ಕೆ ಪ್ರಧಾನಿ ಭೇಟಿಯ ಸಂದರ್ಭದಲ್ಲಿ ಪ್ರತಿಭಟನೆ ಮಾಡುವುದಾಗಿ ಘೋಷಿಸಿದ್ದರು. ಈ ರೈತ ಸಂಘಗಳು ಹುಸೇನಿವಾಲಾಗೆ ಹೋಗುವ ದಾರಿಯಲ್ಲಿ ಪ್ರದರ್ಶನ/ಆಂದೋಲನವನ್ನು ತಳ್ಳಿಹಾಕಲಾಗುವುದಿಲ್ಲ. ಇಂಥ ಸಂದರ್ಭವನ್ನು ಉಗ್ರಸಂಘಟನೆಗಳು ದುರುಪಯೋಗ ಪಡಿಸಿಕೊಳ್ಳಬಹುದು ಎಂದು ಗುಪ್ತಚರ ವರದಿ ಹೇಳಿತ್ತು.

ಪ್ರಧಾನಿ ಮೋದಿ ಭದ್ರತಾ ಲೋಪ
ಪಂಜಾಬ್ ಚುನಾವಣೆಗೆ ಮುಂಚಿತವಾಗಿ ರಾಜ್ಯಕ್ಕೆ ಪ್ರಧಾನಿ ಮೋದಿ ಆಗಮಿಸಿದ ಸಂದರ್ಭದಲ್ಲಿ ಪ್ರತಿಭಟನೆಯಲ್ಲಿ ರಸ್ತೆ ಮಾರ್ಗದಲ್ಲಿ ಅವರ ಬೆಂಗಾವಲುಪಡೆ ಸಿಲುಕಿದ್ದರಿಂದ ಮೋದಿ ತಮ್ಮ ಕಾರ್ಯಕ್ರಮವನ್ನು ಅರ್ಧಕ್ಕೇ ಮೊಟಕುಗೊಳಿಸಿ ಹಿಂದಿರುಗಿಸಬೇಕಾಯಿತು. ಹವಾಮಾನ ವೈಪರೀತ್ಯದಿಂದಾಗಿ ವಾಯುಮಾರ್ಗದ ಬದಲು ರಸ್ತೆಯ ಮೂಲಕ ಹುಸೇನ್‌ವಾಲಾದಲ್ಲಿರುವ ರಾಷ್ಟ್ರೀಯ ಹುತಾತ್ಮರ ಸ್ಮಾರಕಕ್ಕೆ ಪ್ರಯಾಣಿಸಲು ಪ್ರಧಾನಿ ನಿರ್ಧರಿಸಿದಾಗ ಸಮಸ್ಯೆ ಪ್ರಾರಂಭವಾಯಿತು. ಗೃಹ ವ್ಯವಹಾರಗಳ ಸಚಿವಾಲಯದ ಪ್ರಕಾರ, ರಸ್ತೆ ತಡೆಯಿಂದಾಗಿ ಗಮ್ಯಸ್ಥಾನದಿಂದ 30 ಕಿಮೀ ದೂರದಲ್ಲಿ ಅವರ ಬೆಂಗಾವಲು ಪಡೆ 15-20 ನಿಮಿಷಗಳ ಕಾಲ ಸಿಲುಕಿಕೊಂಡಿದ್ದರಿಂದ ಪ್ರಧಾನಿಯವರ ಭದ್ರತೆಯಲ್ಲಿ ದೊಡ್ಡ ಲೋಪವನ್ನು ಎದುರಿಸಬೇಕಾಯಿತು.

ಆಕಸ್ಮಿಕ ಯೋಜನೆಯ ಭಾಗವಾಗಿ ಪಂಜಾಬ್ ಸರ್ಕಾರವು ಹೆಚ್ಚುವರಿ ಭದ್ರತೆಯನ್ನು ನಿಯೋಜಿಸದ ಕಾರಣ, ಪ್ರಧಾನಿ ಮೋದಿ ಅವರು ಬಟಿಂಡಾ ವಿಮಾನ ನಿಲ್ದಾಣಕ್ಕೆ ಹಿಂತಿರುಗಿದರು ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ. ಇದಲ್ಲದೆ, ಪಂಜಾಬ್‌ನ ಸರ್ಕಾರದಿಂದ ವಿವರವಾದ ವರದಿಯನ್ನು ಕೇಳಿದೆ. ಮತ್ತೊಂದೆಡೆ, ಪ್ರಧಾನಿ ಮೋದಿ ಅವರ ಮಾರ್ಗ ಬದಲಾವಣೆಯ ಬಗ್ಗೆ ರಾಜ್ಯ ಸರ್ಕಾರಕ್ಕೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ, ‘ಭದ್ರತಾ ಉಲ್ಲಂಘನೆ’ ಆರೋಪವನ್ನು ತಳ್ಳಿ ಹಾಕಿದ ಅವರು, ಪ್ರಧಾನಿಗೆ ‘ಯಾವುದೇ ಬೆದರಿಕೆ ಇರಲಿಲ್ಲ’ ಎಂದು ಹೇಳಿದ್ದರು.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ