ಪಂಜಾಬಿನಲ್ಲಿ ಪ್ರಧಾನಿ ಮೋದಿ ಭದ್ರತಾ ವೈಫಲ್ಯ ಪ್ರಕರಣ:150 ಅಪರಿಚಿತರ ವಿರುದ್ಧ ಎಫ್‌ಐಆರ್‌ ದಾಖಲು

ಪಂಜಾಬಿನಲ್ಲಿ ಪ್ರಧಾನಿ ಮೋದಿ ಭದ್ರತಾ ವೈಫಲ್ಯ ಪ್ರಕರಣ:150 ಅಪರಿಚಿತರ ವಿರುದ್ಧ ಎಫ್‌ಐಆರ್‌ ದಾಖಲು

ಚಂಡೀಗಢ: ಪ್ರಧಾನಿ ನರೇಂದ್ರ ಮೋದಿ ಅವರು ಪಂಜಾಬ್‌ಗೆ ತೆರಳಿದ್ದ ಸಂದರ್ಭದಲ್ಲಿ ಫಿರೋಜ್‌ಪುರ್‌ ಫ್ಲೈಓವರ್‌ ಬಳಿ ಸಿಕ್ಕಿಹಾಕಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್‌ ಪೊಲೀಸರು 150 ಮಂದಿ ಅಪರಿಚಿತರ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ.
ಐಪಿಸಿ ಸೆಕ್ಷನ್‌ 283ರಡಿ ಆರೋಪಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. ಜನವರಿ 6 ರಂದು ಐಪಿಸಿ ಸೆಕ್ಷನ್ 283 ಐಪಿಸಿ (ಅಪಾಯ ಅಥವಾ ಸಾರ್ವಜನಿಕ ಮಾರ್ಗ ಅಥವಾ ನ್ಯಾವಿಗೇಷನ್ ಲೈನ್‌ನಲ್ಲಿ ಅಡಚಣೆ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪಂಜಾಬ್ ಸರ್ಕಾರವು ಕೇಂದ್ರಕ್ಕೆ ತನ್ನ ವರದಿಯಲ್ಲಿ ತಿಳಿಸಿದೆ.
ಕೆಲವು ಪ್ರತಿಭಟನಾಕಾರರ ದಿಗ್ಬಂಧನದಿಂದಾಗಿ ಪ್ರಧಾನಿ ಮೋದಿ ಅವರು ಪಂಜಾಬ್‌ನ ಫ್ಲೈಓವರ್‌ನಲ್ಲಿ 20 ನಿಮಿಷಗಳ ಕಾಲ ಸಿಲುಕಿಕೊಂಡ ನಂತರ ಯಾವುದೇ ಕಾರ್ಯಕ್ರಮಕ್ಕೆ ಹಾಜರಾಗದೆ ಪ್ರಧಾನಿ ಮೋದಿ ಪಂಜಾಬ್‌ನಿಂದ ವಾಪಸ್‌ ಮರಳಬೇಕಾಯಿತು. ಇದು ದೇಶಾದ್ಯಂತ ದೊಡ್ಡ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ.
ಭದ್ರತಾ ಲೋಪಕ್ಕೆ ಸಂಬಂಧಿಸಿದಂತೆ ಶುಕ್ರವಾರ ಕೇಂದ್ರ ಗೃಹ ಸಚಿವಾಲಯವು ಬಟಿಂಡಾ ಪೊಲೀಸ್ ಮುಖ್ಯಸ್ಥರು ಸೇರಿದಂತೆ ಆರು ಹಿರಿಯ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಜನವರಿ 5 ರಂದು ರಾಜ್ಯಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ ಅವರ ಭದ್ರತೆಯ ಜವಾಬ್ದಾರಿಯನ್ನು ಬಟಿಂಡಾ ಎಸ್‌ಎಸ್‌ಪಿ ಅಜಯ್ ಮಲುಜಾ ಮತ್ತು ಇತರ ಐದು ಅಧಿಕಾರಿಗಳು ವಹಿಸಿದ್ದರು. ಗೃಹ ಸಚಿವಾಲಯವು ಘಟನೆಯನ್ನು ಭದ್ರತೆಯಲ್ಲಿ “ದೊಡ್ಡ ಲೋಪ” ಎಂದು ಕರೆದಿದೆ.
ಪ್ರಧಾನಿಗೆ ಭದ್ರತಾ ವೈಫಲ್ಯ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆಗೆ ಪಂಜಾಬ್‌ ಸರ್ಕಾರ, ಇಬ್ಬರು ಸದಸ್ಯರನ್ನೊಳಗೊಂಡ ಸಮಿತಿ ರಚಿಸಿತ್ತು. ಸಮಿತಿಯು ನೀಡಿದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ನೀಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 150 ಮಂದಿ ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿರುವುದಾಗಿ ವರದಿಯಲ್ಲಿ ತಿಳಿಸಲಾಗಿದೆ.
ಏತನ್ಮಧ್ಯೆ, ಪ್ರಧಾನಿ ಮೋದಿ ಅವರ ಭೇಟಿಗಾಗಿ ಮಾಡಲಾದ ಭದ್ರತಾ ವ್ಯವಸ್ಥೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ರಾಜ್ಯ ಸರ್ಕಾರ, ಪೊಲೀಸ್ ಮತ್ತು ಕೇಂದ್ರ ಏಜೆನ್ಸಿಗಳಿಂದ ಪಡೆದುಕೊಳ್ಳುವಂತೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಅವರಿಗೆ ಸುಪ್ರೀಂ ಕೋರ್ಟ್ ಸೂಚಿಸಿದೆ.
ಈ ಘಟನೆಯು ಪಂಜಾಬ್ ಚುನಾವಣೆಗೆ ಕೆಲವೇ ವಾರಗಳ ಮೊದಲು ಪ್ರಮುಖ ರಾಜಕೀಯ ಗದ್ದಲಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪ್ರಧಾನಿಯನ್ನು “ದೈಹಿಕವಾಗಿ ಹಾನಿ ಮಾಡಲು ಪ್ರಯತ್ನಿಸಿದೆ” ಎಂದು ಬಿಜೆಪಿ ಆರೋಪಿಸಿದೆ.
ಪ್ರಕರಣದ ತನಿಖೆಗೆ ಕೇಂದ್ರ ಸರ್ಕಾರವೂ ಮೂವರು ಸದಸ್ಯರ ಸಮಿತಿಯೊಂದನ್ನು ರಚಿಸಿದ್ದು, ಈಗಾಗಲೇ ತನಿಖೆ ಆರಂಭವಾಗಿದೆ.
ಪಂಜಾಬಿನಲ್ಲಿ ರ‍್ಯಾಲಿಯೊಂದರಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ಆಗಮಿಸಿದ ಸಂದರ್ಭದಲ್ಲಿ ಪ್ರತಿಕೂಲ ಹವಾಮಾನದಿಂದಾಗಿ ರಸ್ತೆ ಮಾರ್ಗವಾಗಿ ಆಗಮಿಸುವಂತಾಯಿತು. ಆಗ ಫಿರೋಜ್‌ಪುರ್‌ ಫ್ಲೈಓವರ್‌ ಬಳಿ ಪ್ರತಿಭಟನೆ ಕಾರಣದಿಂದಾಗಿ ಪ್ರಧಾನಿಯವರು ಮಾರ್ಗ ಮಧ್ಯವೇ ಸಿಲುಕಿಕೊಂಡಿದ್ದರು.

ಪ್ರಮುಖ ಸುದ್ದಿ :-   ತಾಯಿಯ ಸಂಪತ್ತು ಉಳಿಸಿಕೊಳ್ಳಲು ಪಿತ್ರಾರ್ಜಿತ ತೆರಿಗೆ ಕಾನೂನು ರದ್ದುಗೊಳಿಸಿದ ರಾಜೀವ ಗಾಂಧಿ : ಪ್ರಧಾನಿ ಮೋದಿ ಆರೋಪ

5 / 5. 2

ನಿಮ್ಮ ಕಾಮೆಂಟ್ ಬರೆಯಿರಿ

advertisement