ಕೇರಳದ ತಿರುವನಂತಪುರಂನಲ್ಲಿ ಪ್ರಧಾನಿ ಮೋದಿ ವಿರೋಧಿ ಬರಹವಿದ್ದ ಉತ್ತರ ಪ್ರದೇಶ ನೋಂದಣಿಯ ಕಾರು ಪತ್ತೆ: ಚಾಲಕ ಪರಾರಿ..!

ತಿರುವನಂತಪುರಂ: ಆಘಾತಕಾರಿ ಘಟನೆಯೊಂದರಲ್ಲಿ, ‘ನರೇಂದ್ರ ಮೋದಿ ವಿರೋಧಿ’ ಘೋಷಣೆಗಳನ್ನು ಬರೆದಿರುವ ಕಾರೊಂದು ಕೇರಳದ ರಾಜಧಾನಿ ತಿರುವನಂತಪುರಂನಲ್ಲಿ ಭಾನುವಾರ ಪತ್ತೆಯಾಗಿದೆ. ಬಿಳಿ ಬಣ್ಣದ ಕಾರ್‌ ಉತ್ತರ ಪ್ರದೇಶದ ನೋಂದಣಿ ಸಂಖ್ಯೆಯನ್ನು ಹೊಂದಿದೆ.
ಈ ಆಕ್ಷೇಪಾರ್ಹ ಬರಹವಿದ್ದ ಕಾರನ್ನು ಕೇರಳದ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ತಿರುವನಂತಪುರಂನ ಪಟ್ಟೋಮ್ ಪ್ರದೇಶದಲ್ಲಿ ಇದು ಪತ್ತೆಯಾದಾಗ, ಕಾರಿನಲ್ಲಿ ಬರೆದಿರುವುದನ್ನು ಗುರುತಿಸಿದ ತಕ್ಷಣ ಕಾರಿನ ಚಾಲಕ ಓಡಿಹೋಗಿದ್ದಾನೆ. ನಂತರ ಬಾಂಬ್ ಸ್ಕ್ವಾಡ್ ಕಾರು ಪತ್ತೆಯಾದ ಆವರಣದಲ್ಲಿ ಪರಿಶೀಲನೆ ನಡೆಸಿತು.
ಕಾರು ತಂದ ವ್ಯಕ್ತಿ ತಿರುವನಂತಪುರದ ಹೋಟೆಲ್​ ಒಂದಕ್ಕೆ ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಬಂದಿದ್ದಾನೆ. ಅಲ್ಲದೇ ಈ ವ್ಯಕ್ತಿ ಅನುಮಾನಾಸ್ಪದವಾಗಿ ವರ್ತಿಸಿದ ಕಾರಣ ಹೋಟೆಲ್​ ಸಿಬ್ಬಂದಿ ವಿಚಾರಿಸಿದ್ದಾರೆ. ಬಳಿಕ ಹೋಟೆಲ್​ ಒಳಗೆ ಬಂದು ಮದ್ಯ ಕೇಳಿದ್ದಾನೆ. ಕೊಡಲು ಒಪ್ಪದ ಕಾರಣ ಸಿಬ್ಬಂದಿ ಜೊತೆ ಜಗಳವಾಡಿಕೊಂಡಿದ್ದಾನೆ. ಈ ವೇಳೆ ಕಾರನ್ನು ಗಮನಿಸಿದ ಹೋಟೆಲ್​ ಸಿಬ್ಬಂದಿ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಆಗ ಆ ವ್ಯಕ್ತಿ ಕಾರನ್ನು ಅಲ್ಲಿಯೇ ಬಿಟ್ಟು ಆಟೋ ಹತ್ತಿ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಬಂದ ಪೊಲೀಸರು ಕಾರು ತಪಾಸಣೆ ನಡೆಸಿದಾಗ ಅದರಲ್ಲಿ ಹಳೆಯ ಬಟ್ಟೆಗಳು, ಕೇಬಲ್​ಗಳು, ಎಲೆಕ್ಟ್ರಾನಿಕ್​ ವಸ್ತುಗಳು ದೊರೆತಿವೆ.
ಕಾರಿನಲ್ಲಿ ಪ್ರಧಾನಿಯನ್ನು ಟೀಕಿಸುವ ಘೋಷಣೆಗಳಲ್ಲದೆ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಟೀಕಿಸುವ ಘೋಷಣೆಗಳೂ ಇತ್ತು.
‘ಮೋದಿಜಿಯಿಂದ 750 ಪ್ಲಸ್ ರೈತರ ಹತ್ಯೆ’, ‘ಮೋದಿ ಪುಲ್ವಾಮಾ ಮತ್ತು ಗೋದ್ರಾ ಮಾಡಿದರು’, ‘ಮೋದ್ ಸಂಭಾವಿತ ಅಲ್ಲ’, ‘ಆರ್‌ಎಸ್‌ಎಸ್ ಒಂದು ಭಯೋತ್ಪಾದಕ ಗುಂಪು’, ‘ಲಖಿಂಪುರದಲ್ಲಿ ಯೋಗಿ ನಾಲ್ಕು ಜನರನ್ನು ಕೊಂದ ಎಂದೆಲ್ಲ ಕಾರಿನ ಮೇಲೆ ಬರೆಯಲಾಗಿದೆ. ಕಾರಿನ ಮೇಲೆ ಹೀಗೆಲ್ಲ ಬರೆದಿದ್ದಕ್ಕೆ ಅನುಮಾನಗೊಂಡ ಪೊಲೀಸರು ಬಾಂಬ್​ ಪತ್ತೆ ದಳ ಮತ್ತು ಶ್ವಾನ ದಳವನ್ನು ಕರೆಯಿಸಿ ತಪಾಸಣೆ ನಡೆಸಿದ್ದಾರೆ. ಬಳಿಕ ಕಾರನ್ನು ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ.
ಚುನಾವಣಾ ಆಯೋಗವು ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಮಣಿಪುರ ಮತ್ತು ಗೋವಾ ವಿಧಾನಸಭಾ ಚುನಾವಣೆಗಳಿಗೆ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದ 24 ಗಂಟೆಗಳ ನಂತರ ಈ ಬೆಳವಣಿಗೆ ಬಂದಿದೆ. ಉತ್ತರ ಪ್ರದೇಶದಲ್ಲಿ ಫೆಬ್ರವರಿ 10 ರಿಂದ ಮಾರ್ಚ್ 7 ರವರೆಗೆ ಏಳು ಹಂತಗಳಲ್ಲಿ 403 ವಿಧಾನಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಪ್ರಮುಖ ಭದ್ರತಾ ಲೋಪದಲ್ಲಿ, ಪಂಜಾಬ್‌ನ ಫಿರೋಜ್‌ಪುರದಲ್ಲಿ ಪ್ರತಿಭಟನಾಕಾರರ ದಿಗ್ಬಂಧನದಿಂದಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಾವಲು ಫ್ಲೈಓವರ್‌ನಲ್ಲಿ ಸಿಕ್ಕಿಹಾಕಿಕೊಂಡ ದಿನಗಳ ನಂತರ ಈ ಬೆಳವಣಿಗೆ ಬಂದಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 2

ನಿಮ್ಮ ಕಾಮೆಂಟ್ ಬರೆಯಿರಿ