ಕನ್ನಡದ ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ ವಿಧಿವಶ

ಬೆಂಗಳೂರು: ಕನ್ನಡದ ಹಿರಿಯ ಸಾಹಿತಿ, ಕನ್ನಡ ಸಾಹಿತ್ಯ ಪರಿಷತ್​ ಮಾಜಿ ಅಧ್ಯಕ್ಷ ಚಂಪಾ ಎಂದೇ ಖ್ಯಾತರಾಗಿದ್ದ ಪ್ರೊ. ಚಂದ್ರಶೇಖರ ಪಾಟೀಲ (83) ಇಂದು ಸೋಮವಾರ ಮುಂಜಾನೆ 6.30ರ ವೇಳೆಗೆ ನಿಧನರಾಗಿದ್ದಾರೆ.
.ಅವರನ್ನು ಬೆಂಗಳೂರಿನ ಕೋಣನಕುಂಟೆ ಆಸ್ಟ್ರಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ 6:30ಕ್ಕೆ ವಿಧಿವಶರಾಗಿದ್ದಾರೆ. ಇವರು ಪತ್ನಿ, ಇಬ್ಬರು ಮಕ್ಕಳು ಹಾಗೂ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಅಗಲಿದ್ದಾರೆ. ಬೆಂಗಳೂರಿನ ಗಾಯತ್ರಿ ಲೇಔಟ್‌ನಲ್ಲಿರುವ ಮನೆಗೆ ಪಾರ್ಥಿವ ಶರೀರ ಕೊಡೊಯ್ಯಲಾಗುತ್ತದೆ.

ಕವಿ, ನಾಟಕಕಾರ, ಸಂಘಟನಕಾರ, ಪತ್ರಿಕಾ ಸಂಪಾದಕ, ಆಡಳಿತಗಾರ, ಕನ್ನಡ ಹೋರಾಟಗಾರ ಹೀಗೆ ಬಹುಮುಖ ವ್ಯಕ್ತಿತ್ವದಿಂದ ಪ್ರಸಿದ್ಧರಾಗಿದ್ದರು. ಕಳೆದ ಕೆಲ ದಿನಗಳಿಂದ ಚಂಪಾ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು.ಸಂಕ್ರಮಣ ಕಾವ್ಯವೆಂಬ ಪತ್ರಿಕೆಯನ್ನು 50 ವರ್ಷಗಳಿಂದ ನಿರಂತರವಾಗಿ ಪ್ರಕಟಿಸುತ್ತಿರುವ ಇವರು ಹತ್ತಕ್ಕೂ ಮಿಕ್ಕು ಗ್ರಂಥಗಳನ್ನು ಸಂಪಾದಿಸಿದ್ದಾರೆ. ಬಾನುಲಿ, ಮಧ್ಯಬಿಂದು, ಹೂವು ಹಣ್ಣು ತಾರೆ, ಓ ಎನ್ನ ದೇಶ ಬಾಂಧವರೇ, ಗುಂಡಮ್ಮನ ಹಾಡು ಮೊದಲಾದ ಕವನ ಸಂಗ್ರಹ ಹೊರತಂದಿದ್ದಾರೆ. ಕೊಡೆಗಳು, ಗೋಕರ್ಣದ ಗೌಡಶಾನಿ, ನಳ ಕವಿಯ ಮಸ್ತಕಾಭಿಷೇಕ, ವಂದಿಮಾಗಧ ಮೊದಲಾದ ನಾಟಕಗಳನ್ನು ರಚಿಸಿದ್ದಾರೆ. ಬೇಂದ್ರೆ-ನಾನು ಕಂಡಂತೆ, ಕನ್ನಡ ಕನ್ನಡ ಬರ್ರಿ ನಮ್ಮ ಸಂಗಡ, ಚಂಪಾದಕೀಯ ಇತ್ಯಾದಿ ಕೃತಿಗಳನ್ನು ರಚಿಸಿದ್ದಾರೆ. ಇಂಗ್ಲಿಷಿನಲ್ಲಿ ಹತ್ತಾರು ನಿಯತಕಾಲಿಕೆಗಳಿಗೆ ಲೇಖಕರಾಗಿರುವ ಇವರು ಇಂಗ್ಲಿಷಿನಲ್ಲಿ ಪೊಯಮ್ಸ್ ಅಂಡ್ ಪ್ಲೇಸ್ ಎಂಬ ಗ್ರಂಥವನ್ನು (ಕನ್ನಡದಿಂದ ಅನುವಾದಿಸಿದ ಕೃತಿಗಳು) ಹೊರತಂದಿದ್ದಾರೆ.ಜಗದಂಬೆಯ ಬೀದಿನಾಟಕ, ಬುರಡಿ ಬಾಬನ ವಸ್ತ್ರಾಪಹರಣ ಪವಾಡ, ನಳ ಕವಿಯ ಮಸ್ತಕಾಭಿಷೇಕ, ವಂದಿಮಾಗಧ ಮುಂತಾದ ನಾಟಕಗಳಿಂದ ಚಂಪಾ ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ.

ಚಂದ್ರಶೇಖರ್​ ಪಾಟೀಲ 1939ರಲ್ಲಿ ಹಾವೇರಿ ಜಿಲ್ಲೆಯ ಹತ್ತಿಮತ್ತೂರಿನಲ್ಲಿ ಜನಿಸಿದರು. ಹತ್ತಿಮತ್ತೂರು-ಹಾವೇರಿಗಳಲ್ಲಿ ಕನ್ನಡ ಶಾಲೆ-ಹೈಸ್ಕೂಲ್ ಮುಗಿಸಿ, ಧಾರವಾಡದ 1956ರಲ್ಲಿ ಕರ್ನಾಟಕ ಕಾಲೇಜಿಗೆ ಸೇರಿದವರು. 1960ರಲ್ಲಿ ಬಿ.ಎ. ಪೂರೈಸಿ ಕರ್ನಾಟಕ ವಿಶ್ವವಿದ್ಯಾಲಯದಿಂದ 1962ರಲ್ಲಿ ಎಂ.ಎ. ಪದವಿ ಪಡೆದರು. ಬ್ರಿಟಿಷ್‌ ಕೌನ್ಸಿಲ್‌ ವಿದ್ಯಾರ್ಥಿವೇತನ ಪಡೆದು  ಚಂಪಾ ಇಂಗ್ಲೆಂಡಿನ ಲೀಡ್ಸ್‌ ವಿಶ್ವವಿದ್ಯಾಲಯದಿಂದ ಭಾಷಾಶಾಸ್ತ್ರದಲ್ಲಿನ ಸ್ನಾತಕೋತ್ತರ ಪದವಿ ಮತ್ತು ಹೈದರಾಬಾದಿನ ಕೇಂದ್ರೀಯ ಇಂಗ್ಲಿಷ್‌ ಸಂಸ್ಥೆಯಿಂದ ಇಂಗ್ಲಿಷ್‌ ಅಧ್ಯಯನದ ಡಿಪ್ಲೊಮ ಪಡೆದಿದ್ದರು. 1969ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾದರು. 1996ರಲ್ಲಿ ಪ್ರೊಫೆಸರ್ ಮತ್ತು ಚೇರ್ಮನ್‍ರಾಗಿ ಕರ್ತವ್ಯ ನಿರ್ವಹಿಸಿದ್ದರು.
1980-83ರಲ್ಲಿ ಧಾರವಾಡದ ಅಖಿಲ ಕರ್ನಾಟಕ ಕೇಂದ್ರ ಕನ್ನಡ ಕ್ರಿಯಾ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಗೋಕಾಕ ಚಳವಳಿಗೆ ಮಂಚೂಣಿಗೆ ನಿಂತವರಲ್ಲಿ ಚಂಪಾ ಕೂಡಾ ಒಬ್ಬರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ 1996-99ರ ಅವಧಿಗೆ ಈ ಜವಾಬ್ದಾರಿ ನಿರ್ವಹಿಸುವುದರ ಜೊತೆಗೆ 2004-08 ಅವಧಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾಯಿತ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ನವೆಂಬರ್ 2004 ರಿಂದ 2008ರ ವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. ನಾಟಕ ಕೂಟ ‘ಮ್ಯಾಳ’ ಮುಂತಾದ ಸಂಸ್ಥೆಗಳ ಮೂಲಕ ರಂಗಚಳುವಳಿಯಲ್ಲಿ ಕ್ರಿಯಾಶೀಲರಾದವರು.
ಹಲವು ಪ್ರಶಸ್ತಿಗಳಿಗೆ ಭಾಜನರಾದ ಕೀರ್ತಿ ಚಂಪಾ ಅವರ ಬಾನು (ಕಾವ್ಯ-1960) ಕಾವ್ಯ, ಗೋಕರ್ಣದ ಗೌಡಶಾನಿ (ನಾಟಕ-1974), ಗಾಂಧೀಸ್ಮರಣ (ಕಾವ್ಯ-1976) ಇವುಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಗ್ರಂಥ ಪ್ರಶಸ್ತಿಗಳು ದೊರೆತಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ನಾಟಕ ಅಕಾಡೆಮಿ ಗೌರವ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಆಳ್ವಾಸ ನುಡಿಸಿರಿ ಪ್ರಶಸ್ತಿ, ಸಂದೇಹ ಮಾಧ್ಯಮ ಪ್ರಶಸ್ತಿ ಇತ್ಯಾದಿ ಇವರಿಗೆ ಪ್ರಶಸ್ತಿಗಳಿಗೆ  ಭಾಜನರಾಗಿದ್ದಾರೆ. ದಿನಕರ ದೇಸಾಯಿ ಪ್ರಶಸ್ತಿ ಇವರ ಅರ್ಧಸತ್ಯದ ಹುಡುಗಿ ಕಾವ್ಯಕ್ಕೆ ದೊರೆತಿದೆ.  ಪ್ರತಿಷ್ಠಿತ  ಪಂಪ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪ್ರಮುಖ ಸುದ್ದಿ :-   ರಾಜ್ಯದ ಹಲವೆಡೆ ಮಳೆ : ವಿಜಯಪುರದಲ್ಲಿ ಐತಿಹಾಸಿಕ ಸ್ಮಾರಕ ಮೆಹತರ್ ಮಹಲಿನ ಮೀನಾರ್ ಮೇಲ್ತುದಿಗೆ ಹಾನಿ, ಕುಷ್ಟಗಿಯಲ್ಲಿ ಸಿಡಿಲಿಗೆ ರೈತ ಸಾವು

ಕ್ರಾಂತಿಕಾರಿ ಮನೋಭಾವದ ಕನ್ನಡ ಹೋರಾಟಗಾರ ಚಂಪಾ   ಪರಿಷತ್ತನ್ನು ಚಳವಳಿ ಹೋರಾಟಗಳಲ್ಲಿ ತೊಡಗಿಸಿದವರು. ಮಾತೃಭಾಷಾ ಮಾಧ್ಯಮ ಚಳವಳಿ ನಡೆಸಿದ ಅವರು ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡವೇ ಬೋಧನಾ ಮಾಧ್ಯಮವಾಗಿರಬೇಕು, ಬೇಕಿದ್ದರೆ ಇಂಗ್ಲಿಷನ್ನು ಪ್ರಾಥಮಿಕ ೫ನೇ ತರಗತಿಯಿಂದ ಕಲಿಸಬೇಕು, ಕೇಂದ್ರ ಪಠ್ಯಕ್ರಮದ (ಹಿಂದಿ ಇಂಗ್ಲಿಷ್) ಮಾಧ್ಯಮಗಳ ಶಾಲೆಗಳಲ್ಲಿ ಕರ್ನಾಟಕದಲ್ಲಿ ಕನ್ನಡ ಕಲಿಸಬೇಕು- ಎಂಬ ವಿಷಯಗಳ ಬಗ್ಗೆ ಚಂಪಾ ಸರ್ಕಾರದೊಡನೆ ಹೋರಾಟ ನಡೆಸಿದರು. ಕನ್ನಡ ಮಾಧ್ಯಮದಲ್ಲಿ ಶಾಲೆಯನ್ನು ನಡೆಸಲು ಅನುಮತಿ ಪಡೆದು ಆಂಗ್ಲಮಾಧ್ಯಮದಲ್ಲಿ ಶಾಲೆ ನಡೆಸುತ್ತಿದ್ದ ಸುಮಾರು 2215 ಶಾಲೆಗಳ ಮಾನ್ಯತೆಯನ್ನು ರದ್ದು ಮಾಡಿಸುವಲ್ಲಿ ಚಂಪಾ ಯಶಸ್ವಿಯಾಗಿದ್ದರು.
ಗಡಿವಿವಾದದ ಬಗ್ಗೆ ಶಾಶ್ವತ ಪರಿಹಾರ ಕರಡುಕೊಳ್ಳಲು ಮಹಾಜನ್ ವರದಿ ಜಾರಿಗೆ ತರಲು ಒತ್ತಾಯ ಮಾಡಲು ೪-೧೦-೨೦೦೬ರಲ್ಲಿ ಕರ್ನಾಟಕ ಬಂದ್‍ಗೆ ನಾಡಿನ ಸಂಘ ಸಂಸ್ಥೆಗಳು ಕರೆ ನೀಡಿದವು. ಪರಿಷತ್ತು ಈ ಬಂದ್‍ನಲ್ಲಿ ಸಕ್ರಿಯವಾಗಿ ಭಾಗವಹಿಸಿದ ಹಿರಿಮೆ ಹೊಂದಿದೆ.

ಚಂಪಾ ಅವರು ಕೆಲವು ನೂತನ ಕಾರ್ಯಕ್ರಮಗಳನ್ನು ಜಾರಿಗೆ ತಂದರು ಅದರಲ್ಲಿ, ಶನಿವಾರದ ಪುಸ್ತಕ ಸಂತೆ ಕಾರ್ಯಕ್ರಮ ಪ್ರಮುಖವಾದದ್ದು. ಪ್ರತಿ ಶನಿವಾರ ಪರಿಷತ್ತಿನ ಅಂಗಳದಲ್ಲಿ ಕನ್ನಡ ಪುಸ್ತಕ ಪ್ರಕಾಶಕರನ್ನು ಮತ್ತು ಮಾರಾಟಗಾರರನ್ನು ಆಹ್ವಾನಿಸಿ ರಿಯಾಯಿತಿ ದರದಲ್ಲಿ ಓದುಗರಿಗೆ ಪುಸ್ತಕಗಳು ದೊರೆಯುವಂತೆ ವ್ಯವಸ್ಥೆ ಮಾಡಿದರು. ಈ ಪುಸ್ತಕಸಂತೆಯಲ್ಲಿ ಹೊಸ ಪುಸ್ತಕ ಪ್ರಕಾಶಕರು ಮತ್ತು ಮಾರಾಟಗಾರರ ಜತೆಗೆ ಹಳೆ ಪುಸ್ತಕ ವ್ಯಾಪಾರಿಗಳೂ ಸಾಕಷ್ಟು ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದರು. ಅಪರೂಪದ ಮತ್ತು ಅಲಭ್ಯ ಗ್ರಂಥಗಳು ಇಲ್ಲಿ ಸಿಗುತ್ತಿದ್ದವು. ಸಾಹಿತ್ಯಪ್ರಿಯರ ಮೆಚ್ಚುಗೆ ಪಡೆದ ಈ ಯೋಜನೆ 29 ಜನವರಿ 2005ರಲ್ಲಿ ಪ್ರಾರಂಭವಾಗಿ ಅವರ ಅಧಿಕಾರಾವಧಿಯ ಅಂತ್ಯದ ವರೆಗೂ ನಡೆಯಿತು .ಅಲ್ಲದೆ ಚಂಪಾ ಅಧ್ಯಕ್ಷರ ಪುಸ್ತಕನಿಧಿ”ಯನ್ನು ಪ್ರಾರಂಭಿಸಿದರು. ತಾವು ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಜನ ಗೌರವ-ಸನ್ಮಾನಾರ್ಥವಾಗಿ ಹಾಕುತ್ತಿದ್ದ ಶಾಲು-ಹಾರಗಳ ಬದಲಿಗೆ ಕನ್ನಡ ಪುಸ್ತಕಗಳನ್ನು ನೀಡಲು ಜನರಿಗೆ ವಿನಂತಿಸಿದರು. `ಈ ಪುಸ್ತಕನಿಧಿಯಿಂದ ಗ್ರಂಥಗಳನ್ನು ಗಡಿನಾಡ ಕನ್ನಡ ಗ್ರಂಥ ಭಂಡಾರಗಳಿಗೆ, ಗ್ರಾಮೀಣ ಗ್ರಂಥಾಲಯಗಳಿಗೆ ಉಚಿತವಾಗಿ ಕಳುಹಿಸಿದರು.
ಭಾರತ ಸರ್ಕಾರವು ತಮಿಳು ಭಾಷೆಯನ್ನು “ಶಾಸ್ತ್ರೀಯ ಭಾಷೆ”ಯೆಂದು ಘೋಷಿಸಿತು. ಒಂದು ಸಾವಿರ ವರ್ಷದ ಲಿಖಿತ ಇತಿಹಾಸವಿದ್ದು, ಮೌಲಿಕ ಸಾಹಿತ್ಯ ರಚನೆ ಆಗಿದ್ದ ಭಾಷೆಯನ್ನು ಶಾಸ್ತ್ರೀಯ ಭಾಷೆಯೆಂದು ಘೋಷಿಸಲಾಗುತ್ತದೆ. ತಮಿಳಿನಷ್ಟೇ ಪ್ರಾಚೀನವಾಗಿರುವ ಕನ್ನಡ ಭಾಷೆಗೂ ಶಾಸ್ತ್ರೀಯ ಭಾಷೆಯ ಸ್ಥಾನ ಸಿಗಬೇಕೆಂದು ಹೋರಾಟ ನಡೆಸಿದ್ದರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement