ಓಂಕಾರೇಶ್ವರದಲ್ಲಿ 108 ಅಡಿ ಎತ್ತರದ ಆದಿ ಶಂಕರಾಚಾರ್ಯರ ಪ್ರತಿಮೆ ನಿರ್ಮಾಣಕ್ಕೆ ಮಧ್ಯಪ್ರದೇಶ ಸರ್ಕಾರ ನಿರ್ಧಾರ

ಭೋಪಾಲ್: ಮಧ್ಯಪ್ರದೇಶ ಸರ್ಕಾರವು 2,000 ಕೋಟಿ ರೂ.ಗಳ ವೆಚ್ಚದಲ್ಲಿ ದಾರ್ಶನಿಕ ಮತ್ತು ಅಪ್ರತಿಮ ವೇದಾಂತ ತತ್ವಜ್ಞಾನಿ ಆದಿ ಶಂಕರಾಚಾರ್ಯರ 108 ಅಡಿ ಎತ್ತರದ ಪ್ರತಿಮೆ ಸ್ಥಾಪಿಸುವ ಯೋಜನೆ ಹಾಗೂ ವಿಶ್ವ ದರ್ಜೆಯ ವಸ್ತುಸಂಗ್ರಹಾಲಯ ಸ್ಥಾಪಸಿವ ಯೋಜನೆ ಬಗ್ಗೆ ಪ್ರಸ್ತಾಪಿಸಿದೆ. ಈ ಯೋಜನೆ ಮಧ್ಯಪ್ರದೇಶವನ್ನು ಜಾಗತಿಕವಾಗಿ ಪರಿಚಯಿಸುವಂತೆ ಮಾಡಲಿದೆ ಎಂದು ಅದು ಹೇಳಿದೆ.
ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಕಳೆದ ವಾರ ಆಚಾರ್ಯ ಶಂಕರ ಸಾಂಸ್ಕೃತಿಕ ಏಕತಾ ನ್ಯಾಸ್‌ನ ಟ್ರಸ್ಟಿಗಳ ಮಂಡಳಿಯ ಸಭೆಯಲ್ಲಿ ಯೋಜನೆಯ ಕುರಿತು ಚರ್ಚಿಸಿದರು. ಸ್ವಾಮಿ ಅವೇಧಶಾನಂದ ಗಿರಿ ಮಹಾರಾಜ್ ಸೇರಿದಂತೆ ಪ್ರಮುಖ ಸಂತರು ಮತ್ತು ಟ್ರಸ್ಟ್ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.
ಆದಿ ಶಂಕರಾಚಾರ್ಯರು ಸನ್ಯಾಸ ದೀಕ್ಷೆ ಪಡೆದ ಓಂಕಾರೇಶ್ವರದಲ್ಲಿ ಆದಿ ಶಂಕರರ ಮ್ಯೂಸಿಯಂ ಮತ್ತು ಅಂತಾರಾಷ್ಟ್ರೀಯ ವೇದಾಂತ ಸಂಸ್ಥಾನದ 108 ಅಡಿಗಳಷ್ಟು ಎತ್ತರದ ಬಹುಲೋಹದ ಪ್ರತಿಮೆ ಸ್ಥಾಪಿಸುವ ಯೋಜನೆಯು ಮಧ್ಯಪ್ರದೇಶವನ್ನು ಪ್ರಪಂಚದಾದ್ಯಂತ ಪರಚಯಿಸುವಂತೆ ಮಾಡುತ್ತದೆ ಎಂದು ಮುಖ್ಯಮಂತ್ರಿ ಶಿವರಾಜ ಸಿಂಗ್‌ ಚೌಹಾನ್‌ ಹೇಳಿದ್ದಾರೆ.
ಏಕತೆಯ ಪ್ರತಿಮೆ (Statue of Oneness) ಎಂದು ಕರೆಯಲ್ಪಡುವ ಪ್ರತಿಮೆಯ ಎತ್ತರವು 108 ಅಡಿಗಳಷ್ಟು ಇರಲಿದ್ದು 54 ಅಡಿ ಎತ್ತರದ ವೇದಿಕೆಯಲ್ಲಿ ಸ್ಥಾಪಿಸಲಾಗುತ್ತದೆ. ಮಾಂಧಾತ ಪರ್ವತದ 7.5 ಹೆಕ್ಟೇರ್ ಪ್ರದೇಶದಲ್ಲಿ ಪ್ರತಿಮೆ ಮತ್ತು ಶಂಕರ ಮ್ಯೂಸಿಯಂ ಸ್ಥಾಪಿಸಲಾಗುವುದು. ನರ್ಮದಾ ನದಿಯ ಇನ್ನೊಂದು ಬದಿಯಲ್ಲಿ 5 ಹೆಕ್ಟೇರ್ ಪ್ರದೇಶದಲ್ಲಿ ಗುರುಕುಲಂ ಮತ್ತು 10 ಹೆಕ್ಟೇರ್ ಪ್ರದೇಶದಲ್ಲಿ ಆಚಾರ್ಯ ಶಂಕರ ಅಂತಾರಾಷ್ಟ್ರೀಯ ಅದ್ವೈತ ವೇದಾಂತ ಸಂಸ್ಥಾನವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಓಂಕಾರೇಶ್ವರದಲ್ಲಿ ಶಂಕರಾಚಾರ್ಯರ ಪ್ರತಿಮೆಯನ್ನು ಸ್ಥಾಪಿಸುವುದು ಪ್ರಾಯೋಗಿಕ ವೇದಾಂತವನ್ನು ಜೀವಂತಗೊಳಿಸುವ ಯೋಜನೆಯಾಗಿದೆ. ಈ ಜಗತ್ತು ಒಂದೇ ಕುಟುಂಬವಾಗಲಿ ಎಂಬುದು ಇದರ ಹಿಂದಿನ ಗುರಿಯಾಗಿದ್ದು ಟ್ರಸ್ಟ್‌ನ ಸದಸ್ಯರು ನೀಡುವ ಸಲಹೆಗಳನ್ನು ರಾಜ್ಯ ಸರ್ಕಾರ ಅನುಷ್ಠಾನಗೊಳಿಸಲಿದ್ದು, ಸಂಪೂರ್ಣ ಕ್ರಿಯಾ ಯೋಜನೆಗೆ ಅಂತಿಮ ರೂಪ ನೀಡುವ ಕೆಲಸವನ್ನು ತ್ವರಿತವಾಗಿ ಮಾಡಲಾಗುವುದು ಎಂದು ತಿಳಿಸಿದರು.
ಆದಿ ಶಂಕರಾಚಾರ್ಯರು ದೇಶ ಸಂಚಾರ ಮಾಡಿರುವ ಅಪ್ರತಿಮ ವೇದಾಂತ ಹಾಗೂ ದಾರ್ಶನಿಕರು. ಅದ್ವೈತ ಸಿದ್ಧಾಂತ ಪ್ರತಿಪಾದಕರು. ಅವರು ಗುರು ಗೋವಿಂದ ಭಗವತ್ಪಾದರನ್ನು ಓಂಕಾರೇಶ್ವರರಲ್ಲಿ ಭೇಟಿ ಮಾಡಿ ಇಲ್ಲಿಯೇ ಸಂನ್ಯಾಸ ದೀಕ್ಷೆ ಸ್ವೀಕರಿಸಿದರು ಎಂಬುದು ಐತಿಹ್ಯ. ಹೀಗಾಗಿ ನರ್ಮದಾ ನದಿ ತಟದಲ್ಲಿ ಓಂಕಾರೇಶ್ವರದಲ್ಲೇ ಪ್ರತಿಮೆ ಸ್ಥಾಪನೆಗೆ ನಿರ್ಧರಿಸಲಾಗಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 3

ನಿಮ್ಮ ಕಾಮೆಂಟ್ ಬರೆಯಿರಿ