ಫೆಬ್ರವರಿ ಮೊದಲ ವಾರದಲ್ಲಿ ಸೋಂಕು ಗರಿಷ್ಠ ಮಟ್ಟ ತಲುಪುತ್ತದೆ..ಆದ್ರೆ ಲಾಕ್ ಡೌನ್ ಮಾಡಲ್ಲ: ಸಚಿವ ಸುಧಾಕರ

posted in: ರಾಜ್ಯ | 0

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಇನ್ನೂ ಗರಿಷ್ಠ ಮಟ್ಟಕ್ಕೆ ಹೋಗಿಲ್ಲ. ಫೆಬ್ರವರಿ ಮೊದಲ ವಾರ ಹೋಗುತ್ತದೆ. 3 ಅಥವಾ 4ನೇ ವಾರದಿಂದ ಕಡಿಮೆ ಆಗುತ್ತದೆ ಎಂದು ತಜ್ಞರು ಹೇಳಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಲಾಕ್‌ಡೌನ್‌ ಜಾರಿಗೆ ತರುವ ಚಿಂತನೆ ಇಲ್ಲ. ಲಾಕ್‌ಡೌನ್‌ನಿಂದ ಸೋಂಕು ನಿಯಂತ್ರಣ ಆಗುವುದಿಲ್ಲ. ಹೀಗಾಗಿ ರಾಜ್ಯದಲ್ಲಿ ಲಾಕ್‌ಡೌನ್‌ ಮಾಡುವುದಿಲ್ಲ ಎಂದು ಆರೋಗ್ಯ ಸಚಿವ ಡಾ. ಕೆ.ಸುಧಾಕರ್‌ ಸ್ಪಷ್ಟಪಡಿಸಿದ್ದಾರೆ.

ಲಾಕ್‌ಡೌನ್ ಮೂಲಕ ಸೋಂಕು ನಿಯಂತ್ರಣ ಆಗುವುದಿಲ್ಲ. ಎರಡು ಬಾರಿ ಲಾಕ್‌ಡೌನ್ ಮಾಡಿ ಜನರಿಗೆ ಸಮಸ್ಯೆ ಆಗಿದೆ. ನಿನ್ನೆ ಪ್ರಧಾನಿ ಮೋದಿ ಅವರು ಕೂಡಾ ಆರ್ಥಿಕ ನಷ್ಟ ಆಗದಂತೆ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಿದ್ದಾರೆ. ಹೀಗಾಗಿ ಲಾಕ್‌ಡೌನ್‌ನಂತಹ ಮಾಡದೆ ಕೊರೊನಾ ನಿಯಂತ್ರಣಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳುವ ಕೆಲಸ ಮಾಡುತ್ತೇವೆ. ಲಸಿಕೆ ತೆಗೆದುಕೊಳ್ಳಿ, ಕೊರೊನಾ ಮಾರ್ಗಸೂಚಿ ಪಾಲನೆ ಮಾಡಿ. ಬಹಿರಂಗ ಸಮಾವೇಶ, ಗುಂಪು ಸೇರುವುದು ಮಾಡಬೇಡಿ. ಒಂದೂವರೆ ತಿಂಗಳು ಜನರು ಎಚ್ಚರಿಕೆಯಿಂದ ಇರಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಅನೇಕ ಜಿಲ್ಲೆಗಳಲ್ಲಿ ಸೋಂಕು ಹೆಚ್ಚುತ್ತಿದೆ. ರಾಜ್ಯದಲ್ಲಿ ಸೋಂಕು ದಿನೇ ದಿನೇ ಹೆಚ್ಚಳವಾಗುತ್ತಿದೆ. ಆದರೂ ಶೇ.5ರಿಂದ 6 ರಷ್ಟು ಮಂದಿ ಮಾತ್ರ ಆಸ್ಪತ್ರೆ ದಾಖಲಾಗುತ್ತಿರುವುದು ಸಮಾಧಾನದ ಸಂಗತಿ. ಆದರೆ ಆರೋಗ್ಯ ಸಿಬ್ಬಂದಿ ಕೂಡಾ ಸೋಂಕಿಗೆ ತುತ್ತಾಗುತ್ತಿದ್ದಾರೆ. ಹೀಗಾಗಿ ಮತ್ತಷ್ಟು ಎಚ್ಚರಿಕೆ ಅವಶ್ಯಕತೆ ಇದೆ. ಹೆಚ್ಚು ಸೋಂಕು ಇರುವ ಜಿಲ್ಲಾಡಳಿತಗಳ ಜೊತೆ ಇಂದು ಸಭೆ ಮಾಡುತ್ತೇನೆ. ಪ್ರಧಾನಿ ಮೋದಿ ಅವರು ಕೊಟ್ಟ ಸಲಹೆಗಳನ್ನು ಅನುಷ್ಠಾನ ಮಾಡುತ್ತೇವೆ ಎಂದು ಹೇಳಿದ್ದಾರೆ.
ವೀಕೆಂಡ್ ಕರ್ಫ್ಯೂ ಮಾಡಿದರೂ ಸೋಂಕು ಕಡಿಮೆ ಆಗುತ್ತಿಲ್ಲವೆಂಬ ವಿಚಾರಕ್ಕೆ ಉತ್ತರಿಸಿದ ಅವರು, ಕಏಳು ದಿನಕ್ಕೆ ಸೋಂಕು ಕಡಿಮೆ ಆಗುವುದಿಲ್ಲ. ಮೊದಲ ಎರಡು ಅಲೆಯಲ್ಲಿ 14 ದಿನಗಳ ಚೈನ್ ಇತ್ತು. ಈ ಸೋಂಕು 5-6 ಪಟ್ಟು ವೇಗವಾಗಿ ಹರಡುತ್ತಿದೆ. ಹೀಗಾಗಿ ಇನ್ನು ಸ್ವಲ್ಪ ‌ದಿನದಲ್ಲಿ ವೀಕೆಂಡ್ ಕರ್ಫ್ಯೂ ಫಲಿತಾಂಶ ಸಿಗಬಹುದು ಎಂದರು.
ಈಗ ಇರುವ ಮಾರ್ಗಸೂಚಿ ಈ ತಿಂಗಳ ಅಂತ್ಯದವರೆಗೂ ಮುಂದುವರೆಯಲಿದೆ. ಸಾರ್ವಜನಿಕರು ಸಹಕರಿಸಬೇಕು. ಯಾರು ನಿರ್ಲಕ್ಷ್ಯ ಮಾಡುವುದು ಬೇಡ. ಮಾಸ್ಕ್ ಕಡ್ಡಾಯವಾಗಿ ಧರಿಸಿ. ಅರ್ಹರು ಮೂರನೇ ಡೋಸ್ ತಗೆದುಕೊಳ್ಳಿ. ಎರಡನೇ ಡೋಸ್ ಯಾರು ತಗೆದುಕೊಂಡಿಲ್ಲ ಅವರೆಲ್ಲ ತಪ್ಪದೆ ಡೋಸ್ ತಗೆದುಕೊಳ್ಳಿ ಎಂದು ಮನವಿ ಮಾಡಿದರು.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ