ಶಬರಿಮಲೆ: ಬೆಳಗಿದ ಮಕರ ಜ್ಯೋತಿ-ದರ್ಶನ ಪಡೆದು ಪುನೀತರಾದ ಭಕ್ತರು

ಶಬರಿಮಲೆ: ಶುಕ್ರವಾರ ಮಕರ ಸಂಕ್ರಾಂತಿಯಂದು ಶಬರಿಮಲೆ ಪೊನ್ನಂಬಲಮೇಡುನಲ್ಲಿ ಮಕರ ಜ್ಯೋತಿ ಕಾಣಿಸಿದೆ. ಮಕರ ಸಂಕ್ರಾಂತಿ ದಿನ ಆಕಾಶದಲ್ಲಿ ನಕ್ಷತ್ರ ಉದಯಿಸುತ್ತಿದ್ದಂತೆ ಪೊನ್ನಂಬಲಮೇಡುನಲ್ಲಿ ಮಕರ ಜ್ಯೋತಿ ಬೆಳಗಿತು.
ಮಕರ ಜ್ಯೋತಿ ದರ್ಶನ ಪಡೆದು ಅಯ್ಯಪ್ಪ ಭಕ್ತರು ಪುನೀತರಾದರು. ಶಬರಿಮಲೆ ಸನ್ನಿಧಾನಂ ದೇಗುಲದಲ್ಲಿ ತಿರುವಾಭರಣ ಅಲಂಕೃತ ಅಯ್ಯಪ್ಪನಿಗೆ ದೀಪಾರಾಧನೆ ವೇಳೆ ಮಕರವಿಳಕ್ಕು ಬೆಳಗಿತು. ಮಕರ ಜ್ಯೋತಿ ಕಾಣುವ ಸ್ಥಳಗಳಲ್ಲಿ ಅಯ್ಯಪ್ಪ ಭಕ್ತರು ಜ್ಯೋತಿ ದರ್ಶನಕ್ಕಾಗಿ ಗಂಟೆಗಟ್ಟಲೆ ಕಾದು ಕುಳಿತಿದ್ದರು.
ಮಕರಸಂಕ್ರಮಣದ ಮುನ್ನಾದಿನದಂದು ಅಯ್ಯಪ್ಪನಿಗೆ ತೊಡುವ ತಿರುವಾಭರಣಗಳೊಂದಿಗೆ ಪಂದಳಂನಿಂದ ಮೆರವಣಿಗೆಯು ಸಂಜೆ 5 ಗಂಟೆಗೆ ಶರಂಕುತ್ತಿ ತಲುಪಿತು. ಅಲ್ಲಿಂದ ದೇವಸ್ವಂ ಬೋರ್ಡ್ ನಿಯೋಗವು ಮೆರವಣಿಗೆ ಬರಮಾಡಿಕೊಂಡು ವಾದ್ಯಮೇಳದೊಂದಿಗೆ ಸನ್ನಿಧಾನಕ್ಕೆ ಕರೆದೊಯ್ದಿತು. ಧ್ವಜಸ್ತಂಭದಡಿಯಲ್ಲಿ ಅವರನ್ನು ದೇವಸ್ವಂ ಸಚಿವ ಕೆ.ರಾಧಾಕೃಷ್ಣನ್, ದೇವಸ್ವಂ ಮಂಡಳಿ ಅಧ್ಯಕ್ಷ ಕೆ.ಅನಂತಗೋಪನ್, ಸದಸ್ಯ ಮನೋಜ್ ಚರಲೇಲ್ ಬರಮಾಡಿಕೊಂಡರು. ನಂತರ ತಿರುವಾಭರಣಗಳನ್ನು ಅಯ್ಯಪ್ಪನ ಮೂರ್ತಿಗೆ ತೊಡಿಸಿ ಪೂಜೆಸಲ್ಲಿಸಿದರು. ಬಳಿಕ ಪೊನ್ನಂಬಲಮೇಡುಬೆಟ್ಟದಲ್ಲಿ ಮಕರವಿಳಕ್ಕು ಕಾಣಿಸಿತು. ಮಧ್ಯಾಹ್ನ 2.29ಕ್ಕೆ ಮಕರ ಸಂಕ್ರಮಣದ ವೇಳೆ ಕವಡಿಯಾರ್ ಅರಮನೆ ವತಿಯಿಂದ ತುಪ್ಪದಿಂದ ಅಯ್ಯಪ್ಪನಿಗೆ ಅಭಿಷೇಕ ಮಾಡಲಾಯಿತು. ಮಕರ ಸಂಕ್ರಮಣ ಪೂಜೆಯ ನಂತರ ಮುಚ್ಚಿದ್ದ ಮೆಟ್ಟಿಲುಗಳನ್ನು ಸಂಜೆ 5 ಗಂಟೆಗೆ ತೆರೆಯಲಾಯಿತು.
ಗುರುವಾರ ಪಂಪಾ (ಪಂಬಾ) ನದಿಯ ದಡದಲ್ಲಿ ತೀರ್ಥೋದ್ಭವದ ಅಂಗವಾಗಿ ಪಂಬಾ ‘ವಿಳಕ್ಕು’ ಮತ್ತು ‘ಸದ್ಯ’ ವಿಧಿವಿಧಾನಗಳನ್ನು ನಡೆಸಲಾಯಿತು.
ಕೋವಿಡ್ ಹಿನ್ನೆಲೆಯಲ್ಲಿ ಈ ವರ್ಷ ಸಹ ನಿರ್ಬಂಧಗಳನ್ನು ಹೇರಲಾಗಿದೆ. ಎಲ್ಲಿಯೂ ಗುಡಿಸಲು ಕಟ್ಟಲು ಹಾಗೂ ಪುಲ್ಲುಮೇಟ್ಟುಗೆ ಭೇಟಿ ನೀಡಲು ಅನುಮತಿ ಇರಲಿಲ್ಲ. ಜನವರಿ 19ರವರೆಗೆ ಭಕ್ತರು ದರ್ಶನ ಪಡೆಯಬಹುದು.

ಪ್ರಮುಖ ಸುದ್ದಿ :-   'ಭಾರತದ ಮೇಲೆ ಆಕ್ರಮಣ ಮಾಡಿ ಮೋದಿಯನ್ನು ಸರಪಳಿ ಹಾಕಿ ಬಂಧಿಸ್ತೇವೆ': ಬಡಾಯಿ ಕೊಚ್ಚಿಕೊಂಡ ಪಾಕ್ ಸೇನಾಧಿಕಾರಿ | ವೀಡಿಯೊ ವೀಕ್ಷಿಸಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement