ಧಾರವಾಡ: ಕೂರಿಗೆ ತಜ್ಞ ಅಬ್ದುಲ್ ಖಾದರ್ ನಡಕಟ್ಟಿನರಿಗೆ ಪದ್ಮಶ್ರೀ ಪುರಸ್ಕಾರದ ಗೌರವ

ಧಾರವಾಡ: ಈ ಬಾರಿ ಧಾರವಾಡ ಜಿಲ್ಲೆಯ ಕೂರಿಗೆ ತಜ್ಞ ಅಬ್ದುಲ್ ಖಾದರ್ ನಡಕಟ್ಟಿನ (69 ವರ್ಷ) ಪದ್ಮಶ್ರೀ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಧಾರವಾಡ ಜಿಲ್ಲೆಯ ಅಣ್ಣಿಗೇರಿಯ ನಿವಾಸಿ ಅಬ್ದುಲ್ ಖಾದರ್ ನಡಕಟ್ಟಿನ ಅವರು ಬಿತ್ತನೆ ಕೂರಿಗೆ ಅನ್ವೇಷಣೆ ಮಾಡಿದ್ದು, ಅವರಿಗೆ ಪದ್ಮಶ್ರೀ ಪ್ರಶಸ್ತಿ ದೊರೆತಿದೆ. ಅವರು ಬಿತ್ತನೆ ಸಮಸ್ಯೆ ಕಂಡುಕೊಂಡು ಅನುಕೂಲಕರ ಕೂರಿಗೆ ಅಭಿವೃದ್ಧಿಪಡಿಸಿದ್ದಾರೆ. ಅಲ್ಲದೇ ವಿವಿಧ ಕೃಷಿ ಸಲಕರಣೆಗಳ ಆವಿಷ್ಕಾರ ಮಾಡಿದ್ದಾರೆ.
ಎಸ್​ಎಸ್​ಎಲ್​ಸಿ ಆದ ಬಳಿಕ ಮುಂದೆ ಓದಲು  ಅವರ ತಂದೆ  ಒಪ್ಪಲಿಲ್ಲ.. ಕಾರಣ ಹೆಚ್ಚಿಗೆ ಓದಿದರೆ ಪೂರ್ವಜರಿಂದ ಬಂದಿರುವ ಆಸ್ತಿ ನೋಡಿಕೊಳ್ಳಲು ಯಾರೂ ಇರುವುದಿಲ್ಲ ಎಂದು. ಯಾಕೆಂದರೆ ತಂದೆಗೆ ಇವರೊಬ್ಬರೇ ಮಗ. ಆದರೂ ಮನೆಯಲ್ಲಿ ಜಗಳವಾಡಿ ಪಿಯುಸಿಗೆ ಪ್ರವೇಶ ಪಡೆದರು. ಆದರೆ ನಂತರ ತಂದೆ ಒತ್ತಡಕ್ಕೆ ಮಣಿದು ಊರಿಗೆ ಬಂದು ಕೃಷಿಯಲ್ಲಿ ತೊಡಗಿಕೊಂಡರು. ವಿದ್ಯಾರ್ಥಿಯಾಗಿದ್ದಾಗಲೇ ನಸುಕಿನಲ್ಲಿ ಏಳಲು ಕೂಗುವ ಅಲಾರಾಂ ಶಬ್ದದೊಂದಿಗೆ ಮುಖದ ಮೇಲೆ ನೀರು ಬೀಳುವ ಯಂತ್ರ ಅಭಿವೃದ್ಧಿಪಡಿಸಿದ್ದರು.
ಇವರು ತಮ್ಮ ಕೃಷಿ ಜಮೀನಿನ ಹಲವಾರು ಎಕರೆಗಳಲ್ಲಿ ನೂರಾರು ಹುಣಸೆ ಗಿಡ ಬೆಳೆಸಿದ್ದರು. ಆದರೆ ಗಿಡಗಳಲ್ಲಿ ಬಿಟ್ಟ ಹುಣಸೆ ಹಣ್ಣಿನ ಬೀಜ ತೆಗೆಯುವುದು ಸುಲಭವಾಗಿರಲಿಲ್ಲ. ಇದನ್ನು ಸವಾಲಾಗಿ ಸ್ವೀಕರಿಸಿದ ಅಬ್ದುಲ್ ನಡಕಟ್ಟಿನ್ ಕೆಲವೇ ದಿನಗಳಲ್ಲಿ ಹುಣಸೆ ಹಣ್ಣಿನ ಬೀಜ ಬೇರ್ಪಡಿಸುವ ಯಂತ್ರವನ್ನು ಅನ್ವೇಷಣೆ ಮಾಡಿದರು.
ಬೆಳೆ ಬಂದ ಮೇಲೆ ಬೆಳೆಗಳ ಕಾಂಡವನ್ನು ಕಿತ್ತಿ, ರೈತರು ಸುಟ್ಟು ಹಾಕುತ್ತಾರೆ. ಆದರೆ ಅದನ್ನೇ ಗೊಬ್ಬರದಂತೆ ಬಳಸಿದರೆ ಎಂದು ಯೋಚಿಸಿ ಟ್ರ್ಯಾಕ್ಟರ್ ಗೆ​ ಅಳವಡಿಸಬಹುದಾದ ರೋಟೋವೇಟರ್​ ಅಭಿವೃದ್ಧಿಪಡಿಸಿದರು.
ಮೆಣಸಿನ ಗಿಡ, ಹತ್ತಿ ಗಿಡ, ಜೋಳ, ಮೆಕ್ಕೆ ಜೋಳದ ಕಟ್ಟಿಗೆಯನ್ನು ಪುಡಿ ಪುಡಿ ಮಾಡುವುದರಿಂದ ಅದೇ ಗೊಬ್ಬರವಾಗಿ ಭೂಮಿಯಲ್ಲಿ ಬೆರೆತು ಫಲವತ್ತತೆ ಹೆಚ್ಚುತ್ತದೆ.
ಹಲವಾರು ಯಂತ್ರಗಳನ್ನು ತಯಾರಿಸಲು ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದ ನಡಕಟ್ಟಿನ್, ಸಾಲವನ್ನು ತೀರಿಸಲು ಸುಮಾರು 40 ಎಕರೆಯಷ್ಟು ಭೂಮಿಯನ್ನು ಅವರು ಮಾರಿದ್ದರು…! ನಡಕಟ್ಟಿನ್ ಸೋತು ಸುಣ್ಣವಾಗಿ ಹೋಗಿದ್ದರು. ಕೊನೆಗೆ ಒಂದು ದಿನ ತಮಗೆ ಸರಕಾರದ ಸಹಾಯ ಸಿಗೋದಿಲ್ಲ ಅನ್ನೋ ನೋವಿನಿಂದ ಆತ್ಮಹತ್ಯೆ ಮಾಡಿಕೊಳ್ಳಲು ಹೋದರು. ಇದನ್ನು ಗಮನಿಸಿದ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಆಗಿನ ಕುಲಪತಿ ಡಾ. ಎಸ್.ಎ. ಪಾಟೀಲ ಇವರನ್ನು ಕರೆಯಿಸಿಕೊಂಡು, ಬುದ್ಧಿವಾದ ಹೇಳಿ ಕೃಷಿ ಚಟುವಟಿಕೆಗೆ ಬೇಕಾದ ಮತ್ತಷ್ಟು ಯಂತ್ರಗಳನ್ನು ಸಂಶೋಧಿಸುವಂತೆಯೂ ಅವರು ಸಲಹೆ ನೀಡಿದರು. ನಂತರ ನಡಕಟ್ಟಿನ್ ಕೂರಿಗೆ ಯಂತ್ರ ಅಭಿವೃದ್ಧಿಪಡಿಸಲು ಮುಂದಾದರು.
ನಡಕಟ್ಟಿನ್, ರೈತರಿಗೆ ಅತ್ಯವಶ್ಯಕವಾದ ಕೂರಿಗೆ, ಅಂದರೆ ಬಿತ್ತನೆ ಮಾಡುವ ಯಂತ್ರವನ್ನು ಆವಿಷ್ಕಾರ ಮಾಡಿದರು.
ಅದೇ ಈಗ ಖ್ಯಾಥಿ ಪಡೆದ “ನಡಕಟ್ಟಿನ ಕೂರಿಗೆ”.
ಈ ಯಂತ್ರದಿಂದ ಮಿಶ್ರ ಬೆಳೆ ಪದ್ಧತಿಗೆ ಹಾಗೂ ಹತ್ತಾರು ಎಕರೆ ಜಮೀನನ್ನು ಟ್ರ್ಯಾಕ್ಟರ್ ಸಹಾಯದಿಂದ ಒಬ್ಬನೇ ಒಬ್ಬ ವ್ಯಕ್ತಿ ಬಿತ್ತನೆ ಮಾಡಲು ಸಾಧ್ಯವಾಯಿತು. ಇಂಥ ಯಂತ್ರಗಳನ್ನು ಪ್ರತಿವರ್ಷ ಸಾವಿರಾರು ರೈತರು ಖರೀದಿಸುತ್ತಿದ್ದಾರೆ.
ನಿರಂತರವಾಗಿ ಅನ್ವೇಷಣೆ ಮಾಡುತ್ತಾ ಹೋದ ನಡಕಟ್ಟಿನ ಅವರು, ಒಂದೇ ಯಂತ್ರದ ಮೂಲಕ ಐದು ಕೆಲಸಗಳನ್ನು ಒಬ್ಬನೇ ಮಾಡುವಂತೆ ಮಾಡಿದರು. ಫೈವ್ ಇನ್ ಒನ್ ಕೂರಿಗೆ ಎಂಬ ಹೆಸರಿನ ಈ ಯಂತ್ರದ ಮೂಲಕ ಒಂದೇ ಬಾರಿಗೆ ಊಳುತ್ತ, ಬಿತ್ತುತ್ತ, ಗೊಬ್ಬರವನ್ನೂ ಅದಕ್ಕೆ ಸೇರಿಸಿ, ಮೇಲೆ ಮಣ್ಣು ಮುಚ್ಚಿ, ನೀರು ಸಿಂಪರಣೆಯನ್ನು ಏಕಕಾಲಕ್ಕೆ ಮಾಡಬಹುದು. ಇದರಿಂದ ಎರಡು ದಿನಗಳಲ್ಲಿ ಹತ್ತಾರು ಆಳುಗಳು ಮಾಡೋ ಕೆಲಸವನ್ನು ಕೆಲವೇ ಗಂಟೆಗಳಲ್ಲಿ ಮಾಡಬಹುದಾಗಿದೆ.
ನಡಕಟ್ಟಿನ ಸಾಧನೆ ಗುರುತಿಸಿ ಅಂದಿನ ರಾಷ್ಟ್ರಪತಿ ಪ್ರಣವ್ ಮುಖರ್ಜಿ ‘ಜೀವಮಾನ ಶ್ರೇಷ್ಠ ಪ್ರಶಸ್ತಿ’ಯನ್ನು ನೀಡಿ ಸನ್ಮಾನಿಸಿದ್ದಾರೆ. ಈ ಪ್ರಶಸ್ತಿ 7.5 ಲಕ್ಷ ರೂ. ನಗದು ಪುರಸ್ಕಾರವನ್ನು ಹೊಂದಿದೆ.

ಓದಿರಿ :-   ಬಂದೂಕು ಹಿಡಿದು ಚುನಾವಣಾ ಪ್ರಚಾರ...! ದೃಶ್ಯ ಮೊಬೈಲ್‌ನಲ್ಲಿ ಸೆರೆ

 

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

advertisement

  1. SADANANDA HEGGADAL MATH

    ಇವರಿಗೆ ಸರಕಾರ 10 ಎಕರೆ ಜಮೀನು ಕೊಡಬಾರದೇಕೆ!? ಕೃಷಿಕರಿಗೆ ಸಹಾಯಮಾಡಿದ ವರನ್ನು ಸರಕಾರ ಗುರುತಿಸಿ ಸನ್ಮಾನ ಮಾಡಿರುವುದು ಶ್ಲ್ಯಾಘನೀಯ. ಅಬ್ದುಲ್‌ ಖಾದರ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಇವರನ್ನು ಕೆಲಸವನ್ನು ಗುರುತಿಸಿ ಬೆಳಕಿಗೆ ತಂದ ಎಲ್ಲರಿಗೂ ಅಭಿಮಾನಪೂರ್ವಕ ಅಭಿನಂದನೆಗಳು.

ನಿಮ್ಮ ಕಾಮೆಂಟ್ ಬರೆಯಿರಿ