ಬೀಜಿಂಗ್: ದಕ್ಷಿಣ ಆಫ್ರಿಕಾದಲ್ಲಿ ಕೋವಿಡ್-19ಗಿಂತ ಅಪಾಯಕಾರಿಯಾದ ವೈರಸ್ ಕಾಣಿಸಿಕೊಂಡಿದೆ ಎಂದು ಚೀನಾದ ವಿಜ್ಞಾನಿಗಳು ಹೇಳಿದ್ದಾರೆ. ನಿಯೋಕೋವ್ ಹೆಸರಿನ ಈ ವೈರಸ್ ಸದ್ಯ ಬಾವಲಿಗಳಲ್ಲಿ ಮಾತ್ರ ಕಾಣಿಸಿಕೊಂಡಿದೆ, ಮನುಷ್ಯನಿಗೆ ಹಬ್ಬಿಲ್ಲ ಎಂದು ಹೇಳಿದ್ದಾರೆ. ಆದರೆ ರೂಪಾಂತರಗೊಳ್ಳುವ ಮತ್ತು ಮನುಷ್ಯನಿಗೆ ಸೋಂಕು ಬರುವ ಎಲ್ಲ ಸಾಧ್ಯತೆಗಳಿವೆ ಎಂದು ಎಚ್ಚರಿಸಿದ್ದಾರೆ.
ಆದರೆ ಭಾರತೀಯ ವಿಜ್ಞಾನಿಗಳು, ವೈದ್ಯರು, ಈ ವೈರಸ್ ಬಗ್ಗೆ ಜನರು ಹೆದರಬೇಕಿಲ್ಲ, ಇದು ಹೊಸ ವೈರಸ್ ಅಲ್ಲ ಅಥವಾ ಹೊಸ ವಿಚಾರವೂ ಅಲ್ಲ. ಈ ವೈರಸ್ ರೂಪಾಂತರಗೊಳ್ಳುವ ಸಾಧ್ಯತೆ ತೀರಾ ಕಡಿಮೆ ಎಂದು ಹೇಳುತ್ತಾರೆ. 2013ರಲ್ಲೇ ಈ ವೈರಸ್ ಕಂಡುಬಂದಿದೆ. ಆದರೆ ಈ ವರೆಗೆ ರೂಪಾಂತರವಾಗಿಲ್ಲ, ಈ ವೈರಸ್ ತಗುಲಿ ಯಾರೂ ಸತ್ತಿಲ್ಲ. ಅದು ರೂಪಾಂತರಗೊಂಡರೆ ಮಾತ್ರ ಅಪಾಯ ಎಂದು ಹೇಳುತ್ತಾರೆ. ಆದರೆ ಚೀನಾದ ವೂಹಾನ್ ಯುನಿವರ್ಟಿಸಿಯ ವಿಜ್ಞಾನಿಗಳು ಆ ವೈರಸ್ ರೂಪಾಂತರಗೊಳ್ಳಲು ಒಂದೇ ಹಂತ ಬಾಕಿ ಇದೆ ಎನ್ನುತ್ತಾರೆ.
ನಿಯೋಕೋವ್ ವೈರಸ್: ನಿಯೋಕೋವ್ ಒಂದು ಕೊರೋನಾ ವೈರಸ್. ಅದು ರೂಪಾಂತರಿಯಲ್ಲ, ಅದು ಮಾರ್ಸ್ ವೈರಸ್ ಮಾದರಿಯದು ಎಂದು 2020ರಲ್ಲಿ ನಡೆದ ಅಧ್ಯಯನ ವರದಿ ಹೇಳಿದೆ. ದಕ್ಷಿಣ ಆಫ್ರಿಕಾದಲ್ಲಿ ಬಾವಲಿಗಳು ಹೆಚ್ಚಿರುವ ಪ್ರದೇಶಗಳಲ್ಲಿ ಈ ವೈರಸ್ 2013ರಲ್ಲೇ ಕಂಡುಬಂದಿದೆ. ಇದು ಮಾರ್ಸ್-ಕೋವ್ ವೈರಸ್ ನ ಶೇ. 85ರಷ್ಟು ಲಕ್ಷಣಗಳನ್ನು ಹೊಂದಿದೆ. ಕೋವಿಡ್-19 ಸೋಂಕಿನ ಲಕ್ಷಣಗಳನ್ನೇ ಹೊಂದಿದೆ. ಸಾರ್ಸ್ ವೈರಸ್ ಮನುಷ್ಯನಿಗೆ ಉಂಟುಮಾಡುವ ಅಪಾಯದಷ್ಟೇ ನಿಯೋಕೋವ್ ಕೂಡ ಮಾಡಬಲ್ಲದು ಎನ್ನುತ್ತಾರೆ ವಿಜ್ಞಾನಿಗಳು.
ಸದ್ಯಕ್ಕೆ ಇದು ಮನುಷ್ಯನಿಗೆ ಅಪಾಯಕಾರಿಯಾಗಿಲ್ಲ. ಆದರೆ ರೂಪಾಂತರಗೊಂಡು ಮನುಷ್ಯನಿಗೆ ಹಬ್ಬಿದರೆ ತೀರಾ ಅಪಾಯಕಾರಿಯಾಗಬಲ್ಲುದು ಎಂಬುದು ಚೀನಾ ವಿಜ್ಞಾನಿಗಳ ವಾದ. ಆದರೆ ಆತಂಕಗೊಳ್ಳಲು ಯಾವುದೇ ಕಾರಣಗಳೇ ಇಲ್ಲ ಎಂದು ರಷ್ಯಾ ವಿಜ್ಞಾನಿಗಳು ಹೇಳುತ್ತಾರೆ.
ನಿಮ್ಮ ಕಾಮೆಂಟ್ ಬರೆಯಿರಿ