ವೇಗವಾಗಿ ಹರಡುವ ಓಮಿಕ್ರಾನ್‌ನ ಹೊಸ ರೂಪಾಂತರಿ BA.2 57 ದೇಶಗಳಲ್ಲಿ ಪತ್ತೆ: ಎಚ್ಚರಿಸಿದ ಡಬ್ಲ್ಯೂಎಚ್‌ಒ

ಜಿನೇವಾ: ಬಹಳ ವೇಗವಾಗಿ ಹರಡುವ ಕೊರೊನಾ ವೈರಸ್ ಹೊಸ ರೂಪಾಂತರಿ ಓಮಿಕ್ರಾನ್ ತಳಿಯ ಮತ್ತೊಂದು ಉಪ ರೂಪಾಂತರಿ ಈಗ 57 ದೇಶಗಳಲ್ಲಿ ಪತ್ತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) ಮಂಗಳವಾರ ಎಚ್ಚರಿಸಿದೆ.
ಈ ಉಪತಳಿಗೆ ಮೂಲ ಓಮಿಕ್ರಾನ್ ಗಿಂತಲೂ ಭಾರಿ ವೇಗದಲ್ಲಿ ಸೋಂಕು ತಗುಲಿಸುವ ಸಾಮರ್ಥ್ಯವಿದೆ ಎಂದು ಕೆಲವು ಅಧ್ಯಯನಗಳು ತಿಳಿಸಿದ್ದು, ಇದು ಹೊಸ ಆತಂಕಕ್ಕೆ ಕಾರಣವಾಗಿದೆ. ಓಮಿಕ್ರಾನ್ ತಳಿಯು ದಕ್ಷಿಣ ಆಫ್ರಿಕಾದಲ್ಲಿ ಮೊದಲು ಪತ್ತೆಯಾದ ಕೇವಲ 10 ವಾರಗಳಲ್ಲಿ ಜಗತ್ತಿನಾದ್ಯಂತ ಹರಡಿತ್ತು. ಈಗ ಉಪತಳಿ ಅದಕ್ಕಿಂತಲೂ ಹೆಚ್ಚು ಸಾಂಕ್ರಾಮಿಕ ಎನ್ನಲಾಗಿದ್ದು, ಹೀಗಾಗಿ ವಿಶ್ವ ಆರೋಗ್ಯ ಸಂಸ್ಥೆ (WHO) ಈ ಬಗ್ಗೆ ಎಚ್ಚರಿಸಿದೆ.
ತನ್ನ ಇತ್ತೀಚಿನ ಸಾಂಕ್ರಾಮಿಕ ರೋಗದ ಸಾಪ್ತಾಹಿಕ ವರದಿಯಲ್ಲಿ ಡಬ್ಲ್ಯೂಎಚ್‌ಒ ಓಮಿಕ್ರಾನ್ ರೂಪಾಂತರಿಯ ಮತ್ತೊಂದು ಉಪತಳಿಯ ಬಗ್ಗೆ ಮಾಹಿತಿ ನೀಡಿದೆ.
ಕಳೆದ ಒಂದು ತಿಂಗಳಲ್ಲಿ ಸಂಗ್ರಹಿಸಿದ ಎಲ್ಲ ಕೊರೊನಾ ವೈರಸ್ ಮಾದರಿಗಳಲ್ಲಿ ಶೇ 93ಗಿಂತಲೂ ಅಧಿಕ ಓಮಿಕ್ರಾನ್ (Omicron) ಇರುವುದು ಕಂಡುಬಂದಿದೆ ಎಂದು ಅದು ಹೇಳಿದೆ. ಇದರಲ್ಲಿ ಓಮಿಕ್ರಾನ್ ಉಪ ರೂಪಾಂತರಗಳಾದ BA.1, BA.1.1, BA.2 ಮತ್ತು BA.3 ಪ್ರಕರಣಗಳನ್ನೂ ಅದು ಗುರುತಿಸಿದೆ.
ಬಿಎ.1 ಮತ್ತು ಬಿಎ.1.1 ಮೊದಲು ಗುರುತಿಸಿದ ಆವೃತ್ತಿಗಳಾಗಿದ್ದು, ಇವು ಜಿಐಎಸ್‌ಎಐಡಿ ಜಾಗತಿಕ ವಿಜ್ಞಾನ ಯೋಜನೆಯ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾದ ಎಲ್ಲ ಓಮಿಕ್ರಾನ್ ಮಾದರಿಗಳ ಪೈಕಿ ಶೇ 96ರಷ್ಟು ಪಾಲು ಹೊಂದಿವೆ ಎಂದು ಡಬ್ಲ್ಯೂಎಚ್‌ಒ ಮಾಹಿತಿ ನೀಡಿದೆ.
ಆದರೆ, ಈಗ ಬಿಎ.2 ತಳಿಯ ಪ್ರಕರಣಗಳಲ್ಲಿ ಏರಿಕೆ ಕಂಡುಬಂದಿದೆ. ಇದು ವೈರಸ್ ಮೇಲ್ಮೈ ಮೇಲೆ ಪರಿಣಾಮ ಬೀರುವ ಸ್ಪೈಕ್ ಪ್ರೋಟೀನ್ ಮತ್ತು ಮಾನವ ಕೋಶಗಳಿಗೆ ಪ್ರವೇಶಿಸುವುದರಲ್ಲಿ ಮುಖ್ಯ ಪಾತ್ರ ವಹಿಸುವುದು ಸೇರಿದಂತೆ ಮೂಲ ತಳಿಗಿಂತಲೂ ಸಾಕಷ್ಟು ವಿಭಿನ್ನ ರೂಪಾಂತರಗಳನ್ನು ಹೊಂದಿದೆ ಎಂಬುದು ಅಧ್ಯಯನಗಳಿಂದ ಕಂಡುಬಂದಿದೆ.
BA.2 ನಿರ್ದಿಷ್ಟ ಮಾದರಿಗಳನ್ನು 57 ದೇಶಗಳಿಂದ GISAIDಗೆ ಸಲ್ಲಿಕೆ ಮಾಡಲಾಗಿದೆ. ಇನ್ನೂ ಕೆಲವು ದೇಶಗಳಲ್ಲಿ ಸಂಗ್ರಹಿಸಲಾದ ಎಲ್ಲ ಓಮಿಕ್ರಾನ್ ಮಾದರಿಗಳಲ್ಲಿ ಅರ್ಧಕ್ಕಿಂತಲೂ ಹೆಚ್ಚು ಭಾಗ ಉಪ ರೂಪಾಂತರ ತಳಿಯ ಸೋಂಕು ದಾಖಲಾಗಿದೆ’ ಎಂದು ಡಬ್ಲ್ಯೂಎಚ್‌ಒ ತಿಳಿಸಿದೆ.
ಓಮಿಕ್ರಾನ್ ತಳಿಯ ಉಪ ರೂಪಾಂತರಗಳ ಬಗ್ಗೆ ಇನ್ನೂ ಸ್ವಲ್ಪವಷ್ಟೇ ತಿಳಿದಿದೆ ಎಂದು ಹೇಳಿರುವ ಡಬ್ಲ್ಯೂಎಚ್‌ಒ, ಅದರ ಪ್ರಸರಣ ಶಕ್ತಿ, ಪ್ರತಿರಕ್ಷಣೆ ಸಾಮರ್ಥ್ಯದ ಮೇಲೆ ಅದು ಹೇಗೆ ಪರಿಣಾಮ ಬೀರುತ್ತದೆ ಮತ್ತು ಅದರ ತೀವ್ರತೆ ಬಗ್ಗೆ ಅಧ್ಯಯನ ಮಾಡುವಂತೆ ಕರೆ ನೀಡಿದೆ.
ಮೂಲ ಓಮಿಕ್ರಾನ್ ತಳಿಗಿಂತಲೂ ಉಪರೂಪಾಂತರಿ BA.2 ಅಧಿಕ ಸಾಂಕ್ರಾಮಿಕ ಎಂಬುದು ಇತ್ತೀಚಿನ ಕೆಲವು ಅಧ್ಯಯನಗಳು ತಿಳಿಸಿವೆ. ‘ಉಪ ತಳಿ ಬಗ್ಗೆ ಈಗಿರುವ ಮಾಹಿತಿ ಅತ್ಯಲ್ಪ. ಆದರೆ ಇದು BA.1ಗಿಂತಲೂ ಹೆಚ್ಚಿನ ಪ್ರಸರಣ ಹೊಂದಿದೆ ಎಂಬುದನ್ನು ಸೂಚಿಸಿದೆ’ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಹಿರಿಯ ಪರಿಣತರಲ್ಲಿ ಒಬ್ಬರಾದ ಮರಿಯಾ ವಾನ್ ಕೆರ್ಖೋವ್ ತಿಳಿಸಿದ್ದಾರೆ.
ಈ ಹಿಂದಿನ ರೂಪಾಂತರಿಗಳಾದ ಡೆಲ್ಟಾದಂತಹ ತಳಿಯ ಕೊರೊನಾ ವೈರಸ್‌ಗಿಂತ ಓಮಿಕ್ರಾನ್ ತಳಿ ಕಡಿಮೆ ಅಪಾಯಕಾರಿಯಾಗಿದೆ. ಅದರ ಉಪ ರೂಪಾಂತರಿ BA.2ನಲ್ಲಿನ ತೀವ್ರತೆಯಲ್ಲಿ ಬದಲಾವಣೆ ಬಗ್ಗೆ ಈವರೆಗೂ ಯಾವುದೇ ಸುಳಿವು ಕಂಡುಬಂದಿಲ್ಲ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಟಿ20 ಕ್ರಿಕೆಟ್‌ : ಸತತ 5 ಎಸೆತಗಳಲ್ಲಿ 5 ವಿಕೆಟ್‌ ಪಡೆದ ಕರ್ಟಿಸ್‌ ಕ್ಯಾಂಪರ್‌...!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement