ಜನಪ್ರಿಯ ವಿಡಿಯೋ ಜಾಲತಾಣ ಯೂಟ್ಯೂಬ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಒಂದು ಕೋಟಿ ಚಂದಾದಾರರನ್ನು ದಾಟಿದ್ದಾರೆ. ಇದರೊಂದಿಗೆ ಪ್ರಧಾನಿ ಜಾಗತಿಕ ನಾಯಕರಲ್ಲಿ ಅತ್ಯುನ್ನತ ಸ್ಥಾನವನ್ನು(ಮೊದಲನೇ ಸ್ಥಾನ) ಅಲಂಕರಿಸಿದ್ದಾರೆ. ಜಾಗತಿಕ ನಾಯಕರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಒಟ್ಟು 36 ಲಕ್ಷ ಚಂದಾದಾರರನ್ನು ಹೊಂದಿದ್ದು, ಪ್ರಧಾನಿ ನರೇಂದ್ರ ಮೋದಿಯವರ ಯೂಟ್ಯೂಬ್ ಚಂದಾದಾರರ ಸಂಖ್ಯೆಯ ಅರ್ಧದಷ್ಟು ಇಲ್ಲ ಎಂಬುದು ಗಮನಾರ್ಹ.
ಪ್ರಧಾನಿ ನರೇಂದ್ರ ಮೋದಿ ಯೂಟ್ಯೂಬ್ ಚಾನೆಲ್ ಮಂಗಳವಾರ(ಫೆಬ್ರವರಿ 1) 1 ಕೋಟಿ ಚಂದಾದಾರನ್ನು ದಾಟಿದ್ದು ಇದು ಜಾಗತಿಕ ನಾಯಕರನ್ನು ಮೀರಿಸಿದೆ. ಇದುವರೆಗೆ ಚಾನೆಲ್ 164.31 ಕೋಟಿ ವೀಕ್ಷಣೆಯನ್ನು ಪಡೆದಿದೆ. ಮೋದಿಯವರ ಯೂಟ್ಯೂಬ್‌ನಲ್ಲಿ ಅತ್ಯಂತ ಜನಪ್ರಿಯ ವಿಡಿಯೊವೆಂದರೆ ‘ದಿವ್ಯಾಂಗರು’ ಪ್ರಧಾನಿಯನ್ನು ಕಾಶಿಯಲ್ಲಿ ಸ್ವಾಗತಿಸುವುದು. ಫೆಬ್ರವರಿ 2019ರಲ್ಲಿ ಅಪ್ಲೋಡ್ ಆದ ಈ ವಿಡಿಯೊವನ್ನು 7, 01,28,707 ಜನ ವೀಕ್ಷಿಸಿದ್ದಾರೆ. ಏಪ್ರಿಲ್ 2019 ರಲ್ಲಿ ಅಪ್‌ಲೋಡ್ ಮಾಡಲಾದ ನಟ ಅಕ್ಷಯ್ ಕುಮಾರ್ ಅವರ ಜೊತೆ ಸಂಭಾಷಣೆ ಮಾಡಿದ ವಿಡಿಯೊವನ್ನು 5,15,21,185 ಜನ ವೀಕ್ಷಿಸಿದ್ದಾರೆ. ಚಂದ್ರಯಾನ್-2 ಕೊನೆ ಕ್ಷಣದಲ್ಲಿ ಗುರಿಮುಟ್ಟಲು ವಿಫಲವಾದಾಗ ಇಸ್ರೋ ಮುಖ್ಯಸ್ಥ ಕೆ. ಶಿವನ್ ಅವರನ್ನು ಸಮಾಧಾನಪಡಿಸಿದ ವಿಡಿಯೊ 5,42,42,295 ಜನರ ವೀಕ್ಷಣೆಗೆ ಒಳಗಾಗಿದೆ.
ಅತೀ ಹೆಚ್ಚು ಚಂದಾದಾರನ್ನು ಹೊಂದಿರುವ ಜಾಗತಿಕ ನಾಯಕರ ಪಟ್ಟಿಯಲ್ಲಿ 30.7 ಲಕ್ಷ ಚಂದಾದಾರರನ್ನು ಹೊಂದಿರುವ ಮೆಕ್ಸಿಕೋ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಮೂರನೇ ಸ್ಥಾನದಲ್ಲಿದ್ದಾರೆ. ಗಮನಾರ್ಹವಾಗಿ, ಅಮೆರಿಕದ ಅಧ್ಯಕ್ಷ ಜೋ ಬಿಡನ್ ಯೂಟ್ಯೂಬ್ ಚಾನೆಲ್‌ನಲ್ಲಿ ಕೇವಲ 7.03 ಲಕ್ಷ ಚಂದಾದಾರರನ್ನು ಹೊಂದಿದ್ದಾರೆ. ಇದೇವೇಳೆ ಅಮೆರಿಕ ಶ್ವೇತಭವನವು ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ 19 ಲಕ್ಷ ಚಂದಾದಾರರನ್ನು ಹೊಂದಿದೆ.
ಅನೇಕ ಭಾರತೀಯ ರಾಜಕಾರಣಿಗಳು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಉತ್ತಮ ಸಂಖ್ಯೆಯ ಚಂದಾದಾರರನ್ನು ಹೊಂದಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 5.25 ಲಕ್ಷ ಚಂದಾದಾರರನ್ನು ಹೊಂದಿದ್ದರೆ, ಶಶಿ ತರೂರ್ 4.39 ಲಕ್ಷ ಚಂದಾದಾರರನ್ನು ಹೊಂದಿದ್ದಾರೆ. ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ 3.73 ಲಕ್ಷ ಚಂದಾದಾರರನ್ನು, ತಮಿಳುನಾಡು ಮುಖ್ಯಮಂತ್ರಿ ಮತ್ತು ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಮುಖ್ಯಸ್ಥ ಸ್ಟಾಲಿನ್ 2.12 ಲಕ್ಷ ಚಂದಾದಾರರನ್ನು ಹೊಂದಿದ್ದಾರೆ ಮತ್ತು ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ 1.37 ಲಕ್ಷ ಚಂದಾದಾರರನ್ನು ಹೊಂದಿದ್ದಾರೆ.
ಯೂಟ್ಯೂಬ್ ಮಾತ್ರವಲ್ಲದೇ ಇತರ ಸಾಮಾಜಿಕ ಜಾಲತಾಣಗಳಲ್ಲೂ ಪ್ರಧಾನಿ ಮೋದಿಯವರು ದೊಡ್ಡ ಮಟ್ಟದ ಅನುಯಾಯಿಗಳನ್ನು ಹೊಂದಿದ್ದಾರೆ. ಟ್ವಿಟರ್‌ನಲ್ಲಿ ಅವರಿಗೆ 7.5 ಕೋಟಿಗೂ ಹೆಚ್ಚು ಅನುಯಾಯಿಗಳು ಇದ್ದಾರೆ ಹಾಗೂ ಫೇಸ್‌ಬುಕ್ ಪೇಜ್ ಅನ್ನು 4 ಕೋಟಿಗೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಅಲ್ಲದೆ, ಇನ್‌ಸ್ಟಾಗ್ರಾಮ್‌ನಲ್ಲಿ ಕೂಡ ಸುಮಾರು 6.51 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ.
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
ನಿಮ್ಮ ಕಾಮೆಂಟ್ ಬರೆಯಿರಿ