ಹೈಕೋರ್ಟಿನಲ್ಲಿ ಹಿಜಾಬ್‌ ಪ್ರಕರಣ-ಸಾರ್ವಜನಿಕವಾಗಿ ಧಾರ್ಮಿಕ ಚಿಹ್ನೆ ಪ್ರದರ್ಶಿಸದಿರುವ ಟರ್ಕಿ ಮಾದರಿಯ ಜಾತ್ಯತೀತತೆ ಭಾರತದ್ದಲ್ಲ, ನಮ್ಮದು ಸಕಾರಾತ್ಮಕ ಜಾತ್ಯತೀತತೆ: ವಕೀಲ ಕಾಮತ್‌

ಬೆಂಗಳೂರು: ಟರ್ಕಿ ದೇಶದ ಜಾತ್ಯತೀತತೆ ಕಲ್ಪನೆಗೂ ಭಾರತದ ಜಾತ್ಯತೀತತೆಗೂ ವ್ಯತ್ಯಾಸವಿದೆ. ಟರ್ಕಿಯಲ್ಲಿ ಸಾರ್ವಜನಿಕವಾಗಿ ಹಿಜಾಬ್‌ ಧರಿಸುವುದನ್ನು ನಿಷೇಧಿಸಲಾಗಿತ್ತು” ಎಂದು ಹಿರಿಯ ವಕೀಲ ದೇವದತ್‌ ಕಾಮತ್‌ ಮಂಗಳವಾರ ಹೇಳಿದ್ದಾರೆ.
ಹಿಜಾಬ್‌ ಧರಿಸಿ ಕಾಲೇಜಿಗೆ ತೆರಳುವುದನ್ನು ನಿರ್ಬಂಧಿಸಿ ರಾಜ್ಯ ಸರ್ಕಾರವು ಹೊರಡಿಸಿರುವ ಆದೇಶ ಆಕ್ಷೇಪಿಸಿ ಮುಸ್ಲಿಮ್‌ ವಿದ್ಯಾರ್ಥಿನಿಯರು ಸಲ್ಲಿಸಿರುವ ಮನವಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ನೇತೃತ್ವದ ನ್ಯಾಯಮೂರ್ತಿಗಳಾದ ಕೃಷ್ಣ ಎಸ್‌. ದೀಕ್ಷಿತ್‌ ಮತ್ತು ಜೆ ಎಂ ಖಾಜಿ ಅವರ ಪೂರ್ಣ ಪೀಠ ಇಂದು, ಮಂಗಳವಾರ ಮುಂದುವರೆಸಿತು.
ಯಾವುದೇ ಧಾರ್ಮಿಕ ಚಿಹ್ನೆಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಲಾಗುವುದಿಲ್ಲ ಎಂದು ಹೇಳುವ ಟರ್ಕಿ ಮಾದರಿಯ ಜಾತ್ಯತೀತತೆ ನಮ್ಮದಲ್ಲ. ಹೀಗಾಗಿ ಹಿಜಾಬ್ ನಿಷೇಧವನ್ನು ಅಲ್ಲಿ ನ್ಯಾಯಾಲಯ ಎತ್ತಿ ಹಿಡಿದಿತ್ತು. ಅವರ ಸಂವಿಧಾನ ಸಂಪೂರ್ಣ ಭಿನ್ನವಾಗಿದೆ. ನಮ್ಮ ಸಂವಿಧಾನವು ವಿಭಿನ್ನ ನಂಬಿಕೆಗಳನ್ನು ಮಾನ್ಯ ಮಾಡುತ್ತದೆ. ನಮ್ಮದು ಸಕಾರಾತ್ಮಕ ಜಾತ್ಯತೀತತೆ ಎಂದು ಕಾಮತ್ ಪ್ರತಿಪಾದಿಸಿದರು.
ದೇವದತ್‌ ಕಾಮತ್‌ ಅವರು ಸರ್ಕಾರದ ಆದೇಶದಲ್ಲಿ ಉಲ್ಲೇಖಿಸಲಾಗಿರುವ ಸಾರ್ವಜನಿಕ ಸುವ್ಯವಸ್ಥೆ ಎಂದರೆ ಪಬ್ಲಿಕ್‌ ಆರ್ಡರ್‌ ಅಲ್ಲ ಎಂದು ನಿನ್ನೆ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಹೇಳಿದ್ದಕ್ಕೆ ತಮ್ಮ ಅಭಿಪ್ರಾಯ ಮಂಡಿಸಿದರು.
ಸಂವಿಧಾನದ ಕನ್ನಡ ಭಾಷಾಂತರದಲ್ಲಿ ಎಲ್ಲೆಲ್ಲಿ ಪಬ್ಲಿಕ್‌ ಆರ್ಡರ್‌ ಬಳಸಲಾಗಿದೆಯೋ ಅಲ್ಲೆಲ್ಲಾ ಸಾರ್ವಜನಿಕ ಸುವ್ಯವಸ್ಥೆ ಎಂದು ಹೇಳಲಾಗಿದೆ” ಎಂದು ಅವರು ಹೇಳಿದರು.
ಸಂವಿಧಾನದ 25ನೇ ವಿಧಿಯ ಮೂಲತತ್ವವೆಂದರೆ ಅದು ಎಲ್ಲಾ ನಂಬಿಕೆಯ ಆಚರಣೆಯನ್ನು ರಕ್ಷಿಸುತ್ತದೆ. ಇದು ಧಾರ್ಮಿಕ ಗುರುತಿನ ಪ್ರದರ್ಶನವಲ್ಲ. ಇದು ನಂಬಿಕೆಯ ಆಚರಣೆ ಎಂದು ಹೇಳಿದರು.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ವಿವಿಧ ದೇಶಗಳಲ್ಲಿನ ನಿಲುವನ್ನು ಉದಾಹರಿಸಿದರು. ಇದಕ್ಕಾಗಿ ದಕ್ಷಿಣ ಭಾರತದ ಮೂಲದ ಬಾಲಕಿಯು ಮೂಗುತಿ ಧರಿಸಿ ಶಾಲೆಗೆ ತೆರಳಿದ್ದಕ್ಕೆ ಆಕೆಯನ್ನು ಶಾಲೆಯಿಂದ ಹೊರಹಾಕಿದ್ದ ಪ್ರಕರಣವನ್ನು ಉಲ್ಲೇಖಿಸಿ, ಶಾಲೆಯ ನಿರ್ಧಾರವನ್ನು ಬದಿಗೆ ಸರಿಸಿದ್ದ ದಕ್ಷಿಣ ಆಫ್ರಿಕಾ ನ್ಯಾಯಾಲಯದ ತೀರ್ಪನ್ನು ಅವರು ಉಲ್ಲೇಖಿಸಿದರು.
ನಮ್ಮದು ಟರ್ಕಿಯ ಜಾತ್ಯತೀತವಾದವಲ್ಲ. ನಮ್ಮದು ಸಕಾರಾತ್ಮಕ ಜಾತ್ಯತೀತವಾದ. ನಮ್ಮಲ್ಲಿ ಸರ್ಕಾರವು ಎಲ್ಲಾ ಧರ್ಮೀಯರ ಮೂಲಭೂತ ಹಕ್ಕುಗಳು ಮತ್ತು ಧಾರ್ಮಿಕ ಸ್ವಾತಂತ್ರ್ಯಕ್ಕೆ ಅನುವು ಮಾಡಿಕೊಡುತ್ತದೆ. ಇಲ್ಲಿ ಎಲ್ಲಾ ಧರ್ಮಗಳನ್ನು ಸಮಾನವಾಗಿ ಪರಿಗಣಿಸಲಾಗುತ್ತದೆ ಎಂದರು.

ಪ್ರಮುಖ ಸುದ್ದಿ :-   ಯಕ್ಷಗಾನದ ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

‘ಹೆಕ್ಲರ್ಸ್ ವೀಟೋ’ ಕುರಿತು ಅಮೆರಿಕ ತೀರ್ಪು ಉಲ್ಲೇಖ..
‘ಹೆಕ್ಲರ್ಸ್ ವೀಟೋ’ವನ್ನು ಅನುಮತಿಸಲಾಗುವುದಿಲ್ಲ ಎಂಬ ಅಂಶಕ್ಕೆ ನ್ಯಾಯಾಂಗ ಮಾನ್ಯತೆ ಇದೆ ಎಂದು ವಕೀಲ ಕಾಮತ್ ಹೇಳಿದರು. ಹೆಕ್ಲರ್ ಮೂಲಭೂತ ಹಕ್ಕನ್ನು ವೀಟೋ ಮಾಡಲು ಅನುಮತಿಸಲಾಗುವುದಿಲ್ಲ. ಮೂಲಭೂತ ಹಕ್ಕುಗಳನ್ನು ಜಾರಿಗೊಳಿಸುವ ಪರಿಸ್ಥಿತಿಯನ್ನು ಸೃಷ್ಟಿಸಲು ರಾಜ್ಯದ ಮೇಲೆ ಸಕಾರಾತ್ಮಕ ಬಾಧ್ಯತೆ ಇರಬೇಕು ಎಂದು ಕಾಮತ್ ಹೇಳಿದರು.
ಮೂಲಭೂತ ಹಕ್ಕುಗಳನ್ನು ತಡೆಯಲು ‘ಚುಡಾಯಿಸುವವರ ವಿಶೇಷಾಧಿಕಾರ’ವನ್ನು ( ಹೆಕ್ಲರ್ಸ್ ವಿಟೋ) ಬಳಸಲು ಬಿಡಲಾಗದು. ಸಮವಸ್ತ್ರ ಸೂಚಿಸಲು ಮತ್ತು ಅವುಗಳನ್ನು ಜಾರಿಗೊಳಿಸುವ ಅಧಿಕಾರ ನಿಮಗಿದೆ ಎಂದು ಇಟ್ಟುಕೊಳ್ಳೋಣ. ಆ ಸಮವಸ್ತ್ರ ಸಂಹಿತೆ ಪಾಲಿಸಿಲ್ಲ ಎಂದು ಅವರನ್ನು ಶಾಲೆಯಿಂದ ಹೊರಗಿಡುವ ಅಧಿಕಾರ ನಿಮಗೆಲ್ಲಿದೆ? ಇಲ್ಲಿ ಅನುಪಾತ ತತ್ವ (ಡಾಕ್ಟ್ರೀನ್ ಆಫ್‌ ಪ್ರೊಪೊಷನಾಲಿಟಿ – ಅಪರಾಧಕ್ಕೆ ಸರಿಸಮನಾದ ಶಿಕ್ಷೆ) ಮುನ್ನೆಲೆಗೆ ಬರಲಿದೆ” ಎಂದರು.

ಆರ್ಟಿಕಲ್ 25ರ ಸಾರವೆಂದರೆ ಅದು ನಂಬಿಕೆಯ ಆಚರಣೆಯನ್ನು ರಕ್ಷಿಸುತ್ತದೆ
ಆರ್ಟಿಕಲ್ 25 ರ ಸಾರವನ್ನು ಎತ್ತಿ ತೋರಿಸುತ್ತಾ, ಆರ್ಟಿಕಲ್ 25 ಧಾರ್ಮಿಕ ಆಚರಣೆಯನ್ನು ರಕ್ಷಿಸುತ್ತದೆ ಆದರೆ ಧಾರ್ಮಿಕ ಗುರುತಿಸುವಿಕೆ ಅಥವಾ ಜಿಂಗೊಯಿಸಂ ಅಲ್ಲ ಎಂದು ದೇವದತ್ತ ಕಾಮತ್‌ ಹೇಳಿದರು.
ತಾನು ಶಾಲೆ ಮತ್ತು ಕಾಲೇಜಿನಲ್ಲಿದ್ದಾಗ ‘ರುದ್ರಾಕ್ಷ’ ಧರಿಸುತ್ತಿದ್ದೆ. ಅದು ತನ್ನ ಧಾರ್ಮಿಕ ಗುರುತನ್ನು ಪ್ರದರ್ಶಿಸಲು ಅಲ್ಲ, ಇದು ನಂಬಿಕೆಯ ಆಚರಣೆಯಾಗಿದೆ, ಏಕೆಂದರೆ ಅದು ನನಗೆ ಸುರಕ್ಷತೆಯನ್ನು ನೀಡಿತ್ತು. ಅನೇಕ ನ್ಯಾಯಾಧೀಶರು ಮತ್ತು ಹಿರಿಯ ವಕೀಲರು ಇಂತಹ ಸಾಂಪ್ರದಾಯಿಕ ವಸ್ತುಗಳನ್ನು ಧರಿಸುವುದನ್ನು ನಾವು ನೋಡುತ್ತೇವೆ” ಎಂದು ಕಾಮತ್ ಹೇಳಿದರು.
ಇದಕ್ಕೆ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಅವರು “ನಿಮ್ಮ ಪ್ರಕರಣದಲ್ಲಿ ವಿದ್ಯಾರ್ಥಿಗಳನ್ನು ಹೊರಹಾಕಲಾಗಿದೆಯೇ?” ಎಂದರು. ಇದಕ್ಕೆ ಕಾಮತ್‌ ಅವರು “ಆಡಳಿತ ಮಂಡಳಿಯು ವಿದ್ಯಾರ್ಥಿಗಳು ತರಗತಿಗೆ ತೆರಳಲು ಅವಕಾಶ ನೀಡುತ್ತಿಲ್ಲ. ಇದು ಅದೇ ಪರಿಣಾಮವನ್ನು ಹೊಂದಿದೆ” ಎಂದರು. ಆಗ ನ್ಯಾ. ಕೃಷ್ಣ ಎಸ್‌. ದೀಕ್ಷಿತ್‌ ಅವರು “ಹೊರಹಾಕುವುದು ಒಂದು ವಿಚಾರವಾದರೆ, ಪ್ರವೇಶ ನಿರಾಕರಿಸುವುದು ಮತ್ತೊಂದು ವಿಚಾರವಾಗುತ್ತದೆ ಎಂದರು.
ಅಂತಿಮವಾಗಿ ಕಾಮತ್‌ ಅವರು “ಮಧ್ಯಂತರ ಆದೇಶವನ್ನು ಮುಂದುವರಿಸಬೇಡಿ. ಸಮವಸ್ತ್ರದ ಬಣ್ಣದ ಹಿಜಾಬ್‌ ಧರಿಸಿ ತರಗತಿಗೆ ಹೋಗಲು ಅನುವು ಮಾಡಿಕೊಡಿ” ಎಂದು ಪೀಠವನ್ನು ಕೋರಿದರು.

ಪ್ರಮುಖ ಸುದ್ದಿ :-   ಹತ್ಯೆಗೀಡಾದ ನೇಹಾ ಹಿರೇಮಠ ಮನೆಗೆ ಸಿಎಂ ಸಿದ್ದರಾಮಯ್ಯ ಭೇಟಿ ; ಕುಟುಂಬಸ್ಥರಿಗೆ ಸಾಂತ್ವನ

ಸಮವಸ್ತ್ರ ಸೂಚಿಸಲು ಸಿಡಿಸಿಗೆ ಯಾವುದೇ ಅಧಿಕಾರವಿಲ್ಲ: ಪ್ರೊ. ರವಿವರ್ಮ ಕುಮಾರ್
ವಿದ್ಯಾರ್ಥಿನಿ ರೇಶಮ್‌ ಎಂಬವರನ್ನು ಪ್ರತಿನಿಧಿಸಿರುವ ಹಿರಿಯ ವಕೀಲ ಪ್ರೊ. ರವಿವರ್ಮಕುಮಾರ, ರಾಜ್ಯ ಸರ್ಕಾರವು ಆಕ್ಷೇಪಣೆಯಲ್ಲಿ ಇನ್ನಷ್ಟೇ ನಿರ್ಧಾರ ಕೈಗೊಳ್ಳಬೇಕು. ಸರ್ಕಾರವು ಉನ್ನತ ಮಟ್ಟದ ಸಮಿತಿಯನ್ನು ರಚಿಸಿದ್ದು, ಅದು ಪ್ರಕರಣವನ್ನು ಪರಿಶೀಲಿಸಲಿದೆ. ಇಲ್ಲಿಯ ತನಕ ಸರ್ಕಾರವು ಯಾವುದೇ ತೆರನಾದ ಸಮವಸ್ತ್ರ ಸೂಚಿಸಿಲ್ಲ ಅಥವಾ ಹಿಜಾಬ್‌ ನಿಷೇಧಿಸಿಲ್ಲ ಎಂದು ವಾದಿಸಿದರು.
ಕರ್ನಾಟಕ ಪದವಿ ಪೂರ್ವ ಸಮಿತಿಯಡಿ ಕಾಲೇಜುಗಳಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಸೂಚಿಸುವ ಸಮವಸ್ತ್ರವನ್ನು ಪಾಲಿಸಬೇಕು ಎಂದು ಸರ್ಕಾರದ ಆದೇಶದಲ್ಲಿ ಹೇಳಲಾಗಿದೆ. ಕಾಲೇಜು ಅಭಿವೃದ್ಧಿ ಸಮಿತಿಯು (ಸಿಡಿಸಿ) ವಸ್ತ್ರ ಸಂಹಿತೆ ವಿಧಿಸುವುದು ಕಾನೂನುಬಾಹಿರವಾಗಿದ್ದು, ಕಾಯಿದೆ ಮತ್ತು ಅದರ ನಿಯಮಗಳಿಗೆ ಇದು ವಿರುದ್ಧವಾಗಿದೆ ಎಂದು ಪ್ರತಿಪಾದಿಸಿದರು.
ಕರ್ನಾಟಕ ಶಿಕ್ಷಣ ಕಾಯಿದೆಯ ಸೆಕ್ಷನ್‌ ೨(೭)ರ ಉಲ್ಲೇಖಿಸಿ ಪ್ರೊ. ರವಿವರ್ಮ ಕುಮಾರ್‌ ಅವರು “ಕಾಲೇಜು ಅಭಿವೃದ್ಧಿ ಸಮಿತಿಯು ಸಕ್ಷಮ ಪ್ರಾಧಿಕಾರವಲ್ಲ. ಸಮವಸ್ತ್ರ ಸೂಚಿಸಲು ಸಿಡಿಸಿಗೆ ಯಾವುದೇ ಅಧಿಕಾರ ನೀಡಲಾಗಿಲ್ಲ” ಎಂದರು.
ವಿಚಾರಣೆಯನ್ನು ನಾಳೆ, ಬುಧವಾರ ಮಧ್ಯಾಹ್ನಕ್ಕೆ ಮುಂದೂಡಲಾಗಿದೆ.

 

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement