ಈಶ್ವರಪ್ಪ-ಡಿಕೆಶಿ ವಾಕ್ಸಮರ: ಸದನದಲ್ಲಿ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಮಾತಿನ ಕದನ

ಬೆಂಗಳೂರು: ವಿಧಾನಸಭೆ ಕಲಾಪ ಇಂದು, ಬುಧವಾರ ಅಕ್ಷರಶಃ ರಣರಂಗವಾಗಿತ್ತು. ಈಶ್ವರಪ್ಪ ಅವರು ಕೆಂಪು ಕೋಟೆಯಲ್ಲೂ ಕೇಸರಿ ಧ್ವಜ ಹಾರಿಸುವ ಕುರಿತು ಹೇಳಿಕೆ ಕುರಿತು ಇದು ರಾಷ್ಟ್ರದ್ರೋಹ ಎಂದು ಕಾಂಗ್ರೆಸ್ ಮಾಡಿದ ನಿಲುವಳಿ ಮಂಡನೆ ಪ್ರಸ್ತಾಪಕ್ಕೆ ಮುಂದಾಯಿತು. ಈ ಸಮಯದಲ್ಲಿ ಈಶ್ವರಪ್ಪ ಮತ್ತು ಡಿ.ಕೆ.ಶಿಕುಮಾರ್ ನಡುವೆ ಏಕವಚನದಲ್ಲಿ ಪರಸ್ಪರ ವಾಗ್ದಾಳಿಯೂ ನಡೆಯಿತು.
ಸಿದ್ದರಾಮಯ್ಯ ಮಾತಾನಾಡುವಾಗ ಅವರ ಬಳಿ ಹೋದ ಡಿ.ಕೆ.ಶಿವಕುಮಾರ ಈಶ್ವರಪ್ಪಗೆ ಮಾತನಾಡಲು ಬಿಡಬೇಡಿ ಎಂದು ಹೇಳಿದಾಗ ಆಕ್ರೋಶಗೊಂಡ ಈಶ್ವರಪ್ಪ ಸದನ ನಿಮ್ಮ ಅಪ್ಪನದ್ದಾ ಎಂದು ಪ್ರಶ್ನಿಸಿದರು. ಆಗ ಸದನದಲ್ಲಿ ಗದ್ದಲ ಉಂಟಾಗಿ ಸಭಾಧ್ಯಕ್ಷ ಕಾಗೇರಿ ಕಲಾಪ ಮುಂದೂಡಿದ್ದರೂ ಒಂದು ಹಂತದಲ್ಲಿ ಈಶ್ವರಪ್ಪ-ಶಿವಕುಮಾರ ನಡುವೆ ಕೈ ಕೈ ಮಿಲಾಯಿಸುವ ವರೆಗೆ ಹೋಗಿತ್ತು. ಬಳಿಕ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮಧ್ಯಪ್ರವೇಶಿಸಿ ವಾತಾವರಣ ತಿಳಿಗೊಳಿಸಿದರು.
ಈಶ್ವರಪ್ಪ ಹೇಳಿಕೆ ವಿರುದ್ಧ ನಿಲುವಳಿ ಸೂಚನೆ ಮಂಡನೆಯ ಪ್ರಾಥಮಿಕ ಪ್ರಸ್ತಾಪ ಮಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಈಶ್ವರಪ್ಪ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಈಶ್ವರಪ್ಪ 2006ರಿಂದಲೂ ಸಚಿವರಾಗಿದ್ದವರು, ಹಿರಿಯರು, ಆದರೆ ರಾಷ್ಟ್ರಧ್ವಜದ ಕುರಿತು ಬಹಳ ಅಗೌರವದ ಹೇಳಿಕೆ ನೀಡಿದ್ದಾರೆ. ಸಂವಿಧಾನದ ಆರ್ಟಿಕಲ್ 51(1) ಪ್ರಕಾರ ಪ್ರತಿಯೊಬ್ಬರು ರಾಷ್ಟ್ರಧ್ವಜಕ್ಕೆ ಗೌರವ ಕೊಡಬೇಕು. ಆದರೆ ಈಶ್ವರಪ್ಪ ಅವರು, ಕೆಂಪು ಕೋಟೆಯಲ್ಲಿ ಕೇಸರಿ ಧ್ವಜ ಹಾರಿಸುವ ಬಗ್ಗೆ ಹೇಳಿಕೆ ನೀಡಿದ್ದಾರೆ. ಐಪಿಸಿ ಪ್ರಕಾರ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದರೆ, ಸಂವಿಧಾನಕ್ಕೆ ಹಾಗೂ ರಾಷ್ಟ್ರಗೀತೆಗೆ ಅಗೌರವ ತೋರಿದರೆ ಅದು ದೇಶದ್ರೋಹದ ಪ್ರಕರಣವಾಗುತ್ತದೆ. ಆದರೆ ಈಶ್ವರಪ್ಪ ವಿರುದ್ಧ ಸರ್ಕಾರ ಏನೂ ಕ್ರಮ ತೆಗೆದುಕೊಂಡಿಲ್ಲ. ಅವರು ಹಾಗೆ ಹೇಳಿದ್ದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈಶ್ವರಪ್ಪ ಅವರನ್ನು ಮಂತ್ರಿಮಂಡಲದಿಂದ ಅಮಾನತು ಮಾಡಬೇಕಿತ್ತು. ಮಂತ್ರಿಯಾಗಿರಲು ಈಶ್ವರಪ್ಪ ಅರ್ಹರಲ್ಲ. ಹೀಗಾಗಿ ಮುಖ್ಯಮಂತ್ರಿಗಳು ಅವರನ್ನು ಅಮಾನತು ಮಾಡಿ, ಮೊಕದ್ದಮೆ ದಾಖಲು ಮಾಡಬೇಕು ಎಂದು ಆಗ್ರಹಿಸಿದರು. ಆಗ ಕಾಂಗ್ರೆಸ್ ಶಾಸಕರು ಶೇಮ್ ಶೇಮ್ ಈಶ್ವರಪ್ಪ ಎಂದು ಘೋಷಣೆ ಕೂಗಿದರು.
ವಿಪಕ್ಷ ನಾಐಕ ಸಿದ್ದರಾಮಯ್ಯ ನಿಲುವಳಿ ಮಂಡನೆ ಪ್ರಸ್ತಾಪದ ಕುರಿತು ಕಾನೂನು ಸಚಿವ ಮಾಧುಸ್ವಾಮಿ ಮಾತನಾಡಿ, ಈಶ್ವರಪ್ಪ ಅವರು, ಮುಂದೊಂದು ದಿನ ಭಗವಾಧ್ವಜ ಹಾರಿಸಬಹುದು ಎಂದು ಹೇಳಿದ್ದಾರೆಯೇ ವಿನಃ ಕೆಂಪು ಕೋಟೆ ಮೇಲೆ ಧ್ವಜ ಹಾರಿಸುತ್ತೇನೆಎಂದು ಹೇಳಿಲ್ಲ. ಈಶ್ವರಪ್ಪ ಎಲ್ಲಿ ಅಪಮಾನ ಮಾಡಿದ್ದಾರೆ ಎಂದು ಪ್ರಶ್ನಿಸಿದರು.
ಹುಬ್ಬಳ್ಳಿಯಿಂದ ಕಾಶ್ಮೀರದವರೆಗೆ ರಾಷ್ಟ್ರಧ್ವಜ ಹಾರಿಸಿದ ಪಕ್ಷ ಬಿಜೆಪಿ. ಈಶ್ವರಪ್ಪ ಹೇಗೆ ದೇಶ ದ್ರೋಹಿ ಆಗುತ್ತಾರೆ? ಇದು ನಿಲುವಳಿ ಸೂಚನೆ ವ್ಯಾಪ್ತಿಗೆ ಬರುವುದಿಲ್ಲ, ತಿರಸ್ಕಾರ ಮಾಡಿ ಎಂದು ಮಾಧುಸ್ವಾಮಿ ಸಭಾಧ್ಯಕ್ಷರಿಗೆ ಮನವಿ ಮಾಡಿದರು. ಆಗ ಈಶ್ವರಪ್ಪ ದೇಶದ್ರೋಹಿ ಎಂದು ಡಿ.ಕೆ.ಶಿವಕುಮಾರ ಎದ್ದುನಿಂತು ಕೂಗಿದ್ದೇ ತಡ ಎದ್ದು ನಿಂತ ಈಶ್ವರಪ್ಪ ಕೆಂಡಾಮಂಡಲವಾದರು. ರಾಷ್ಟ್ರದ್ರೋಹಿ ನಾನಲ್ಲ, ನೀನು ರಾಷ್ಟ್ರದ್ರೋಹಿ. ನೀನು ಜೈಲಿಗೆ ಹೋಗಿ ಬಂದವನು, ಬೇಲ್‌ನಲ್ಲಿ ಇದ್ದೀಯಾ, ನನಗೆ ಹೇಳಬೇಡ ಎಂದು ಶಿವಕುಮಾರ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.
ಆ ವೇಳೆ ಡಿಕೆ ಶಿವಕುಮಾರ ಅವರು ಸಿದ್ದರಾಮಯ್ಯ ಬಳಿಗೆ ಹೋಗಿ ಈಶ್ವರಪ್ಪಗೆ ಮಾತನಾಡಲು ಅವಕಾಶ ಕೊಡಬೇಡಿ ಎಂದು ಹೇಳಿದರು. ಇದರಿಂದ ಮತ್ತಷ್ಟು ವ್ಯಗ್ರರಾದ ಈಶ್ವರಪ್ಪ ಸದನ ನಿಮ್ಮಪ್ಪನದಾ ಎಂದು ಹೇಳಿದರು. ಹಾಗೆ ಹೇಳಿದ್ದೇ ತಡ ಶಿವಕುಮಾರ ಸದನದ ಬಾವಿಗಿಳಿದು ಈಶ್ವರಪ್ಪ ಬಳಿ ಹೋಗಿ ಮಾತಿನ ಚಕಮಕಿ ನಡೆಸಿದರು. ಆಗ ಸ್ಪೀಕರ್ ಕಲಾಪವನ್ನ ನಾಳೆ ಬೆಳಗ್ಗೆ 11 ಗಂಟೆಗೆ ಮುಂದೂಡಿದರು. ಆದರೂ ಸದನದ ಬಾವಿಯಿಂದಲೇ ಈಶ್ವರಪ್ಪ ಜೊತೆ ಡಿಕೆಶಿ, ಕಾಂಗ್ರೆಸ್ ಶಾಸಕರು ವಾಗ್ವಾದಕ್ಕಿಳಿದಿದ್ದರು. ಆಗ ಮಧ್ಯಪ್ರವೇಶಿಸಿದ ಯಡಿಯೂರಪ್ಪ ಎರಡು ಕಡೆಯ ಶಾಸಕರನ್ನು ಸಮಾಧಾನಪಡಿಸಿದರು.

ಪ್ರಮುಖ ಸುದ್ದಿ :-   ಸಚಿವ ದಿನೇಶ ಗುಂಡೂರಾವ್ ಮನೆಯಲ್ಲಿ ಅರ್ಧ ಪಾಕಿಸ್ತಾನ' ಹೇಳಿಕೆ : ಬಿಜೆಪಿ ಶಾಸಕ ಯತ್ನಾಳ ವಿರುದ್ಧದ ತನಿಖೆಗೆ ಹೈಕೋರ್ಟ್ ತಡೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement