ಹೈಕೋರ್ಟ್‌ನಲ್ಲಿ ಹಿಜಾಬ್ ಪ್ರಕರಣ: ಗೂಂಗಟ್, ಟರ್ಬನ್‌, ಬಳೆ, ಶಿಲುಬೆಗೆ ನಿಷೇಧವಿಲ್ಲ, ಹಾಗಾದ್ರೆ ಹಿಜಾಬ್‌ ಏಕೆ ಧರಿಸಬಾರದು-ಪ್ರೊ. ರವಿವರ್ಮಕುಮಾರ್‌ ಪ್ರಶ್ನೆ

ಬೆಂಗಳೂರು: ಹಿಜಾಬ್‌ ಧರಿಸಿ ಕಾಲೇಜಿಗೆ ತೆರಳುವುದನ್ನು ನಿರ್ಬಂಧಿಸಿ ರಾಜ್ಯ ಸರ್ಕಾರವು ಹೊರಡಿಸಿರುವ ಆದೇಶದ ಹಿನ್ನೆಲೆಯಲ್ಲಿ ತಮ್ಮನ್ನು ಕಾಲೇಜಿಗೆ ಪ್ರವೇಶಿಸಲು ಬಿಡುತ್ತಿಲ್ಲ ಎಂದು ಆಕ್ಷೇಪಿಸಿ ಮುಸ್ಲಿಂ ವಿದ್ಯಾರ್ಥಿನಿಯರು ಸಲ್ಲಿಸಿರುವ ಮನವಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ನೇತೃತ್ವದ ನ್ಯಾಯಮೂರ್ತಿಗಳಾದ ಕೃಷ್ಣ ಎಸ್‌. ದೀಕ್ಷಿತ್‌ ಮತ್ತು ಜೆ. ಎಂ. ಖಾಜಿ ಅವರ ಪೂರ್ಣ ಪೀಠವು ಬುಧವಾರ ಮುಂದುವರೆಸಿತು.
ಅರ್ಜಿದಾರರ ಪರ ವಾದ ಮಂಡಿಸಿದ ಪ್ರೊ. ರವಿವರ್ಮ ಕುಮಾರ್‌ ಅವರು ರಾಜ್ಯದ ಕಾಲೇಜುಗಳು ಸೂಚಿಸಿರುವ ಸಮವಸ್ತ್ರ ನಿಯಮ ಪಾಲಿಸದಿರುವುದಕ್ಕೆ ಬಡ ಮುಸ್ಲಿಂ ವಿದ್ಯಾರ್ಥಿನಿಯರನ್ನೇ ಏಕೆ ಗುರಿಯಾಗಿಸಿಕೊಳ್ಳಲಾಗಿದೆ ಎಂದು ಪ್ರಶ್ನಿಸಿದರು.

ಧರ್ಮಾಧಾರಿತ ತಾರತಮ್ಯ ಎಸಗುವುದನ್ನು ನಿಷೇಧಿಸುವ ಸಂವಿಧಾನದ 15ನೇ ವಿಧಿಯನ್ನು ಉಲ್ಲೇಖಿಸಿದ ಅವರು “ಗೂಂಗಟ್‌ ಧರಿಸಲು ಅನುಮತಿ ಇದೆ, ಬಳೆ ಧರಿಸಲು ಅನುಮತಿ ಇದೆ. ಕ್ರೈಸ್ತರ ಶಿಲುಬೆಗೆ ನಿಷೇಧವಿಲ್ಲ, ಸಿಖ್ಖರ ಟರ್ಬನ್‌ಗೆ ನಿಷೇಧವಿಲ್ಲ, ಇತರೆ ಧರ್ಮಗಳ ಧಾರ್ಮಿಕ ಸಂಕೇತಗಳಿಗೆ ನಿರ್ಬಂಧ ವಿಧಿಸದೇ ಇರುವಾಗ ಮುಸ್ಲಿಮ್‌ ಹೆಣ್ಣು ಮಕ್ಕಳನ್ನು ಮಾತ್ರ ಗುರಿಯಾಗಿಸಲಾಗಿದೆ. ನೂರಾರು ಧಾರ್ಮಿಕ ಸಂಕೇತಗಳಿರುವಾಗ ಸರ್ಕಾರವು ಕೇವಲ ಹಿಜಾಬ್‌ ಅನ್ನೇ ಏಕೆ ಆಯ್ಕೆ ಮಾಡಿಕೊಂಡಿದೆ ಎಂದು ಅವರು ಪ್ರಶ್ನಿಸಿದರು.
ಕರ್ನಾಟಕ ಶಿಕ್ಷಣ ನಿಯಮಗಳು 1995ರಲ್ಲಿನ ನಿಯಮ 11ರ ಪ್ರಕಾರ ಶಿಕ್ಷಣ ಸಂಸ್ಥೆ ಸಮವಸ್ತ್ರ ಬದಲಿಸಬೇಕಾದರೆ ಆ ಸಂಸ್ಥೆಯು ಒಂದು ವರ್ಷ ಮುಂಚಿತವಾಗಿ ಪೋಷಕರಿಗೆ ನೋಟಿಸ್‌ ನೀಡಬೇಕು. ಯಾವುದೇ ಪ್ರಾಂಶುಪಾಲರು ಸಮವಸ್ತ್ರ ಅನುಮೋದಿಸಬಾರದು ಮತ್ತು ಪ್ರಾಂಶುಪಾಲರು ಸಮವಸ್ತ್ರವನ್ನು ಒತ್ತಾಯಿಸಿದರೆ ಅವರ ವಿರುದ್ಧ ಕ್ರಮಕೈಗೊಳ್ಳಬಹುದು ಎಂದು ಸ್ವತಃ ಇಲಾಖೆಯೇ ಹೇಳಿದೆ. ಕಾಯಿದೆ ಅಥವಾ ನಿಯಮಗಳ ಅಡಿ ಹಿಜಾಬ್‌ ಧರಿಸುವುದಕ್ಕೆ ನಿಷೇಧ ವಿಧಿಸಲಾಗಿಲ್ಲ ಎಂದು ರವಿವರ್ಮಕುಮಾರ ಪ್ರತಿಪಾದಿಸಿದರು.
ಇದಕ್ಕೆ ನ್ಯಾ. ದೀಕ್ಷಿತ್‌ ಅವರು “ಕಾಯಿದೆಯಲ್ಲಿ ಅವುಗಳ ಬಗ್ಗೆ ಉಲ್ಲೇಖಿಸಿಲ್ಲ ಎಂದ ಮಾತ್ರಕ್ಕೆ ಅದಕ್ಕೆ ಅನುಮತಿಸಬೇಕು ಎಂದು ಅರ್ಥವಲ್ಲ. ಹಿಜಾಬ್‌ಗೆ ಅವಕಾಶ ನೀಡಬೇಕು ಅಥವಾ ನೀಡಬಾರದು ಎಂಬುದರ ಬಗ್ಗೆ ಅಲ್ಲಿ ಉಲ್ಲೇಖಿಸಿಲ್ಲ ಎಂಬುದು ಸತ್ಯ. ಆದರೆ, ಆ ಕುರಿತು ಸ್ವತಂತ್ರವಾಗಿ ವಾದಿಸಿಬೇಕು ಎಂದರು.
ಇದಕ್ಕೆ ಪ್ರೊ. ಕುಮಾರ್‌ ಅವರು “ಹಿಜಾಬ್‌ ನಿಷೇಧಿಸಿಲ್ಲ ಎಂದಷ್ಟೇ ನಾನು ಹೇಳುತ್ತಿದ್ದೇನೆ. ಹೀಗಾಗಿ, ಕಾನೂನಿನ ಯಾವ ನಿಯಮದಡಿ ವಿದ್ಯಾರ್ಥಿನಿಯರನ್ನು ತರಗತಿಯಿಂದ ಹೊರಗಿಡಲಾಗಿದೆ? ಇದಕ್ಕೆ ಅನುಮತಿಸಿದವರು ಯಾರು ಎಂದು ಕೇಳಿದರು.
ವಿದ್ಯಾರ್ಥಿಗಳ ಕಲ್ಯಾಣ ಅಥವಾ ಶಿಸ್ತಿನ ವಿಚಾರಕ್ಕೆ ಸಂಬಂಧಿಸಿದಂತೆ ಕಾಲೇಜು ಅಭಿವೃದ್ಧಿ ಸಮಿತಿ (ಸಿಡಿಸಿ) ರಚಿಸಲಾಗಿಲ್ಲ. ಇದು ಶೈಕ್ಷಣಿಕ ಗುಣಮಟ್ಟಕ್ಕೆ ಮಾತ್ರ ಸೀಮಿತವಾಗಿದೆ” ಎಂದು ಪ್ರತಿಪಾದಿಸಿದರು.
ಇದಕ್ಕೆ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಅವರು “ಶೈಕ್ಷಣಿಕ ಗುಣಮಟ್ಟ ಕಾಯ್ದುಕೊಳ್ಳಲು ಕಾಲೇಜುಗಳು ಸಮವಸ್ತ್ರ ಸೂಚಿಸಬಾರದೇ? ಏಕರೂಪತೆ, ಶಿಸ್ತು ಕಾಪಾಡಿಕೊಳ್ಳಲು ಸಮವಸ್ತ್ರ ಸೂಚಿಸಬಾರದೇ? ಇದು ಶೈಕ್ಷಣಿಕ ಮಾನದಂಡಗಳ ಭಾಗವಾಗಿರಬಹುದು ಎಂದರು.
ಅದಕ್ಕೆ ಪ್ರೊ. ಕುಮಾರ್‌ ಅವರು “ಇದು ಶೈಕ್ಷಣಿಕ ಮಾನದಂಡಕ್ಕೆ ಸಂಬಂಧಿಸಿಲ್ಲ. ಶೈಕ್ಷಣಿಕ ಗುಣಮಟ್ಟವನ್ನು ಶಿಕ್ಷಕರು-ವಿದ್ಯಾರ್ಥಿಗಳ ಅನುಪಾತ, ಪಠ್ಯಕ್ರಮ, ತರಗತಿ ನಡೆಸುವ ವಿಧಾನ ಇತ್ಯಾದಿ ಅಂಶಗಳು ನಿರ್ಧರಿಸುತ್ತವೆ. ವಿದ್ಯಾರ್ಥಿಗಳ ಮೇಲೆ ಪೊಲೀಸ್‌ ಅಧಿಕಾರ ಶಕ್ತಿಯನ್ನು ವಿಧಿಸುವುದನ್ನು ಯಾವುದೇ ದಿಕ್ಕಿನಿಂದ ನೋಡಿದರೂ ಊಹಿಸುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದರು.

ಪ್ರಮುಖ ಸುದ್ದಿ :-   ನಾಳೆಯಿಂದ ಸಿಇಟಿ ಪರೀಕ್ಷೆ ಆರಂಭ

ಆಗ ಮಧ್ಯಪ್ರವೇಶಿಸಿದ ನ್ಯಾ. ದೀಕ್ಷಿತ್‌ ಅವರು “ಈ ಪೊಲೀಸ್‌ ಅಧಿಕಾರ ಎಂದರೇನು. ಶೈಕ್ಷಣಿಕ ಸಂಸ್ಥೆಯಲ್ಲಿ ಸಮವಸ್ತ್ರ ಸೂಚಿಸುವುದನ್ನು ಪೊಲೀಸ್‌ ಅಧಿಕಾರ ಎನ್ನಲಾಗದು. ಇದು ಪಾಲನೆಯ ಅಧಿಕಾರ. ನೀವು ಹೇಳುತ್ತಿರುವುದಕ್ಕೆ ನ್ಯಾಯಾಂಗದ ಅಭಿಪ್ರಾಯವೂ ವಿರುದ್ಧವಾಗಿದೆ ಎಂದರು.
ಆಗ ಪ್ರೊ. ಕುಮಾರ್‌ ಅವರು “ಕಾಲೇಜು ಅಭಿವೃದ್ಧಿ ಸಮಿತಿಗೆ (ಸಿಡಿಸಿ) ಸಮವಸ್ತ್ರ ಸೂಚಿಸುವ ಅಧಿಕಾರವಿಲ್ಲ ಎಂಬ ವಿಚಾರವನ್ನು ನಾನು ಹೇಳಲು ಪ್ರಯತ್ನಿಸುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಸಿಡಿಸಿಯ ನೇತೃತ್ವವನ್ನು ಶಾಸಕರು ವಹಿಸಿರುವುದನ್ನು ಉಲ್ಲೇಖಿಸಿದ ಪ್ರೊ. ಕುಮಾರ್‌ ಅವರು “ಶಾಸಕರಿಗೆ ಆಡಳಿತಾತ್ಮಕ ಅಧಿಕಾರ ನೀಡುವುದು ಅಪಾಯಕಾರಿ ನಿರ್ಧಾರ. ಯಾಕೆಂದರೆ ಒಬ್ಬರು ಶಾಸಕರು, ಒಂದು ರಾಜಕೀಯ ಪಕ್ಷ ಅಥವಾ ಸಿದ್ಧಾಂತವನ್ನು ಪ್ರತಿನಿಧಿಸುತ್ತಾರೆ. ವಿದ್ಯಾರ್ಥಿಗಳ ಕಲ್ಯಾಣವನ್ನು ನೀವು ರಾಜಕೀಯ ಪಕ್ಷ ಅಥವಾ ರಾಜಕೀಯ ಸಿದ್ಧಾಂತಕ್ಕೆ ಒಪ್ಪಿಸಬಹುದೇ ಎಂದು ಪ್ರಶ್ನಿಸಿದರು.
ಸರ್ಕಾರ ಆದೇಶ ಹೊರಡಿಸಿರುವುದನ್ನು ಉಲ್ಲೇಖಿಸಿದ ಪ್ರೊ. ರವಿವರ್ಮಕುಮಾರ್‌ ಅವರು “ಇಲ್ಲಿ ಧರ್ಮದ ಕಾರಣದಿಂದಾದ ಪೂರ್ವಾಗ್ರಹ ತುಂಬಿದೆ. ಯಾವುದೇ ಸೂಚನೆ ನೀಡಲಾಗಿಲ್ಲ. ಕಾಯಿದೆಯ ಅಡಿಯಲ್ಲಿ ಯಾವುದೇ ಅಧಿಕಾರವನ್ನು ಹೊಂದಿರದ ವ್ಯಕ್ತಿಗಳಿಂದಾಗಿ ವಿದ್ಯಾರ್ಥಿಗಳು ತರಗತಿಯಿಂದ ಹೊರಗೆ ಕುಳಿತುಕೊಳ್ಳುವಂತೆ ಮಾಡಲಾಗಿದೆ ಎಂದು ವಾದಿಸಿದರು.

ಪ್ರಮುಖ ಸುದ್ದಿ :-   ಜೈ ಶ್ರೀರಾಮ ಘೋಷಣೆ ಕೂಗಿದ್ದಕ್ಕೆ ಹಲ್ಲೆ ಪ್ರಕರಣ : ನಾಲ್ವರು ಆರೋಪಿಗಳ ಬಂಧನ

ನ್ಯಾ. ದೀಕ್ಷಿತ್‌ ಅವರು ಯಾವುದೇ ತೆರನಾದ ಸಮವಸ್ತ್ರ ಸೂಚಿಸಬಾರದು ಎಂಬುದು ನಿಮ್ಮ ಅಭಿಪ್ರಾಯವೇ ಎಂದಾಗ “ವಿವಿಧತೆಯಲ್ಲಿ ಏಕತೆ ಎಂಬುದು ನಮ್ಮ ಗುರಿಯಾಗಿರಬೇಕು. ಬಹುತ್ವವನ್ನು ಸಂರಕ್ಷಿಸಬೇಕು… ಟರ್ಬನ್‌ ಧರಿಸುವವರು ಸೇನೆಯಲ್ಲಿ ಇರಬಹುದಾದರೆ, ತನ್ನ ಧಾರ್ಮಿಕ ಚಿಹ್ನೆ ಧರಿಸಿರುವ ವಿದ್ಯಾರ್ಥಿನಿಗೆ ತರಗತಿಗಳಿಗೆ ಹಾಜರಾಗಲು ಏಕೆ ಅವಕಾಶ ನೀಡಬಾರದು ಎಂದು ರವಿವರ್ಮ ಕುಮಾರ ಪ್ರಶ್ನಿಸಿದರು.
“ಮುಸ್ಲಿಂ ಹುಡುಗಿಯರು ತರಗತಿಗಳಲ್ಲಿ ಕನಿಷ್ಠ ಪ್ರಾತಿನಿಧ್ಯ ಹೊಂದಿದ್ದಾರೆ ಎಂಬ ಅಂಶವನ್ನು ನ್ಯಾಯಾಲಯ ಪರಿಗಣಿಸಬೇಕು. ಈ ಆಧಾರದ ಮೇಲೆ ಅವರನ್ನು ತರಗತಿಯಿಂದ ಹೊರಗೆ ಹಾಕಿದರೆ ಅವರ ಭವಿಷ್ಯಕ್ಕೆ ಕತ್ತಲು ಕವಿಯಲಿದೆ” ಎಂದು ಪ್ರೊ. ರವಿವರ್ಮಕುಮಾರ ತಮ್ಮ ವಾದ ಪೂರ್ಣಗೊಳಿಸಿದರು.
ಅರ್ಜಿದಾರರ ಪರ ವಾದ ಮಂಡಿಸಿದ ಮುಂಬೈ ಮೂಲದ ಹಿರಿಯ ವಕೀಲ ಯೂಸುಫ್ ಮುಚ್ಚಳ ಅವರು, ಮುಸ್ಲಿಂ ವಿದ್ಯಾರ್ಥಿಗಳಿಗೆ ನಂಬಿಕೆ ಮತ್ತು ಶಿಕ್ಷಣದ ನಡುವೆ ಆಯ್ಕೆ ಮಾಡಲು ಕೇಳಲಾಗುತ್ತದೆ. ಇದರಿಂದ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ವಾದಿಸಿದರು.
ಹಿರಿಯ ವಕೀಲ ಯೂಸಫ್‌ ಮುಚ್ಚಾಲ ಅವರು “ನ್ಯಾಯಸಮ್ಮತವಾಗಿ ವಿದ್ಯಾರ್ಥಿಗಳಿಗೆ ನೋಟಿಸ್‌ ನೀಡಬೇಕಿತ್ತು. ಇದು ನ್ಯಾಯಸಮ್ಮತವೇ? ನ್ಯಾಯಯುತವಾಗಿ ಅವರ ವಾದವನ್ನು ಮೊದಲು ಆಲಿಸಬೇಕಿತ್ತು” ಎಂದರು.
“ಸಂವಿಧಾನದ 25(1)ನೇ ವಿಧಿಯಡಿ ಪ್ರತಿಯೊಬ್ಬ ವ್ಯಕ್ತಿಗೂ ಆತ್ಮಸಾಕ್ಷಿಯ ಹಕ್ಕಿದೆ. ಹೀಗಾಗಿ, ವ್ಯಕ್ತಿಯೊಬ್ಬರು ಹೊಂದಿರುವ ನಂಬಿಕೆಯು ಅಗತ್ಯವಾದ ಧಾರ್ಮಿಕ ಆಚರಣೆಯ ಭಾಗವಾಗಿದೆಯೇ ಎಂಬ ಪ್ರಶ್ನೆಗೆ ಹೋಗುವುದು ಅನಿವಾರ್ಯವಲ್ಲ” ಎಂದು ವಾದಿಸಿದರು.
ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಮತ್ತು ನ್ಯಾಯಮೂರ್ತಿ ಜೆಎಂ ಖಾಜಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಹಿಜಾಬ್ ಪ್ರಕರಣದ ವಿಚಾರಣೆಯನ್ನು ಮುಂದುವರಿಸಲಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement