ಇಮ್ರಾನ್ ಖಾನ್ ನಿರ್ಗಮನಕ್ಕೆ ಕ್ಷಣಗಣನೆ ಆರಂಭ…? ಅವಿಶ್ವಾಸ ನಿರ್ಣಯಕ್ಕೆ ಸಂಖ್ಯೆ ಪಡೆಯಲು ಸಂಯುಕ್ತ ಪ್ರತಿಪಕ್ಷಗಳಿಗೆ ಪಾಕ್ ಸೇನೆ ಸಹಾಯ..!?

ನವದೆಹಲಿ: ಪಾಕಿಸ್ತಾನ ರಾಷ್ಟ್ರೀಯ ಅಸೆಂಬ್ಲಿ ಫೆಬ್ರವರಿ 18 ರಿಂದ ತನ್ನ ಅಧಿವೇಶನವನ್ನು ಪ್ರಾರಂಭಿಸುತ್ತಿದ್ದು, ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಪದಚ್ಯುತಗೊಳಿಸುವ ಪ್ರಯತ್ನದಲ್ಲಿ ಅವರ ವಿರುದ್ಧ ಅವಿಶ್ವಾಸ ನಿರ್ಣಯವನ್ನು ತರಲು ಪಣ ತೊಟ್ಟಿರುವ ವಿರೋಧ ಪಕ್ಷಗಳ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಈ ಹಿಂದಿನ ವಿಫಲ ಯತ್ನಗಳಿಗಿಂತ ಭಿನ್ನವಾಗಿ, ವಿಧಾನಸಭೆಯಲ್ಲಿ ಮ್ಯಾಜಿಕ್ ನಂಬರ್ ಪಡೆಯುವ ವಿಶ್ವಾಸದಲ್ಲಿ ಸಂಯುಕ್ತ ವಿಪಕ್ಷಗಳಿವೆ.

ಈಗ ಜನರು ಇಮ್ರಾನ್ ಖಾನ್ ಸರ್ಕಾರದಿಂದ ಬೇಸತ್ತಿದ್ದಾರೆ. ಹೀಗಾಗಿ ವಿರೋಧ ಪಕ್ಷಗಳು ಪಾಕಿಸ್ತಾನದ ಮಿಲಿಟರಿ ಕೃಪಾಕಟಾಕ್ಷ ಪಡೆಯುವಲ್ಲಿ ನೂರು ಪ್ರತಿಶತ ಖಚಿತವಾಗಿರಲು ಬಯಸುತ್ತಾರೆ. ಆದರೆ ಇಮ್ರಾನ್ ಖಾನ್ ಸರ್ಕಾರವನ್ನು ಕಿತ್ತೊಗೆಯಲು 342 ಸದಸ್ಯ ಬಲದ ಸದನದಲ್ಲಿ ವಿರೋಧ ಪಕ್ಷಗಳಿಗೆ 172 ಮತಗಳ ಮ್ಯಾಜಿಕ್ ಸಂಖ್ಯೆ ಸಿಕ್ಕಿದೆಯೇ ಎಂಬುದು ಪ್ರಶ್ನೆ.
ಇಮ್ರಾನ್ ಖಾನ್ ಅವರು ಮ್ಯಾಜಿಕ್ ನಂಬರ್ ಪಡೆಯುವ ಪ್ರತಿಪಕ್ಷಗಳ ನಡೆಗೆ ಅಪಹಾಸ್ಯ ಮಾಡಿದ್ದಾರೆ. ಏಕೆಂದರೆ ಪಾಕಿಸ್ತಾನದ ಸಂವಿಧಾನವು ಅವರು ಸೇರಿರುವ ಸಂಸದೀಯ ಪಕ್ಷದ ನಿರ್ದೇಶನದ ವಿರುದ್ಧ ಸದನದಲ್ಲಿ ಮತ ಚಲಾಯಿಸುವ ಅಥವಾ ಮತದಾನದಿಂದ ದೂರವಿರುವ ಸದಸ್ಯರನ್ನು ಅನರ್ಹಗೊಳಿಸಲು ಪಕ್ಷದ ಮುಖ್ಯಸ್ಥರಿಗೆ ಅಧಿಕಾರ ನೀಡುತ್ತದೆ. ಆದರೆ ಪಾಕಿಸ್ತಾನಿ ತಜ್ಞರ ಪ್ರಕಾರ ಸರ್ಕಾರದ ಮಿತ್ರ ಪಕ್ಷಗಳು ಈ ಕಾನೂನಿನ ಅಡಿಯಲ್ಲಿ ಬರುವುದಿಲ್ಲ. ಅವರು ಸರ್ಕಾರದ ವಿರುದ್ಧ ಮತ ಚಲಾಯಿಸಲು ಸ್ವತಂತ್ರರು. ಇದು ಇಮ್ರಾನ್‌ ಕಾನ್‌ ಅವರಿಗೆ ತಲೆನೋವಾಗಿದೆ.

ಅಂತಿಮವಾಗಿ ಇಮ್ರಾನ್ ಖಾನ್ ಸರ್ಕಾರ ಪದಚ್ಯುತಗೊಳಿಸಲು ಸಮ್ಮಿಶ್ರ ಪಾಲುದಾರರಾದ ಮುತಾಹಿದಾ ಕ್ವೋಮಿ ಮೂವ್ಮೆಂಟ್ (MQM) ಮತ್ತು ಪಾಕಿಸ್ತಾನ್ ಮುಸ್ಲಿಂ ಲೀಗ್ ಕ್ವೈಡ್-ಎ-ಅಜಮ್ (PMLQ) ನಿಂದ ಬೆಂಬಲ ಬೇಕಾಗುತ್ತದೆ ಎಂದು ಒಬ್ಬ ಪಾಕಿಸ್ತಾನಿ ತಜ್ಞರು ಹೇಳಿದರು.
ಇದರ ಜೊತೆಗೆ, ಆಡಳಿತಾರೂಢ ಇಮ್ರಾನ್‌ ಖಾನ್‌ ಪಕ್ಷದ ಪಿಟಿಐನ 25-30 ಸಂಸದರ ಗುಂಪು ಈಗಾಗಲೇ ಒಂದು ಕಾಲದಲ್ಲಿ ಇಮ್ರಾನ್ ಖಾನ್ ಅವರ ಬಲಗೈ ಬಂಟರಾಗಿದ್ದ ಜಹಾಂಗೀರ್ ತಾರಿನ್ ನೇತೃತ್ವದಲ್ಲಿ ಪ್ರತ್ಯೇಕ ಗುಂಪನ್ನು ರಚಿಸಿಕೊಂಡಿದೆ. ಪಾಕಿಸ್ತಾನಿ ಮಾಧ್ಯಮಗಳ ಪ್ರಕಾರ ಈ ಬಣ ಈಗ ಖಾನ್ ಅವರನ್ನು ಪದಚ್ಯುತಗೊಳಿಸುವ ವಿರೋಧ ಪಕ್ಷಗಳ ಭಾಗವಾಗುವ ಸಾಧ್ಯತೆಯಿದೆ.
ಪಾಕಿಸ್ತಾನಿ ವಿಶ್ಲೇಷಕರ ಪ್ರಕಾರ, ಇಮ್ರಾನ್ ಖಾನ್ ಮತ್ತು ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಾಜ್ವಾ ನಡುವಿನ ಭಿನ್ನಾಭಿಪ್ರಾಯವು ಈಗ ಸರಿಪಡಿಸಲಾಗದ ಹಂತಕ್ಕೆ ಹೋಗಿದೆ. ಆದರೆ ಮಿಲಿಟರಿ ಆಡಳಿತ ಈ ಹಿಂದೆ ಹಲವು ಬಾರಿ ಮಾಡಿದಂತೆ ನೇರ ಅಧಿಕಾರವನ್ನು ಪಡೆಯುವುದರ ಬಗ್ಗೆ ಎಚ್ಚರಿಕೆ ವಹಿಸಿದೆ. 2018 ರ ಚುನಾವಣೆಯಲ್ಲಿ ರಿಗ್ಗಿಂಗ್ ಮಾಡಿದ ನಂತರ ಇಮ್ರಾನ್ ಖಾನ್ ಅವರನ್ನು ಖರೀದಿಸಿದ ಮಿಲಿಟರಿ ಆಡಳಿತ ನಡೆಯೇ ಹೀಗೆ ಹೇಳಲು ಹಿಂದಿರುವ ಕಾರಣ. ಪಾಕಿಸ್ತಾನಿಗಳು ಈ ಸರ್ಕಾರವನ್ನು “ಹೈಬ್ರಿಡ್ ಆಡಳಿತ” ಎಂದು ಕರೆಯುತ್ತಿದ್ದಾರೆ, ಏಕೆಂದರೆ ಇಮ್ರಾನ್ ಖಾನ್ ಸರ್ಕಾರವನ್ನು “ಆಯ್ಕೆ” ಮಾಡುವಲ್ಲಿ ಮಿಲಿಟರಿಯ ಕೈವಾಡವಿದೆ. ಆದರೆ ಈಗ, ರಾಜಕೀಯ ಇಂಜಿನಿಯರಿಂಗ್‌ನ ಈ ಪ್ರಯೋಗವು ಪ್ರತಿ ರಂಗದಲ್ಲೂ ವಿಫಲವಾಗಿದೆ ಎಂಬುದು ಸ್ಪಷ್ಟವಾಗಿಬಿಟ್ಟಿದೆ.

ಈಗಲೇ ಇಮ್ರಾನ್ ಖಾನ್ ಅವರನ್ನು ತೊಲಗಿಸದಿದ್ದರೆ ಮುಂದಿನ ಕೆಲವು ತಿಂಗಳುಗಳು ತನ್ನ ಅಸ್ತಿತ್ವಕ್ಕೆ ಇದು ಮಾಋಕವಾಗಬಹುದು ಎಂಬುದು ಪಾಕಿಸ್ತಾನಿ ಸೇನಾ ಮುಖ್ಯಸ್ಥ ಬಾಜ್ವಾಗೆ ಚೆನ್ನಾಗಿ ಗೊತ್ತು. ಬಾಜ್ವಾ ಅವರು ನವೆಂಬರ್ 2022 ರಲ್ಲಿ ನಿವೃತ್ತರಾಗಲಿದ್ದಾರೆ ಮತ್ತು ಇಮ್ರಾನ್ ಖಾನ್ ಅವರಿಗೆ ಯಾವುದೇ ವಿಸ್ತರಣೆಯನ್ನು ನೀಡಲು ಒಪ್ಪಿಕೊಳ್ಳುವ ಸಾಧ್ಯತೆಯಿಲ್ಲ. ಇಮ್ರಾನ್ ಖಾನ್ ಅವರು ತಮ್ಮ ನೆಚ್ಚಿನ ಫೈಜ್ ಹಮೀದ್ ಅವರನ್ನು ಮುಂದಿನ ಸೇನಾ ಮುಖ್ಯಸ್ಥರನ್ನಾಗಿ ನೇಮಿಸಲು ಬಯಸುತ್ತಿದ್ದಾರೆ, ಅವರ ಬೆಂಬಲದೊಂದಿಗೆ ಅವರು 2023 ರಲ್ಲಿ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಮರು ಆಯ್ಕೆಯಾಗುವುದನ್ನು ಖಚಿತಪಡಿಸಿಕೊಳ್ಳಬಹುದು ಎಂಬುದು ಇಮ್ರಾನ್‌ ಖಾನ್‌ ಲೆಕ್ಕಾಚಾರ. ಆದರೆ ಕಾರ್ಪ್ಸ್ ಕಮಾಂಡರ್‌ಗಳ ಕೊನೆಯ ಸಭೆಯಲ್ಲಿ, “ಹೈಬ್ರಿಡ್ ಆಡಳಿತ” ಸ್ಥಾಪನೆಯ ವಿಶ್ವಾಸಾರ್ಹತೆಗೆ ಹೇಗೆ ಹಾನಿ ಮಾಡಿದೆ ಎಂಬುದರ ಕುರಿತು ಸೇನಾ ಮುಖ್ಯಸ್ಥ ಬಾಜ್ವಾ ಅವರ ನಿಷ್ಠಾವಂತ ಜನರಲ್‌ಗಳು ಅವರನ್ನು ಎಚ್ಚರಿಸಿದ್ದಾರೆ.

ಇಮ್ರಾನ್ ಖಾನ್ ಅವರ ವಿಫಲ ನೀತಿಗಳಿಂದಾಗಿ ದೇಶ ಅಪಾರ ಒತ್ತಡಕ್ಕೆ ಒಳಗಾಗಿದೆ. ಅಭೂತಪೂರ್ವ ಆರ್ಥಿಕ ಕುಸಿತ ಮತ್ತು ಶೇಕಡಾ 13ಕ್ಕೂ ಅತ್ಯಧಿಕ ಹಣದುಬ್ಬರ ದರ, ನಿರುದ್ಯೋಗ ಹೆಚ್ಚಳ, ಕೈಗಾರಿಕಾ ನಿಶ್ಚಲತೆ ಮತ್ತು ದೇಶದಲ್ಲಿ ತೀವ್ರ ಧ್ರುವೀಕರಣ, ವಿದ್ಯುತ್ ಮತ್ತು ಅನಿಲಗಳ ಬೆಲೆಗಳನ್ನು ಗಗನಕ್ಕೇರಿರುವುದು ಇವೆಲ್ಲವುಗಳಿಂದ ದುರ್ಬಲಗೊಂಡ ಪಾಕಿಸ್ತಾನದ ಸಾಮಾಜಿಕ ಸ್ಥಿರತೆ ಇವೇ ಮೊದಲಾದ ಸಮಸ್ಯೆಗಳನ್ನು ಈಗ ಪಾಕಿಸ್ತಾನ ಎದುರಿಸುತ್ತಿದೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement