ಹಿಜಾಬ್‌, ಬುರ್ಕಾ ತೆಗೆಯುವುದನ್ನು ಸೆರೆ ಹಿಡಿದು ಪ್ರಸಾರ ಮಾಡದಂತೆ ಮಾಧ್ಯಮಗಳ ವಿರುದ್ಧ ನಿರ್ಬಂಧ ಕೋರಿ ಹೈಕೋರ್ಟಿನಲ್ಲಿ ಪಿಐಎಲ್

ಬೆಂಗಳೂರು: ಹಿಜಾಬ್‌ ನಿಷೇಧಿಸಿರುವುದಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಮನವಿಗಳ ಕುರಿತು ನ್ಯಾಯಾಲಯ ತೀರ್ಪು ಪ್ರಕಟಿಸುವವರೆಗೆ ಶಾಲೆಯ ಬಳಿ ವಿದ್ಯಾರ್ಥಿನಿಯರು ಮತ್ತು ಬೋಧಕರು ಹಿಜಾಬ್‌ ಮತ್ತು ಬುರ್ಕಾ ತೆಗೆಯುವುದನ್ನು ವಿಡಿಯೊ ಮಾಡುವುದು, ಫೋಟೊ ತೆಗೆಯದಂತೆ 70 ಪ್ರತಿವಾದಿ ಮಾಧ್ಯಮಗಳನ್ನು ನಿರ್ಬಂಧಿಸಿ ಮಧ್ಯಂತರ ಆದೇಶ ಮಾಡುವಂತೆ ಕೋರಿ ಹೈಕೋರ್ಟ್‌ಗೆ ಸೋಮವಾರ ಸಾರ್ವಜನಿಕ ಹಿತಾಸಕ್ತಿ ಮನವಿ ಸಲ್ಲಿಕೆಯಾಗಿದೆ.
ಅಬ್ದುಲ್‌ ಮನ್ಸೂರ್‌, ಮೊಹಮ್ಮದ್‌ ಖಲೀಲ್‌ ಹಾಗೂ ಆಸೀಫ್‌ ಅಹ್ಮದ್‌ ಅವರು ವಕೀಲ ಎಸ್‌ ಬಾಲಕೃಷ್ಣನ್‌ ಅವರ ಮೂಲಕ ಸಾರ್ವಜನಿಕ ಹಿತಾಸಕ್ತಿ ಮನವಿ ಸಲ್ಲಿಸಿದ್ದು, ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ನೇತೃತ್ವದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ಈ ಮನವಿಯನ್ನು ಹಿಜಾಬ್‌ಗೆ ಸಂಬಂಧಿಸಿದಂತೆ ಪ್ರಕರಣಗಳ ಜೊತೆ ಸೇರಿಸಲು ಪೀಠವು ಆದೇಶ ಮಾಡಿದೆ.
ಶಾಲಾ-ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಮತ್ತು ಬೋಧಕರ ವಿಡಿಯೊ ಮತ್ತು ಫೋಟೊ ಸೆರೆ ಹಿಡಿಯುವುದು ಮತ್ತು ನಿರಂತರವಾಗಿ ಅದನ್ನು ಪ್ರಸಾರ ಮಾಡುವುದಕ್ಕೆ ನಿರ್ಬಂಧ ವಿಧಿಸಬೇಕು ಎಂದು ಈ ಮನವಿಯಲ್ಲಿ ಕೋರಲಾಗಿದ್ದು, ರಾಜ್ಯ ಸರ್ಕಾರದ ಗೃಹ ಮತ್ತು ಶಿಕ್ಷಣ ಇಲಾಖೆಯ ಕಾರ್ಯದರ್ಶಿಗಳನ್ನು ಮೊದಲ ಮತ್ತು ಎರಡನೇ ಪ್ರತಿವಾದಿಗಳನ್ನಾಗಿಸಲಾಗಿದೆ ಎಂದು ಬಾರ್‌ ಅಂಡ್‌ ಬೆಂಚ್‌ ವರದಿ ಮಾಡಿದೆ.
ಪ್ರತಿವಾದಿ ಮಾಧ್ಯಮಗಳು ಹಿಜಾಬ್‌, ಬುರ್ಕಾ, ಶಿರವಸ್ತ್ರ, ದುಪ್ಪಟ ಧರಿಸಿರುವ ವಿದ್ಯಾರ್ಥಿನಿಯರು ಮತ್ತು ಶಿಕ್ಷಕಿಯರ ಬೆನ್ನತ್ತಿ, ಕೆಲವು ಕಡೆ ಅವರ ಹಿಂದೆ ಹೋಗಿ ವಿಡಿಯೊ ಮಾಡುವುದು, ಫೋಟೊ ತೆಗೆಯುವುದು ಮಾಡುತ್ತಿದ್ದಾರೆ. ಮಾಧ್ಯಮ ಪ್ರತಿನಿಧಿಗಳು ಹೆಣ್ಣು ಮಕ್ಕಳು ಮತ್ತು ಶಿಕ್ಷಕರನ್ನು ಅವಮಾನಿಸುತ್ತಿದ್ದು, ಅವರ ನಂಬಿಕೆ, ಸಂಸ್ಕೃತಿ ಇತ್ಯಾದಿಯನ್ನು ಅಪರಾಧೀಕರಿಸುವ ಕೆಲಸ ಮಾಡುತ್ತಿದ್ದಾರೆ. ಶಾಲೆಯ ಹೊರಗೆ ಮುಸ್ಲಿಮ್‌ ಸಮುದಾಯದ ಹೆಣ್ಣು ಮಕ್ಕಳು ಮತ್ತು ಶಿಕ್ಷಕಿಯರು ಹಿಜಾಬ್‌, ಬುರ್ಕಾ ತೆಗೆಯುವುದನ್ನು ಚಿತ್ರೀಕರಿಸುವುದು ಹಾಗೂ ಫೋಟೊ ತೆಗೆಯುವುದನ್ನು ಮಾಡಿ, ಪ್ರಸಾರ ಮಾಡುವುದರಿಂದ ಮುಸ್ಲಿಮ್‌ ಸಮುದಾಯ ಬಾಧಿತವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ ಎಂದು ವರದಿ ಹೇಳಿದೆ.

ಪ್ರಮುಖ ಸುದ್ದಿ :-   ಹುಬ್ಬಳ್ಳಿ : ಕಾಲೇಜ್‌ ಕ್ಯಾಂಪಸ್‌ ನಲ್ಲೇ ಚಾಕುವಿನಿಂದ ಇರಿದು ಕಾರ್ಪೊರೇಟರ್ ಪುತ್ರಿಯ ಹತ್ಯೆ ; ಯುವಕನ ಬಂಧನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement