ಉಕ್ರೇನ್ ಬಿಕ್ಕಟ್ಟಿನ ಕುರಿತು ಭಾರತದ ಜೊತೆ ಮಾತುಕತೆ : ಅಮೆರಿಕ ಅಧ್ಯಕ್ಷ ಬಿಡೆನ್‌

ವಾಷಿಂಗ್ಟನ್: ರಷ್ಯಾದಿಂದ ಸೇನಾ ಕಾರ್ಯಾಚರಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಉಕ್ರೇನ್ ಬಿಕ್ಕಟ್ಟಿನ ಕುರಿತು ಭಾರತದ ಜೊತೆ ಸಮಾಲೋಚನೆ ನಡೆಸುವುದಾಗಿ ಅಮೆರಿಕ ಅಧ್ಯಕ್ಷ ಜೋ ಬಿಡೆನ್‌ ಹೇಳಿದ್ದಾರೆ.
ಉಕ್ರೇನ್ ಬಿಕ್ಕಟ್ಟಿನ ಬಗ್ಗೆ ಭಾರತದ ಜೊತೆ ನಾವು ಮಾತುಕತೆ ನಡೆಸಲಿದ್ದೇವೆ. ನಾವು ಅದನ್ನು ಇನ್ನೂ ಸಂಪೂರ್ಣವಾಗಿ ಬಗೆಹರಿಸಿಲ್ಲ” ಎಂದು ಶ್ವೇತಭವನದಲ್ಲಿ ಉಕ್ರೇನ್ ಸಂಘರ್ಷದ ಕುರಿತು ನಡೆಸಿದ ಸುದ್ದಿಗೋಷ್ಠಿ ವೇಳೆ ಅಮೆರಿಕ ಅಧ್ಯಕ್ಷರು ಹೇಳಿದ್ದಾರೆ.

ಉಕ್ರೇನ್ ಬಿಕ್ಕಟ್ಟಿನ ವಿಚಾರದಲ್ಲಿ ಭಾರತ ಮತ್ತು ಅಮೆರಿಕ ಧೋರಣೆಗಳು ಒಂದೇ ರೀತಿಯಾಗಿಲ್ಲ. ಭಾರತ ಹಾಗೂ ರಷ್ಯಾ ಐತಿಹಾಸಿಕ ಮಿತ್ರತ್ವ ಹೊಂದಿದ ರಾಷ್ಟ್ರಗಳಾಗಿವೆ. ಇದೇವೇಳೆ ಕಳೆದ ಎರಡು ದಶಕಗಳಲ್ಲಿ ಅಮೆರಿಕದ ಜೊತೆ ವ್ಯಾಪಾರ ಹಾಗೂ ಕಾರ್ಯತಂತ್ರ ಪಾಲುದಾರಿಕೆ ಹೊಂದಿದ್ದು, ಬಾಂಧವ್ಯ ವೃದ್ಧಿಯಾಗಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಉಕ್ರೇನ್ ಬಿಕ್ಕಟ್ಟಿನ ಬಗ್ಗೆ ಭಾರತದ ನಿಲುವಿಗೆ ಅಮೆರಿಕ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ತನ್ನದೇ ಸ್ವತಂತ್ರ ಕಾರ್ಯತಂತ್ರ ಅನುಗುಣವಾಗಿ ಅಲಿಪ್ತ ನೀತಿ ಪಾಲಿಸುತ್ತಿದೆ.

ಉಕ್ರೇನ್ ಮೇಲಿನ ರಷ್ಯಾದ ಆಕ್ರಮಣ ವಿಚಾರವನ್ನು ಬೆಂಬಲಿಸುವ ಯಾವುದೇ ದೇಶ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷರು ಎಚ್ಚರಿಕೆ ನೀಡಿದ್ದು, ರಷ್ಯಾ ಬೆಂಬಲಿಸುವ ಭಾರತ, ಪಾಕಿಸ್ತಾನ ಹಾಗೂ ಚೀನಾಕ್ಕೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗುತ್ತಿದೆ. ಭಾರತವು ರಷ್ಯಾ ಜತೆಗೆ ಸುದೀರ್ಘ ಬಾಂಧವ್ಯ ಹೊಂದಿದ್ದು, ಅದರಿಂದ ಅನೇಕ ಮಿಲಿಟರಿ ಉಪಕರಣಗಳನ್ನು ಖರೀದಿಸುತ್ತಿದೆ. ಆದರೆ ಭಾರತದ ಮೇಲೆ ನಿರ್ಬಂಧಗಳನ್ನು ವಿಧಿಸುವ ಧೈರ್ಯವನ್ನು ಅಮೆರಿಕ ಪ್ರದರ್ಶಿಸಿಲ್ಲ. ಇನ್ನೊಂದೆಡೆ, ರಷ್ಯಾ ಯುದ್ಧದ ನಡುವೆಯೇ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್, ಪುಟಿನ್ ಆಡಳಿತದ ಜೊತೆ ಮಾತುಕತೆ ನಡೆಸಿದ್ದಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement