ರಷ್ಯಾದ ದಾಳಿಯಲ್ಲಿ ಉಕ್ರೇನ್​ನ 137 ಜನರ ಸಾವು; 316 ಜನರಿಗೆ ಗಾಯ

ಕ್ವೈವ್‌: ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿದ ಮೊದಲ ದಿನದಲ್ಲಿ 137 ಜನರು ಮೃತಪಟ್ಟಿದ್ದಾರೆ ಹಾಗೂ 316 ಜನರಿಗೆ ಗಾಯಗೊಂಡಿದ್ದಾರೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗುರುವಾರ ಉಕ್ರೇನ್‌ ಮೇಲೆ ಯುದ್ಧ ಘೋಷಿಸಿದ್ದರು.

ಇದು ಯುರೋಪ್​ನಲ್ಲಿ ಎರಡನೇ ಮಹಾಯುದ್ಧದ ನಂತರ ನಡೆಯುತ್ತಿರುವ ಮೊದಲ ಭೀಕರ ಕದನವಾಗಿದೆ. ಉಕ್ರೇನ್ ರಾಜಧಾನಿ ಕೈವ್ ಸೇರಿದಂತೆ ಅಲ್ಲಿನ ಪ್ರಮುಖ ನಗರಗಳ ಮೇಲೆ ರಷ್ಯಾದ ಮಿಲಿಟರಿ ಪಡೆಗಳು ದಾಳಿ ನಡೆಸಿವೆ. ಈ ಬಿಕ್ಕಟ್ಟಿಗೆ ವಿಶ್ವದ ನಾಯಕರು ಆತಂಕ ವ್ಯಕ್ತಪಡಿಸಿದ್ದು, ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ. ಈ ಯುದ್ಧದಲ್ಲಿ ರಷ್ಯಾ ವಿರುದ್ಧ ಹೋರಾಡಲು ಉಕ್ರೇನ್ ಏಕಾಂಗಿಯಾಗಿ ಉಳಿದಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಬೇಸರ ಹೊರಹಾಕಿದ್ದಾರೆ.
ಎರಡನೇ ಮಹಾಯುದ್ಧದ ನಂತರ ಯುರೋಪ್ ಮೊದಲ ಅತಿದೊಡ್ಡ ಯುದ್ಧ ನೋಡುತ್ತಿದೆ ಎಂದು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.

ಶತ್ರುಗಳು ತಮ್ಮನ್ನು ನಂಬರ್ ಒನ್ ಗುರಿ ಎಂದು ಗುರುತಿಸಿದ್ದಾರೆ ಎಂದಿರುವ ಝೆಲೆನ್ಸ್ಕಿ, ತಮ್ಮ ಕುಟುಂಬವು ಎರಡನೇ ಗುರಿಯಾಗಿದೆ. ರಾಷ್ಟ್ರದ ಮುಖ್ಯಸ್ಥರನ್ನು ನಾಶಪಡಿಸುವ ಮೂಲಕ ಉಕ್ರೇನ್ ಅನ್ನು ರಾಜಕೀಯವಾಗಿ ನಾಶಮಾಡಲು ವಿರೋಧಿಗಳು ಬಯಸುತ್ತಿದ್ದಾರೆ. ನಾನು ರಾಜಧಾನಿಯಲ್ಲಿಯೇ ಇರುತ್ತೇನೆ. ನನ್ನ ಕುಟುಂಬವೂ ಉಕ್ರೇನ್‌ನಲ್ಲಿದೆ’’ ಎಂದು ಅವರು ವಿಡಿಯೋ ಸಂದೇಶದಲ್ಲಿ ಅವರು ಹೇಳಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ.

ರಷ್ಯಾ ಆಕ್ರಮಣ ಆರಂಭಿಸಿ ಸೈರನ್ ಮೊಳಗಿಸಿದಾಗ ಜನರಿಗೆ ಶಾಂತವಾಗಿರುವಂತೆ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಕರೆಕೊಟ್ಟಿದ್ದರು. ‘‘ರಷ್ಯಾ ದುಷ್ಟ ಮಾರ್ಗವನ್ನು ಪ್ರಾರಂಭಿಸಿದೆ. ಆದರೆ ಉಕ್ರೇನ್ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತಿದೆ ಮತ್ತು ತನ್ನ ಸ್ವಾತಂತ್ರ್ಯವನ್ನು ಬಿಟ್ಟುಕೊಡುವುದಿಲ್ಲ’’ ಎಂದು ಝೆಲೆನ್ಸ್ಕಿ ತಮ್ಮ ಟ್ವೀಟ್​ನಲ್ಲಿ ಹೇಳಿದ್ದಾರೆ. 10 ಮಿಲಿಟರಿ ಅಧಿಕಾರಿಗಳು ಸೇರಿದಂತೆ 137 ‘ವೀರರು’ ದಾಳಿಯಲ್ಲಿ ಕೊಲ್ಲಲ್ಪಟ್ಟಿದ್ದಾರೆ ಮತ್ತು 316 ಜನರು ಗಾಯಗೊಂಡಿದ್ದಾರೆ ಎಂದು ಅವರು ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.
ಅಮೆರಿಕ ರಷ್ಯಾದ ಮೇಲೆ ಹೊಸ ನಿರ್ಬಂಧಗಳನ್ನು ಹೇರಿದೆ. ರಷ್ಯಾ ಅಧ್ಯಕ್ಷ ಪುಟಿನ್​ ಅವರನ್ನು ತಡೆಯಲು ಇದು ಸಾಕಾಗುವುದಿಲ್ಲ ಎಂದು ಅಮೆರಿಕದ ಅಧ್ಯಕ್ಷ ಜೋ ಬಿಡೆನ್ ಹೇಳಿದ್ದು, ಪುಟಿನ್ ಆಕ್ರಮಣಕಾರಿ. ಅವರೇ ಯುದ್ಧ ಆರಂಭಿಸಿದವರು. ಅವರ ದೇಶವೇ ಪರಿಣಾಮಗಳನ್ನು ಎದುರಿಸಲಿದೆ. ಸೋವಿಯತ್ ಒಕ್ಕೂಟವನ್ನು ಮರುಸ್ಥಾಪಿಸುವ ದಾರಿತಪ್ಪಿದ ಕನಸನ್ನು ಹೊಂದಿದ್ದಾರೆ ಎಂದು ಹೇಳಿದ್ದಾರೆ.
ಅಮೆರಿಕ ಹೇರಿರುವ ಹೊಸ ನಿರ್ಬಂಧಗಳಲ್ಲಿ ರಷ್ಯಾ ಉದ್ದಿಮೆ ನಡೆಸುವ ಡಾಲರ್, ಯೂರೋ, ಪೌಂಡ್ ಹಾಗೂ ಯೆನ್​ಗಳನ್ನು ಕೇಂದ್ರೀಕರಿಸಲಾಗಿದೆ. ಅಲ್ಲದೇ ರಷ್ಯಾದ ದೊಡ್ಡ ಸಾಲದಾತ ಬ್ಯಾಂಕ್ ಆಗಿರುವ ಸ್ಬೆರ್​​​ಬ್ಯಾಂಕ್ ಸೇರಿದಂತೆ ನಾಲ್ಕು ಪ್ರಮುಖ ಬ್ಯಾಂಕ್​ಗಳಿಗೆ ನಿರ್ಬಂಧ ಹೇರಲಾಗಿದೆ. ಅಮೆರಿಕದಂತೆ ಬ್ರಿಟನ್ ಕೂಡ ರಷ್ಯಾ ಮೇಲೆ ನಿರ್ಬಂಧ ಹೇರುವದರ ಬಗ್ಗೆ ಚಿಂತಿಸಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement